ಭಾನುವಾರ, ಜನವರಿ 25, 2009

ಮುಕ್ತ - ಮುಕ್ತ!

ಭೂಮಿಕಾ ಸಂಸ್ಥೆಯವರು, ಆಸಕ್ತರನ್ನು ’ಸ್ಕ್ರೀನ್ ಟೆಸ್ಟಿಗೆ’ ಕರೆದ ಹಿನ್ನೆಲೆಯಲ್ಲಿ ಬರೆದದ್ದು...

ನಾನು ಒಬ್ಬ ಸಾಮಾನ್ಯ ಮನುಷ್ಯ; ಹೆಸರು ವಸಂತ. ಪತ್ನೀ, ಪುತ್ರ ಸಮೇತರಾಗಿ ಬೆಂಗಳೂರಿನಲ್ಲಿ, ಒಂದು ಸಣ್ಣ ನೌಕರಿ ಹಿಡಿದು, ಬಾಡಿಗೆ ಮನೆಯಲ್ಲಿ ಸಂಸಾರ ಮಾಡುತ್ತಿದ್ದೇನೆ ಎಂದರೆ, ನನ್ನ ಪ್ರಪಂಚವೆಲ್ಲಾ ನಿಮ್ಮ ಕಣ್ಮುಂದೆ ಬರುತ್ತದೆಯಲ್ಲವೇ? ಇವೆಲ್ಲಾ ಅತ್ತಗಿರಲಿ.

ಹಾಗೆ ನೋಡಿದರೆ ನಾನೂ ’ಮುಕ್ತ’ ಭಕ್ತನಾಗಿದ್ದೆ. ನಮ್ಮ ಮನೆಮಕ್ಕಳು, ಅತ್ತೆ ಮಾವ ಅಕ್ಕ ತಂಗಿಯರಿಗಿಂತ ಅರು, ಸ್ವಾಮೀಜಿ,ಸಿಎಸ್ಬಿ, ಇವರೇ ನಮ್ಮ ಕುಟುಂಬವಾಗಿಬಿಟ್ಟಿದ್ದರು. ನನ್ನ ಹೆಂಡತಿಗೆ ಬೆಳಗ್ಗಿನಿಂದಲೇ ಚಿಂತೆ, ಯಾರ್ಯಾರಿಗೆ ಎಷ್ಟು ಕಷ್ಟ ಬಂದುಬಿಡುತ್ತದೋ ಎಂದು. ರಾತ್ರಿಯಾದರೆ ಸ್ವಲ್ಪ ನಿಶ್ಚಿಂತೆ ಕಣ್ತುಂಬ ನೋಡಿ ಸಮಾಧಾನಪಡಬಹುದಲ್ಲ? ಒಂದು ಎಪಿಸೋಡಿನಲ್ಲಿ, ಒಂದು ಪಾತ್ರಾವಾದರೂ ಬರದೆ ಹೋಗಲಿ, ಅವರಿಗೆ ಬೀಳುತ್ತಿದ್ದ ಬೈಗುಳ ಅಷ್ಟಿಷ್ಟಲ್ಲ, ಆವತ್ತು ನನ್ನ ಹೊಟ್ಟೆಗೂ ತಣ್ಣೀರು ಬಟ್ಟೆ!

ಇಷ್ಟೆಲ್ಲಾ ಆದ ಮೇಲೆಯೂ ನನ್ನ ಕರುಳು ಚುರುಕ್ ಅನ್ನದೇ ಇರುತ್ತದೆಯೇ? ಈ ಕಷ್ಟವನ್ನೆಲ್ಲಾ ನೋಡುವುದರಿಂದ ತಪ್ಪಿಸಿಕೊಳ್ಳಲು, ಓಟಿ ಮಾಡಿಕೊಂಡು ಒಂಭತ್ತೂವರೆ ಗಂಟೆಗೆ ಬರುವುದೆಂದುನಿರ್ಧರಿಸಿದೆ. ನನಗೆ ಕಥೆ ಗೊತ್ತಾಗುತ್ತಿಲ್ಲವಲ್ಲ ಅಂತ ಇವಳಿಗೆ ಸಂಕಟ ಶುರುವಾಯಿತು. ರಾತ್ರಿಯೆಲ್ಲಾ ಚಿತ್ರಕಥೆ -ಸಂಭಾಷಣೆಯೊಂದಿಗೆ ’ಇಮ್ಯಾಜಿನರಿ ಸೀರಿಯಲ್ಲು’! ’ಇದಕ್ಕಿಂತ ಅದೇ ವಾಸಿ’ ಎಂದು ಓಟಿ ಮಾಡುವುದನ್ನು ಬಿಟ್ಟುಬಿಟ್ಟೆ.

ಒಂದು ವಾರ ಕೆಲಸದ ಮೇಲೆ ಎಂದು ದಿಲ್ಲಿಯಲ್ಲಿ ಇರಬೇಕಾಯಿತು. ನಾನು ಅಲ್ಲಿದ್ದಾಗಲೇ ’ಮುಕ್ತ’ ಮುಗಿಯಿತೆಂದು ಕೇಳಿ, ನನ್ನ ಹೆಂಡತಿಯ ಪಾಡು ನೆನೆಸಿಕೊಂಡು ದುಃಖಪಟ್ಟೆ, ಇನ್ನು ವಾಪಾಸಾದ ಮೇಲೆ ನನಗೆ ಬರುವ ಪಾಡನ್ನು ನೆನೆಸಿಕೊಂಡು ಅಳುವೇ ಬಂದು ಬಿಟ್ಟಿತು.

ಒಂದು ವಾರ ಮುಗಿದೇ ಹೋಯಿತಾದ್ದರಿಂದ ಮನೆಗೆ ವಾಪಾಸು ಬರಲೇಬೇಕಾಯಿತು. ಏನಾಶ್ಚರ್ಯ? ನನ್ನ ಹೆಂಡತಿ ನನಗೇ ಕಾಯಿತ್ತಿರುವವಳ ಹಾಗೆ ಸಂಭ್ರಮಿಸಿದ್ದನು ನೋಡಿ ಬಾಯಿಂದ ಮಾತೇ ಹೊರಡಲಿಲ್ಲ. ಊಟ - ಉಪಚಾರವೆಲ್ಲಾ ಮುಗಿಯಿತು. ಇನ್ನೇನು ಮಲಗಬೇಕೆಂದು ಹೊರಡುವಷ್ಟರಲ್ಲಿ ಕಣ್ಣಿಗೆ ಬಿತ್ತು. ನಾನು ಕಾಲೇಜಿನಲ್ಲಿ ಡಂಬೋ ಆಗಿದ್ದಾಗ ಮಾಡಿದ ’ಕೋರ್ಟಿನಲ್ಲಿ ನಿಲ್ಲುವ ಗಾರ್ಡಿನ’ ಪಾರ್ಟಿನ ಫೋಟೊ ಟೇಬಲ್ ಮೇಲೆ ರಾರಾಜಿಸುತ್ತಿದೆ! ಏಕೋ? ಏನೋ? ಕೇಳಿ, ತಲೆ ಮೇಲೆ ಚಪ್ಪಡಿಕಲ್ಲು ಎಳೆದುಕೊಳ್ಳುವುದೇಕೆಂದು ಸುಮ್ಮನಾದೆ.

ರೂಮಿಗೆ ಬಂದವಳೇ, ಫೋಟೋ ತೆಗೆದುಕೊಂಡು ಅಕ್ಕರೆಯಿಂದ ನೋಡುತ್ತಾ, ನಿಮಗೆ ಪಾರ್ಟು ಮಾಡೋದು ಬರುತ್ತಲ್ಲವೇ? ರಾಗಿಣಿ ರಾಗ ಎಳೆದಳು. ನನ್ನ ಸುತ್ತಲೂ ಯಾವುದೋ ಹೊಗೆ ಆಡುತ್ತಿದ್ದುದು ಗೊತ್ತಾಯಿತು. ಕಟ್ಟಿಕೊಂಡಿದ್ದು ಅಷ್ಟು ಸುಲಭವಾಗಿ ಬಿಟ್ಟೀತೆ? "ನಿಮಗೋಸ್ಕರ ಒಳ್ಳೇ ಚಾನ್ಸಿದೆ. ಈಗ ಆರಾಮಾಗಿ ಮಲಕ್ಕೊಳ್ಳೀ ಬೆಳಿಗ್ಗೆ ಹೇಳ್ತೀನಿ" ಎಂದು ಪಕ್ಕದಲ್ಲಿ ಪವಡಿಸಿದಳು. ನಾನು ರಾತ್ರಿಯೆಲ್ಲಾ ನಿದ್ದೆಗೆಟ್ಟೆ.

ಬೆಳಿಗ್ಗೆ, ಇನ್ನೂ ಕಣ್ಣೇ ಬಿಟ್ಟಿರಲಿಲ್ಲ, ಆಗಲೇ ಮನೆಯಲ್ಲಿ ಗಿಜಿ-ಗಿಜಿ. "ಯಾವ ಕಡೆ ಸರಿಹೋಗುತ್ತೆ?... ಇಲ್ಲ... ಅವರು ಸರಿಯಾಗಿ ಕಾಣಬೇಕಲ್ಲಾ?... ಇಷ್ಟೇ ಜನ ಸಾಕ?... ಅವರೆಲ್ಲಾ ಸ್ವಲ್ಪ ಬೆಳ್ಳಗೆ ಇದಾರಲ್ಲ?..." ರಾಗಿಣಿಯ ಧ್ವನಿ? "ನೀವು ಯೋಚನೆ ಮಾಡಬೇಡಿ ಮ್ಯಾಡಮ್, ಒಂದಲ್ಲದಿದ್ದರೆ ನಾಲ್ಕು ಯಾಂಗಲ್ಲಲ್ಲಿ ತೆಗೆಯೋಣ, ಸೀನ್ ತೆಗೆಯೋ ಹೊತ್ತಿಗೆ ಜಾಸ್ತಿ ಜನ ಬರ್ತಾರೆ ಬಿಡಿ" ಇದ್ಯಾವ ಧ್ವನಿ ಎಂದು ಗ್ಗೊತ್ತಾಗಲಿಲ್ಲ.

ಇದ್ದ ಹಾಗೆ ಹೊರಗೆ ಹೊರಟೆರೆ, ಸರಿಯಿರಲಿಕ್ಕಿಲ್ಲ ಎಂದು ಸ್ನಾನಕ್ಕೆ ಹೊರಟೆ. ಏನು ಮಾಯವೋ? ನಾನು ಸ್ನಾನ ಮುಗಿಸಿ ಬರುವಷ್ಟರಲ್ಲಿ ಹಾಸಿಗೆ ಮೇಲೆ ಒಂದು ಲಾಯರ್ ಡ್ರೆಸ್ಸು, ಒಂದು ಸ್ವಾಮೀಜಿ ವೇಷ, ಗಡ್ಡ, ಗುಂಗುರು ಕೂದುಲು... ತಲೆ ಎತ್ತುವಷ್ಟರಲ್ಲಿ ಇವಳು ಪ್ರತ್ಯಕ್ಷ. "ರೀ ನಾನು ನೆನ್ನೆ ಹೇಳಲಿಲ್ಲವಾ? ಸೀತಾರಾಮ್ ಅವರು ಹೊಸ ನಟರು ಬೇಕು, ಅಪ್ಲೈ ಮಾಡಿ ಅಂದಿದ್ದಾರೆ. ಮೂರು ಯಾಂಗಲ್ಲಲ್ಲಿ ಫೋಟೋ ತೆಗೆದು ಕಳಿಸಬೇಕು. ನೀವು ಬೇಗ ರೆಡಿ ಆಗಿ ತಿಂಡಿ ತಿನ್ನಿ, ಇವತ್ತು ನೀವು ಎಲ್ಲೂ ಹೋಗ್ಬಾರ್ದು". ನಾನು ಮೈ ಒದ್ದೆಯಲ್ಲಿ ತಣ್ಣಗೆ ನಿಂತಿದ್ದೆ.

ನನ್ನ ಅಭಿನಯ ಹಾವಭಾವಗಳನ್ನು ನೋಡಿದ ಮೇಲೆಯೇ, ಮೇಷ್ಟ್ರು ನನಗೆ ಯಾವ ಡೈಲಾಗೂ ಇಲ್ಲದ ’ಗಾರ್ಡ್’ ಪಾರ್ಟು ಕೊಟ್ಟಿದ್ದು ಎಂಬುದನ್ನು ಸಮಜಾಯಿಸಲು ಹೋಗಿ ಸೋತೆ. ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದೇನೆಂದೆ ಅವಳ ನಂಬಿಕೆ. ’ಒಂದು ನಿಮಿಷ ಇರಿ, ಎಂದು ಆಚೆ ಹೋದಳು.
"ಇಷ್ಟು ಜನಕ್ಕೆ ಯಾವ ಸೀನು ಆಗುತ್ತೆ? ಅಜ್ಜಿ ತಾತ ಹೇಗಿದ್ರೂ ಇದ್ದಾರೆ, ನಂಜುಂಡನ ಮನೆ ಸೀನು ಮೊದಲು ಆಗೋಗ್ಲಿ" ಎಲ್ಲಾ ಇವಳೇ ಮಾತಾಡುತ್ತಿದ್ದಳು. ಈ ಸೀನಿನಲ್ಲಿ, ನನ್ನ ಹೆಂಡತಿ ನನಗೆ ನಾದಿನಿಯೊ ಎಂತದ್ದೊ ಆದಳು!

ಸರಿ ನಾನು ಆ ಅಜ್ಜಿ ತಾತನ ಜೊತೆ ಕೂತು ಮಾತನಾಡಿ, ನಂಜುಂಡನ ಮನೆಯ ಸೀನು ಮುಗಿಸಿದೆ. ನೋಡುನೋಡುತ್ತಿದ್ದಂತೆಯೇ, ಮನೆ ಕೋರ್ಟ್ ಆಯಿತು. ಈ ಸಾರಿ ಇನ್ ಸ್ಪೆಕ್ಟರ್ ಲೇಟು. ನನ್ನೊಬ್ಬನನ್ನು ಬಿಟ್ಟು ಉಳಿದವರೆಲ್ಲಾ ಹರಟೆ ಹೊಡೆಯಲು ಶುರುಮಾಡಿದರು. ನನ್ನ ಇಂಗು ತಿಂದ ಮಂಗನ ಮುಖವನ್ನು ನೋಡಿಯೋ ಏನೋ, ಇವಳು ಅಡುಗೆ ಮನೆಗೆ ಕರೆದು, ಒಂದು ಚೌಕವಾದ ಚಾಪೆ ತೋರಿಸಿ, ಇಲ್ಲಿ ಕೂತಿರಿ ಆಮೇಲೆ ಬರುವಿರಂತೆ ಎಂದಳು. ನಾನು ಆ ಚಾಪೆಯ ಮೇಲೆ ಕೂತು ಹಾಗೆ ಗೋಡೆಗೆ ತಲೆ ಒರಗಿಸಿದೆ. ಅಲ್ಲೋ, ಭಕ್ಷ್ಯ- ಭೋಜನೆಗಳ ವಾಸನೆ. ನನಗೆ ಹೂ ಮಾರುವ, ಮೀನು ಮಾರುವ ಹೆಂಗಸರ ಕಥೆ ನೆನಪಾಗ ತೊಡಗಿತು.

ಕಣ್ಣು ಬಿಟ್ಟು ನೋಡುವಷ್ಟರಲ್ಲಿ, ಎಲ್ಲರೂ ಬಾಳೆ ಎಲೆ ಊಟ ಜಡಿದು, ತಾಂಬೂಲ ಮೆಲ್ಲುತ್ತಿದ್ದಾರೆ. ಏನು ಜನ? ಎಷ್ಟು ಲಾಯರ್ರುಗಳು? ನನ್ನ ಹೆಂಡತಿ ಮಾತ್ರ ಅದೆಂಥದ್ದೋ ಸೀರೆ ಉಟ್ಟು... ಗುರುತೇ ಸಿಗಲ್ಲಿಲ್ಲ. ’ಎದ್ದಿರಾ? ಬನ್ನಿ. ನೀವು ಇನ್ನು ಯಾವಾಗ ಊಟ ಮಾಡುವುದು? ಇರಲಿ ಇದನ್ನ ತಿನ್ನಿ ಎಂದು, ಒಂದು ಸಣ್ಣ ತಿಂಡಿ ತಟ್ಟೆಯೊಂದನ್ನು ನನ್ನ ಮುಂದಕ್ಕಿಡಿದಳು. ಉಳಿದ್ದಿದ್ದ ಕೋಸಂಬರಿ, ಚೂರು ಚಿತ್ರಾನ್ನ ಮಾತ್ರ ನನಗೆ. ಕೊಟ್ಟಿದ್ದನ್ನು ನುಂಗಿ ಬರುವಷ್ಟರಲ್ಲಿ, ಏನು ಕೋರ್ಟಿನಲ್ಲಿ ಕೇಸು ಶುರುವಾಗಿಬಿಟ್ಟಿದೆ? ನಾನು ಲಾಯರನ ವೇಷದಲ್ಲಿ ಕೈದಿಯ ಹಾಗೆ ಹೆದರುತ್ತಾ ಹೋಗಿ ನಿಂತೆ, ನನ್ನ ರಾಗಿಣಿ ಈ ಸೀನಿನಲ್ಲಿ ಕೈದಿ.

ಆ ಜಡ್ಜ್ ತಾತಾಗೆ ಕೆಮ್ಮು ಬಂದು ಅರ್ಧ ಗಂಟೆ ನಿಲ್ಲಲೇ ಇಲ್ಲ. ಅಷ್ಟರಲ್ಲಿ, ಅಜ್ಜಿಗೆ ಮೈ ಕೈ ನೋವು, ’ಒಂದವರ್ ರೆಸ್ಟು’. ಎಲ್ಲರೂ ಅಲ್ಲಲ್ಲೇ ತೂಕಡಿಸ ತೊಡಗಿದರು, ನಾನು ಅಲ್ಲಿಯೇ ಇದ್ದ ಪೇಪರ್ ತೆಗೆದುಕೊಂಡು ಕಣ್ಣಾಡಿಸತೊಡಗಿದೆ. ಮಧ್ಯಾಹ್ನ ಮೂರು ಗಂಟೆಗೆ ಮತ್ತೆ ಸೆಟ್ಟೇರಿತು. ಅಂತೂ ಕೋರ್ಟಿನ ಸೀನು ಕ್ಲಿಕ್ಕಿಸಿದ್ದಾಯಿತು. ಸ್ವಾಮೀಜಿ ಸೀನಿಗೆ ಬೇಕಾಗಿದ್ದು ನಾಲ್ಕು ಜನ ಮಾತ್ರ ಆದ್ದರಿಂದ ಎಲ್ಲರಿಗೂ ಒಂದೊಂದು ಗಾಂಧೀ ಫೋಟೋ(ಅಂದರೆ ನೂರು ರೂಪಾಯಿ ನೋಟು!) ಕೊಟ್ಟು ಕಳಿಸಿದಳು.

"ಮೇಡಮ್, ಆ ಸೀನು ಮಬ್ಬಾಗಿದ್ದರೆ ಸ್ವಲ್ಪ ಚೆನ್ನಾಗಿರುತ್ತೆ, ಸಂಜೆ ತೆಗೆಯೋಣ ಅಲ್ಲವೇ?", ಈಗ ಮಲಗಬೇಕು ಅಂತ ಹೇಳೋದಕ್ಕೆ ಅವನದು ಇಷ್ಟು ತಾಲೀಮು. ನಾನೂ ಎಲ್ಲಿ ಜಾರಿಕೊಳ್ಳುತ್ತೇನೋ ಎಂದು ರಾಗಿಣಿ ಮನೆ ಸ್ವಚ್ಛಮಾಡಲು ನನ್ನನ್ನು ಎಳೆದಳು. ಸಂಜೆಯಾಗುತ್ತಲೇ, ’ಸ್ವಾಮೀಜಿಯಾಗಿ ನಾನು , ನನ್ನ ಪರಮಭಕ್ತೆಯಾಗಿ ಇವಳೂ, ನನ್ನ ಹಿಂದೆ ಇನ್ನಿಬ್ಬರೂ ಚಿಕ್ಕ ಸಂನ್ಯಾಸಿಗಳೂ’ ಎನ್ನುವೊಂದು ಸೀನು ತೆಗೆದ್ದದ್ದಾಯಿತು. ಮನೆಗೆ ಬಂದ ಮಕ್ಕಳಿಗೆ ಐಸ್ಕ್ರೀಮ್ ಕೊಡಿಸುತ್ತೇನೆಂದು ನಾನು ಹೊರಕ್ಕೆ ನೆಡೆದೆ. ಇವಳು "ರೀ, ಇನ್ನು ನನ್ನಿಂದಾಗೋದಿಲ್ಲ, ಹೋಟೆಲಿಂದ ಏನಾದರೂ ತಂದುಬಿಡಿ"
ಎಂದು ಮಂಚದ ಮೇಲೆ ಕುಸಿದುಬಿದ್ದಳು.

* * *
ಎಂದಿನಂತೆ ಆಫೀಸಿನಿಂದ ಬಂದ ನನಗೆ ಆಶ್ಶ್ಚರ್ಯ! ಒಳಗೊಳಗೇ ಸಂತೋಷವೂ ಆಯಿತು. ’ರೀ ನೇವು ಸೆಲೆಕ್ಟ್ ಆದಿರಿ. ನಾಳೆ ಸ್ಕ್ರೀನ್ ಟೆಸ್ಟಿಗೆ ಹೋಗಬೇಕು!’, ಇವಳಂತೂ ಭೂಮಿಯ ಮೇಲೆ ಇರಲಿಲ್ಲ.

ಬೆಳಿಗ್ಗೆಯೇ ಇಬ್ಬರೂ ಮಕ್ಕಳನ್ನು ಶಾಲೆಗೆ ಸಾಗಹಾಕಿ ಸ್ಕ್ರೀನ್ ಟೆಸ್ಟಿಗೆ ಹೊರಟೆವು. ನನಗೋ ಹೆಮ್ಮೆಪಡಬೇಕೋ? ನಾಚಿಕೊಳ್ಳಬೇಕೋ? ತಪ್ಪಿಸಿಕೊಳ್ಳಬೇಕೋ? ಒಂದೂ ಗೊತ್ತಾಗಲಿಲ್ಲ. ಹೋಗಿ ಇಳಿದರೆ ಏನು ಜನ? ಮಕ್ಕಳನ್ನು ಅಪ್ಪ ಅಮ್ಮ ಸಿ.ಇ.ಟಿ.ಗೆ ರೆಡಿ ಮಾಡುವ ಹಾಗೆ ಮಾಡುತ್ತಿದ್ದಾರೆ. ಒಬ್ಬೊಬ್ಬರೂ, ಕೈಯಲ್ಲಿ ಒಂದು ಪೇಪರ್ ಇಟ್ಟುಕೊಂಡು, ಬಡಬಡಿಸುತ್ತಿದ್ದಾರೆ. ನೋಡಿ ದಂಗಾದೆ. ನನ್ನ ರಾಗಿಣಿ, ಮಾರು ದೂರ ನಿಂತು, ’ಹೋಗಿ ವಿಚಾರಿಸಿಕೊಂಡು ಬನ್ನಿ’ ಎಂದಳು.

ನಾನು ಹೋಗಿ ’ಸರ್, ವಸಂತ ಅಂತ ಅಪ್ಲಿಕೆಂಟು’ ಎಂದೆ. "ಹ್ಞಾ ಹ್ಞಾ ಕರ್ಕೊಂಡು ಬನ್ನಿ, ಕರ್ಕೊಂಡು ಬನ್ನಿ", ನನ್ನ ಹೆಂಡತಿ ಮಾರುದೂರ ನಿಂತಿದ್ದು ಇವನಿಗೆ ಹೇಗೆ ಗೊತ್ತಾಯಿತೋ ತಿಳಿಯಲಿಲ್ಲ. ಸರಿ, ಹೋಗಿ ಅವಳನ್ನು ಎಳಕೊಂಡು ಬಂದೆ. "ನೋಡಿ, ನಿಮ್ಮ ಫೋಟೋ ಇಟ್ಕೊಳ್ಳಿ. ಹೆಂಗಸರಿಗೆ ಅಲ್ಲಿ ಡೈಲಾಗ್ ಕೊಡ್ತಾರೆ. ಇಸ್ಕೊಳ್ಳಿ. ಸ್ವಲ್ಪ ಪ್ರಾಕ್ಟೀಸ್ ಮಾಡ್ಕೊಳ್ಳೀ, ಕರೀತಾರೆ!’. ಇಬ್ಬರೂ ಮುಖ ಮುಖ ನೋಡಿಕೊಂಡೆವು, ಹಿಂದೆಂದಾದರೂ ಹಾಗೆ ನೋಡಿಕೊಂಡಿದ್ದೇವೋ ಇಲ್ಲವೋ? ಫೋಟೋಗಳಲ್ಲಿ ನನ್ನ ಹೆಂಡತಿಯ ಮುಖಕ್ಕೆ ರೌಂಡ್ ಮಾರ್ಕ್ ಹಾಕಿ ಇಟ್ಟಿದ್ದರು. "ನಿಮ್ಮ ಹೆಸರು ವಸಂತ ಅಲ್ಲವಾ? ನಿಮ್ಮ ಹೆಸರು ಏನು ಸಾರ್?" ಪ್ರಶ್ನೆ ಬಂದಾಗ, ಆ ಹೆಸರು ಇಟ್ಟವರ ಮೇಲೆ ಕೋಪ ಬರದೆ ಇರಲಿಲ್ಲ.

ಅಂತೂ ನಾನು ’ಮುಕ್ತ’ನಾದೆ, ರಾಗಿಣಿ ಅವಾಕ್ಕಾದಳು.