ಭಾನುವಾರ, ನವೆಂಬರ್ 15, 2009

ರುಕ್ಮಿಣಿಯ ಅಜ್ಜಿ ಮನೆ - ೧೧

ಅತ್ತೆ ಪಟಕ್ಕನೆ, "ನಮ್ಮ ರುಕ್ಕೂ ಮಾಡದ ಕೆಲಸವೇ ಇಲ್ಲ, ಕೈ ಇಟ್ಟರೆ ಮುಗೀತು, ಮುಗಿಸಿಯೇ ತೀರೋದು. ನೀನು ಹೊರಡು. ತಲೆನೋವು ಅಂತಿದ್ದೆಯಲ್ಲಾ" ಎಂದರು. ರುಕ್ಕೂಗೆ ಸುಳಿಯಲ್ಲಿ ಸಿಕ್ಕ ಅನುಭವವಾಗತೊಡಗಿತು.

"ಎಲ್ಲಿದೆ ಅತ್ತೆ ಒರಳು?" ಎಂದು ಕೇಳಿಕೊಂಡು, ಕೆಲಸಕ್ಕೆ ಹಚ್ಚಿಕೊಂಡಳು. ಆ ಒರಳು ತೊಳೆದು ಎಷ್ಟು ದಿನವಾಯ್ತೋ? ರುಬ್ಬುವುದಕ್ಕೆ ಶುರುಮಾಡುವ ಮೊದಲೇ ರುಕ್ಕೂಗೆ ಬೆನ್ನುನೋವು ಬರತೊಡಗಿತ್ತು. "ಅತ್ತೇ, ದಿನಾ ಸೋಫಾ ಮೇಲೆ ಕೂತು ಕೂತು ಜಡ್ಡು ಹಿಡಿದುಹೋಗಿತ್ತು. ಈಗ ಒಳ್ಳೆ ಎಕ್ಸಸೈಸ್ ಆಗ್ತಿದೆ" ಎಂದಳು. ಅತ್ತೆ "ನೀವು ಬಿಡಮ್ಮಾ" ಅಂದದ್ದಕ್ಕೆ ಏನು ಅರ್ಥವೋ ತಿಳಿಯದೇ ಕಕ್ಕಾಬಿಕ್ಕಿಯಾದಳು.

"ಅಡಿಗೆ ಆಗಿದ್ಯಂತಾ ರುಕ್ಕೂ?" ಕೊಟ್ಟಿಗೆಯಿಂದ ಅಜ್ಜಿಯ ದನಿ ಕೇಳಿಸಿತು. ರುಕ್ಕೂ ಬಾಯಿಬಿಡುವ ಮೊದಲೇ ಅತ್ತೆ, "ಆಗತ್ತೆ ಇರಿ ನಿಧಾನಕ್ಕೆ, ಅವರಿನ್ನೂ ಬಂದಿಲ್ಲವಲ್ಲಾ?" ಎಂದರು. ರುಕ್ಕೂ ವಿಧಿಯಿಲ್ಲದೇ ಬಾಯಿಮುಚ್ಚಿಕೊಂಡಳು.

ರುಬ್ಬಿ ಮುಗಿಸಿ, ಒರಳು ತೊಳೆದು ಮೇಲೇಳುವ ಹೊತ್ತಿಗೆ ಬೆನ್ನು ಸ್ವಲ್ಪ ಸಡಿಲವಾದಂತೆ ತೋರಿತು. ರುಕ್ಕೂಗೆ ಖುಷಿಯಾಯಿತು. ಅತ್ತೆ "ನೀವು ಪಲಾವು ಮಾಡಿಕೊಳ್ಳಿ, ರಾಗಿ ಹಿಟ್ಟು ಇದೆಯಾ" ಎಂದಳು. ಮತ್ತೇಕೋ ಬೇಡವೆನಿಸಿ, "ರಾತ್ರಿಗೆ ನಾನೇ ಮುದ್ದೆ ಮಾಡ್ತೀನಿ" ಎಂದು ಅಲ್ಲಿಂದ ಹೊರಟಳು. "ಮತ್ತೆ ಕೊಟ್ಟಿಗೆಗಾ?" ಎಂಬ ಪ್ರಶ್ನೆಗೆ "ಇಲ್ಲಾ ಅತ್ತೆ, ನನ್ನ ಹಳೇ ಫ್ರೆಂಡುಗಳನ್ನೆಲ್ಲಾ ನೋಡಿಕೊಂಡು ಬರ್ತೀನಿ" ಎಂದಳು. "ಲಲಿತಾ ಹಾಗೇ ಒಂದು ರೌಂಡು ಹೋಗಿ ಬರೋಣ ಬರ್ತೀಯಾ?" ಎಂದಳು. ಏನೂ ಉತ್ತರ ಬರಲಿಲ್ಲ, ಅತ್ತಿತ್ತ ತಿರುಗಿದ ಮೇಲೆ, ಲಲಿತಾ ರೂಮಲ್ಲಿ ಮಲಗಿದ್ದಿದ್ದು ಕಾಣಿಸಿತು. ಪಟ್ಟು ಬಿಡದೇ ಎಬ್ಬಿಸಿಕೊಂಡು ಹೊರಟಳು. "ಗುಣಾ ಎಲ್ಲೇ?" ಎಂದು ಕೂಗಿಡುತ್ತಾ ಅವಳನ್ನೂ ಸೇರಿಸಿಕೊಂಡಳು. ಗುಣಾಗೆ ಇವಳು ಕರೆದದ್ದಕ್ಕೆ ಅಲ್ಪ ಸ್ವಲ್ಪ ಖುಷಿಯೂ ಆಯಿತು. ಅಕ್ಕನ ಜೊತೆ ಹೋಗುವಾಗ ತಾನೇನು ಮಾಡಬಹುದು ಎಂದು ಯೋಚಿಸುತ್ತಾ ಹೆಜ್ಜೆ ಹಾಕಿದಳು.

ಇವರು ರಸ್ತೆಗೆ ಹೋಗುತ್ತಲೇ, ಲಿಂಗಾಯಿತರ ಪಾರ್ವತಿ ದರ್ಶನವಾಯಿತು. ಒಳ್ಳೆಯ ಹೆಂಗಸು. ನೋಡುತ್ತಲೇ ಸಣ್ಣಗೆ ನಕ್ಕಳು. ಈಯಮ್ಮ ಆವತ್ತಿನಿಂದ ಮಾತು ಕಡಿಮೆ ಎಂದು ನೆನಪು ಮಾಡಿಕೊಂಡು ರುಕ್ಮಿಣಿಯೇ ಮಾತನಾಡಿಸಿದಳು. ಇವಳ ದನಿ ಕೇಳುತ್ತಲೇ ಪಾರ್ವತಿ ’ನಮ್ಮ ಕಮಲೀ ಮಗಳಲ್ವಾ ನೀನು?’ ಎಂದು ಇದ್ದಕ್ಕಿದಂತೆ ಹಳೆಯ ಫೋಟೋ ಒಂದನ್ನು ನೋಡಿ ಸಂತೋಷಪಡುವ ಹಾಗೆ ಸಂತೋಷಪಟ್ಟಳು. ’ಚೆನ್ನಾಗಿದ್ದೀಯಾ?’ ’ಅಮ್ಮಾ ಚೆನ್ನಾಗಿದ್ದಾರಾ?’, ’ಓದು ಮುಗೀತಾ?’, ’ಕೆಲಸ ಆಯ್ತಾ?’ ಎಂದು ವಿಚಾರಿಸಿದರು. ಇವಳು ಕೆಲಸ ಮಾಡುತ್ತಿರುವ ವಿಚಾರ ಕೇಳಿ ’ಹಾಗಿರಬೇಕು. ಅವರಿವರನ್ನ ನಂಬ್ಕೋಬೇಡಿ, ನಿಮ್ಮ ದುಡ್ಡು ನೀವು ದುಡೀರಿ’ ಎಂದು ಕಿವಿ ಮಾತು ಹೇಳಿದರು. ರುಕ್ಕೂಗೆ ಏಕೋ ಮನಸ್ಸು ತುಂಬಿ ಬಂತು. ಅವಳ ಮಗಳಿಗೆ ಅಳಿಯ ಕೊಡಬಾರದ ಕಷ್ಟ ಕೊಡುತ್ತಿದ್ದಾನೆಂಬುದನ್ನು ಗುಣಾ, ಲಲಿತಾ ಹೇಳಿದರು. ಓದಿಲ್ಲದ ಕಾರಣ ಅವಳು ಈಗಲೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳಂತೆ.

ಅಲ್ಲಿಂದ ಮುಂದಕ್ಕೆ ಸಂಕಮ್ಮನ ಮನೆ. ರುಕ್ಮಿಣಿ ಅವರ ಮನೆಗೇ ಹೋಗಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿಕೊಳ್ಳುತ್ತಿದ್ದಳು. ಅಷ್ಟರಲ್ಲೇ ಯಾರೋ ಮಾತನಾಡುವುದು ಕೇಳಿಸಿತು,
’ಏ ಆ ಹುಡುಗಿ ನೋಡಿದ್ದೀಯಾ? ರುಕ್ಮಿಣಿ ಅಂತ ಅವಳ ಹೆಸರು’.
’ಅವಳ? ಯಾರೇ?’
’ಯೇ, ಕಮಲಕ್ಕನ ಮಗಳು. ರಜಾಕ್ಕೆ ಬಂದಾಗಲೆಲ್ಲಾ ಎಮ್ಮೆ ಮೇಯ್ಸೋದೇ ಅವಳ ಕೆಲ್ಸ. ನಾನಂತೂ ಅವಳಿಗೆ ಎಮ್ಮೆ ಅಂತಲೇ ಹೆಸರಿಟ್ಟಿದ್ದೆ.’ ’ಹಾಗಾದ್ರೇ, ಕರೆಯಮ್ಮ ನೋಡೋಣ’
’ಅಯ್ಯಪ್ಪಾ, ಅವಳನ್ನ ಯಾವತ್ತೂ ಕರ್ದಿಲ್ಲಪ್ಪಾ’ ತನ್ನ ಬಗ್ಗೆ ಇಷ್ಟೊಂದು ಸ್ವಾರಸ್ಯಕರ ಕಥೆ ಇದೆಯೆಂದು ಅವಳಿಗೇ ತಿಳಿದಿರಲಿಲ್ಲ. ತಿರುಗಿ ನೋಡಿದ ಕೂಡಲೇ ಮುಖಪರಿಚಯ ಸಿಕ್ಕಿತು. ಸ್ವಲ್ಪ ಕಿಚಾಯಿಸೋಣವೆಂದು ’ಏನು ನಿರ್ಮಲ? ಚೆನ್ನಾಗಿದ್ದೀಯಾ’ ಎಂದಳು. ಆ ಹುಡುಗಿ ಪಾಪ ತಡವರಿಸಿಕೊಂಡು ’ಚೆನ್ನಾಗಿದ್ದೀನಕ್ಕಾ’ ಎಂದಳು. ಅಷ್ಟಕ್ಕೇ ಸಮಾಧಾನವಾಗದೇ, "ದೊಡ್ಡ ದೊಡ್ಡವೆರಡು ಎತ್ತುಗಳಿದ್ವಲ್ಲಾ ಎಲ್ಲಿ?" ಅಂದಳು. ಆ ಹುಡುಗಿ ಮತ್ತೂ ತಡವರಿಸಿ ’ಒಂದು ಸತ್ತುಹೋಯಿತು, ಇನ್ನೊಂದನ್ನು ಮಾರಿಹಾಕಿದೆವು’ಎಂದಳು.
’ಎಮ್ಮೆಗಳು ನಿಮ್ಮವೇನಾ? ನೀವು ಡೈರಿಗೆ ಹಾಲು ಹಾಕ್ತೀರಾ?’
’ಊನಕ್ಕಾ, ಹಾಕ್ತೀವಿ. ಎರಡರಿಂದ ಎಂಟೊಂಬತ್ತು ಲೀಟರ್ ಆಗತ್ತೆ’
’ನೀವೂ ಜೋಳ ಬೆಳೆಯೋದೇನಾ?’
’ಎಲ್ಲಾರೂ ಅದೇ ತಾನೆ?’
’ನಿಮ್ಮ ತೋಟ ಯಾವುದೇಳು, ಕೆರೆ ಪಕ್ಕದಲ್ಲೇ ಇತ್ತಲ್ಲಾ ಅದಲ್ವಾ?’
’ಊ ಅದೇ’
’ರಜಾ ಇತ್ತು ಅದಕ್ಕೇ ಊರಿಗೆ ಬಂದಿದ್ದೆ. ಸುಮ್ಮನೆ ಊರೆಲ್ಲಾ ಒಂದು ರೌಂಡು ಹಾಕಣ ಅಂತ ಬಂದೆ, ಬರ್ತೀನಿ’ ಎಂದು ಮುಕ್ತಾಯ ಹಾಡಿ ಹೊರಟಳು. ನಿರ್ಮಲಾಗಂತು ಹೀಗೆ ಹಟಾತ್ತನೆ ಮೈಮೇಲೆ ಎರಗಿದ ಅಪಾಯದಿಂದ ಗಾಬರಿಯಾಗಿಬಿಟ್ಟಿತ್ತು. ಆದರೆ, ಮಾತು ಮುಗಿಯುವಷ್ಟರಲ್ಲಿ ರುಕ್ಮಿಣಿಯ ಬಗ್ಗೆ ಪ್ರಶಂಸೆ ಮೂಡಿತ್ತು. ರುಕ್ಮಿಣಿಗಂತೂ ಒಳಗೊಳಗೆ ಹೆಮ್ಮೆಯಾಗುತ್ತಿತ್ತು. ಜೊತೆಗೇ ಸಣ್ಣಗೆ ಮಜಾ ತೆಗೆದುಕೊಳ್ಳುತ್ತಿದ್ದಳು.

ಎರಡು ಹೆಜ್ಜೆ ಮುಂದಕ್ಕೆ ಹೋಗುತ್ತಲೇ, ಚಿನ್ನಮ್ಮ ಎದುರಿಗೆ ಬಂದಳು. ಚಿನ್ನಮ್ಮನನ್ನು ನೋಡಿದ್ದೇ ರುಕ್ಮಿಣಿ ’ನೀವು ಕೊಟ್ಟ ನಾಲ್ಕೂ ಜೋಳ ನಾನೆ ತಿಂದೆ’ ಎಂದು ಖುಷಿಯಿಂದ ಕಿರುಚಿದಳು. ಗುಣಾ, ಲಲಿತಾ ಗಂಭೀರವಾಗಿ ’ಅಕ್ಕಾ, ನಾವು ಸಂಕಮ್ಮನ ಮನೇಲಿರ್ತೀವಿ, ಬನ್ನಿ’ ಎಂದು ಮುಂದಕ್ಕೆ ಹೊರಟರು. ಚಿನ್ನಮ್ಮ ಏನೋ ಗ್ರಹಿಸಿದವಳಂತೆ ’ಒಂದು ನಿಮಿಷ ಮನೆಗೆ ಬಂದು ಹೋಗಮ್ಮಾ’ ಅಂದಳು. ರುಕ್ಮಿಣಿ ಮರುಮಾತಾಡದೆ ಅವಳ ಹಿಂದೆ ಹೊರಟಳು.