ಭಾನುವಾರ, ಮೇ 24, 2009

ರುಕ್ಮಿಣಿಯ ಅಜ್ಜಿ ಮನೆ - ೪

ಇವಳ ಮಾತು ಕೇಳಿ ಅಜ್ಜಿ - ಅಂಬುಜಮ್ಮ ಒಬ್ಬರ ಮುಖ ಒಬ್ಬರು ನೋಡಿಕೊಂಡು ನಕ್ಕರೇ ವಿನಾ ಮರುಮಾತಾಡಲಿಲ್ಲ. ಅಜ್ಜಿ ಹಿಟ್ಟು ಬೀಸಿದ್ದು ಮುಗಿದ ಕೂಡಲೇ ಅಲ್ಲಿಂದ ಹೊರಟು ಬೇಗ ಬೇಗನೆ ಮನೆಗೆ ನಡೆಯುತ್ತಿದ್ದರು. ರುಕ್ಕೂಗೆ ಅವರ ಹೆಜ್ಜೆಗೆ ತಕ್ಕ ಹಾಗೆ ಹೆಜ್ಜೆ ಹಾಕುವುದು ಸ್ವಲ್ಪ ಕಷ್ಟವೇ ಆಯಿತು. ಹೆಚ್ಚು ಕಡಿಮೆ ಓಡಿಕೊಂಡೇ ಬರಿತ್ತಿದ್ದಳು.
"ಇದೇನಜ್ಜಿ ಇಷ್ಟೊಂದು ಅರ್ಜೆಂಟಾಗಿ ಬರ್ತಾ ಇದ್ದೀರ?"
"ಸ್ವಲ್ಪ, ಡಿಕಾಷ್ಕನ್ ಹಾಕಿ ಇಡಾಣ ನಡೆಯಮ್ಮೋ, ಇನ್ನು ಆಯಪ್ಪ ಬಂದರೆ ಕಾಯಿಸಬೇಕಾಗತ್ತೆ ಪಾಪ..."

"ಯಾರು? ಮುನಿಶ್ಯಾಮಪ್ಪ ತಾತ ತಾನೆ? ನೀನ್ಯಾಕೆ ಅವರಿಗೆ ದಿನಾ ಕಾಫಿ ಮಾಡಿಕೊಡೋದು? ಅವರ ಮನೇಲಿ ಅವರು ಕುಡೀಬೇಕಪ್ಪ. ಬಂದ್ರೆ ಸ್ವಲ್ಪ ಕಾಯ್ಲಿ ಬಿಡು..." ದಿನನಿತ್ಯ ಅಜ್ಜಿ ಮುನಿಶ್ಯಾಮಪ್ಪ ತಾತ ಉರುಫ್ ಊರ ಗೌಡರಿಗೆ ಇಷ್ಟೇ ಕಳಕಳಿಯಿಂದ ಕಾಫಿ ಮಾಡಿಕೊಡುವುದು ನೋಡಿದರೆ, ರುಕ್ಕೂಗೆ ಸ್ವಲ್ಪ ಹೊಟ್ಟೆಕಿಚ್ಚು ಹುಟ್ಟುತ್ತಿತ್ತು. ತಿರುಗೀ ಅದೇ ಸುದ್ದಿ ಕೇಳಿ, ಅಜ್ಜಿ ಹಿಂದೆ ಓಡಿ ಬರೋದನ್ನು ನಿಲ್ಲಿಸಿ, ಮೂರಡಿ ಹಿಂದಕ್ಕೆ ನಿಧಾನವಾಗಿ ಹೆಜ್ಜೆ ಹಾಕತೊಡಗಿದಳು.

"ಯೋಯ್, ಅಂಗಂತಾರಾ? ಓಹೋಹೋ, ಈ ಕಾಲದವರು ನೀವೆಲ್ಲಾ..." ಅಜ್ಜಿ ಸ್ವಲ್ಪ ಜೋರಾಗಿಯೇ ಗದರಿ ಮುಂದು ಮುಂದಕ್ಕೆ ನಡೆದರು.

ರುಕ್ಕೂಗೆ ಈಗ ಕಣ್ಣನೀರು ಕೆನ್ನೆಮೇಲೆ ಬರುವುದೊಂದೇ ಬಾಕಿ. ತಾನು ಜೋರಾಗಿ ಮಾತನಾಡಿದ್ದು ನೆನಪಾಗಿ, ಅಜ್ಜಿ ಹಿಂದಕ್ಕೆ ತಿರುಗಿ, ಬಗ್ಗಿ ಮೆಲ್ಲಗೆ, ಬಾಯಿಯ ಅರ್ಧಭಾಗವನ್ನಷ್ಟೇ ಬಳಸಿಕೊಂಡು "ನಿಮ್ಮ ತಾತಂಗೆ ಬೇಕಬೇಕಾದ ಪೈಸೆ ಎಣಿಸಿದ್ದಾರಮ್ಮ ಅವರು, ಬಾ, ಮಣಿಪಾಯಸ ಮಿಕ್ಕಿದ್ದರೆ ಬಿಸಿ ಮಾಡಿ ಕೊಡ್ತೀನಿ ನಿಂಗೆ" ಎಂದರು. ರುಕ್ಕೂ ಮುಂದೆ ಹೋಗಿ ಅಜ್ಜಿ ಕೈ ಹಿಡಿದು ಮತ್ತೆ ಓಡಲು ಶುರುಮಾಡಿದಳು.

ಈಗ್ಗೆ ಇಪ್ಪತೈದು ವರ್ಷಗಳ ಹಿಂದಿನ ಮಾತು, ತಾತ ತನ್ನ ತಾಯಿಯ ತಿಥಿ ಮಾಡಬೇಕಿತ್ತು. ಐವತ್ತು ರೂಪಾಯಿಯನ್ನು ಜೇಬಿಗಿಟ್ಟುಕೊಂಡು ಹೊರಟಿದ್ದರು. ಪೇಟೆಗೆ ಹೋಗುವಷ್ಟರಲ್ಲಿ ನೋಟೇ ಪತ್ತೆ ಇಲ್ಲ. ನಡೆದುಕೊಂಡೇ ವಾಪಸ್ಸು ಬಂದವರು ಸೀದಾ ಹೋಗಿದ್ದು ಮುನಿಶ್ಯಾಮಪ್ಪ ಗೌಡನ ಮನೆಗೆ. ಹೀಗೆ ಹೀಗೆ ಎಂದು ಹೇಳಿದರು. ಮುನಿಶ್ಯಾಮಪ್ಪ ಮರುಮಾತಾಡದೆ ಐವತ್ತು ರೂಪಾಯಿ ತೆಗೆದುಕೊಟ್ಟ. ಅಲ್ಲಿಗೆ ತಾತನ ಕಷ್ಟ ಪರಿಹಾರವಾಯಿತು. ಐವತ್ತು ರೂಪಾಯಿಯಲ್ಲಿ ತಿಥಿ ಮಾಡಬಹುದಾಗಿದ್ದ ಕಾಲವಾಗಿತ್ತೇನೋ ಅದು? ಇಷ್ಟೇ ಅಲ್ಲ, ತಾತನಿಗೆ ಆಗಾಗ ಇಂತಹ ’ಧನಸಹಾಯ’ ಇವರಿಂದ ಆಗುತ್ತಲೇ ಇರುತ್ತದೆ. ಬರಗಾಲ ಬಂದಾಗ ತಾತನ ಓಬಿರಾಯನ ಸಂಬಂಧಿಕರಿಗೆಲ್ಲಾ ಒಮ್ಮಿಂದೊಮ್ಮಿಗೇ ಇವರ ನೆನಪು ಬಂದು, ಹೆಂಡತಿ ಮಕ್ಕಳನ್ನು ಇಲ್ಲೇ ಬಿಟ್ಟಿದ್ದರು. ತಮ್ಮ ತವರೂರಿಗೆ ’ಅಪರೂಪಕ್ಕೆ’ ಬಂದಿಂದ ಹೆಣ್ಣುಮಕ್ಕಳನ್ನು ಯಾರೂ ಮಾತನಾಡಿಸುವ ಹಾಗೇ ಇರಲಿಲ್ಲ. ಹಾಗೆ ಅವರ ಮಕ್ಕಳಿಗೆ ಸೇವೆಯಲ್ಲಿ ಸ್ವಲ್ಪವೂ ಲೋಪವಾಗುವ ಹಾಗಿರಲಿಲ್ಲ. ಸರಿ ಸುಮಾರು ಇಪ್ಪತ್ತು ಮಕ್ಕಳಿದ್ದಿರಬಹುದು ಆ ಗ್ಯಾಂಗಿನಲ್ಲಿ. ಹೊತ್ತಿಗೊತ್ತಿಗೆ ಅಷ್ಟು ಜನಕ್ಕೆ ಮುದ್ದೆ ತೊಳಸಿ ಹಾಕುವುದೇ ಅಜ್ಜಿಗೊಂದು ಮಹಾಕಷ್ಟವಾಗಿತ್ತು. ಇಂತಹ ಸಮಯದಲ್ಲೂ ಮುನಿಶ್ಯಾಮಪ್ಪನೇ ತಾತನಿಗೆ ನೆರವಾಗಿದ್ದವನು.

ಗೌಡನಿಗೆ ತನ್ನ ಮನೆಯಲ್ಲಿ ಮಾಡುವ ಕಾಫಿ ಸರಿಬರುತ್ತಿರಲಿಲ್ಲ. ವರ್ಷಗಟ್ಟಲೆಯಿಂದ ಅಜ್ಜಿಯ ಮನೆಯಲ್ಲಿ ನಿತ್ಯ ಸಂಜೆ ಕಾಫಿ ಕುಡಿಯುವುದು ಅಭ್ಯಾಸವಾಗಿಬಿಟ್ಟಿತ್ತು. ಅವರು ಮಾಡಿದ ಸಹಾಯಕ್ಕೆ ಒಂದು ಲೋಟ ಕಾಫಿ ಏನು ಮಹಾ ಎಂದು ಇವರು, ಅವರು ಕೊಡುವ ’ಕಾಸ್ಟ್ಲಿ’ ಕಾಫಿಗೆ ನಾನು ಯಾವತ್ತೋ ಒಂದು ದಿನ ಕೊಡುವ ದುಡ್ಡು ಲೆಕ್ಕವೇ ಎಂದು ಈಯಪ್ಪ. ಅಂತೂ, ಮೊದಲು ’ಧನಸಹಾಯ’ ಶುರುವಾದ್ದೋ ಅಥವಾ ’ಕಾಫಿ’ ಶುರುವಾಯಿತೋ ಎಂಬುದು ಯಾರಿಗೂ ನೆನಪಿರಲಿಲ್ಲ, ಬೇಕಾಗಿಯೂ ಇರಲಿಲ್ಲ.

ಅಜ್ಜಿ ರುಕ್ಕೂ ಇಬ್ಬರೂ ಅಂಗಳ ತಲುಪುತ್ತಿದ್ದಂತೆಯೇ, ಅಜ್ಜಿಯ ಹಿರಿಸೊಸೆ ತನ್ನ ಕೈಗಳಲ್ಲಿ ಮೂರು ಬಿಂದಿಗೆಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ಬರುತ್ತಿದ್ದಳು. ಅಜ್ಜಿ ಓಡಿಬರುತ್ತಿರುವುದನ್ನು ನೋಡಿ, "ಓಹೋಹೋ, ಸಾಕು ಬಾರಮ್ಮ ನೀನು ಓಡಿಬರೋ ನಾಟಕ, ಎಲ್ಲೋದ್ರೇ ಅಲ್ಲೇ ಕೂತ್ಕೊಂಬುಡು, ಡಿಕಾಕ್ಷನ್ ಹಾಕಿಟ್ಟಿದ್ದೀನಿ, ಕರೆಂಟ್ ಬಂದಿದೆ, ನಾನು ನೀರಿಗೋಗ್ತೀನಿ, ಇನ್ನು ಕರೆಂಟೊಂದು ಹೊರಟೋದ್ರೆ ನೀರಿಗೂ ಗತಿಯಿಲ್ಲ" ಎಂದು ಕೂಗಿಡುತ್ತಾ ಊರಿನಲ್ಲಿ ಹೊಸದಾಗಿ ಹಾಕಿದ್ದ ನೀರಿನ ಟ್ಯಾಂಕಿನ ಕಡೆಗೆ ಹೊರಟುಬಿಟ್ಟಳು.

ಈ ಮನೆಗೆ ಬಂದು ಬಹಳ ವರ್ಷಗಳಾಗಿದ್ದರಿಂದಲೋ ಏನೋ, ತನ್ನ ಅತ್ತೆಯ ಮೇಲೆ ಜೋರು ಮಾಡುವಷ್ಟು ಗೈರತ್ತು ಬಂದುಬಿಟ್ಟಿತ್ತು ಅವಳಿಗೆ. "ಹೋ, ಕಂಡಿದ್ದೀನಿ ಹೋಗ್ತಾಯಿ ನೀನು" ಎಂದು ಅಜ್ಜಿ ಗದರಿಕೊಂಡದ್ದು ಅವಳಿಗೇನು ಕೇಳಿಸಲಿಲ್ಲ. ಅಜ್ಜಿಯ ಮೇಲೆ ಸದಾ ರೇಗುತ್ತಿದ್ದ ಇವಳನ್ನು ಕಂಡರೆ ರುಕ್ಕೂಗೆ ಸರಿಬರುತ್ತಿರಲಿಲ್ಲ. ರುಕ್ಕೂನೇ ಆಗಲಿ ಅವಳೇನು ಪ್ರೀತಿಯಿಂದ ಮಾತಾಡಿಸಿದ್ದಿಲ್ಲ. ಯಾವಾಗಲೂ ಸಿಟ್ಟು. ಮನೆಯಿಂದ ಹೊರಗಿರಬೇಕಾದವರೆಲ್ಲಾ ಇಲ್ಲೇ ಬಂದು ವಕ್ಕರಿಸಿರುವುದು ಅವಳಿಗೆ ಸರಿಕಾಣುವುದಿಲ್ಲ. ಹಾಗೆ ವಕ್ಕರಿಸಿರೋದು ಯಾರು ಅಂದ್ರೆ ರುಕ್ಕೂನೇ. ಬೇಸಿಗೆ ರಜಾ ಬಂದೊಡನೆಯೇ, ತಾತನ ದೊಡ್ಡ ಸಂಸಾರದ ಮೊಮ್ಮಕ್ಕಳೆಲ್ಲಾ ಅಜ್ಜಿ ತಾತಾರನ್ನು ಕಾಣಲು ಬರುತ್ತಾರೆ. ಅವರೆಲ್ಲರಿಗೆ ಅಡಿಗೆ ಮಾಡಿಕ್ಕೋದು, ಅವರ ಬಟ್ಟೆ ಒಗೆಯೋದು ಇವೆಲ್ಲಾ ಅವಳಿಗೆ ಆಗುವುದಿಲ್ಲ. ಮಾಡುವುದೇನೋ ಅಜ್ಜೀನೇ, ಆದರೆ, ತಾನು ತನ್ನ ಗಂಡ ಹೊಲದಲ್ಲಿ ದುಡಿದ ಅಕ್ಕಿ ಬೇಳೆ ಖರ್ಚಾಗುವುದನ್ನು ಕಂಡರೆ ಅವಳಿಗೆ ಹೊಟ್ಟೆ ಉರಿಯುತ್ತಿತ್ತು. ಆ ಬೆಳೆಯಲ್ಲಿ ಉಳಿದ ಮಕ್ಕಳು ಸೊಸೆಯರ ಪಾಲೂ ಇದೆ ಎಂಬುದನ್ನು ನೆನೆಸಿಕೊಳ್ಳಲೂ ಅವಳಿಗೆ ಇಷ್ಟವಿಲ್ಲ.

ಒಂದು ದಿನ ರುಕ್ಕೂ ಮನೆಯಲ್ಲಿ ಒಬ್ಬಳೇ ಸಿಕ್ಕಾಗ ಈ ಹಿರೀಸೊಸೆ ಅವಳಿಗೂ ಹೇಳಿದ್ದಳು
"ನಿಮ್ಮ ಅಜ್ಜಿ ಯಾರು ಹೇಳು?"
"ಇನ್ಯಾರು? ಇಲ್ಲಿದ್ದಾರಲ್ಲ ಅವರೇ ಕಮ್ಮನಳ್ಳಿ ಅಜ್ಜಿ" ರುಕ್ಕೂಗೆ ಅವಳಜ್ಜಿಯ ಹೆಸರು ಗೊತ್ತಿಲ್ಲ. ಅವಳ ಪಾಲಿಗೆ ಅವರು ’ಕಮ್ಮನಳ್ಳಿ ಅಜ್ಜಿ’.
"ಅಲ್ಲ, ನಿಮ್ಮಮ್ಮನ್ನ ಈ ಮನೆಯಿಂದ ಮದುವೆ ಮಾಡಿ, ನಿಮ್ಮಪ್ಪನ ಮನೆಗೆ ಕೊಟ್ಟಿದೆ. ಅವರು ಅಲ್ಲೇ ಇರಬೇಕು ಇಲ್ಲಿಗೆ ಬರಬಾರ್ದು".
"ಅಂದ್ರೆ, ನಮ್ಮಜ್ಜಿ ಯಾರು?"
"ಅಂದ್ರೆ, ನಿಮ್ಮಪ್ಪ ಅವರ ಅಮ್ಮ ಇದ್ದಾರಲ್ಲ , ಬೆಂಗಳೂರು ಅಜ್ಜಿ, ಅವರು ಮಾತ್ರಾನೇ ನಿಂಗೆ ಅಜ್ಜಿ. ಇವರಲ್ಲ. ಯಾತಕ್ಕೆ ಇವರ ಹಿಂದಿಟ್ಟುಕೊಂಡಿರ್ತೀಯ ಯಾವಾಗಲೂ?"
ಈ ಮಾತನ್ನು ಕೇಳಿ ರುಕ್ಕೂಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ಇದನ್ನು ಯಾರೊಟ್ಟಿಗಾದರೂ ಹೇಳಿಕೊಳ್ಳಲೂ ಇಲ್ಲ. ತನ್ನಷ್ಟಕ್ಕೆ ತಾನು ಎಂದಿನಂತೆಯೆ ಇದ್ದುಬಿಟ್ಟಳು. ಅವರು ಏನು ಹೇಳುತ್ತಿದ್ದಾರೆಂಬುದನ್ನು ಮನಸ್ಸಿಗೆ ತಂದುಕೊಳ್ಳುವಷ್ಟು ಬುದ್ಧಿಯೂ ಅವಳಿಗೆ ಇರಲಿಲ್ಲ.

ಬೆನ್ನಮೇಲೆ ಮೂಟೆಯೊಂದನ್ನು ಹೊತ್ತುಕೊಂಡು ತಮ್ಮ ಮನೆ ಕಡೆಗೇ ಬರುತ್ತಿದ್ದ ವೆಂಕಟರಾಜನನ್ನು ಗಮನಿಸಿದ ರುಕ್ಕೂ, ಒಳಗೋಡುತ್ತಿದ್ದ ಅಜ್ಜಿಯನ್ನು ಕೂಗಿ ಕರೆದಳು.
"ಹೋ, ಬಾಪ್ಪೋ, ಅದೇನು ಇಷ್ಟು ಬೇಗ..."
"ಮೊದಲ್ ಮೂಟೆನಮ್ಮಾ, ಒಣಾಕ್ ಬುಡ್ತೀನಿ ಇಲ್ಲೇ"
"ಬೇಡ ಬೇಡ, ಹೊತ್ತು ಮುಳುಗ್ತಾ ಇದೆ, ನಾಳೆ ನಾವೇ ಹಾಕ್ಕೊಳ್ತೇವೇಳು, ಅಗೋ ಆ ಮಡೂನಲ್ಲಿ ಇಟ್ಬುಡು ಹೋಗು".
ಅಜ್ಜಿ ಏನೋ ಭಾರಿ ಖುಷಿಯಾದ ಹಾಗೆ ಇತ್ತು. ವೆಂಕಟರಾಜು ತಂದಿದ್ದು ಒಂದು ಮೂಟೆ ಭತ್ತವನ್ನು. ಅಂಗಳದಲ್ಲೇ ಸುರಿದು ಬಿಟ್ಟರೆ, ಮನೆಗೆ ಬರುತ್ತಿದ್ದಂತೆಯೇ ಅಜ್ಜಿಯ ಮಗನು ನೋಡುತ್ತಾನೆಂದು ಆಸೆ ಅವನಿಗೆ. ಅದು ಕೈಗೂಡಲಿಲ್ಲ. ಅವನಿಗೇನು ಅದರಿಂದ ಬೇಸರವಾಗಲಿಲ್ಲ.

ಬಿತ್ತನೆ ಮಾಡುವ ಹೊತ್ತಿಗೆ ಅವನ ಬಾವಿಯಲ್ಲಿ ನೀರು ಬತ್ತಿಹೋಗಿತ್ತು. ಊರಿಗೆ ವಿದ್ಯಾವಂತನಾದ ಅಜ್ಜಿಯ ಮಗನು ಆಗಲೇ ಕೊಳವೆ ಬಾವಿ ಕೊರೆಸಿದ್ದ. ಗಂಗಾದೇವಿಯು ಭಾಳ ಖುಷಿಗೊಂಡು, ಕೆಳಗಿಂದ ಮೇಲಕ್ಕೆ ಬೇಕುಬೇಕೆಂದಾಗಲೆಲ್ಲಾ ಚಿಮ್ಮುತ್ತಿದ್ದಳು. ಆ ಕಾಲಕ್ಕೆ ಅಜ್ಜಿಯ ಮಗ ಅವನ ತೋಟಕ್ಕೆ ನೀರು ಬಿಟ್ಟಿದ್ದಕ್ಕೆ, ಈಗ ಒಂದು ಮೂಟೆ ಭತ್ತ ಇವರಿಗೆ ಬಂದು ಇಳಿದಿದ್ದು. ಇನ್ನು ಈ ಭತ್ತದಿಂದ ಅಜ್ಜಿಯ ಮಗ ಗದ್ದೆ ಮಾಡುವವನಿದ್ದ.

ಶುಕ್ರವಾರ, ಮೇ 15, 2009

ರುಕ್ಮಿಣಿಯ ಅಜ್ಜಿ ಮನೆ - ೩

ಬೇಸಿಗೆ ಕಾಲದಲ್ಲಿ ಗೌಡರ ಮನೆಯ ದೊಡ್ಡ ಅಂಗಳದಲ್ಲಿ ಸಾಲುಸಾಲಾಗಿ ಆಳುಗಳು ಕೂತು ಹುಣಸೆಕಾಯಿ ಹೊಡೆಯುತ್ತಾರೆ. ಕೆಲವರು ಹುಣಸೆಕಾಯಿಯ ಸಿಪ್ಪೆ ಬಿಡಿಸಿ ಹಾಕುತ್ತಾರೆ, ಇನ್ನೂ ಕೆಲವರು ಸಿಪ್ಪೆ ತೆಗೆದ ಹುಣಸೆಹಣ್ಣುಗಳನ್ನು ಒಡೆದು ಬೀಜಗಳನ್ನು ಬೇರ್ಪಡಿಸುತ್ತಾರೆ. ಕಾಯನ್ನು ಒಂದು ಪಕ್ಕಕ್ಕೆ ಬಾಗಿರುವಂತೆ ನಿಲ್ಲಿಸಿ ಅದರ ಸೊಂಟದ ಮೇಲೆ ಸುತ್ತಿಗೆಯಿಂದ ಒಂದು ಏಟು ಕೊಡುವುದು. ಅದು ಎರಡು ಸೀಳಾಗುತ್ತಿದ್ದಂತೆಯೇ, ಬೀಜಗಳನ್ನು ಒಂದು ಪಕ್ಕಕ್ಕೆ ಹಣ್ಣನ್ನು ಇನ್ನೊಂದು ಪಕ್ಕಕ್ಕೆ ಹಾಕುವುದು. ಹೀಗೆ ಆ ಆಳುಗಳ ಬಲಗೈ ಮೇಲಕ್ಕೂ ಕೆಳಕ್ಕೂ, ಎಡಗೈ ಬಲಕ್ಕೂ ಎಡಕ್ಕೂ ಒಂದೇ ಸಮನೆ ಯಂತ್ರದ ರೀತಿ ಆಡುವುದನ್ನು ನೋಡುವುದೇ ರುಕ್ಕೂಗೆ ಒಂದು ರೀತಿಯ ಅನುಭವ.

ರುಕ್ಕೂ ಮೆಲ್ಲಗೆ ಹೋಗಿ ಅವರಲ್ಲೊಬ್ಬರ ಹತ್ತಿರ ’ಸೇಫ್ ಡಿಸ್ಟೆನ್ಸ್’ ಎನ್ನಿಸುವಷ್ಟು ದೂರದಲ್ಲಿ ಕುಳಿತುಕೊಂಡಳು. ಅವರ ಕಾರ್ಯವೈಖರಿಯದು ಒಂದು ರೀತಿಯಾದರೆ ಅವರ ವಾಕುವೈಖರಿ ಇನ್ನೊಂದು ಅಧ್ಬುತವೇ. ’ಅವನಿದ್ದಾನೇನೆ ಇನ್ನೂ ಊರಲ್ಲಿ?’ ಎಂದು ಈ ಮೂಲೆಯಿಂದ ಒಂದು ಧ್ವನಿ. ’ಅವನು’ ಯಾರು ಎಂದು ರುಕ್ಕೂ ಯೋಚಿಸುತ್ತಿರುವಷ್ಟರಲ್ಲೇ ’ಅತ್ತಕಡೆಯೋರು ಬಂದು ಕರಕೊಂಡು ಹೋದರಂತೆ’ ಎಂದು ಇನ್ನೊಂದು ಮೂಲೆಯಿಂದ ಧ್ವನಿ ಬಂದು ಹೋಗಿರುತ್ತದೆ. ’ಅತ್ತಕಡೆ’ ಯಾವುದು ಎಂದು ರುಕ್ಕೂ ಯೋಚಿಸುವಷ್ಟರಲ್ಲಿ ’ಈ ಯಮ್ಮಂದಾದರೂ ಸರಿ ಹೋದಿತೂ ಅಂತ ನಾವಿದ್ರೇ, ಇವರದ್ದು ದಿನಾ ದಿನಾ ರಗಳೆ ಜಾಸ್ತೀನೆ ಆಗ್ತಾ ಇದೆ’, ಅಷ್ಟರಲ್ಲಿ ಮತ್ತೊಂದು ಧ್ವನಿ. ರುಕ್ಕೂ, ಆ ವಿಷಯವನ್ನು ಅರ್ಥಮಾಡಿಕೊಳ್ಳುವ ಗೋಜೇ ಬೇಡ, ತಾನಾಯಿತು ತನ್ನ ಹುಣಿಸೆಬೀಜವಾಯಿತು ಎಂದು ಕುಳಿತುಕೊಂಡುಬಿಟ್ಟಳು.

ಆದರೂ ಹೆಚ್ಚಿಗೆ ಹೊತ್ತು ಇವಳಿಗೆ ಸುಮ್ಮನಿರಲು ಸಾಧ್ಯವಿಲ್ಲ. ಆ ಹೆಂಗಸರಲ್ಲಿ ಎಷ್ಟೊಂದು ಜನ ಇವಳ ’ಫ್ರೆಂಡ್ಸ್’ ಬೇರೆ. ಮಾಮೂಲಾಗಿ ಇವಳ ಮಾತುಗಳು ಪ್ರಶ್ನೆಗಳಿಂದಲೇ ಆರಂಭವಾಗುತ್ತದೆ.

ನೀವ್ಯಾಕೆ ಇವರ ಮನೇಲಿ ಬಂದು ಕೆಲಸ ಮಾಡುವುದು?
ಹೊಟ್ಟೆಗೆ ಬೇಕಲ್ಲಮ್ಮ...
ನೀವೇ ಹುಣಿಸೆ ಮರ ಬೇಳೀಬೋದಲ್ಲ?
ನಮಗೆಲ್ಲಮ್ಮ ಆ ತಾಕತ್ತು...
ನಿಮ್ಮ ಹತ್ರ ತೋಟ ಇಲ್ಲವಾ?
ಇದೆ ಎಲ್ಲೋ ಒಂದಷ್ಟು, ಅಂಗೈ ಅಗಲ ಅದರಲ್ಲೇನು ಬೇಳೆಯೋದು...
ನೀವು ಏನು ಮಾಡಬೇಕು ಗೊತ್ತಾ? ಮೊದಲು ಒಂದು ಹುಣಿಸೆ ಮರ ನೆಡ್ರಿ, ಅದರಿಂದ ಬಂದ ಲಾಭದಲ್ಲಿ ಇನ್ನೊಂದು ಮರ ನೆಡ್ರಿ, ಹಾಗೇ ಮಾಡ್ತಾ ಇದ್ರೆ ನೀವು ದೊಡ್ಡ ಸಾಹುಕಾರರಾಗಬಹುದು...

ರುಕ್ಕೂಳ ಈ ಮಾತಿಗೆ ಅವರೆಲ್ಲರೂ ಒಂದೇ ಸಾರಿಗೆ ನಕ್ಕುಬಿಟ್ಟರು. ರುಕ್ಕೂ ಕಣ್ಣಲ್ಲಿ ಮಾತ್ರ ಅಲ್ಲಿ ಕೂತಿದ್ದ ಮಂಗಮ್ಮ ಇನ್ನೊಂದೈದಾರು ವರ್ಷಗಳಲ್ಲಿ ಗೌಡತಿಯ ಹಾಗೆ ಒಡವೆ ವಸ್ತ್ರ ಹಾಕಿಕೊಂಡು ಮೆರೆಯುವ ದೃಶ್ಯ ಕಣ್ಣ ಮುಂದೆ ಬಂದು ನಿಂತಿತು. ತಿರುಗೀ ಅವಳ ಮಾತು ಶುರುವಾಯಿತು,

ನಿಮ್ಮ ಮಕ್ಕಳನ್ನ ಯಾವ ಸ್ಕೂಲಿಗೆ ಸೇರಿಸ್ತೀರ?
ಇರೋದೊಂದು ಇಸ್ಕೂಲು...
ನೀವು ಇಲ್ಲಿ ಬಂದು ಕೆಲಸ ಮಾಡೋ ಥರ, ಗೌಡ್ರು ನಿಮ್ಮನೇಗೆ ಬಂದು ಕೆಲಸ ಮಾಡ್ತಾರ?
ಮೆಲ್ಲಿಗೆ ಮಾತಾಡಮ್ಮೋ, ನೀನೊಳ್ಳೇ, ಒಪ್ಪೊತ್ತಿನೂಟಕ್ಕೂ ಕಲ್ಲ್ ಹಾಕಿಬಿಡ್ತೀಯ...
ಅದ್ಯಾಕೆ, ನಾನು ಹೇಳ್ದಂಗೇ ನೀವು ಹುಣಿಸೆ ಮರ ಬೆಳಸ್ರೀ, ಆವಾಗ ನಾನೇಳ್ದಂಗ್ ಆಗ್ದೇ ಇದ್ರೆ ಕೇಳ್ರಿ...
ಸರಿಯೋಯ್ತು ...
ಮತ್ತೆ ಅವರೆಲ್ಲಾ ನಕ್ಕುಬಿಟ್ಟರು. ಮತ್ತೆ ಮಾತು ಶುರುವಾಯಿತು.

"ಇವರಜ್ಜಿ ನೋಡಮ್ಮಾ, ನಮಗೆ ಊಟ ಹಾಕ್ತಾ ಇದ್ದದ್ದು"
"ಮೊದಲು ತಿನ್ರೇ ಬಿಸಿಯಾಗಿರೋದ್ನಾ, ಆಮೇಲಿರಲೀ ನಿಮ್ಮ ಕೆಲಸ ಅನ್ನೋಳು ಮಹಾತಾಯಿ"

ಅಷ್ಟರಲ್ಲಿ ಎಲ್ಲರೂ ಊಟಕ್ಕೆ ಏಳಬೇಕೆಂದು ಗೌಡರ ಮೊಮ್ಮಗನು ಬಂದು ಕರೆದನು. ನೂರು ನೂರಿಪ್ಪತ್ತು ಜನಕ್ಕೆ ಹೇಗೆ ಅಡಿಗೆಗಳನ್ನು ಮಾಡಿಹಾಕುತ್ತಾರೋ ಎಂಬ ಆಲೋಚನೆ ಹೀಗೆ ಬಂದು ಹಾಗೆ ಹೋಯಿತು, ರುಕ್ಕೂಗೆ. ಇನ್ನು ನಾನೊಬ್ಬಳು ಇಲ್ಲಿ ಕೂತಿರುವುದು ದಂಡ, ಎಲ್ಲಿಗೆ ಹೋಗುವುದೆಂದು ಯೋಚನೆ ಹತ್ತಿಕೊಂಡಿತು. ಅಜ್ಜಿ ಅವಳು ಕೂತಿದ್ದ ಆವರಣದ ಕಲ್ಲು ಕಾಪೌಂಡಿನ ಆ ಕಡೆಯ ಸೊಂದಿಯಲ್ಲಿ ತೂರಿ ಹೋಗುತ್ತಿರುವುದು ಕಾಣಿಸಿತು. ಮತ್ತೆ ಇವಳ ಕಣ್ಣು ತಪ್ಪಿಸಿ ಎಲ್ಲೋ ಹೋಗುತ್ತಿದ್ದಾರೆ. ಇನ್ನೆಲ್ಲಿ? ಸೊಂದಿಯಲ್ಲಿ ತೂರಿದರೆ ಅಂಬುಜಮ್ಮನ ಮನೆಯೇ. ಈಗಲೇ ಬೇಡವೆಂದು ಬೇಟೆಗಾಗಿ ಕಾಯುವ ಹುಲಿಯಂತೆ ಕೂತೆ ಇದ್ದಳು. ಅಜ್ಜಿ ಮನೆಯ ಒಳಕ್ಕೆ ಹೋಗಿದ್ದು ಖಾತ್ರಿಯಾದ ಮೇಲೆ, ತನ್ನ ಮನೆಗೆ ಓಡಿಹೋಗಿ ಹುಣಸೆಬೀಜಕ್ಕೆ ಒಂದು ನೆಲೆ ಕಾಣಿಸಿ, ಅಲ್ಲಿಂದ ಅಂಬುಜಮ್ಮನ ಮನೆ ಕಡೆ ದಾಪುಗಾಲು ಹಾಕಿದಳು.

ಇವಳು ಹೋಗುವಷ್ಟರಲ್ಲಿ ಅಜ್ಜಿ ತನ್ನ ಮುಂದಿನ ಕೆಲಸಕ್ಕೆ ಅಣಿಮಾಡಿಕೊಳ್ಳುತ್ತಿದ್ದರು. ಕೆಳಗಿನ ಕಲ್ಲನ್ನು - ಮೇಲಿನ ಕಲ್ಲನ್ನು ಸರಿಯಾಗಿ ಜೋಡಿಸಿ, ತೂತಿಗೆ ಒಂದು ಮರದ ಹಿಡಿಯನ್ನು ಜೋಡಿಸಿ, ಗುಂಡುಕಲ್ಲಿನಿಂದ ಅದರ ತಲೆ ಮೇಲೆ ಕುಟ್ಟಿ ಭದ್ರ ಮಾಡಿದರು. ಇವಳು ಇಲ್ಲಿಗೂ ಬಂದದ್ದು ನೋಡಿ ಅಜ್ಜಿಗೆ ಬಾಯಿಂದ ಮಾತೇ ಹೊರಡಲಿಲ್ಲ. "ನೋಡಮ್ಮೋ" ಎಂದಷ್ಟೇ ಹೇಳಿ ಅಂಬುಜಮ್ಮನ ಕಡೆಗೊಂದು ಸಾರಿ, ರುಕ್ಮಿಣಿಯ ಕಡೆಗೊಂದು ಸಾರಿ ನೋಡಿದರು. ಅಂಬುಜಮ್ಮನಿಗೆ ಈಗಷ್ಟೇ ಅಜ್ಜಿ ಅವಳ ಬಗ್ಗೆ ಹೇಳಿದ್ದ ಮಾತುಗಳು ನೆನಪಿಗೆ ಬಂದು ನಗು ತರಿಸಿಬಿಟ್ಟವು. ಈಗ ಅಜ್ಜಿಗೂ ಅಂಬುಜಮ್ಮನಿಗೂ ಮಾತುಕಥೆ ಶುರುವಾದವು.

"ಎಷ್ಟು ಸೇರು ತಾಯಿ ನೀನು ಹೊಂಚುಹಾಕಿಟ್ಟಿರೋದು?"
"ಇನ್ನೂರೈವತ್ತು ಸೇರದೆ, ಗಟ್ಟಿಗಾತಿ ನೀನು, ಆಗಲ್ಲೇನು?"
"ಹೌದೇಳಮ್ಮೋ, ಸತಿ ಸಕ್ಕೂಬಾಯಿ ನಾನು, ರಾತ್ರಿಯೆಲ್ಲಾ ನಿನ್ನ ಮನೇಲಿ ಕೂತು ಹಿಟ್ಟು ಬೀಸ್ತೀನಿ" ಅಜ್ಜಿ ಸ್ವಲ್ಪ ಹುಸಿ ಕೋಪವನ್ನು ತೋರಿದರು.
ಅಂಬುಜಮ್ಮನಿಗೆ ನಗುವೇ ಬಂದುಬಿಟ್ಟಿತು. "ನನಗೊತ್ತಿಲ್ಲೇನು ನಿನ್ನ ಡ್ಯೂಟಿ, ನಾಲ್ಕು ಗಂಟೇಗೆ ಹೋಗಿ ಗೌಡ್ರಿಗೆ ಕಾಫಿ ಮಾಡ್ಕೊಡೋದು. ಒಂದು ಮೂವತೈದು ಸೇರದೆ ಹೇಗೋ ಮಾಡಿ ಇವ್ವತ್ತು ಬೀಸಿಟ್ಟುಕೊಂಡುಬಿಟ್ರೆ, ಇನ್ನೊಂದು ತಿಂಗಳು ಯೋಚನೆ ಇಲ್ಲ".

ಅಂಬುಜಮ್ಮ ಮುಕ್ಕಾಲು ತುಂಬಿದ್ದ ರಾಗಿ ಮೂಟೆಯೊಂದನ್ನು ತಂದು ಬೀಸೋಕಲ್ಲಿನ ಮುಂದೆ ಸುರಿದರು. ಇಬ್ಬರೂ ಸೇರಿ ಅದ್ಯಾವುದ್ಯಾದೋ ಪದ ಹೇಳುತ್ತಾ ರಾಗಿ ಬೀಸತೊಡಗಿದರು. ರುಕ್ಕೂಗೆ ಇಂಥವುದರ ಮುಂದೆ ಸುಮ್ಮನೆ ಕೂತಿರಲು ಸಾಧ್ಯವಿಲ್ಲ, ’ನಾನು’ ’ನಾನು’ ಎಂದುಕೊಳ್ಳುತ್ತಾ, ಮೇಲಿಂದ ಕಾಳು ಸುರಿಯುವುದು, ಬೀಸಿದ ಹಿಟ್ಟನ್ನು ಜರಡಿ ಹಿಡಿಯುವುದು ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕೈ ಹಾಕುತ್ತಿದ್ದಳು. ಆದರೆ, ಬೇರೆ ಮಕ್ಕಳಿಂದ ಆಗುವ ಹಾಗೆ ಇವಳಿಂದ ಒಂದಕ್ಕೆರಡು ಕೆಲಸವಾಗುವುದಿಲ್ಲ. ಅಲ್ಪ ಸ್ವಲ್ಪ ಮಾಡಿದರೂ ಸರಿಯಾಗೆ ಮಾಡುತ್ತಾಳೆ. ಹಾಗಾಗಿ, ಅವರಿಬ್ಬರೂ ಇವಳನ್ನು ತಡೆಯಲಿಲ್ಲ. ತಡೆಯಲಾಗದೇ ಅಂಬುಜಮ್ಮ ಹೇಳೇಬಿಟ್ಟರು. "ನಿನಗ್ಯಾಕಮ್ಮ ಬೆಂಗಳೂರು, ಇಲ್ಲೆ ಇದ್ಬುಡು ಎಮ್ಮೆಗಳ ಮೇಸ್ಕೊಂಡು, ಬೆಂಗಳೂರ್ನಲ್ಲಿ ನೀನ್ ದಂಡ’. ಎಲ್ಲಾ ಸರಿಯಾದರೂ ರುಕ್ಕೂ ಸ್ವಲ್ಪ ಮಂದ, ಚಾಲಾಕಿತನವಿಲ್ಲ. ಆದ್ದರಿಂದಲೇ, ಅಂಬುಜಮ್ಮ ’ಬೆಂಗಳೂರಿನಲ್ಲಿ ದಂಡ’ ಎಂದದ್ದು. ಅಂಬುಜಮ್ಮನ ಮಾತು ಕೇಳಿ ರುಕ್ಕೂಗೆ ಗಲಿಬಿಲಿ ಆಗಿಹೋಯ್ತು. ಇದೇನು ಹೊಗಳಿಕೆಯೋ ತೆಗಳಿಕೆಯೋ? ಎಲ್ಲಾ ಸರಿ, ಆದರೆ ’ದಂಡ’ ಅಂದದ್ದು ಏಕೆ? ಆದರೂ ಸೋಲೊಪ್ಪದೇ ’ಹ್ಞೂ, ಏಳನೇ ಕ್ಲಾಸಿಗೆ ಇಲ್ಲೇ ಸೇರ್ಕೋತಿನಿ. ಎರಡು ಎಮ್ಮೆ ಸಾಕ್ತೀನಿ.’ ಎಂದಳು. ತಕ್ಷಣವೇ ಅಮ್ಮನ ಕಿವಿಗೆ ಈ ಮಾತು ಬಿದ್ದರೆ ಏನು ಗತಿಯಪ್ಪಾ ಎಂದು ಚಿಂತೆಗಿಟ್ಟುಕೊಂಡಿತು.

ಬುಧವಾರ, ಮೇ 13, 2009

ರುಕ್ಮಿಣಿಯ ಅಜ್ಜಿ ಮನೆ - ೨

ಹೊರಕ್ಕೆ ಓಡಿ ಬಂದವಳೇ ರಾಶಿಯಿಂದ ಹುಲ್ಲನ್ನು ಎಳೆದು ತಂದು ಎಮ್ಮೆಗಳ ಮುಂದಕ್ಕೆ ಹಾಕಿದಳು. ಹಾಗೆ ಅದರೊಟ್ಟಿಗೆ ಮಾತಾಡುತ್ತಾ, ಅದರ ಮೈ ನೇವರಿಸುತ್ತಾ ಕೂತಿದ್ದಳು. ದೊಡ್ಡವಳಾದ ಮೇಲೆ ಬೆಂಗಳೂರಿನಲ್ಲಿ ಎರಡು ಎಮ್ಮೆಗಳನ್ನು ಸಾಕಿದರೆ, ಹಾಲು ತರುವ ತೊಂದರೆಯೇ ಇರುವುದಿಲ್ಲವಲ್ಲ ಎಂದು ಆಗಾಗ ಅವಳು ಆಲೋಚಿಸುತ್ತಿರುತ್ತಾಳೆ. ಇದನ್ನು ತನ್ನ ಅಣ್ಣನ ಬಳಿ ಒಂದು ಸಾರಿ ಹೇಳಿದ್ದಳು. "ಹೌದು ಇಬ್ಬರೂ ಸೇರಿ ಸಾಕೋಣ, ಹಾಗೇ ಡೈರಿಗೂ ಎರಡು ಲೀಟರ್ ಹಾಲು ಹಾಕೋಣ, ಲಾಭ ಬರುತ್ತೆ" ಎಂದು ಅವನು ಹೇಳಬಹುದೆಂದು ಇವಳು ಎಣಿಸಿದ್ದಳು. ಆದರೆ, ಅವನು ಅದನ್ನು ಕೇಳಿದೊಡನೆಯೇ ಜೋರಾಗಿ ನಕ್ಕುಬಿಟ್ಟ, "ಎಮ್ಮೆ ಸಾಕ್ತೀಯೇನೆ, ಎಲ್ಲಿ ಕಟ್ಟಿಹಾಕ್ತೀಯಾ? ಸಗಣಿ ಏನು ಮಾಡ್ತೀಯಾ, ಅಮ್ಮಾ ನೋಡಮ್ಮಾ ಇವಳು ಎಮ್ಮೆ ಸಾಕ್ತಾಳಂತೆ!" ಎಂದು ಅಣಕಿಸಿಬಿಟ್ಟ. ಆವತ್ತು ಅವನು ಮಾಡಿದ ಅವಮಾನಕ್ಕೆ ಸರಿಯಾಗಿ ಪಾಠ ಕಲಿಸಬೇಕು, ಎಮ್ಮೆಗಳನ್ನು ಸಾಕಿ ತೋರಿಸಲೇಬೇಕು ಎಂದು ಯೋಚಿಸುತ್ತಾ ಕೂತಿರುವಾಗಲೇ, ಅಜ್ಜಿ ಸಾಕಮ್ಮನ ಮನೆಯಿಂದ ಹೊರಕ್ಕೆ ಬಂದರು. "ನಡಿಯಮ್ಮೋ, ನಿಮ್ಮ ತಾತನಿಗೆ ಊಟಕ್ಕೆ ಹೊತ್ತಾಯಿತು " ಎಂದು ಹೊರಟರು. ಇವಳು ಅವರ ಹಿಂದೆಯೇ ಮನೆಗೆ ಬಂದಳು.

ಅಜ್ಜಿ ತಾತನಿಗೂ ರುಕ್ಕೂಗೂ ಊಟಬಡಿಸಿ, ತೋಟದಲ್ಲಿದ್ದವರಿಗೆ ಊಟ ತೆಗೆದುಕೊಂಡು ಹೋಗಲು ಬಂದಿದ್ದ ’ಚೌಟ’ನ ಕೈಯಲ್ಲಿ ಊಟ ಕಳಿಸಿದರು. ’ಚೌಟು’ ಎಂದರೆ ಕಿವಿ ಕೇಳದೇ, ಮಾತು ಬಾರದೇ ಇರುವುದು. ಆ ಮನುಷ್ಯನಿಗೆ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ, ಮಾತು ಸರಿಯಾಗಿ ಬರುತ್ತಿರಲಿಲ್ಲ, ಹಾಗಾಗಿ, ’ಚೌಟೋನು’ ಎಂಬ ಹೆಸರೇ ಅವನಿಗೆ ಖಾಯಂ ಆಗಿ ಹೋಗಿತ್ತು. ಚೌಟೋನು ಅತ್ತ ಹೋಗುತ್ತಲೇ, ಅಜ್ಜಿಗೆ ಇವತ್ತು ಅಡಿಗೆ ಸ್ವಲ್ಪ ಹೆಚ್ಚಿಗೆ ಮಿಕ್ಕಿ ಹೋಗಿರುವುದು ಗಮನಕ್ಕೆ ಬಂತು. ’ಏ ಕರಿಯೇ ಅವನ್ನ, ಇಲ್ಲೇ ಊಟ ಮಾಡ್ಲೀ’ ಎಂದು ಅಡುಗೆ ಮನೆಯಿಂದ ಹೊರಕ್ಕೆ ಓಡಿಬಂದರು. ರುಕ್ಕೂಗೆ ಅವನನ್ನು ಮಾತಾನಾಡಿಸುವುದು ಹೇಗೆಂದು ಇವತ್ತಿಗೂ ತಿಳಿದಿರಲಿಲ್ಲ. ಏನೂ ಮಾಡಲಾಗದೆ ಸುಮ್ಮನೆ ನೋಡುತ್ತಾ ನಿಂತುಬಿಟ್ಟಳು. ಹೊರಗೆ ಬಂದ ಅಜ್ಜಿ, ಬೀದಿಯಲ್ಲಿ ಹೋಗುತ್ತಿದ್ದ ಒಬ್ಬ ಹುಡುಗನನ್ನು ಕರೆದು ’ಗೋಪಿ,ಗೋಪಿ ಅವನಿಗೆ ಹೇಳೋ ನಮ್ಮ ಮನೇಗೆ ಊಟಕ್ಕೆ ಬರೋಕ್ಕೆ’ ಎಂದು ಕೂಗಿದರು. ಗೋಪಿ ಓಡಿಹೋಗಿ ಚೌಟನನ್ನು ಹಿಡಿದು ಕೈಸನ್ನೆ ಬಾಯ್ಸನ್ನೆ ಮಾಡಿ ಹೇಳಿದ. ಚೌಟನು ತಿರುಗಿ ಹೂ ಎನ್ನುವಂತೆ ತಲೆಯಾಡಿಸಿ ಹೊರಟುಹೋದ. ಅಜ್ಜಿಗೆ ಈಗ ಒಂದು ರೀತಿ ಸಮಾಧಾನವಾದಂತಾಗಿ ಒಳಕ್ಕೆ ನಡೆದರು.

ರುಕ್ಕು ಹೊರಗೆ ಜಗಲಿಯ ಮೇಲೆ ಕೂತಿದ್ದಳು. ಮಧ್ಯಾಹ್ನ ನಿದ್ದೆ ಮಾಡಬಾರದು ಎಂದು ಅವಳ ಶಪಥ. ಇವಳು ನಿದ್ದೆ ಮಾಡಿದಾಗಲೆಲ್ಲಾ, ಅಜ್ಜಿ, ತಾತ, ಕಡೆಗೆ ಅವಳ ಅಣ್ಣನೂ ಕೂಡ ಏನಾದರೊಂದು ತರಲೆ ಮಾಡಿಬಿಟ್ಟಿರುತ್ತಾರೆ. ಇವಳು ಕಟ್ಟಿದ್ದ ಮನೆಯನ್ನು ಬೀಳಿಸಿಬಿಡುವುದು. ಹುಡುಕಿಟ್ಟಿದ್ದ ’ರೇರ್’ ಬೀಜಗಳನ್ನು ಕಸಕ್ಕೆ ಎಸೆದು ಬಿಡುವುದು, ಹೀಗೆ ಏನೇನೋ. "ರುಕ್ಕೂ, ಒಂದು ಹೊತ್ತು ಹಾಗೆ ಉರುಳ್ಕೋಬಾರ್ದಾ" ದಿಂಬು ನೆಲದ ಮೇಲೆ ಹಾಕುತ್ತಾ, ಅಜ್ಜಿ ಕೂಗಿದರು. "ನೀನು ಮಲಕ್ಕೋ ಅಜ್ಜಿ, ಇಲ್ಲಿ ಕಟ್ಟಿರೋ ದೇವಸ್ಥಾನಾನ ಏನು ಮಾಡ್ಬೇಡ" ಎಂದು ಅಜ್ಜಿಗೆ ಕಟ್ಟಪ್ಪಣೆ ಹೊರೆಸಿ ಬೀದಿಗಿಳಿದಳು. ಇದು ಅವಳ ಫೇವರೆಟ್ ಕೆಲಸ. ಬೇಸಿಗೆ ಕಾಲವಾದ್ದರಿಂದ ಎಲ್ಲೆಲ್ಲೂ ಹುಣಸೇ ಹಣ್ಣು, ಹುಣಸೇ ಬೀಜದ ಮಳೆ. ಬೀದಿಯಲ್ಲಿ ಸುಮ್ಮನೆ ನಡಕೊಂಡು ಹೋಗುತ್ತಿದ್ದರೇ ಸಾಕು, ಕೈಯಿಗೊಂದು, ಕಾಲಿಗೆರಡು ಹುಣಸೇ ಬೀಜ ಸಿಗುತ್ತದೆ. ಒಂದೊಂದಾಗಿ ಬೀಜಗಳನ್ನು ಆರಿಸಿಕೊಳ್ಳುತ್ತಾ ತನ್ನ ಉದ್ದನೆಯ ಜಾಕೀಟಿಗೆ ಹಾಕಿಕೊಳ್ಳುತ್ತಾ ಮುಂದಕ್ಕೆ ನಡೆಯುತ್ತಿದ್ದಳು. ಒಂದಿನ್ನೂರು-ಮುನ್ನೂರು ಬೀಜ ಆಗಿಬಿಟ್ಟರೇ ಸಾಕು ಎಂದು ಅವಳ ಲೆಕ್ಕಾಚಾರ. ತನ್ನ ಊರಿಗೆ ಹೋದ ನಂತರ ’ಏಳುಗುಣಿ ಮನೆ’, ’ಸರಿ ಬೆಸ’, ’ಚೌಕಾಬಾರ’ ಆಟಗಳನ್ನು ಆಡಲು ಅವಳ ಈ ಸಿದ್ಧತೆ. ಹಿಂದೆ ಒಂದು ಸಾರಿ ಇದೇ ರಿತಿ ಬೇಕಾದಷ್ಟು ಬೀಜಗಳನ್ನು ಕೂಡಿಟ್ಟಿದ್ದಳು. ಅತೀ ಉತ್ಸಾಹದಿಂದ ಹುಣಸೇಬೀಜಗಳನ್ನು ನೀರಿನಲ್ಲಿ ತೊಳೆದು ಕವರಿಗೆ ಹಾಕಿಟ್ಟಿದ್ದಳು. ಆದರೆ, ನೀರು ಬಿದ್ದದ್ದೇ ಹುಣಸೇ ಸಿಪ್ಪೆಯೆಲ್ಲಾ ಎದ್ದು ಬಂದು ಅವಳ ಶ್ರಮವೆಲ್ಲಾ ಹಾಳಾಗಿ ಹೋಯಿತು. ಮತ್ತೆ ಅವಳು ಆ ಸಾಹಸಕ್ಕೆ ಕೈ ಹಾಕಲಿಲ್ಲ.

ಮುಂದೆ ಮುಂದೆ ಸಾಗುತ್ತಾ ಮತ್ತೆ ಅವಳ ಸವಾರಿ ಗೌಡರ ಮನೆ ಕಡೆಗೆ ಬಂತು. ಈ ಸಾರಿ ಗೌಡರನ್ನು ನೋಡಲು ಅಲ್ಲ. ಅವರ ಮನೆಯಲ್ಲಿ ಹುಣಸೆಕಾಯಿ ಹೊಡೆಯುವ ಕೆಲಸಗಾರರನ್ನು ನೋಡಲು!

(ಮುಂದುವರೆಯುತ್ತದೆ)

ಭಾನುವಾರ, ಮೇ 10, 2009

ರುಕ್ಮಿಣಿಯ ಅಜ್ಜಿ ಮನೆ - ೧

"ರುಕ್ಕೂ... ರುಕ್ಕಮ್ಮ ಮಣಿ ಪಾಯಸ ರೆಡಿ ಆಯ್ತು, ತಿನ್ನು ಬಾ", ಮನೆಯ ಮುಂದಿದ್ದ ಸುಂಕತ್ತಿ ಮರದ ಎಲೆಗಳು, ಕಡ್ಡಿಗಳಿಂದ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದ ರುಕ್ಮಿಣಿ ಒಂದೇ ಸಾರಿಗೆ ದೇವರನ್ನು ಮರೆತು ಅಡುಗೆ ಮನೆಗೆ ಓಡಿದಳು. ತನ್ನ ಮೆಚ್ಚಿನ ಸಬ್ಬಕ್ಕಿ ಪಾಯಸಕ್ಕೆ ಈ ಪುಟ್ಟುಹುಡುಗಿ ಇಟ್ಟಿದ್ದ ಹೆಸರು ’ಮಣಿ ಪಾಯಸ’. ಅಲ್ಲೇ ಹಜಾರದಲ್ಲಿ ಕೂತಿದ್ದ ತಾತ ಇವಳ ಓಟದ ಭರವನ್ನು ತಡೆಯಲಾರದೆ ಗುಡುಗಿದರು. "ಆಆಆಆಶಿಶೀ... ಹುಡುಗ್ರಿಗೇನು ಅಡಿಗೆ ಮನೇಲಿ ಕೆಲ್ಸ, ಬಾಮ್ಮ ಈಚೆಗೆ!". "ರೇಏಏಏ, ಸುಮ್ಮನಿರ್ತೀರ, ಪಾಯಸ ಕುಡಿಯಕ್ಕೆ ನಾನೇ ಕರ್ದಿದ್ದು". ತಾತನಿಂದ ಮರುಮಾತು ಬರದೇ ಇದ್ದ ಕಾರಣ, ರುಕ್ಮಿಣಿ ಧೈರ್ಯವಾಗಿ ಅಡುಗೆ ಮನೆಯಲ್ಲಿ ಹೋಗಿ ಕುಳಿತಳು. ಪಾಯಸದಿಂದ ಒಂದೊಂದೆ ಮಣಿಯನ್ನು ಸ್ಪೂನಿನಲ್ಲಿ ಆರಿಸಿ ಆರಿಸಿ ಒಂದು ಗಂಟೆ ಕಾಲ ತಿನ್ನುವುದು ಅವಳ ವಾಡಿಕೆ.

ಬೆಳಿಗ್ಗೆಯೇ ಎದ್ದು ಮನೆ ಬಾಗಿಲು, ಹಿತ್ತಲು - ಮುಸುರೆ ಮುಗಿಸಿ, ಮಾರು ದೂರದ ಬೋರ್ವೆಲ್ನಿಂದ ಮಡಿನೀರು ತಂದಿದ್ದ ಅಜ್ಜಿ ಈಗ ಬೆಂಗಳೂರಿನಿಂದ ಬಂದಿದ್ದ ಮೊಮ್ಮಗಳ ಬೇಡಿಕೆಯನ್ನು ಈಡೇರಿಸಿದ್ದರು. ಒಂದು ಗಂಟೆ ಪಾಯಸವನ್ನು ತಿಂದು ಮುಗಿಸಿ, ಅಡುಗೆ ಮನೆಯಿಂದ ಹೊರಕ್ಕೆ ಬಂದಳು, ರುಕ್ಕು. ತಾತ ಅಂಗಳದಲ್ಲಿ ಸೌದೆ ಹೊಡೆಯುತ್ತಿದ್ದರು. ಅಜ್ಜಿ ಮನೆಯಲ್ಲಿಲ್ಲದೇ ಇರುವುದು ತಕ್ಷಣ ಅರಿವಾಯಿತು. ಒಂದೇ ಓಟಕ್ಕೆ ಊರ ಗೌಡರಾದ ಮುನಿಶ್ಯಾಮಪ್ಪನ ಮನೆಗೆ ಓಡಿದಳು. "ನಮ್ಮಜ್ಜಿ ಬಂದಿದ್ದಾರ?", ಸೀದಾ ಅಡಿಗೆ ಮನೆಗೇ ನುಗ್ಗುತ್ತಾ ಕೇಳಿದಳು. ’ಇತ್ತಾಗ್ ಬಂದಿಲ್ಲಮ್ಮೋ, ತಡಿ, ತಡಿ, ಎಳನೀರು ಕೊಚ್ಚುತವರೆ ಕುಡ್ಕೊಂಡು ಹೋಗು". ಊರಿನಲ್ಲಿ ಇಂಥ ಸೇವೆಗೇನು ಕಡಿಮೆಯಿಲ್ಲ. ಗೌಡರ ಮಗನ ಕೈಯಲ್ಲಿ ಎರಡು ಎಳನೀರು ಒಡೆಸಿಕೊಂಡು ಕುಡಿದು, ಗಂಜಿಯನ್ನು ಕೈಯಲ್ಲಿಟ್ಟುಕೊಂಡು ಮೆಲ್ಲುತ್ತಾ ನಡೆದಳು.

ಅವಳು ಈಗ ಅಟ್ಯಾಕ್ ಮಾಡಲು ಹೋಗಿದ್ದು ಸಂಕಮ್ಮನ ಮನೆಯನ್ನು. ಅವಳಿಗೆ ಗೊತ್ತು ಅಜ್ಜಿ ಇಲ್ಲಾ ಗೌಡರ ಮನೆಗೆ ಹೋಗಿ ಹರಟೆ ಹೊಡೆಯುತ್ತಾರೆ, ಇಲ್ಲಾ ಸಂಕಮ್ಮನ ಮನೆಯಲ್ಲಿ ಕೂರುತ್ತಾರೆ, ಇಲ್ಲದಿದ್ದರೆ ಸೊಣ್ಣಮ್ಮ, ಅದೂ ಹೋದ್ರೆ ಲಿಂಗಾಯಿತರ ಮನೆ.

ಅಜ್ಜಿಗೆ ದಿನಾ ಮಧ್ಯಾಹ್ನ ಮಾಮೂಲಿ ಬಿಡುವು. ಆ ಸಮಯದಲ್ಲಿ ತನ್ನ ಸ್ನೇಹಿತೆಯರ ಮನೆಗೆ ಹೋಗಿ ಕೂರುತ್ತಿದ್ದರು. ಇಲ್ಲವೇ ಹಸುವನ್ನು ಮೇವಿಗೆ ಕರೆದುಕೊಂಡು ಹೋಗಿ ಕಟ್ಟುತ್ತಿದ್ದರು. ರುಕ್ಕು ಬೇಸಿಗೆ ರಜಕ್ಕೆ ಹೋದಾಗಲೆಲ್ಲಾ ಅಜ್ಜಿಯ ಜೊತೆಯೇ ಕಾಲ ಕಳೆಯುವುದು. ಅವರು ಹೀಗೆ ಆಚೀಚೆ ಕುಳಿತಾಗಲೆಲ್ಲಾ ಅದೆಷ್ಟೋ ವಿಷಯಗಳನ್ನು ಹೇಳುತ್ತಿದ್ದರು. ೪೦ ರೂಪಾಯಿಗೆ ಒಂದೇ ರೂಮಿದ್ದ ಮನೆಯೊಂದನ್ನು ಕೊಂಡುಕೊಂಡದ್ದು, ನಂತರ ತಾವೇ ಅದಕ್ಕೆ ಇಟ್ಟಿಗೆ ಮಣ್ಣು ಜೋಡಿಸಿ ದೊಡ್ಡ ಮನೆ ಮಾಡಿದ್ದು, ತನ್ನ ಗಂಡನ ಕಡೆಯ ೩೦ - ೪೦ ಜನಕ್ಕೆ ತಾವೇ ಮುದ್ದೆಗಳನ್ನು ತೊಳಸಿ ಹಾಕುತ್ತಿದ್ದುದು, ಆರೇಳು ಜನ ಹೆಣ್ಣುಮಕ್ಕಳ ಮದುವೆ ಮಾಡಿದ್ದು, ಒಂದು ವರ್ಷ ಹಾಲು ಹಾಕಿದ ರಾಧಮ್ಮನಿಗೆ ಚಿನ್ನದ ಮೂಗುತಿ ಮಾಡಿಸಿಕೊಟ್ಟದ್ದು, ಕಾಸಿಗೆ ಕಾಸು ಸೇರಿಸಿ ಜಮೀನುಗಳನ್ನು ಮಾಡಿದ್ದು ಹೀಗೆ ಏನೇನೋ. ಆಮೇಲೆ, ಸರ್ಕಾರದ ರೂಲಿನ ಪ್ರಕಾರ ಹತ್ತರಲ್ಲಿ ಒಂದು ಭಾಗ ಭೂಮಿಯಷ್ಟೇ ಇವರ ಪಾಲಿಗೆ ಉಳಿದುಕೊಂಡಿತ್ತು. ಊರಿನಲ್ಲಿ ಸ್ಕೂಲಾಗಬೇಕೆಂಬ ವಿಷಯ ಮುಂದೆ ಬಂದಾಗ ತಾತನೇ ಉಳಿದಿದ್ದ ಜಾಗದಲ್ಲಿ ಒಂದಷ್ಟನ್ನು ಕೊಟ್ಟುಬಿಟ್ಟಿದ್ದರು. ಈ ಕಥೆಗಳನ್ನು ಹೇಳುವಾಗ ಅಜ್ಜಿಯ ಕೈಯಿಂದ ಕೆಲವರು ಬೈಸಿಕೊಂಡರೆ ಇನ್ನೂ ಕೆಲವರು ಹೊಗಳಿಸಿಕೊಳ್ಳುತ್ತಿದ್ದರು.

ಮಕ್ಕಳು ಹೊರಗೆ ಕೆಲಸ ಮಾಡುತ್ತಿದ್ದರು, ಸೊಸೆಯಂದಿರು ತೋಟ ನೋಡಿಕೊಳ್ಳುತ್ತಿದ್ದರು, ಮನೆಯ ಕೆಲಸಗಳನ್ನೆಲ್ಲಾ ಇವರೇ ಮಾಡುತ್ತಿದ್ದುದು. ಅವರಿಗೆ ಅಂತಾ ವಯಸ್ಸೇನೂ ಆಗಿರಲಿಕ್ಕಿಲ್ಲ. ಬೇಗನೇ ಮದುವೆಯಾಗಿಬಿಟ್ಟಿರಬೇಕು, ಅದಕ್ಕೇ ಐವತ್ತು ವರ್ಷದಷ್ಟೊತ್ತಿಗೇ ಮೊಮ್ಮಗಳ ಮದುವೆಯನ್ನೂ ನೋಡಿಬಿಟ್ಟಿದ್ದರು.

ರುಕ್ಮಿಣಿಯ ಊಹೆ ಸರಿಯಾಯಿತು, ಅಜ್ಜಿ ಸಂಕಮ್ಮನ ಮನೆಯಲ್ಲಿ ಕೂತಿದ್ದರು. ಎಲೆ ಅಡಿಕೆ ಹಾಕುತ್ತಾ. ಸಂಕಮ್ಮ ಮನೆಯಲ್ಲಿ ಇವಳಿಗೆ ಏನೋ ಒಂದು ರೀತಿ ಅನುಭವವಾಗುತ್ತಿತ್ತು. ಸಂಕಮ್ಮ ಬೇರೆಯವರ ಹಾಗೆ ಜೋರಾಗಿ ಮಾತನಾಡುತ್ತಿರಲಿಲ್ಲ. ಸದಾ ಹಸನ್ಮುಖಿ. ಅವರ ಮನೆಯೂ ಕೂಡ ಸ್ವಲ್ಪ ಮಬ್ಬಾಗಿಯೇ ಇರುತ್ತಿತ್ತು. ಇನ್ನೂ ಒಂದು ವಿಷಯವಿತ್ತು, ಇವಳು ಹೋದಾಗಲೆಲ್ಲ ಸಂಕಮ್ಮ ಬೀರೂವಿನ ಡ್ರಾಯರಿನಲ್ಲಿಂದ ಎರಡು ಸಣ್ಣ ಸಣ್ಣ ಮಿಠಾಯಿ ತೆಗೆದು ಕೊಡುತ್ತಿದ್ದರು. ಅವು ತಿನ್ನಲು ಬಹಳ ರುಚಿ. ಆ ಬೀರೂವನ್ನು ಯಾವಾಗಲೂ ಬೀಗ ಹಾಕಿ ಇಟ್ಟಿರುತ್ತಿದ್ದರು. "ನೋಡು, ಬಿಸಿಲು ಮನೇಲಿರ್ಲಿ ಅಂತ ನಾನಿದ್ರೇ" ಅಜ್ಜಿ ರಾಗ ತೆಗೆಯುತ್ತಿದ್ದಂತೆಯೇ, ಸಂಕಮ್ಮ "ಬರ್ಲೇಳು, ಮನೇಲ್ ಕೂತು ಕೂತು ಅದಕ್ಕೆ ಬೇಜಾರಾಗಲ್ಲೇನು" ಎಂದರು. ರುಕ್ಕು ಅಜ್ಜಿಯ ತೊಡೆ ಮೇಲೆ ಕೈ ಹಾಕಿ ಕೂತಳು.

ಅವರಿಬ್ಬರ ಮಾತು ಎಲ್ಲಿಂದ ಎಲ್ಲೆಲ್ಲಿಗೋ ಸಾಗುತ್ತಿತ್ತು. ಸಂಕಮ್ಮನ ಚಿಕ್ಕ ಮಗಳು ಬಾಣಂತನಕ್ಕೆ ಬಂದಿದ್ದಾಳೆ. ಅವಳ ಆರೈಕೆ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳುತ್ತಿದ್ದಾಳೆ ಸಂಕಮ್ಮ. ಮೊದಲ ಮಗಳ ಬಾಣಂತನವನ್ನು ಈಗಾಗಲೇ ಅವರು ಮಾಡಿದ್ದಾರೆ. ಆದರೂ ಅಜ್ಜಿಯ ಹತ್ತಿರ ಕೇಳುವುದು, ಆಗ ಹಾಗಾಯ್ತಲ್ಲ, ಅದಕ್ಕೇನು? ಇದಕ್ಕೇನು? ಈ ಮಗು ದೊಡ್ಡಮಗಳ ಮಗುವಿನಷ್ಟು ಗಟ್ಟಿ ಬಂದಿಲ್ಲವೇ? ಹೀಗೇ ಏನೇನೋ ಕೇಳುತ್ತಿದ್ದಾರೆ. ರುಕ್ಮಿಣಿಗೆ ಇದೊಂದು ಅರ್ಥವಾಗದು. ಅವಳು ಅವರ ಮನೆಯಲ್ಲಿ ನೇತು ಹಾಕಿರುವ ಬೇರೆ ಬೇರೆ ದೇವರ ಫೋಟೋಗಳನ್ನು ನೋಡುತ್ತಲಿದ್ದಾಳೆ. ಅವಳು ಹುಟ್ಟಿದಾಗಿನಿಂದ ಇವುಗಳನ್ನು ನೋಡುತ್ತಿದ್ದರೂ ಇನ್ನೂ ಮನದಣಿದಿಲ್ಲ. ಅದರಲ್ಲಿ ಒಂದು ಹಸುವಿನ ಫೋಟೋ ಇತ್ತು. ಅದಕ್ಕೆ ತಲೆಯಿಂದ ಹೊಟ್ಟೆಯವರೆಗೆ ಮಾನವ ಹೆಣ್ಣಿನ ದೇಹ, ಅಲ್ಲಿಂದ ಹಿಂದಕ್ಕೆ ಹಸುವಿನ ದೇಹ. ವಿಚಿತ್ರ ಕಲ್ಪನೆಯಾದರೂ ನೋಡಲು ಸುಂದರವಾಗಿತ್ತು. ನಂದಿನಿಯೋ ಇನ್ಯಾವುದೋ ಹಸು ಅದಾಗಿರಬೇಕು. ಇವಳು ಅದನ್ನೇನು ಕೇಳಲು ಹೋಗುತ್ತಿರಲಿಲ್ಲ. ಅಲ್ಲಿದ್ದ ಒರಳುಕಲ್ಲು, ಎತ್ತರವಾದ ರಾಗಿ ಕಣಜ ಇವುಗಳನ್ನು ಕುತೂಹಲದಿಂದ ನೋಡುತ್ತಾ ಕೂತಿದ್ದಳು. ಸಂಕಮ್ಮನ ಯಜಮಾನಪ್ಪನು ಮನೆಗೆ ಬಂದೊಡನೆಯೆ ಸಂಕಮ್ಮ ’ನೀರು ಕೊಡಲೆ?’ ಎಂದು ಕೇಳಿದರು. "ಅದೇ ನೋಡು, ಆಚೆಯಿಂದ ಬಂದೋರಿಗೆ ಕೇಳೋದೇನು? ನೀರು ತಂದು ಕೊಡಬಾರ್ದೇನು?" ಎಂದು ಅಜ್ಜಿ ಗುಟುರು ಹಾಕಿದರು. ಸಂಕಮ್ಮ - ಯಜಮಾನಪ್ಪ ಇಬ್ಬರೂ ಮೆಲ್ಲಗೆ ನಕ್ಕರೆ ಹೊರತು ಮರುಮಾತಾಡಲಿಲ್ಲ. ಸಂಕಮ್ಮ ತಂದುಕೊಟ್ಟ ನೀರನ್ನು ಯಜಮಾನಪ್ಪ ಕುಡಿದನು. ಇದ್ದಕ್ಕಿದ್ದ ಹಾಗೆ ಎಮ್ಮೆ ಕೂಗಿದ್ದು ಕೇಳಿಸಿ, ’ನಾನು ಹಾಕಲಾ ಹುಲ್ಲು’ ಎಂದು ಪರ್ಮಿಷನ್ ಕೇಳಿಕೊಂಡು ರುಕ್ಕು ಆಚೆಗೆ ಬಂದಳು. "ನಿನಗ್ಯಾಕಮ್ಮ ಈ ಪಾಡೆಲ್ಲ" ಎಂದು ಸಂಕಮ್ಮ ಹೇಳಿದ್ದು ಅವಳ ಕಿವಿಗೆ ಬೀಳಲೇ ಇಲ್ಲ. ಎಮ್ಮೆಗಳನ್ನು ಮಾತನಾಡಿಸುವುದು, ಗದರಿಸುವುದು, ಮೇವು ಹಾಕುವುದು, ತೊಳೆಯುವುದು, ಸಗಣಿ ಸಾರಿಸುವುದು ಇವೆಲ್ಲಾ ಅವಳಿಗೆ ಕರಗತ. ಮೊದಮೊದಲು ಬೆಂಗಳೂರಿನವಳೆಂದು ಅಣಕಿಸಿದವರೂ ಈಗ ಸುಮ್ಮನಾಗಿದ್ದರು.

(ಮುಂದುವರೆಯುತ್ತದೆ)