ಬುಧವಾರ, ಸೆಪ್ಟೆಂಬರ್ 5, 2012

ಭಯದ ಭಯ


ಭಯವೆಂದರೆ ಭಯ
ನನಗೆ, ಭಯವೆಂದರೆ ಭಯ

ಭಯ ಭೂತ, ಭಯ ಪಿಶಾಚಿ,
ಬಂದು ಮೆತ್ತಿಕೊಂಡಿತೆಂದರೆ
ಬಿಡದೇ ಬಿಡದು

ಟ್ರ್ಯಾಕಿನಲ್ಲಿ ಎಲ್ಲರಿಗೂ ಮುಂದೆ
ಓಡಬೇಕಾದವನ ಕಾಲು
ಹೂತು ಹೋಗಿ, ಮೇಲೇಳದಂತೆ
ಮಾಡಿತ್ತು ಭಯ

ಪರೀಕ್ಷೆಯಲ್ಲಿ ಪುಟಗಳನ್ನು
ತುಂಬಿಸಬೇಕಾಗಿದ್ದವನ ಕೈ
ಜಡಹಿಡಿದು ಬೀಳುವಂತೆ ಮಾಡಿತ್ತು ಭಯ

ತನ್ನ ಮೇಲೆ ಹರಿಹಾಯುವ ಬಾಸಿನ
ಮುಖಕ್ಕುಗಿದು ಹೊರನಡೆಯುವ ರೋಷವನ್ನು
ಐಸ್ ಕ್ಯೂಬಿನಂತೆ ತಣ್ಣಗೆ ಮಾಡಿತ್ತು ಭಯ

ಅದಕ್ಕೇ ನನಗೆ ಭಯವೆಂದರೆ
ಬಹಳ ಭಯ
ದೂರ ಓಡಿದ್ದೇನೆ ಅದರಿಂದ
ನನ್ನ ಹತ್ತಿರವೂ ಸುಳಿಯಗೊಡದೆ







ಅತಿ ಜಾಣ

ಹ್ಞೂ ತಳ್ಳು! ಇನ್ನೊಂದು ಸ್ವಲ್ಪ
ಹ್ಞಾ ಹಾಗೇ! ಪರವಾಗಿಲ್ಲಪ್ಪ

ನಾನು ಅಂದುಕೊಂಡ ಹಾಗೆ ಸಾಗುತ್ತಿದೆ
ಎಲ್ಲಾ, ಈ ಗೋಡೆ ಬಿದ್ದು ಹೋಗಲು,
ಎಷ್ಟು ಲೆಕ್ಕ ಹಾಕಿದ್ದೇನೆ ನಾನು?

ಇಟ್ಟಿಗೆಗಳೆಷ್ಟು? ಮರಳೆಷ್ಟು?
ನೀರೆಷ್ಟು?
ಎತ್ತರ, ಆಳ, ಅಗಲ
ಎಲ್ಲವನ್ನು ಅರಿದು ಕುಡಿದು ಬಿಟ್ಟಿದ್ದೇನೆ...

ಅದರ ಮುಂದೆ ನನ್ನ ಶಕ್ತಿ ಎಷ್ಟು?
ಹೆಂಗಸರಿಗೆಷ್ಟು? ಗಂಡಸರಿಗೆಷ್ಟು?
ತಳ್ಳಲು ಬೇಕಾದ ಶಕ್ತಿಯೆಷ್ಟು?
ದಿನೇ ದಿನೇ ನನ್ನಲ್ಲಿ ಕುಗ್ಗುವ ಶಕ್ತಿಯೆಷ್ಟು?
ಅದನ್ನು ಸರಿಪಡಿಸಲು ಬೇಕಾದ ಆಳುಗಳೆಷ್ಟು?
ಹ್ಞಾ! ಆಯ್ತು. ಈ ವರುಷ ಮೂರು
ಮಕ್ಕಳು! ಇನ್ನು ಈ ಗೋಡೆ
ನಮ್ಮೆಲ್ಲರ ಕೈ ಭಾರಕ್ಕೆ ಅದರಿ ನೆಲಕ್ಕುರುಳುವುದೇ!

ಹ್ಹ ಹ್ಹ ಹ್ಹ

ಬಂದಿದ್ದ ಒಬ್ಬ ಹಾರೆ ಗುದ್ದಲಿ ಹಿಡಿದು
ಗೋಡೆಯನ್ನು ಬೀಳಿಸುತ್ತೇನೆಂದು
ಅಳೆದು ಸುರಿದು ನೋಡಿ ಪರಕಿ ಹೇಳಿಬಿಟ್ಟೆ
ನಿನ್ನ ಬಡಕಲು ಕೊಡಲಿಯೆಲ್ಲಿ? ಈ ದೊಡ್ಡ ಗೋಡೆಯೆಲ್ಲಿ?
ಬಯ್ದು ಓಡಿಸಿಬಿಟ್ಟೆ, ದಡ್ಡನನ್ನ...

ಹ್ಞೂ ತಳ್ಳಿ! ಇನ್ನೊಂದು ಸ್ವಲ್ಪ
ಹ್ಞಾ ಹಾಗೇ! ಇನ್ನೇನು ಬಿದ್ದೇ ಬಿಡುತ್ತದೆ...


ಮಂಗಳವಾರ, ಸೆಪ್ಟೆಂಬರ್ 4, 2012

ವಿನಂತಿ


ನಾನು ತಿಳಿಯದೇ ಮಾಡಿದ ತಪ್ಪನ್ನು,
ನೀನು ಹಟಕ್ಕೆ ಬಿದ್ದು ಮಾಡುವುದೇನು?
ನಾನು ಕಣ್ಣಿದ್ದೂ ಕುರುಡಾದೆ, ಕಿವಿಯಿದ್ದು ಕೇಳದಾದೆ,
ಅಂತರಂಗದೊಳಕ್ಕೆ, ನಿನ್ನನ್ನು ಕೂಗಿ ಕರೆಯುವೆ ಎಂದುಕೊಂಡಾಗ,
ನೀನು ಹೃದಯವಿದ್ದೂ.......

ಪ್ರೀತಿ ಎನ್ನುವುದು,
ಅಂಗಳದಲ್ಲಿ ಬಂದು ಕೂತ ಹಕ್ಕಿಯೇ?
ಈಗಿದ್ದು, ಈಗಿಲ್ಲವೆಂಬುದು ಉಂಟೇ?
ಕಣ್ಣಾಮುಚ್ಚಾಲೆಯೇ?

ಸರಿ ತಪ್ಪುಗಳ ವಿವೇಚನೆಗೆ ನಾನು ಎಷ್ಟರವಳೂ ಅಲ್ಲ,
ಹಠ ಮಾಡಿ ಗೆಲ್ಲುವುದೆಂಬ ಪ್ರೀತಿಯೂ ಇಲ್ಲ,

ಗೆಳೆಯಾ, ಇದು ನಿನಗೆ ಹಿತವೇ?