ಬುಧವಾರ, ಜುಲೈ 29, 2009

ರುಕ್ಮಿಣಿಯ ಅಜ್ಜಿ ಮನೆ - ೭

ರುಕ್ಮಿಣಿ ಊರ ಹೊಲ ತೋಟಗಳನ್ನೆಲ್ಲಾ ದಾಟಿ ಅಜ್ಜಿ ಮನೆಯ ಬೀದಿಗೆ ಬಂದಳು. ಅಯ್ಯೋ! ಹಳೇ ಮನೆಯ ಬೀದಿಗೆ ಬಂದುಬಿಟ್ಟಿದ್ದಳು. ಖಾಲಿ ಜಾಗವನ್ನು ನೋಡಿ ಒಂದು ಕ್ಷಣ ಅವಳ ಎದೆ ಧಸಕ್ ಎಂದರೂ, ಒಮ್ಮೆಗೇ ಅವಳ ಬುದ್ಧಿ ಕೆಲಸಮಾಡಿ, ಹೊಸಮನೆ ಆಗಿದೆಯೆಂಬುದನ್ನು ನೆನಪು ಮಾಡಿಕೊಟ್ಟಿತು. ಸರಿ, ಅಲ್ಲಿಂದ ಹೊಸಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದಳು. ಇಷ್ಟೆಲ್ಲಾ ಆದರೂ ಇನ್ನೂ ರುಕ್ಮಿಣಿಯ ಮನಸ್ಸಿಗೆ ತೃಪ್ತಿಯಾಗಲಿಲ್ಲ. ಅವಳ ಕಣ್ಣು ಮನಸ್ಸು ಬೇರೆ ಏನನ್ನೋ ಹುಡುಕುತ್ತಿತ್ತು.

ಹಾದು ಬಂದ ಹೊಲಗಳೆಲ್ಲಾ ಬಾಯಿ ಬಿಟ್ಟುಕೊಂಡು ಬಿಕೋ ಎನ್ನುತ್ತಿತ್ತು. ಅಲ್ಲಿ ಇಲ್ಲಿ ಎರಡೆರಡು ಸಾಲು ಫಾರಮ್ ಜೋಳ ಹಾಕಿದ್ದಾರೆ. ಅದೂ ಹಸುವಿನ ಮೇವಿಗೆ. ಅದೇ ಈಗ ಪ್ರಾಫಿಟೆಬಲ್ ಬಿಸಿನೆಸ್ ಅಲ್ಲವೇ? ಪಳ್ಳಿಗರ ಹೊಲವನ್ನು ನೋಡಿಯಂತೂ ರುಕ್ಕೂಗೆ ತಡೆಯಲಾರದಷ್ಟು ನಗು ಬಂದು ಬಿಟ್ಟಿತು. ಅವರ ಬೋರಿನಲ್ಲಿ ದೇವರ ದಯೆಯಿಂದ ನೀರು ಚೆನ್ನಾಗಿ ಬರುತ್ತಿದೆಯಂತೆ, ಅದಕ್ಕೆ ಅವರು ತೋಟದ ತುಂಬಾ ಕೊತ್ತಂಬರಿಸೊಪ್ಪಿನ ಬೆಳೆ ಬೆಳೆಯುತ್ತಿದ್ದಾರೆ! ಕೊತ್ತಂಬರಿಸೊಪ್ಪು ಒಂದು ಬೆಳೆಯೇ? ಬಿದ್ದ ಮಳೆಗೆ ಮೇಲೇಳುತ್ತಿದ್ದ ಕಡ್ಡಿಗಳು.

ತನ್ನ ಹಳೆಯ ದಿನಗಳು ನೆನಪಿಗೆ ಬಂದವು ಅವಳಿಗೆ. ಒಂದು ದಿನ ಮಧ್ಯಾಹ್ನ ಅಜ್ಜಿ ಮಾಡಿಕೊಡುತ್ತಿದ್ದ ಮಣಿಪಾಯಸಕ್ಕಾಗಿ ಕಾದುಕೊಂಡು ಅಡಿಗೆಮನೆಯಲ್ಲಿ ಕೂತಿದ್ದಳು. ಮನೆಯಲ್ಲಿ ಯಾರು ಇಲ್ಲದ್ದನ್ನು ಖಾತರಿ ಮಾಡಿಕೊಂಡು ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿದ್ದ ದೊಡ್ಡದೊಂದು ನೋಟು ಕೊಟ್ಟರು. "ಇದು ಎಷ್ಟು ರೂಪಾಯಿ ನೋಟು ನೋಡು? ಅಲ್ಲಿ ಚಪ್ಪರದ ಪಕ್ಕ ಇಷ್ಟು ಜಾಗ ಇತ್ತಲ್ಲ, ಅಲ್ಲಿ ಚೆಲ್ಲಿದ್ದೆ ನಾಲ್ಕು ಧನಿಯಾ. ಕಾಯಿ ಕೊಂಡುಕ್ಕೊಳ್ಳಕ್ಕೆ ಬಂದಿದ್ನಲ್ಲಾ ಸಾಹೇಬ, ಅಜ್ಜಿ ಈ ನೋಟು ನಿನ್ನ ಕೊತ್ತಂಬರಿ ಸೊಪ್ಪಿಗೆ ಅಂದ್ನೇ. ಕಿತ್ಕೊಂಡು ಹೋದ್ರು, ಒಂದಷ್ಟು ಸೊಪ್ಪು" ಎಂದು ಉಸಿರು ನಿಲ್ಲಿಸದೇ ಹೇಳಿದರು. ರುಕ್ಕೂಗೆ ಏನು ಹೇಳಬೇಕೋ ತಿಳಿಯಲಿಲ್ಲ. ಮೆತ್ತಗೆ "ಅಜ್ಜಿ ಇದು ನೂರು ರೂಪಾಯಿ ನೋಟು" ಎಂದಿದ್ದಳು. ಅಷ್ಟಕ್ಕೇ ಅಜ್ಜಿ ಚೇಳು ಕಡಿದವರಂತೆ "ಹೌದೇನೆ, ತಗೊಂಡೋಗಿ ನಿಮ್ಮ ತಾತನಿಗೆ ಕೊಟ್ಟುಬಿಡು ಹೋಗು, ನೂರು ರೂಪಾಯಿಯಲ್ಲಿ ನನಗೇನು ಕೆಲಸ. ಹತ್ತೋ ಇಪ್ಪತ್ತೋ ಆಗಿದ್ದರೆ ನಿನಗೆ ಬಳೆ ತೆಗೆಯುವ ಅಂತಿದ್ದೆ" ಎಂದರು.

ಆವತ್ತಿನ ಆ ನೆನಪಿಗೆ ರುಕ್ಕೂ ತನ್ನಷ್ಟಕ್ಕೆ ತಾನೆ ನಕ್ಕಳು. ಇದೇನು ಹೊಲದ ತುಂಬಾ ಕೊತ್ತಂಬರಿ ಬೆಳೆದಿದ್ದೀರಾ ಎಂದು ಕೇಳಿದ್ದಕ್ಕೆ, ಈಗ ಇದಕ್ಕೇ ತುಂಬಾ ಡಿಮ್ಯಾಂಡು ಎಂಬ ಉತ್ತರ ಬಂತು. ಅದರಲ್ಲಿ ಶಾಲೆಗೆ ಹೋದವನಂತೆ ಕಾಣುತ್ತಿದ್ದ ಈ ತಲೆಮಾರಿನ ಹುಡುಗನೊಬ್ಬ "ಅಕ್ಕ, ನೀವು ಬೆಂಗಳೂರಲ್ಲಿ ಹೋಟೇಲ್ಲಿಗೆ ಹೋಗಿ ದಿನಾ ದಿನಾ ತಿನ್ನಲ್ವೇ? ಎಷ್ಟು ಕೊತ್ತಂಬರಿ ಬೆಳೆದು ಕಳಿಸಿದರೂ ನಿಮ್ಮವರಿಗೆ ಸಾಲದು" ಎಂದನು. ರುಕ್ಕೂಗೆ ಮುಖದ ಮೇಲೆ ಕಬ್ಬಿಣ ಕಾಸಿ ಬರೆ ಎಳೆದಂತಾಯ್ತು. "ಅವರು ಹೊಸ ಹೊಸ ರುಚಿ ತೋರಿಸ್ತಾರೆ, ನಾವು ಹೋಗಿ ಹೋಗಿ ತಿಂತೀವಿ" ಎಂದಂದು ಮುಂದಕ್ಕೆ ನಡೆದುಬಿಟ್ಟಿದ್ದಳು.

ಅಂತೂ ಮನೆಗೆ ಸೇರಿದ ರುಕ್ಕೂ ತಾನು ಅಂದುಕೊಂಡಂತೆ ಎಲ್ಲರಿಗೂ ’ಸರ್ಪ್ರೈಸ್’ ಕೊಟ್ಟಳು. ಆದರೆ, ಅವರಿಗಂತೂ ಅದು ’ಶಾಕ್’ ಆಗಿಹೋಯಿತು. "ಇದೇನಕ್ಕ ಹಾಗೇ ಬಂದುಬಿಡೋದಾ?" ಎಂದು ಅತ್ತೆಯ ದೊಡ್ಡಮಗ ಕೇಳಿದ್ದಕ್ಕೆ, "ಹೋಗೋ, ಹೋಗೋ, ನಮ್ಮಜ್ಜಿ ಮನೆಗೆ ನಾನು ಬರಕ್ಕೆ ನಿನ್ನ ಪರ್ಮಿಷನ್ ಕೇಳಬೇಕಿತ್ತೇನೋ?" ಎಂದು ಜೋರುಮಾಡಿದಳು. "ಅಲ್ಲಾ, ರೋಡಲ್ಲಿಳಿದು ಫೋನು ಮಾಡೀದ್ರೆ ಗಾಡಿ ತರ್ತಿದ್ದೆ?" ಎಂದ ಮುಖ ಸಣ್ಣಗೆ ಮಾಡಿಕೊಂಡು. ತನ್ನ ಹೊಸ ಗಾಡಿಯ ಚಮಕನ್ನು ಬೆಂಗಳೂರಿಂದ ಬರುವ ಅಕ್ಕನಿಗೆ ತೋರಿಸುವ ಅವನ ಆಸೆಗೆ ಮಣ್ಣು ಬಿದ್ದಿತ್ತು. "ಗೊತ್ತು, ಗೊತ್ತು, ಅದಕ್ಕೇ ನಾನು ಫೋನು ಮಾಡ್ಲಿಲ್ಲ. ಏ ಪಳ್ಳಿಗರ ತೋಟ ನೋಡಿದೆನೋ. ಜಬರದಸ್ತಾಗಿ ಕೊತ್ತಂಬರಿಸೊಪ್ಪು ಬೆಳೆದಿದ್ದಾರೆ!" ಎಂದಳು ಕೊಂಕಾಗಿ. ಇವಳ ಕೊಂಕು ಅವನಿಗೆ ಅರ್ಥವಾಯಿತೋ ಇಲ್ಲವೋ? "ಹೌದಕ್ಕ, ಅವರ ಬೋರಲ್ಲಿ ನೀರು ಚೆನ್ನಾಗಿದೆ. ಇದ್ದಿದ್ದರೆ ನಾವು ಬೆಳೀಬೋದಾಗಿತ್ತು". ಇವಳಿಗೆ ಸಿಟ್ಟು ಬಂದು "ಅದು ಸರಿ" ಎಂದಳು. ತಕ್ಷಣ ನೆನಪಿಗೆ ಬಂದು ಬ್ಯಾಗಿಂದ ಉಳಿದಿದ್ದ ಮೂರು ಎಳೇ ಜೋಳಗಳನ್ನು ತೆಗೆದು ಅವನ ಕೈಗಿಟ್ಟಳು. "ಚಿನ್ನಮ್ಮ ಸಿಕ್ಕಿದ್ದಳೋ, ಅವರ ತೋಟದ್ದೇ" ಎಂದಳು. "ಅಜ್ಜಿ ಎಲ್ಲೋ?" ಎಂದು ಕೂಗಿಡುತ್ತಾ, ಅವನ ಉತ್ತರಕ್ಕೂ ಕಾಯದೇ ಹಿತ್ತಲಿಗೇ ಓಡಿದಳು. ಅತ್ತೆ, ಮಾವ ಅವರ ಮಕ್ಕಳು ಇವಳ ಈ ಪರಿಯನ್ನು ಕಂಡು ಮುಖ ಮುಖ ನೋಡಿಕೊಂಡರು.

ಗುರುವಾರ, ಜುಲೈ 9, 2009

ರುಕ್ಮಿಣಿಯ ಅಜ್ಜಿ ಮನೆ - ೬

ರುಕ್ಕೂ ಎನ್ನಬಹುದೋ ಅಥವಾ ಮಿಸ್.ರುಕ್ಮಿಣಿ ಎನ್ನಬೇಕೋ? ಅವಳೀಗ ಬಿ.ಇ., ಎಂ.ಬಿ.ಎ., ಎಚ್.ಆರ್.ಎಕ್ಸಿಕ್ಯೂಟಿವ್. ಈಗ್ಗೆ ರುಕ್ಕೂ ಅಜ್ಜಿ ಮನೆಗೆ ಹೋಗಿ ಏಳೆಂಟು ವರ್ಷಗಳೇ ಆದುವೇನೋ? ಹೈಸ್ಕೂಲು, ಕಾಲೇಜು ಎಂದೆಲ್ಲಾ ಬೆಳೆಯುತ್ತಿದ್ದಂತೆ ಅವಳಿಗೆ ಅಲ್ಲಿಲ್ಲಿ ಹೋಗಿ ವಾರ-ತಿಂಗಳು ಇರುವುದು ಸಾಧ್ಯವಾಗದೇ ಹೋಯಿತು. ಕರೆದುಕೊಂಡು ಹೋಗಿ ಬಂದು ಮಾಡುತ್ತಿದ್ದ ತಾತನಿಗೂ ವಯಸ್ಸಾಗಿಬಿಟ್ಟಿದೆ. ಅಜ್ಜಿ ಆಕ್ಸಿಡೆಂಟ್ನಲ್ಲಿ ಕಾಲು ಮುರಿದುಕೊಂಡಿದ್ದಾರೆ.

ಪೇಟೆಯಲ್ಲಿ ಬಸ್ಸು ಹತ್ತಲು ಹೋಗಿದ್ದಾರೆ. ಇವರು ಹತ್ತುವಷ್ಟರಲ್ಲಿ ಬಸ್ಸು ಮುಂದಕ್ಕೆ ಹೋಗಿಬಿಟ್ಟಿದೆ. ಕೆಳಕ್ಕೆ ಬಿದ್ದು ಸೊಂಟದ ಮೂಳೆ ಮುರಿದು ಹೋಗಿದೆ. ಈಗ ಅಜ್ಜಿ ಮೊದಲಿನ ಚಟುವಟಿಕೆಯ ಅಜ್ಜಿಯಾಗಿ ಉಳಿದಿಲ್ಲ. ಕೋಲು ಹಿಡಿದುಕೊಂಡು ಓಡಾಡುತ್ತಾರೆ. ಆಗ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಅಜ್ಜಿಯನ್ನು ನೋಡಲು ಊರಿಗೆ ಹೋಗಿದ್ದಳು ರುಕ್ಕೂ. ಆಮೇಲೆ, ಎಷ್ಟೊಂದು ಸುದ್ದಿಗಳು ಊರ ಬಗ್ಗೆ? ಮೊದಲಿನ ಮಣ್ಣಿನ ಮನೆಯ ’ಹಸುಗಳ ಮನೆ’ ಗೋಡೆ ಬಿದ್ದು ಹೋಯಿತಂತೆ. ಗೋಡೆ ರಿಪೇರಿ ಮಾಡಿಸುವ ಗೋಜು ಏಕೆಂದು ಹಿರೀಮಗ ತೋಟಕ್ಕೆ ಹತ್ತಿರವಾಗಿದ್ದ ಜಾಗದಲ್ಲಿ ಹೊಸಮನೆಯನ್ನೇ ಕಟ್ಟುತ್ತೇನೆಂದು ಪ್ಲಾನು ಹಾಕಿದ. ಇವನು ದುಡ್ಡುಹಾಕಿ ಮನೆ ಕಟ್ಟಿದರೆ ನಮಗೇನು ಲಾಭವೆಂದು, ಉಳಿದವರು ಮೊದಲು ಆಸ್ತಿ ಪಾಲಾಗಲಿ ಎಂದರು. ಸರಿ, ಊರುದ್ದ ಇದ್ದ ಆಸ್ತಿ ಮೂರು ಪಾಲಾಯಿತು. ಒಬ್ಬೊಬ್ಬರೂ ಒಂದೊಂದು ಮನೆ ಕಟ್ಟುವ ತೀರ್ಮಾನ ಮಾಡಿದರು. ತಾನೇ ಬಹಳ ಬುದ್ಧಿವಂತೆ ಎಂದುಕೊಂಡಿದ್ದ ಹಿರೀಸೊಸೆಗೆ ಆಶ್ಚರ್ಯವೋ ಆಶ್ಚರ್ಯ; ಸಿಮೆಂಟು ಮರಳಿಗೆ ದುಡ್ಡು ಸಾಲದೆ ತನ್ನ ಗಂಡ ಅತ್ತಿತ್ತ ಅಲೆದಾಡುತ್ತಿದ್ದರೆ, ಚಿಕ್ಕವರಿಬ್ಬರೂ ಆರಾಮಾಗಿ ತಾರಸಿ ಹಾಕಿಸಿ ಗೃಹಪ್ರವೇಶವನ್ನು ಮಾಡಿಸಿಬಿಟ್ಟರು. ಇನ್ನು ಅವರ ಮುಂದೆ ಮನೆಕಟ್ಟಿಸದೇ ಇರುವುದಕ್ಕಿಂತ ಮೇಲೆಂದು ಆಸ್ತಿ ಮಾರಿ, ಸಾಲ ಸೋಲ ಮಾಡಿ ಮನೆ ಕಟ್ಟಿಸಿದರಂತೆ, ಕಡೆಗೆ ಇವರಿಗೆ ಉಳಿದದ್ದು ಹತ್ತು ಗುಂಟೆ ನೆಲ, ಆ ಮನೆಯಿದ್ದ ಜಾಗವಷ್ಟೆ.

ಆಗಾಗ, ಅಮ್ಮ ಫೋನಿನಲ್ಲಿ ಅಜ್ಜಿಯೊಡನೆ ಮಾತಾಡುತ್ತಿದ್ದರು, "ವಾಮೆಯನ್ನು ಮಾರಿಬಿಟ್ಟನೇ? ಹಳೇ ಮನೇನೂ ಹೋಯ್ತೆ? ಹೋಗಲೀ ಸಾಲವಾದರೂ ತೀರಿತಾ? ಐದು ತೆಂಗಿನ ಮರ ಇತ್ತೇ ಅಲ್ಲಿ?" ಇನ್ನೂ ಮುಂತಾದ ಮಾತುಗಳನ್ನು ಕೇಳಿಯೇ ರುಕ್ಕೂ ತನ್ನ ಅಜ್ಜಿ ಮನೆಯ ಪರಿಸ್ಥಿತಿ ಏನಾಗಬಹುದೆಂದು ಊಹಿಸುತ್ತಿದ್ದಳು. ತನ್ನ ಕನಸಿನ ಅರಮನೆ ಬಿರುಗಾಳಿಗೆ ಸಿಲುಕಿ ಹುಚ್ಚೆದ್ದು ಹಾಳಾಗುತ್ತಿರುವಂತೆ ಅವಳಿಗೆ ಭಾಸವಾಗುತ್ತಿತ್ತು.

ಡಿಸೆಂಬರ್ ೨೫ರ ಕ್ರಿಸ್ಮಸ್ ಹಬ್ಬ ಈ ಸಾರಿ ಶುಕ್ರವಾರ ಬಿದ್ದು, ಒಟ್ಟಿಗೇ ಮೂರುದಿನಗಳ ರಜೆಯ ಯೋಗದಿಂದ ರುಕ್ಮಿಣಿಯ ತಪಸ್ಸು ಫಲಿಸಿತ್ತು. ಅವಳು ಮತ್ತೆ ಊರಿಗೆ ಹೋಗುವ ಆಸೆ ಸಿದ್ಧಿಸಿತ್ತು. ಅವಳ ಹಿರೀ ಅತ್ತೆ ಬೇರೆ ಫೋನಿನಲ್ಲಿ, "ರುಕ್ಕೂ, ನೀನು ಊರಿಗೆ ಬಂದು ಎಷ್ಟು ದಿನ ಆಯ್ತು? ನೀನು ಸಬ್ಬಕ್ಕಿ ಪಾಯಸವನ್ನು ’ಮಣಿಪಾಯಸ’ ಅನ್ನುತ್ತಿದ್ದುದನ್ನು ಈಗಲೂ ನೆನೆಸಿಕೊಳ್ಳುತ್ತೇನೆ. ಎರಡು ದಿನ ಇದ್ದು ಹೋಗುವಂತೆ, ಬಾ" ಎಂದಿದ್ದಳು! ಇದ್ದಕ್ಕಿದಂತೆ ತನ್ನ ಅತ್ತೆ ಇಷ್ಟೊಂದು ಬದಲಾಗಿರುವುದನ್ನು ಅವಳಿಗೆ ನಂಬಲಿಕ್ಕೇ ಆಗಲಿಲ್ಲ. ಹೋಗಲೀ, ಈಗಲಾದರೂ ಸರಿಹೋಯಿತಲ್ಲಾ ಎಂದು ಖುಷಿಪಟ್ಟಳು. ಇಂತಹವು ಎಷ್ಟೋ ಚಿದಂಬರ ರಹಸ್ಯಗಳು ಅವಳ ಮನಸ್ಸಿನಲ್ಲಿತ್ತು. ಹಿಂದೆ ಅತ್ತೆಯೇ ಆಗಲೀ,ಬೇರೆ ಯಾರೆ ಆಗಲೀ ಹೀಗೆ ಇದ್ದರು, ಹೀಗೀಗೆ ಅಂದರು ಎಂದು ಅವಳು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಹಾಗಾಗಿ, ಈಗ ಏನಾಗಿದೆಯೆಂಬುದನ್ನು ಹೇಳುವ ಪ್ರಮೇಯವೂ ಅವಳಿಗೆ ಬರಲಿಲ್ಲ.

ಬಸ್ಸು ಕಮ್ಮನಳ್ಳಿಗೆ ಬಂದು ತಲುಪಿತು. ಮತ್ತೆ ತನ್ನ ನೀರಿಗೆ ಬಿಟ್ಟ ಹಾಗೆ ಖುಷಿಯಿಂದ ಹೆಜ್ಜೆ ಹಾಕಿದ ಅವಳನ್ನು ಟಾರು ರೋಡು ಎದುರುಗೊಂಡಿತು. ಪಿಚ್ಚೆನಿಸಿತು. ಹಾಗೇ ರಸ್ತೆಯ ಒಂದು ಪಕ್ಕಕ್ಕೆ ಗಮನಿಸುತ್ತಾ ನಡೆದಳು. ಕಾಲುದಾರಿಯ ಆಚೀಚೆ ಬೆಳೆಯುತ್ತಿದ್ದ ’ತಲೆ ತೆಗೆಯುವ’ ಗಿಡಗಳು, ಮುಟ್ಟಿದರೆಮುನಿ ಸೊಪ್ಪು ಟಾರಿಗೂ ಗೆನಿಮೆಗೂ ಮಧ್ಯೆ ಸ್ವಲ್ಪ ಉಸಿರಾಡುತ್ತಿತ್ತು. ಇವಳೂ ಸಮಾಧಾನದ ನಿಟ್ಟುಸಿರುಬಿಟ್ಟಳು. ಊರಿಗೆ ಕಾಲಿಡುತ್ತಿದ್ದಂತೆಯೇ ಕಾಣಬಾಕಾಗಿದ್ದದ್ದು ಸರ್ವೇ ತೋಪು. "ಅಲ್ಲವೇ?" ಎಂದು ನೆನಪಿಸಿಕೊಂಡು ಥಟ್ಟನೆ ಹಿಂದಕ್ಕೆ ತಿರುಗಿ ನೋಡಿದಳು. ಎಲ್ಲಿದೆ ಸರ್ವೇ ತೋಪು? ಬಟಾಬಯಲು ಕಾಣಿಸಿತು ಬೆನ್ನ ಹಿಂದೆ. ಮುಂದಕ್ಕೆ ಮುಖ ಹಾಕಿ ಸುಮ್ಮನೆ ಅತ್ತಿತ್ತ ನೋಡುತ್ತಾ ಮನೆ ಕಡೆ ಕಾಲು ಹಾಕಿದಳು.

ಸರ್ವೇತೋಪು ಆದ ಕೂಡಲೇ ಚಿನ್ನಮ್ಮನ ತೋಟ, ಅದಾದ ಮೇಲೆ ಸೊಣ್ಣಮ್ಮನದ್ದು. ಅಷ್ಟು ದೂರದಲ್ಲಿ ಚಿನ್ನಮ್ಮ ಕಾಣಿಸಿದಳು. ಈಯಮ್ಮನಿಗೆ ಆಗಲೇ ವಯಸ್ಸಾಗಿ ಹೋಗಿರಬೇಕಿತ್ತಲ್ಲ ಎಂದುಕೊಂಡಳು. ’ಯಾರಮ್ಮೋ?’, ಚಿನ್ನಮ್ಮನ ಕಂಚಿನ ಕಂಠ ಇನ್ನೂ ಹಾಗೆ ಇದೆ! "ನಾನಮ್ಮೋ! ರುಕ್ಕೂ ರಾಮಪ್ಪನೋರ ಮನೆಗೆ", ರುಕ್ಕೂ ಬಾಯಿಂದ ಅನಾಯಾಸವಾಗಿ ಮಾತು ಹೊರಟಿತ್ತು. ತನ್ನ ಹಳೆಯ ಗಂಧ ಇನ್ನು ತನ್ನೊಳಗೆ ಉಳಿದುಕೊಂಡಿರುವುದು ಅವಳ ಗಮನಕ್ಕೂ ಬಂತು. "ರುಕ್ಕೂನಾ? ಓಹೋಹೋ, ಏನು ನಿನ್ನ ಎಮ್ಮೆಗಳು ಈಗ ನೆನಪಾದುವಾ?" ಎಂದುಕೊಂಡು ಚಿನ್ನಮ್ಮ ಮುಂದಕ್ಕೆ ಬಂದಳು. ರುಕ್ಕೂಗೂ ಉತ್ಸಾಹ ಬಂದು ತೋಟದೊಳಕ್ಕೆ ಧುಮುಕಿ ಚಿನ್ನಮ್ಮನ ಕಡೆಗೆ ನಡೆದಳು. ರುಕ್ಕೂ ಅಮ್ಮನ ಕ್ಷೇಮಸಮಾಚಾರ, ಅದೂ ಇದೂ ಎಲ್ಲಾ ಮಾತಾಡಿ ಆದ ಮೇಲೆ, "ಆಯ್ತು, ಊರಿಗೆ ಹೋಗಾಕ್ ಮುಂಚೆ ಮನೇಗ್ ಒಂದ್ ಸಾರಿ ಬಾ" ಎಂದು ಚಿನ್ನಮ್ಮ ಹೇಳುವಲ್ಲಿಗೆ ಅವರ ಮಾತುಕಥೆ ಮುಗಿಯಿತು. ತನ್ನ ಪಕ್ಕದಲ್ಲಿ ನಿಂತಿದ್ದ ಜೋಳದ ಗಿಡಗಳು ಆಗಲೇ ಅವಳ ಗಮನಕ್ಕೆ ಬಂದಿದ್ದು.
"ಎಳೇ ಕಾಯಿ ಇದೆಯಾ?"
"ಅಯ್ಯೋ, ಎಳೇದೇನು, ಬಲ್ತಿತೋರೋದೇ ತಗೊಂಡೋಗು, ಬೇಯಿಸ್ಬೋದು"
"ಬೇಡಪ್ಪಾ, ಬಲ್ತಿರೋದು ಊರಿಗೋಗೋವಾಗ ತಂಗೊಂಡು ಹೋಗ್ತೀನಿ. ಈಗ ಎಳೇದು ಒಂದೇ ಒಂದು ಸಾಕು" ಎಂದು ರುಕ್ಕೂ ಗಿಡದಲ್ಲಿ ಹುಡುಕತೊಡಗಿದಳು. ಅಷ್ಟರಲ್ಲಿ ಚಿನ್ನಮ್ಮ ನಾಲ್ಕು ಎಳೇ ಕಾಯಿ ಕಿತ್ತು ಅವಳ ಕೈಗಿತ್ತಳು. "ಬರ್ತೀನಮ್ಮೋ" ಎಂದು ರುಕ್ಕೂ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದಳು.

ಎಳೇ ಜೋಳ ಕಡೆಯುತ್ತಾ ನಡೆಯುತ್ತಿದ್ದ ಹಾಗೇ, ಮೆಲ್ಲಮೆಲ್ಲಗೆ ಶುರುವಾಗಿ ಜೋರಾಗತೊಡಗಿತು ಯಾವುದೋ ಧ್ವನಿ, "ಯಾರ್ದೇನು ಅಕ್ಕಿ ತಂದು ನಾವು ತಿಂತಿಲ್ಲ....ಲಾಯ್ರಿನ ಕರೆಸಿ ಪಾಲು ಮಾಡ್ಲಿಲ್ವ? ನನ್ನ ಮನೆ ಮುಂದೆ ಬರಲಿ ನೋಡ್ಕೋತೀನಿ..." ಇನ್ನೂ ಏನೇನೋ. ಅರೇ, ಅವಳು ಸೊಣ್ಣಮ್ಮನ ಹಿರೀಸೊಸೆ! ಅಲ್ಲಿಗೆ ಸೊಣ್ಣಮ್ಮನ ಮನೆಯೂ ಪಾಲಾಗಿದೆಯೆಂಬುದು ಖಚಿತವಾಯಿತು. ಅದು ಪಾಲಾಗಿದ್ದೇಕೆಂಬುದಕ್ಕೆ ಸಾಕ್ಷಿಯೂ ರುಕ್ಕೂ ಕಣ್ಣಮುಂದೆಯೇ ನಿಂತಿತ್ತು. ಥಳ ಥಳ ಹೊಳೆಯುವ ಕಡಪಾಕಲ್ಲಿನಲ್ಲಿ ಚೌಕಟ್ಟು ಕಟ್ಟಿದ್ದರು. "ಶ್ರೀಮತಿ ಸೊಣ್ಣಮ್ಮನವರು, ಜನನ - ೧೯೨೫, ಮರಣ - ೨೦೦೭" ಎಂದು ಅದರ ಮೇಲೆ ನಮೂದಿಸಿತ್ತು. ಅದರ ಪಕ್ಕದಲ್ಲೇ ಕಲ್ಲಿನಲ್ಲಿ ಕಟ್ಟಿದ್ದ ಸೊಣ್ಣಮ್ಮನ ಗಂಡ ಯಳಚಪ್ಪನ ಸಮಾಧಿ ಅದಾಗಲೇ ಹಳೆಯದಾಗಿ ಹೋಗಿತ್ತು. "ಎಂಥ ಗಟ್ಟಿಗಾತಿ ಸೊಣ್ಣಮ್ಮ! ಅವಳೊಂದು ಗದರು ಹಾಕಿದಳೆಂದರೆ ಮಕ್ಕಳೆಲ್ಲ ಮೂಲೆ ಸೇರಿಕೊಂಡುಬಿಡುತ್ತಿದ್ದರು. ರುಕ್ಕೂ ಇನ್ನೂ ಮುಂದಕ್ಕೆ ಹೆಜ್ಜೆ ಹಾಕಿದಳು.

ರಸ್ತೆಯಲ್ಲಿ ನಡೆದು ನಡೆದು ಸಾಕಾಗಿ, ಎಡಕ್ಕೆ ತಿರುಗುವ ಬದಲು ಎದುರಿಗಿದ್ದ ತೆಂಗಿನ ತೋಟದೊಳಕ್ಕೆ ನುಗ್ಗಿದಳು. ಮತ್ತೆ ’ಯಾರಮ್ಮೋ?’ ಎಂಬುದು ಕೇಳಿ ಬಂತು. ರುಕ್ಕೂ ತನ್ನ ಹಳೆಯ ಪ್ರವರವನ್ನೆಲ್ಲಾ ತಿರುಗೀ ಹೇಳಿಕೊಂಡಳು. "ಅಯ್ಯೋ, ರೋಡು ಮಾಡ್ಯವ್ರೇ. ಇತ್ತಾಗ್ಯಾಕ್ ಬಂದ್ರಿ? ರಮೇಶ ದಾರಿ ತೋರ್ಸು ಹೋಗೋ" ಎಂದು ಅವಳ ಸಹಾಯಕ್ಕೆ ನಿಂತರು. "ಅಯ್ಯೋ, ಬೇಡ ಬೇಡ, ರೋಡಲ್ಲಿ ಓಡಾಡಿ ಓಡಾಡಿ ಸಾಕಾಗಿದೆ, ಇಲ್ಲೇ ಗೆನಿಮೆ ಮೇಲೇ ನಡಕೊಂಡು ಹೋಗ್ತೀನಿ" ಎಂದು ಮುಂದುವರೆದಳು. "ಈ ಬೆಂಗಳೂರಿನವರು ಹುಡ್ಕೊಂಡು ಹುಡ್ಕೊಂಡು ಕಷ್ಟ ಪಡ್ತಾರೆ" ಎಂದು ಅವರು ಮಾತಾಡಿಕೊಂಡರು. ಅಲ್ಲಿಂದ ಒಂದೊಂದು ಗೆನಿಮೆ ದಾಟಿದಾಗಲೂ ಬೇರೆ ಬೇರೆಯವರು ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ರುಕ್ಕೂ ಅದೇ ಉತ್ತರಗಳನ್ನು ಕೊಟ್ಟುಕೊಂಡು ಮುಂದುವರೆಯುತ್ತಿದ್ದಳು.

ಬುಧವಾರ, ಜುಲೈ 1, 2009

ರುಕ್ಮಿಣಿಯ ಅಜ್ಜಿ ಮನೆ - ೫

ವೆಂಕಟರಾಜುವನ್ನು ಬೀಳ್ಕೊಂಡ ಮೇಲೆ ಅಜ್ಜಿಗೆ ಮತ್ತಿರಿಗಿ ಗೌಡರ ಕಾಫಿಯ ನೆನಪಾಯಿತು. ’ಬಾ ರುಕ್ಕೂ’ ಎಂದು ಕರೆದು ಅಜ್ಜಿ ಒಳಗೆ ನಡೆದರು. ಪೇಟೆಗೆ ಹೋಗಿದ್ದ ತಾತ ಮನೆಗೆ ಬರುವುದಕ್ಕೂ, ಗೌಡರು ಕಾಫಿಗೆ ಬರುವುದಕ್ಕೂ ಸರಿಯಾಯಿತು. ಇಬ್ಬರೂ ಸೇರಿ ಮನೆಯಲ್ಲಿ ಹೊಸದಾಗಿ ಬಂದಿದ್ದ ಟೀವಿಯನ್ನು ನೋಡುತ್ತಾ ಕುಳಿತರು. ಜೊತೆಗೆ ಅಜ್ಜಿ ರುಕ್ಕೂ ಕೈಲಿ ಕಳಿಸಿಕೊಟ್ಟ ಕಾಫಿಯನ್ನೂ ಹೀರಿದರು. ಮಳೆ, ಬೆಳೆ, ರಾಜಕಾರಣ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಮುಂಬರುವ ಎಲೆಕ್ಷನ್ನು ಹೀಗೆ ಟೀವಿಯಲ್ಲಿ ಒಂದೊಂದು ದೃಶ್ಯ ಬಂದಾಗಲೂ ಇವರ ಮಾತು ಹತ್ತಾರು ಕಡೆಗೆ ಹೊರಳಿಬರುತ್ತಿದ್ದವು. ಹೊರಗೆ ಹೋಗಿದ್ದ ಮಕ್ಕಳು ಸೊಸೆಯರೆಲ್ಲಾ ಒಬ್ಬೊಬ್ಬರಾಗಿ ಮನೆಗೆ ಬರತೊಡಗಿದರು. ರುಕ್ಕೂ ಅಡುಗೆ ಮನೆಗೂ ನಡುಮನೆಗೂ ಇದ್ದ ಬಾಗಿಲ ಮುಂದೆ ಕೂತು ಟೀವಿ ನೋಡತೊಡಗಿದಳು. ಆ ಜಾಗದಲ್ಲಿ ಕೂರುವುದರಿಂದ ಅವಳಿಗೆ ಅನುಕೂಲ ಏನಪ್ಪಾ ಅಂದರೆ, ಬಾಗಿಲ ಪಕ್ಕದಲ್ಲೇ ಹಾಕಿದ್ದ ದೊಡ್ಡ ಸೋಫಾ ಹೊರಗೆ ಕೂತವರನ್ನು ಮರೆಮಾಚುವುದಕ್ಕೆ ಸಹಾಯಕವಾಗಿತ್ತು.

ಅಷ್ಟರಲ್ಲೇ, ಮನೆಯ ಮುಂದೆಯೇ ಇದ್ದ ಹಾಲಿನ ಡೈರಿಯವನು ಕೂಗು ಹಾಕಿದ, "ಅಜ್ಜಮ್ಮೋ, ಬೆಂಗಳೂರಿನಿಂದ ಫೋನ್ ಬಂದಿದೆ", ಬೆಂಗಳೂರಿನಿಂದ ಫೋನ್ ಬಂದಿದೆ ಎಂದ ಮೇಲೆ ಅದು ತನ್ನ ಮನೆಯಿಂದಲೇ ಇರಬೇಕು ಎಂದು ರುಕ್ಕೂಗೆ ಥಟ್ಟನೆ ಹೊಳೆಯಿತು. ಅಜ್ಜಿಯ ಹಿಂದೆ ಓಡಿಬಂದು ಫೋನ್ ಬೂತಿನಲ್ಲಿ ತಾನೂ ನಿಂತುಕೊಂಡಳು. ಮೊದಲು ಅಜ್ಜಿ ರುಕ್ಕೂವಿನ ಅಮ್ಮನೊಡನೆ ಮಾತನಾಡಿದರು. ತಾವು ಕಳಿಸಿದ್ದ ಹುಣಿಸೆಹಣ್ಣು, ಮಾವಿನಹಣ್ಣುಗಳ ಯೋಗಕ್ಷೇಮ ವಿಚಾರ ಆದಮೇಲೆ ಮಾತು ಹಪ್ಪಳ - ಸಂಡಿಗೆಗಳ ಕಡೆಗೆ ತಿರುಗಿತು. ಅಜ್ಜಿ ಕಳಿಸಿದ್ದ ಕುರುಕಲಿಗೆ ರುಕ್ಕೂ ಅಮ್ಮನ ನೆಂಟರ ಮನೆಯಿಂದ ಡಿಮ್ಯಾಂಡು ಬಂದಿದೆಯೆಂದು ಅವರಿಬ್ಬರ ಮಾತುಗಳಿಂದ ತಿಳಿಯಿತು. "ಆಗಲಿ ಬಿಡು, ಶುಕ್ರವಾರ ಕಳೀಲಿ, ಸೋಮವಾರಕ್ಕೆ ಕಳಿಸ್ತೀನಿ. ಅಷ್ಟೊತ್ತಿಗೆ ಸ್ವಲ್ಪ ರಾಗೀನು ಆಗಿರುತ್ತೆ" ಎಂದಾಗ, ಇದು ನನ್ನ ಬಗ್ಗೆಯೇ ಇರಬೇಕೆಂದು ರುಕ್ಕೂಗೆ ಸಣ್ಣಗೆ ಅನುಮಾನ ಶುರುವಾಯಿತು. ಅಷ್ಟರಲ್ಲಿ ಫೋನಿನಲ್ಲಿ ಮಾತನಾಡಬೇಕೆಂದೆನಿಸಿ, "ಅಜ್ಜೀ, ನಾನು" ಎಂದಳು. ಆಸೆಯಿಂದ ಫೋನ್ ತಗೊಂಡಿದೆಷ್ಟೋ ಅಷ್ಟೆ, ಏನೂ ಮಾತನಾಡಬೇಕೆಂದು ತೋಚಲಿಲ್ಲ. "ಹಲೋಓಓಓಓ, ಹ್ಞೂಊಊಊ" ಎಂದಳು. ಅಲ್ಲಿಂದ ಮುಂದಕ್ಕೆ ಬರೀ ಹ್ಞೂ, ಹ್ಞೂ, ಹ್ಞೂ ಎನ್ನುವುದೇ ಅವಳ ಕೆಲಸವಾಯಿತು. ಅಷ್ಟು ಹ್ಞೂಗುಟ್ಟಿದ್ದಕ್ಕೆ ಅವಳಿಗೆ ಗೊತ್ತಾದದ್ದಿಷ್ಟು. "೬ನೇ ಕ್ಲಾಸಿನ ರಿಸಲ್ಟ್ ಬಂದಿದೆ. ಏಳನೇ ಕ್ಲಾಸಿಗೆ ಸೇರಿಕೊಳ್ಳಬೇಕಾಗಿದೆ. ಬ್ಯಾಗು, ಬುಕ್ಕು, ಯೂನಿಫಾರಂಗಳನ್ನೆಲ್ಲಾ ಕೊಂಡುಕೊಳ್ಳಬೇಕಾಗಿದೆ. ಸೋಮವಾರ ತಾತನೊಡನೆ ಬೆಂಗಳೂರಿಗೆ ಬರಬೇಕಾಗಿದೆ". ರುಕ್ಕೂ ಫೋನಿಟ್ಟಳು. ಇಬ್ಬರೂ ಮನೆಗೆ ನಡೆದರು.

ಕಾಫೀ ಸಮಾರಾಧನೆಯೆಲ್ಲಾ ಮುಗಿದು ಮನೆಯವರೆಲ್ಲಾ ಟೀವಿ ಮುಂದೆ ಕೂತಿದ್ದರು. ಗೌಡರು ಮನೆಗೆ ಹೊರಟುಹೋಗಿದ್ದರು. ಅತ್ತೆ ಹೊಸದಾಗಿ ತಂದಿದ್ದ ಮಿಕ್ಸಿಯಲ್ಲಿ ಹಿಟ್ಟು ರುಬ್ಬುತ್ತಿದ್ದರು. ಅಜ್ಜಿ ರಾತ್ರಿ ಊಟಕ್ಕೆ ಹೊಂಚಲು ಅಡುಗೆ ಮನೆಗೆ ಹೋದರು. ರುಕ್ಕೂ ಅತ್ತೆ ಬಳಿಗೆ ಹೋಗಿ, "ಹೊಸಾದ ಅತ್ತೆ ಮಿಕ್ಸಿ?" ಎಂದಳು. "ಹ್ಞೂ, ನೋಡು ಇನ್ನು ಮೇಲೆ ನಾವೂ ನಿಮ್ಮಂಗೇನೆ!" ಎಂದಳು ಅತ್ತೆ. ರುಕ್ಕೂ ಕಕ್ಕಾಬಿಕ್ಕಿಯಾಗಿ ಅಡುಗೆ ಮನೆಗೆ ನುಸುಳಿಕೊಂಡಳು.

* * *

ಕಿಟಕಿಯಿಂದಾಚೆ ನೋಡುತ್ತಾ ಬಸ್ಸಿನಲ್ಲಿ ಹೋಗುತ್ತಿದ್ದ ರುಕ್ಕೂಗೆ ಒಮ್ಮೆಗೇ ನಗು ಉಕ್ಕಿ ಬಂದು, ಕಿಸಕ್ಕನೆ ನಕ್ಕಳು. ಈಗವಳು ನೆನಪಿಸಿಕೊಂಡದ್ದು ತನ್ನ ’ಎಮ್ಮೆ ಸಾಕುವ’ ಯೋಜನೆಯನ್ನು. ಅದರ ಹಿಂದೆಯೇ ಅಂಬುಜಮ್ಮನ ಮಾತು ನೆನೆಪಾಗಿ ಏನೋ ಒಂದು ಬೇಸರ ಮನಸ್ಸಿಗೆ ಬಂತು. ಬಸ್ಸು ಮುಂದಮುಂದಕ್ಕೆ ಕಮ್ಮನಳ್ಳಿಯ ಕಡೆ ಚಲಿಸುತ್ತಿತ್ತು.