ಶುಕ್ರವಾರ, ಸೆಪ್ಟೆಂಬರ್ 18, 2009

ರುಕ್ಮಿಣಿಯ ಅಜ್ಜಿ ಮನೆ - ೧೦

ರುಕ್ಕೂ ಒಳಗೆ ಹೋಗುತ್ತಿದ್ದಂತೆಯೇ ಯಾರೋ ಅವಸರವಾಗಿ ರೂಮಿನೊಳಕ್ಕೆ ಹೋದ ಹಾಗಾಯಿತು. ನನಗೇಕೆ ಎಂದುಕೊಂಡು ಸುಮ್ಮನಾದಳು. ಅತ್ತೆ! ಅತ್ತೆ! ಎಂದು ಒಂದೆರಡು ಸಲ ಕೂಗಿಟ್ಟಳು, ಆ ಕಡೆಯಿಂದ ಉತ್ತರ ಬರಲಿಲ್ಲ. ಒಂದು ಕ್ಷಣ ಕೊಟ್ಟಿಗೆಗೆ ವಾಪಾಸು ಹೋಗಿಬಿಡುವ ಎನಿಸಿತು. ಮತ್ತೆ ಯಾಕೆ ರಂಪ-ರಾಮಾಯಣ ಎಂದು ಅಡಿಗೆ ಮನೆಗೇ ಹೊರಟಳು.

’ಏನತ್ತೆ ಮಾಡ್ತಾ ಇದ್ದೀರ?’ ಎಂದು ರಾಗವಾಗಿ ಕೇಳುತ್ತಾ ತಾನು ಕೂರುವುದಕ್ಕೆ ಒಂದು ಜಾಗವನ್ನು ಹುಡುಕತೊಡಗಿದಳು. ಅತ್ತೆ ಒಲೆಯ ಕಡೆಗೆ ತಿರುಗಿಕೊಂಡೇ ’ಆಯ್ತಾ, ಅಜ್ಜಿ ಜೊತೆ ಹರಟಿದ್ದು?’ ಎಂದರು. ’ಹ್ಞೂ ಮತ್ತೆ, ದೊಡ್ಡವರಿಂದ ಶುರುಮಾಡ್ಕೊಂಡು ಒಬ್ಬೊಬ್ಬರನ್ನಾಗಿ ವಿಚಾರಿಸಿಕೊಳ್ತಾ ಇದ್ದೀನಿ’ ಎಂದಳು ಬರುತ್ತಿದ್ದ ಸಿಟ್ಟನ್ನು ತಡೆದುಕೊಳ್ಳುತ್ತ. ’ಆಹಾಹಾ ಬಲೆ ಮಾತು ನೀವು ಬೆಂಗಳೂರಿನವರು’ ಎಂದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದರು ಅತ್ತೆ.
’ಹೌದು ಮತ್ತೆ, ನಾನು ನಿತ್ಯ ಆಫೀಸಿನಲ್ಲಿ ಹೀಗೆ ಮಾತಾಡೋದಕ್ಕೆ, ನನಗೆ ಸಂಬಳ ಕೊಡೋದು’
’ನಿಮ್ಮದು ಏನಾದ್ರೂ ಆರಾಮ್ ಕೆಲಸ ಬಿಡು’
’ಆ ಮನೇಲಿ ಅಡಿಗೆ ಮನೆ ಎಷ್ಟು ದೊಡ್ಡದಾಗಿತ್ತತ್ತೆ, ಅಲ್ಲೇ ಕೂತ್ಕೊಂಡು ಊಟ ಮಾಡ್ತಾ ಇರ್ಲಿಲ್ವಾ?’
’ನೀನೆ ಹಿಂಗಂತೀಯಲ್ಲಾ? ಹಾಳು, ಈಗೆಲ್ಲಾ ಅಡಿಗೆ ಮನೇಲಿ ಯಾರು ಊಟ ಮಾಡ್ತಾರೆ’

’ಈ ಮನೆಯಲ್ಲಿ ಒಬ್ಬೊಬ್ಬರದು ಒಂದೊಂದು ವರಸೆ ಆಗಿದೆಯಲ್ಲಾ’ ಎಂದುಕೊಂಡು, ತರಕಾರಿಗಳನ್ನೆಲ್ಲಾ ಒತ್ತಟ್ಟಿಗೆ ಸರಿಸಿ ತಾನು ಕೂರಲು ಜಾಗ ಮಾಡಿಕೊಂಡಳು. ಅತ್ತೆ ಇವಳು ಕೂತದ್ದನ್ನು ಓರೆ ನೋಟದಲ್ಲಿ ನೋಡಿ ಅತ್ತಕಡೆಗೆ ತಿರುಗಿಬಿಟ್ಟಳು. ಅದು ಇವಳ ಗಮನಕ್ಕೂ ಬಂತು.
ಸುಮ್ಮನಿರಬರದೆಂದು ಮಾತಿಗೆ ಹಚ್ಚಿದಳು.
’ಏನು ಕೆಲಸ ಅತ್ತೆ ಈವಾಗ? ತರಕಾರಿ ಏನಾರು ಎಚ್ಲಾ ಹೇಳಿ.’
’ಅದ್ಯಾಕೆ, ನೀನು ನಮ್ಮ ಮನೆಯ ನೆಂಟಳು. ನೆಂಟರನ್ನ ಹಾಗಲ್ಲ ನಾವು ನೋಡಿಕೊಳ್ಳೋದು.’
’ಏನು ಅಡಿಗೆ ಇವತ್ತು, ಹುಳ್ಸೊಪ್ಪು ಇದೆಯಾ ಅಥವಾ ಕಾಳು ಹುಳೀನಾ?’
’ಅವೆಲ್ಲಾ ಯಾತಕ್ಕೆ, ಇವತ್ತು ಪಲಾವು ಮಾಡ್ತಾ ಇದ್ದೀನಿ. ನಮ್ಮೆನೇಗೆ ಬಂದಿದ್ದೀಯ ನೀನು, ನಿನಗೆ ಯಾವ ಸ್ವೀಟು ಬೇಕು ಹೇಳು. ಅದನ್ನೆ ಮಾಡ್ತೀನಿ.’

ರುಕ್ಕೂಗೆ ಈಗ ಅಳು ಬರುವುದೊಂದೆ ಬಾಕಿಯಾಗಿತ್ತು. ಇದಕ್ಕಿಂತ ಹಳೆಯ ಸಿಡುಗುಟ್ಟುವ ಅತ್ತೆಯೇ ವಾಸಿಯಾಗಿತ್ತಲ್ಲ ಎನ್ನಿಸಿತು. ನಮ್ಮಜ್ಜಿ ಮನೆಗೆ ನಾನು ಬಂದರೆ, ಇವರ ನೆಂಟರ್ಯಾಕಾಗ್ತೀನಿ ಎಂದು ತಲೆಚಚ್ಚಿಕೊಳ್ಳುವಂತಾಯಿತು. ಇಲ್ಲದ ಉತ್ಸಾಹ ಬರಿಸಿಕೊಂಡು ಮತ್ತೆ ಮಾತಿಗೆ ತೆಗೆದಳು.

’ಪಲಾವಾ, ಮಾವನಿಗೆ ನಿತ್ಯ ಮುದ್ದೆ ತಿಂದು ಅಭ್ಯಾಸ ಅಲ್ವಾ ಅತ್ತೆ?’
’ಎರಡೊತ್ತು ಮುದ್ದೆ ಯಾರು ತಿಂತಾರೆ? ಬೇಜಾರು’

ರುಕ್ಕೂ ಮನಸ್ಸಿನಲ್ಲೇ ಹುಬ್ಬೇರಿಸಿದಳು. ಗುಣಾಳ ತಂಗಿ ಲಲಿತ ರೂಮಿನಿಂದ ಅಡಿಗೆ ಮನೆಗೆ ಬಂದಳು, ’ಏನು ಅಕ್ಕಾ, ಇಲ್ಲಿ ಕೂತಿದ್ದೀಯಾ?’ಎಂದುಕೊಂಡು. ಹಾಹೂ ಎಂದಾದ ಮೇಲೆ, ಲಲಿತ ಅವಳಮ್ಮನನ್ನು ಕುರಿತು ’ರುಬ್ಬಿಕೊಂಡು ಆಯ್ತೇನಮ್ಮ ಕರೆಂಟು ಹೊರ್ಟೋಗತ್ತೆ’ ಎಂದಳು. ಏನೋ ದೊಡ್ಡ ತಪ್ಪು ನಡೆದ ಹಾಗೆ ಅತ್ತೆ, ’ಅಯ್ಯೋ ಇಲ್ಲವೇ, ಒಂದು ನಿಮಿಷ ಕೈ ಆಡಿಸಿ ಬಿಡ್ತೀನಿ ಇರು, ರುಬ್ಬಿಟ್ಟುಬಿಡು. ಮಿಕ್ಸಿ ಕೆಳಗಿಟ್ಟುಕೋ’ ಎಂದಳು.

ಲಲಿತ ಮಿಕ್ಸಿ ಸರಿಮಾಡಲು ಅಡಿಗೆಮನೆಯಲ್ಲಿ ಅಂತಿಂದಿತ್ತ ಓಡಾಡತೊಡಗಿದಳು. ಅವಳು ಸಾಮಾನು ತೆಗೆಯಲು ರುಕ್ಕೂ ಒಂದು ಸಾರಿ ಹಿಂದಕ್ಕೆ, ಇನ್ನೊಂದು ಸಾರಿ ಮುಂದಕ್ಕೆ ವಾಲಬೇಕಾಯಿತು. ಕಡೆಗೆ ಲಲಿತ ’ಅಕ್ಕ ಮುಚ್ಚಳ ನಿನ್ನ ಹಿಂದೆ ಇದೆ’ ಎನ್ನಲು, ’ನಾನು ಹಾಲಲ್ಲಿ ಕೂತ್ಕೋತೀನಿ ತಡಿ’ ಎಂದು ಎದ್ದಳು. ಇವರ ತರಾತುರಿಗೆ ತಡೆಯದೇ ಕರೆಂಟು ಹೊರಟೇ ಹೋಗಿತ್ತು.

ಅಡಿಗೆ ಮನೆಯಲ್ಲಿ ಚಡಪಡಿಕೆ ಎಷ್ಟು ಹೊತ್ತಿಗೂ ನಿಲ್ಲದ್ದಕ್ಕೆ ರುಕ್ಕೂ ತಿರುಗೀ ಎದ್ದು ಬಂದು ಬಗ್ಗಿ ನೋಡಿದಳು. ’ಕರೆಂಟು ಹೊರಟೇ ಹೋಯಿತು, ಇನ್ನು ಆರು ಗಂಟೇಕಾಲ ಬರಲ್ಲ’ ಎಂದಳು ಲಲಿತ. ’ಆರುಗಂಟೇಗೆ ಬರುತ್ತಾ, ಆಗೆಲ್ಲಾ ಹನ್ನೆರಡು ಗಂಟೆ, ಹನ್ನೆರಡು ಗಂಟೆಗಲ್ವಾ ಕೊಡ್ತಾ ಇದ್ದದ್ದು’ ಎಂದ ರುಕ್ಕೂಗೆ ಒಂದು ರೀತಿ ಸಂತೋಷವೇ ಆಗಿತ್ತು. ’ರಾತ್ರಿ ಮಾಡೋಣ ಬಿಡು’ ಎಂದು ಅವರಿಬ್ಬರು ಪ್ಲಾನು ಹಾಕುತ್ತಿರುವಾಗ, ’ರುಬ್ಬುಗುಂಡು ಇದೆಯಲ್ಲಾ, ಒಂದು ಸುತ್ತು ತಿರುಗಿಸಿಬಿಡಿ’ ಎಂದಳು ಉತ್ಸಾಹದಿಂದ. ’ಓ, ಈಯಕ್ಕಾ ಇದನ್ನೂ ಮಾಡಿದೆ ಅಂತ ಕಾಣತ್ತೆ’ ಎಂದಳು ಲಲಿತ ಬೇಸರಗೊಂಡು.

’ಹೋ ಅದೇನು ದೊಡ್ಡ ವಿಷಯ, ಅಜ್ಜೀನ ಕೇಳ್ನೋಡು, ಒಬ್ಬಟ್ಟಿಗೆ ಬೇಳೆ ರುಬ್ಬುತ್ತಿದ್ದೆ’ ಎಂದಳು ರುಕ್ಕೂ. ’ಹಾಗಾದ್ರೆ, ಇವತ್ತು ರುಬ್ಬೇ ರುಬ್ತಿ ಅನ್ನು’ ಎಂದು ಲಲಿತ ಅನ್ನುವ ಹೊತ್ತಿಗೆ ರುಕ್ಕೂ ಪಾತ್ರೆಯನ್ನು ಅವಳ ಕೈಯಿಂದ ತೆಗೆದುಕೊಂಡಾಗಿತ್ತು.

ಶುಕ್ರವಾರ, ಸೆಪ್ಟೆಂಬರ್ 11, 2009

ರುಕ್ಮಿಣಿಯ ಅಜ್ಜಿ ಮನೆ - ೯

ರುಕ್ಕೂ ಸೀದಾ ಹೋಗಿ ಅಜ್ಜಿಯ ಜೊತೆ ಕೊಟ್ಟಿಗೆಯಲ್ಲೇ ಕೂತಳು. ’ಏನಜ್ಜಿ ಇದು ಅಧ್ವಾನ?’ ಎಂದಳು ಮೆತ್ತಗೆ. ಅಜ್ಜಿ ನೆಟ್ಟನೋಟದಲ್ಲೇ ಕೂತಿದ್ದು ನೋಡಿ ವಯಸ್ಸಾಯಿತಲ್ಲಾ, ಇನ್ನು ಕಿವಿಗೇನು ಗ್ಯಾರಂಟಿ ಎಂದುಕೊಂಡು ಸುಮ್ಮನಾದಳು.

ಇವಳು ಬಂದದ್ದನ್ನು ಗಮನಿಸಿದ ಅಜ್ಜಿ ’ಏನು ನಿನಗೂ ದೊಡ್ಡ ಕಂಪನಿಲೇ ಕೆಲ್ಸಾನಾ?’ ಎಂದು ಮಾತಿಗೆ ಹಚ್ಚಿದರು.
ರುಕ್ಕೂ ’ಹ್ಞೂ. ಅಲ್ಲಿ ನಂಗೇನು ಕೆಲ್ಸ ಗೊತ್ತಾ ಅಜ್ಜಿ, ಎಲ್ಲಾರ್ಗೂ ಫೋನು ಮಾಡಿ ನಮ್ಮ ಕಂಪನೀಗೆ ಕೆಲ್ಸಕ್ಕೆ ಸೇರ್ಕೊಳಿ, ನಮ್ಮ ಕಂಪನಿಗೆ ಕೆಲ್ಸಕ್ಕೆ ಸೇರ್ಕೊಳಿ ಅನ್ನೋದು’ ಎಂದು ನಕ್ಕಳು.
’ಹ್ಞೂ, ಏನಾರು ಒಂದು ಮಾಡ್ಲೇಬೇಕಲ್ಲಮ್ಮ. ನಿನಗೂ ಹೋಗ್ತಾನೆ ಹತ್ತಾ?’
ಈ ಅಜ್ಜಿಗೆ ಗೊತ್ತಿಲ್ಲದೇ ಇರೋ ವಿಷಯಾನೇ ಇಲ್ಲ ಎಂದುಕೊಂಡು ಮಾತು ಮುಂದುವರೆಸಿದಳು.
’ಹ್ಞೂ, ಕೊಡ್ತಾರಜ್ಜಿ. ಬೇರೆ ದೇಶದೋರು ನಮಗೆ ಸಂಬಳ ಕೊಡೋದು. ಅವರಿಗೆ ಅದು ಇನ್ನೂರೋ ಮುನ್ನೂರೋ, ನಮಗೆ ಹತ್ತು ಸಾವಿರ ಅಂತ ಲೆಕ್ಕ’
’ಹೌದಮ್ಮಾ, ಸಾಕಮ್ಮನ ನೆಂಟರೋನು ಇದ್ದ ಒಬ್ಬ ಹುಡುಗ. ಅವನೂ ಈಗ ಬೆಂಗಳೂರಲ್ಲೇ ಇದ್ದಾನೆ. ಈವಾಗೇನು ಅವನಿಗೆ ಮೂವತ್ತೋ,ನಲ್ವತ್ತೋ ಆಗೋಗಿರತ್ತೆ. ‘ರಾತ್ರಿ ಹೋಗಿ ಹಗಲು ಬರೋದು’ ಅಂತ ಕೆಲಸಕ್ಕಾ ನೀನು ಹೋಗೋದು?’
’ನಂದು ಆ ಥರಾ ಕೆಲಸ ಅಲ್ಲಾ ಅಜ್ಜಿ’
’ಹ್ಞೂ, ಹುಡುಗ್ರು ಬೇಕಾದ್ರೆ ಯಾವಾಗ ಬೇಕಾದ್ರೂ ಹೋಗ್ಲಿ, ಬರ್ಲಿ. ನೀವುಗಳು ಹೋಗ್ಬೇಡಿ ಅಂತ ಕೆಲಸಕ್ಕೆ’
ರುಕ್ಕೂಗೆ ನಗು ಬಂದರು ತಡೆದು ’ಆಯ್ತಜ್ಜಿ’ ಅಂದಳು.

ಊರ ಹಳೆಯ ಸುದ್ದಿಯನ್ನೆಲ್ಲಾ ನೆನಪಿಸಿಕೊಳ್ಳುತ್ತಾ ಅಜ್ಜಿಯ ಜೊತೆ ಚೆನ್ನಾಗಿ ಹರಟಿದಳು. ಮಾತು ಮಾತಿಗೂ ಇಬ್ಬರಿಗೂ ತಡೆಯಲಾರದಷ್ಟು ನಗು ಬರುತ್ತಿತ್ತು. ಅಜ್ಜಿ ಮುಂಚಿನಂತೆಯೇ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಕೆಲವರನ್ನು ಹೊಗಳುತ್ತಾ, ಕೆಲವರನ್ನು ಬೈಯುತ್ತಾ ಮಾತು ಮುಂದುವರೆಸಿದರು. ರುಕ್ಕೂಗೆ ಮಾತ್ರ ಯಾವುದೋ ಕಣ್ಣುಗಳು ತನ್ನನ್ನೂ, ತನ್ನ ಅಜ್ಜಿಯನ್ನೂ ಸುತ್ತುತ್ತಿರುವಂತೆ ಅನ್ನಿಸುತ್ತಿತ್ತು. ಮಾತು ಮುಂದುವರೆಸುತ್ತಾ ’ಅಜ್ಜಿ ನೀನು ಈವಾಗ ಗೌಡರ ಮನೆಗೆ, ಸಾಕಮ್ಮನ ಮನೆಗೆ ಹೋಗಲ್ವಾ ಹರಟೆ ಹೊಡೆಯೋಕೆ’ ಎಂದು ಕೇಳಿದಳು. ’ಇಲ್ಲಮ್ಮಾ ನನಗೆ ಕಾಲಾಗದು. ಇನ್ನು ಮೇಲೆ ನನ್ನದೇನಿದ್ರೂ ಮನೆಯಿಂದ ಬಾಗಿಲಿಗೆ, ಬಾಗಿಲಿಂದ ಮನೆಗೆ ’ ಎಂದರು ಅಜ್ಜಿ. ಮಧ್ಯಾಹ್ನಕ್ಕೆ ಮೇವು ಹಾಕ್ತೀರ ಹಸೂಗೆ ಎಂದು ಕೇಳಿಕೊಂಡು ಜೋಳದ ಕಡ್ಡಿಗಳನ್ನು ಎಳೆದುಕೊಂಡು ಬಂದು ಹಸುಗಳ ಮುಂದೆ ಸುರಿದಳು.

’ತೋಟಕ್ಕಾದರೂ ಹೋಗೋಣ ಅಂದ್ರೆ, ಗುಣಾ ಏನೂ ಹಾಕಿಲ್ಲ ಅಂದ್ಳು. ಹ್ಞೂ, ಈ ಊರಲ್ಲಿ ಯಾರೂ ತೋಟ ಮಾಡಿದ ಹಾಗೆ ಕಾಣಿಸಲಿಲ್ಲ ನನಗೆ, ಚಿಕ್ಕ ಮಾವ ಅವರುಗಳೇನಾದ್ರೂ ಹಾಕಿರ್ತಾರೇನೋ...’ ಎಂದುಕೊಂಡು ಊರಿಗೇ ಕೇಳಿಸುವ ಹಾಗೆ ತನಗೆ ತಾನೇ ಮಾತಾಡಿಕೊಳ್ಳುತ್ತಿದ್ದಳು.
’ಈ ಊರಲ್ಲಿ ನೀರಿಲ್ಲ ನಿಡಿಯಿಲ್ಲ, ನಿನಗೆ ತೋಟ ಯಾರು ಮಾಡ್ತಾರೆ? ಭೂಮಿತಾಯಿ ಎಷ್ಟು ಬೇಕೋ ಅಷ್ಟನ್ನೆಲ್ಲಾ ನುಂಗಲಿ’ ಎಂದು ಅಜ್ಜಿ ಸ್ವಲ್ಪ ಸ್ವಲ್ಪವೇ ಧ್ವನಿಯೇರಿಸುತ್ತಿದರು.
’ಅದೇನು? ಕೆರೆಲಾದ್ರೂ ನೀರಿರಲೇಬೇಕಲ್ಲಾ? ನಾನು ಒಂದ್ಸಾರಿ ಹೋಗಿ ಬಟ್ಟೆ ಒಕ್ಕೊಂಡು ಬಂದಿದ್ದೆ’.
’ಕೆರೆಯೆಲ್ಲಾ, ಬತ್ತೋಗಿದೆ ಈವಾಗ. ಈ ಊರಿಗೆ ಮಳೆ ಬಂದು ಮೂರು ವರ್ಷ ಆಯ್ತು.’
’ಮೂರು ವರ್ಷದಿಂದ ಮಳೆ ಇಲ್ವಾ? ಎಂದು ಆಶ್ಚರ್ಯಪಡುತ್ತಿದ್ದವಳಿಗೆ ಥಟ್ಟನೆ ಕಾಣೆಯಾಗಿದ್ದ ಸರ್ವೇ ತೋಪು ನೆನಪಿಗೆ ಬಂತು.
’ಅಯ್ಯೋ ಇರ್ಲಿ ಬಿಡಜ್ಜಿ. ಒಂದ್ಸಾರಿ ಐದು ವರ್ಷ ಮಳೆ ಬಂದಿರ್ಲಿಲ್ಲವಂತೆ, ಅಮ್ಮ ಹೇಳ್ತಿದ್ರು. ಗುಣಾ ಹೇಳಿದ್ದಾಳಲ್ಲಾ ಮುಂದಿನ ಸಾರಿ ರಾಗಿ, ಭತ್ತ ಹಾಕಿ ಹೊಲ ಮಾಡ್ತಾರಂತೆ, ನೋಡಣ ಬಿಡಿ’.
’ಹೊಲ ಮಾಡ್ತಾರಂತಾ, ಹೊಲ ಮಾಡಕ್ಕೆ ಇವರಿಗೆ...’ ಎಂದು ಅಜ್ಜಿ ಮತ್ತೆ ಧ್ವನಿಯೇರಿಸತೊಡಗಿದರು.
’ಶ್ರೀ ರಾಮನ ಮನೆ ನೆಲ್ಲಿಕಾಯಿ ಮರ ಹಾಗೇ ಇದ್ಯೇನಜ್ಜಿ, ಹೋಗಿ ಒಂದಷ್ಟು ಕಿತ್ತುಕೊಂಡು ಬರ್ತೀನಿ’ ಎಂದು ಜೋರಾಗಿ ಮಾತನಾಡಿ ಅಜ್ಜಿಯ ಧ್ವನಿಯನ್ನು ಉಡುಗಿಸಿದಳು.
’ಹೋ ನೆಲ್ಲಿಕಾಯಿ ಮರನಾ? ಇರಬೋದೇನೋಮ್ಮ? ಊಟಕ್ಕೇನಾದ್ರೂ ಏಳ್ತಾರೇನೋ ನೋಡೋಗು, ಮಧ್ಯಾಹ್ನ ಆಗ್ತಾ ಬಂತು’ ಎಂದರು. ತನ್ನ ಅತ್ತೆ ಆಗಲೇ ಗೊಣಗುಟ್ಟಿದ್ದನ್ನು ನೆನಪಿಸಿಕೊಂಡು ರುಕ್ಕೂ ಒಳಕ್ಕೆ ಹೊರಟಳು.

ಬುಧವಾರ, ಸೆಪ್ಟೆಂಬರ್ 2, 2009

ರುಕ್ಮಿಣಿಯ ಅಜ್ಜಿ ಮನೆ - ೮

ಅಜ್ಜಿ ದನಗಳ ಕೊಟ್ಟಿಗೆಯಲ್ಲಿ ಕೂತಿದ್ದರು. ಎಲೆ ಅಡಿಕೆ ಮೆಲ್ಲುತ್ತಾ. ಅಜ್ಜೀ ಎಂದು ಊರಿಗೇ ಅರಚುವಂತೆ ಕೂಗಿಟ್ಟಳು. ’ಯೋಯ್, ಬಂದ್ಬಿಟ್ಯೇನು?’ ಎಂದರು. ಅಜ್ಜಿಗೆ ಸ್ವಲ್ಪ ಖುಷಿಯಾಗಿದ್ದ ಹಾಗೆ ಕಾಣಿಸಿತು. ’ಏನಜ್ಜಿ ಇಲ್ಲಿ ಕೂತ್ಕೊಂಡಿದ್ದೀರಾ’ಎಂದದಕ್ಕೆ ’ಇಲ್ಲೇ ತಣ್ಣಗಿದೆ’ ಎನ್ನುವ ಉತ್ತರ ಬಂತು. ಒಂದು ಕೆಂಚಗಿನ ಹಸು, ಒಂದು ಕಪ್ಪು ಬಿಳುಪಿನದು, ಪಕ್ಕದಲ್ಲಿ ಅದರ ಕರುವೋ ಏನೋ, ಪುಟಾಣಿದೊಂದು ಕರು ನಿಂತಿತ್ತು. ಎಮ್ಮೆಗಳೆಲ್ಲಾ ಎಲ್ಲೋದ್ವು ಅಜ್ಜಿ ಎಂದಳು? ಏನೋ ಕಳೆದುಕೊಂಡವಳಂತೆ. ’ಸರಿ, ಅವಕ್ಕೆ ವಯಸ್ಸಾಯ್ತು ಹೋಯ್ತು’ ಎಂದರು ಅಜ್ಜಿ. ಅದನ್ನು ಅಷ್ಟಕ್ಕೆ ಬಿಡದೆ, ಚಿಕ್ಕದೊಂದಿತ್ತಲ್ಲ ಇನ್ನೊಂದು ಇನ್ನೂ ಹಾಲು ಕೊಡುತ್ತಿತ್ತಲ್ಲ, ಹಣೆ ಮೇಲೆ ಬಿಳಿ ಮಚ್ಚೆ ಇತ್ತಲ್ಲ, ಎಂದು ಒಂದೊಂದರ ಪ್ರವರವನ್ನೂ ಬಿಡದೆ ಅಜ್ಜಿಯ ಬಾಯಿಂದ ಹೇಳಿಸಿದಳು.

’ಅಕ್ಕ ಯಾವಾಗ ಬಂದ್ರಿ’ ಎಂದು ಹಿಂದುಗಡೆಯಿಂದ ಧ್ವನಿಯೊಂದು ಬಂತು. ಹಸುವಿನ ಮೇವಿಗೆ ಜೋಳದ ಕಡ್ಡಿಗಳನ್ನು ತಂದಿದ್ದಳು ರುಕ್ಕೂ ಅತ್ತೆಯ ದೊಡ್ಡಮಗಳು ಗುಣಶೀಲ. ’ಈವಾಗ್ಲೇ ಬಂದಿದ್ದು, ಹುಲ್ಲು ತರಲ್ವೇನೆ ಹಸೂಗೆ?’ಎಂದಳು ರುಕ್ಕೂ. ಈಗ ಕಕ್ಕಾಬಿಕ್ಕಿಯಾಗುವ ಸರದಿ ಗುಣಾಗೆ ಬಂತು. ಎಲ್ಲಾ ಬಿಟ್ಟು ಹುಲ್ಲಿನ ಬಗ್ಗೆ ಕೇಳಿದಳಲ್ಲಾ ಎಂದು ಬೇಸರವೂ ಆಯಿತು. ’ಹುಲ್ಲು ಯಾತಕ್ಕೆ. ಇದರಲ್ಲೇ ಹಾಲು ಚೆನ್ನಾಗಿ ಬರುತ್ತೆ. ಅದನ್ನ ಒರಕೊಂಡು ಕೂತ್ಕೊಳ್ಳೋರು ಯಾರಕ್ಕ. ನಮ್ಮ ಮನೆ ಒರವಾರಿ ಅಟ್ಟದ ಮೇಲೆ ಹೋಗಿಬಿಟ್ಟಿದೆ’ ಎಂದಳು ಗುಣ. ಅವಳ ಮಾತಿನಲ್ಲಿ ಅರ್ಧಂಬರ್ಧ ಹೆಮ್ಮೆಯೂ ಸೇರಿದ್ದು ರುಕ್ಕೂಗೆ ಗೊತ್ತಾಯಿತಾದರೂ ಯಾತಕ್ಕೆಂದು ಅರ್ಥವಾಗಲಿಲ್ಲ. ಒಟ್ಟು ರುಕ್ಕೂ ಬೇರೆ ಮಾತೆತ್ತಿದಳು. ’ಈಗ ಕಾಲೇಜಿಗೆ ಹೋಗ್ತೀಯಲ್ವಾ ನೀನು?’ ಅವಳು ಇನ್ನೂ ಹೆಮ್ಮೆಯಿಂದ ’ಹೌದು, ಪೇಟೇಗೆ ಹೋಗ್ತೀನಿ’. ಇಲ್ಲಿ ಮೇನ್ ರೋಡಲ್ಲಿ ದೊಡ್ಡ ರೆಸಾರ್ಟ್ ಮಾಡಿದ್ದಾರೆ ನೋಡಿ, ಆ ದಾರಿಲೇ ನಾನು ದಿನಾಲು ಹೋಗೋದು’ ಎಂದಳು. ’ನೀನು ಅಲ್ಲೇ ಇಳ್ಕೊಂಡು ಬಂದಿರ್ತೀ ಅಲ್ವೇನಕ್ಕಾ?’ ಎಂಬ ಮರುಪ್ರಶ್ನೆ ಬಂತು.

’ಹ್ಞೂ, ಹ್ಞೂ, ತುಂಬಾ ದೊಡ್ಡದಾಗಿ ಕಟ್ಟಿದ್ದಾರೆ. ರೆಸಾರ್ಟಾ ಅದು? ಇದೇನು ಇಲ್ಲೆಲ್ಲಾ ಇಷ್ಟೊಂದು ಹುಲ್ಲು ಬೆಳೆದುಕೊಂಡಿದೆ?’ ಕೊಟ್ಟಿಗೆ ಪಕ್ಕದ ಹತ್ತಿಪ್ಪತು ಅಡಿ ಜಾಗದಲ್ಲಿ ಮೂರು ಮೂರು ಅಡಿ ಹುಲ್ಲು ಬೆಳೆದಿದ್ದು ನೋಡಿ ರುಕ್ಕೂ ಬೆರಗಾದಳು.

’ಹುಲ್ಲೇನು ಎಲ್ಲಾ ಕಡೆ ಬೆಳೆದುಕೊಳ್ಳತ್ತೆ, ಆ ರೆಸಾರ್ಟಲ್ಲಿ ಛತ್ರ, ಸ್ವಿಮಿಂಗ್ ಫೂಲ್ ಎಲ್ಲಾ ಇದೆ’
’ಅಷ್ಟು ದೊಡ್ಡ ಜಾಗ ಇದ್ಯೆಲ್ಲಾ, ಈ ಕರುನಾ ಈ ಕಡೆ ಬಿಟ್ಬಿಡ್ಲಾ, ಹುಲ್ಲನ್ನೆಲ್ಲಾ ತಿನ್ನತ್ತೆ’
’ಅಯ್ಯೋ ಬೇಡ, ನಾನು ಹಾಕಿರೋ ಗಿಡಾನೆಲ್ಲಾ, ಅದು ತಿಂಧಾಕತ್ತೆ. ಅಲ್ಲಿರೋ ಪಾರ್ಕು ಎಂಥಾ ಚೆನ್ನಾಗಿದೆ ಗೊತ್ತಾ?’
’ಏ ಕರು ಏನು ಹಾಳು ಮಾಡತ್ತೆ? ಹೋಗ್ಲಿ ಬಿಡು. ನಿಮ್ಮ ಕಾಲೇಜಲ್ಲಿ ಪಾಠ ಎಲ್ಲಾ ಚೆನ್ನಾಗಿದೆಯಾ?’
’ಹ್ಞೂ, ನಮಗೇನು ಗೈಡು ಇದೆಯಲ್ಲಾ, ಪಾಸಾದ್ರೆ ಸಾಕು ’.
’ಏ ಗೈಡ್ ಎಲ್ಲಾ ಒದ್ಬೇಡ. ಟೆಕ್ಸ್ಟ್ ತಗೊಂಡು ಓದೋದೆ ಒಳ್ಳೇದು. ತೋಟದಲ್ಲಿ ಏನಾಕಿದ್ದೀರಾ?
’ಸದ್ಯಕ್ಕೆ ಏನು ಇಲ್ಲ, ಈ ಸಾರಿ ಭತ್ತ, ರಾಗಿ ಹಾಕಿ ಹೊಲ ಮಾಡ್ತೀವಿ. ಅಕ್ಕ ಸಾಯಂಕಾಲಕ್ಕೆ ರೆಸಾರ್ಟ್ಗೆ ಹೋಗಿ ಬರಣ್ವಾ’

ಅವರ ಮಾತು ಎಲ್ಲಿಗೂ ನಿಲ್ಲದೇ ಗಿರಕಿ ಹೊಡೆಯುತ್ತಿದ್ದದ್ದು ಈಗಾಗಲೇ ರುಕ್ಕೂಗೆ ತಿಳಿದುಹೋಗಿತ್ತು. ’ಸಾಯಂಕಾಲನಾ?’ ಎಂದಷ್ಟೇ ಹೇಳೀ ಮುಂದಕ್ಕೆ ಏನು ಮಾತನಾಡಲೆಂದು ಯೋಚಿಸುತ್ತಿದ್ದಳು. ಗುಣಾ ಈ ಕರೂಗೆ ಏನು ಹೆಸರಿಟ್ಟಿದ್ದೀರೆ? ಎಂದಳು ಆಸೆಯಿಂದ. ’ಹೋ, ಅದೆಲ್ಲಾ ಪಟ್ಟಣದಲ್ಲಿ ಆರಾಮಾಗಿ ಇರೋರ್ಗೆ ನಮಗಲ್ಲಾ’ ಎಂದಳು ಗುಣಾ. ’ಗೌರಿ ಅಂತಾ ಹೆಸರಿಡಿ’ ಎಂದಳು. ’ಏನಮಾ, ಊರು ನೆನಪಾಯ್ತ?’ ಎಂದು ಮಾವನ ಕೀರಲು ಧ್ವನಿ ಕೇಳಿಸಿತು. ’ಹೋ, ಏನೋ ಬರಣ ಅಂತ ಬಂದ್ರೆ, ನೀವು ಒಂದ್ಸಾರಿನಾದ್ರೂ ನಮ್ಮೂರಿಗೆ ಬಂದಿದ್ದೀರಾ?’ ಎಂದು ದಬಾಯಿಸಿದಳು. ’ಹ್ಞೂ, ಆಯ್ತು. ಈವಾಗ ಸಾಯಂಕಾಲಕ್ಕೆ ಏನು ಪ್ರೋಗ್ರಾಮ್ ಹಾಕಣ ನಿಮಗೇ....’, ಹಳೇ ಮಾವನಿಗೆ ಇನ್ನೂ ಯಾವುದಕ್ಕೂ ಸೀರಿಯಸ್ನೆಸ್ ಬಂದಿಲ್ಲಾ ಅಂದುಕೊಂಡು, ’ಸಾಯಂಕಾಲಕ್ಕೆ’ ಎಂದು ಶುರುಮಾಡಿದಳು. ’ಅದನ್ನೇ ನಾನು ಹೇಳ್ತಿದ್ದೆ ಅಪ್ಪಾ, ಸಾಯಂಕಾಲಕ್ಕೆ ಅಕ್ಕನ್ನ ಕರಕೊಂಡು ರೆಸಾರ್ಟ್ ನೋಡಿಸಿಕೊಂಡು ಬರ್ತೀವು. ನಾನು ಲಕ್ಷ್ಮೀ ಹೋಗಿ’, ಎಂದು ಮಧ್ಯೆ ಬಾಯಿ ಹಾಕಿದಳು. ’ಹ್ಞೂ, ಬೆಂಗಳೂರಿಂದ ಬರೋರ್ಗೆ ಅದೇ ಸರಿ. ಸಾಯಂಕಾಲಕ್ಕೆ ಇವನ್ನೂ ಕರಕೊಂಡು, ಈ ಕಡೆಯಿಂದ ಹೋಗಿ...’ ಎಂದು ಮಾವ ರಾಗ ತೆಗೆದರು. ’ಮಾವ, ನಂಗದೆಲ್ಲಾ ಗೊತ್ತಿಲ್ಲ. ಬೆಂಗಳೂರಲ್ಲಿ ನಾನು ರೆಸಾರ್ಟ್ ನೋಡೇ ಇರ್ತೀನಿ. ಅದಕ್ಕೆ, ನೀವು ನನಗೆ ಹೊಲ, ಗದ್ದೆ, ತೋಪು ಇಂಥಾದ್ದನ್ನೆಲ್ಲಾ ತೋರಿಸ್ಬೇಕು, ತಾನೆ’ ಎಂದಳು. ಉಕ್ಕಿ ಬರುತ್ತಿದ್ದ ಕೋಪವನ್ನು ಅದುಮಿಕೊಳ್ಳುತ್ತಾ. ಮಾವ ಮತ್ತೆ ರಾಗವಾಗಿ ’ಹ್ಞೂ, ನೀನೆಂಗೇಳದ್ರೇ ಅಂಗೆ’ ಎಂದು, ತೆಪ್ಪಗೆ ಎದ್ದು ಹೊರಟರು. ಗುಣಾ, ’ಅಕ್ಕಾ, ಒಳಗ್ಬನ್ನಿ ಮನೆ ತೋರಿಸ್ತೀನಿ’ ಎಂದಳು. ಮನೆಯೆಲ್ಲಾ ಸುತ್ತುಹಾಕಿದಮೇಲೆ, ’ಏನೇ ಹೇಳು ಗುಣಾ, ಆ ಮನೇನೆ ಎನೋ ಒಂಥರಾ ಇಷ್ಟ ನಂಗೆ’ ಅಂದದಕ್ಕೆ ’ಆ ಮನೇನಾ, ಸದ್ಯ ಯಾವಾಗ ಬಿಡ್ತೀವೋ ಅನ್ಸಿತ್ತು. ಆ ಮನೇಗೆ ಸಗಣಿ ಬಳ್ದೂ ಬಳ್ದೂ ನಮ್ಮ ಕೈಯೇ ಸೇದು ಹೋಗ್ತಿತ್ತು’ ಎಂದಳು ಗುಣಾ. ’ಸಗಣಿ ಬಳೀತಿದ್ದಿದ್ದು ನಮ್ಮಜ್ಜಿ’ ಎಂದು ಬಾಯಿಗೆ ಬಂದರೂ, ಎತ್ತಗೋ ತಿರುಗುವಂತೆ ನಟಿಸಿದಳು.

ಅತ್ತಿತ್ತ ತಿರುಗಿ, ಮತ್ತೆ ದನದ ಕೊಟ್ಟಿಗೇ ಕಡೇನೆ ರುಕ್ಕೂ ಹೊರಟಳು. ’ಇಲ್ಲೇ ಕೂತ್ಕೋ’ ಎಂದು ಕರೆದ ಗುಣಾಗೆ ’ಅಜ್ಜೀ ಜೊತೆ ಸ್ವಲ್ಪ ಹೊತ್ತು ಕೂತ್ಕೋತೀನಿ’ ಎಂದಳು. ’ಆಯ್ತು’ ಎಂದು ಹಿಂದಕ್ಕೆ ತಿರುಗಿದ ಮೇಲೆ, ’ಯಾರು ಮನೇಗೆ ಬಂದರೂ, ದನದ ಕೊಟ್ಟಿಗೇಲಿ ಕೂತ್ಕೊಳ್ಳೊ ಹಾಗೆ ಮಾಡುತ್ತೆ ಇದು’ ಎಂದು ಒದರಿದ್ದು ರುಕ್ಕೂಗೂ ಕೇಳಿಸಿತು. ಅಡುಗೆ ಮನೆಯಲ್ಲಿ ಅತ್ತೆ ’ನಮ್ಮನ್ನ ನೋಡೋಕೆ ಯಾರು ಬರ್ತಾರೆ?’ ಎಂದು ಗೊಣಗಿದ್ದೂ ಕೇಳಿಸಿತು.