ಗುರುವಾರ, ಡಿಸೆಂಬರ್ 25, 2008

’ಕ್ಯಾಮರಾ ದರ್ಶನ!’

ನಾನು ಚಿಕ್ಕವಳಿದ್ದಾಗ ಲೈನೆಂಬೋ ಕ್ಯೂನಲ್ಲಿ ನಿಂತು,ನೂಕು ನುಗ್ಗಲಿನಲ್ಲಿ ಸಿಕ್ಕಿ, ಬೆವರಿ ಸುಸ್ತಾಗಿ ಬಿದ್ದು, ಕಾಲುಳುಕಿ ಅವಸ್ಥೆ ಪಟ್ಟಾಗಿನಿಂದ ನಮ್ಮಮ್ಮ ನನ್ನನ್ನು ’ದೇವಸ್ಥಾನಕ್ಕೆ ಹೋಗು’ ಅಂತ ಬಲವಂತ ಮಾಡುವುದನ್ನು ಬಿಟ್ಟುಬಿಟ್ಟಿದ್ದರು. ಬಾಯಿತಪ್ಪಿ ಕನಸಿನಲ್ಲಿ ವೆಂಕಟರಮಣ ಬಂದಿದ್ದ ಎಂದು ಹೇಳಿದಾಗಿನಿಂದ, ಮುಂದಿನ ತಿಂಗಳು ಬರುತ್ತಿದ್ದ ವೈಕುಂಠ ಏಕಾದಶಿಯನ್ನೇ ಎದುರು ನೋಡಲು ಶುರು ಮಾಡಿದರು.

ಆ ದಿನ ಬಂದದ್ದೇ ತಡ, ಬೆಳಿಗ್ಗೆಯೇ ’ದರ್ಶನ ಮಾಡ್ಕೊಂಡು ಬಾ’ ಎಂದು ಅಡುಗೆ ಮನೆಯಿಂದ ಆಜ್ಞೆ ಹೊರಡಿತು. ಹಾಲ್ ಟಿಕೆಟನ್ನು ಗಣೇಶನ ಹತ್ತಿರ, ಪೆನ್ ಬಾಕ್ಸನ್ನು ಸರಸ್ವತಿ ಹತ್ತಿರ ಇಟ್ಟು ಪೂಜೆ ಮಾಡಿಸಿಕೊಂಡು, ಅರಿಶಿನ ಕುಂಕುಮ ಮೆತ್ತಿಸಿಕೊಂಡ ಅವುಗಳನ್ನೂ, ಪ್ರಸಾದವನ್ನೂ, ತರುತ್ತಿದ್ದ ನನ್ನ ಸ್ನೇಹಿತೆಯರು ಇದ್ದಕ್ಕಿದ್ದ ಹಾಗೆ ನೆನಪಾಗಿಬಿಟ್ಟರು. ನಾನೂ ಹಾಗೆ ಮಾಡಬೇಕೆಂಬ ಆಸೆಯನ್ನು ತಾಳಲಾರದೆ, ಹಳೆಯದೊಂದು ಚಪ್ಪಲಿ ಏರಿಸಿ, ಒಂದೆರೆಡು ಕಾಯಿನ್ನುಗಳನ್ನು ದಕ್ಷಿಣೆಗೆ ಹಿಡಿದು, ದರಬರ ದೇವಸ್ಥಾನದ ಕಡೆಗೆ ನಡೆದೆ. ಇಂಥ ಮಹತ್ತರ ಕಾರ್ಯ ಕೈಗೊಳ್ಳಲು ಇನ್ನೂ ಒಂದು ಮುಖ್ಯ ಕಾರಣ ಇತ್ತು. ದೇವಸ್ಥಾನದಲ್ಲಿ ಈ ವರ್ಷ ಕ್ಯಾಮರ ಇಟ್ಟಿದ್ದಾರೆ, ಲೋಕಲ್ ಕೇಬಲ್ಲಿನಲ್ಲಿ ಲೈವ್ ಟೆಲಿಕಾಸ್ಟ್! ಅಂತೂ ವೈಕುಂಠ ಏಕಾದಶಿದಿನ ವೈಕುಂಠ ದ್ವಾರವನ್ನು ಹೊಕ್ಕಲು ವೆಂಕಠರಮಣ ನನ್ನನ್ನೂ ಪ್ರೇರೆಪಿಸಿದ್ದ!

ನಾನು ದೇವಸ್ಥಾನದ ರೋಡಿಗೆ ನಡೆಯಲೇ ಬೇಕಾಗಲಿಲ್ಲ, ಕ್ಯೂ ಮೂರನೇ ರೋಡಿಗೆ ಬಂದು ಬಿಟ್ಟಿತ್ತು. ನಾನು ನಿಂತು ನಿಂತು ಮುಂದಕ್ಕೆ ಹೋಗಲು ಶುರುಮಾಡಿದೆ. ಇನ್ನೇನು ದೇವಸ್ಥಾನದ ರಾಜಗೋಪುರ ಕಾಣಿಸುತ್ತಿದೆ ಅಂದುಕೊಳ್ಳುವಷ್ಟರಲ್ಲಿ, ’ಮೈಸೂರು ಸಿಲ್ಕ್ಸ್ ಅಂಡ್ ಸ್ಯಾರೀಸ್’ ’ಕೋಲ್ಗೇಟ್ ನಿಮ್ಮ ಹಲ್ಲುಗಳಿಗೆ’ ಅಂದುಕೊಂಡು ಫಲಕಗಳು ರಾಜಗೋಪುರದ ಮೇಲೆ ರಾರಾಜಿಸುವುದನ್ನು ಕಂಡು ಒಂದು ನಿಮಿಷ ದಿಗ್ಭ್ರಮೆಗೊಂಡೆ. ಹಾ! ದಿಗ್ಭ್ರಮೆ ಪಟ್ಟುಕೊಳ್ಳುವುದಕ್ಕೆ ಸಮಯವೆಲ್ಲಿ? ನನ್ನ ಹಿಂದೆ ನಿಂತಿದ್ದ ದಢೂತಿ ಹೆಂಗಸೊಬ್ಬಳು ’ಜಾಗ ಆಗ್ಲಿಲ್ವಾ? ನಡಿಯಮ್ಮ ಮುಂದಕ್ಕೆ’ ಎಂದು ತಳ್ಳುತ್ತಲೇ ಎಚ್ಚರವಾಯಿತು.

ಒಳಗೇ ಹೋಗುತ್ತಲೇ ಆಯಮ್ಮನಿಗೆ ತುಂಬಾ ಬೇಜಾರಾಗಿರಬೇಕು... ಕ್ಯಾಮರಾವನ್ನು ನೋಡಿದ ಕೂಡಲೇ ಹಿಂದಕ್ಕೆ ತಿರುಗಿ ಹುಳ್ಳಗೆ ನಕ್ಕು, ’ಹೆ... ಹೆ... ನೀವು ನಡೀರಿ ಮುಂದೆ’ ಎಂದು ತನ್ನ ಹಿಂದೆ ನಿಂತಿದ್ದವರಿಗೆ ಕೈ ತೋರಿಸಿದಳು. ಹಾಗೂ ಹೀಗೂ ಸಣ್ಣಗಿದ್ದ ಇಬ್ಬರು ಮೂವರು, ಹಗ್ಗಕ್ಕೂ ಆಯಮ್ಮನ ದೇಹಕ್ಕೂ ಇದ್ದ ಸಣ್ಣ ಗ್ಯಾಪಿನಲ್ಲಿ ತೂರಿಕೊಂಡು ಮುಂದಕ್ಕೆ ಹೋದರು. ಆಯಮ್ಮನ ಮೇಕಪ್ಪಿಗೆ ಟೈಮ್ ಸಿಕ್ಕಿತು.

ಅಷ್ಟರಲ್ಲೇ ಅಲ್ಲಿದ್ದ ಚಿಲ್ಟಾರಿಯೊಂದು, ’ಏ ಏನ್ಗೊತ್ತಾ, ಅಲ್ನೋಡು ಕ್ಯಾಮರ ಇಟ್ಟುಕೊಂಡಿದ್ದಾರೆ, ಇಲ್ಲಿ ಟೀವಿ ಇಟ್ಟಿರ್ತಾರೆ, ನೀನು ಹೋಗಿ ಟೀವಿ ನೋಡು, ನಾನು ಕಾಣಿಸ್ತೀನಿ, ಆಮೇಲೇ ನಾನು ನೋಡ್ತೀನಿ ನೀನು ನಿಂತ್ಕೋ’ ಅಂತ ತನ್ನ ವಿದ್ಯೇನೆಲ್ಲ ಇನ್ನೊಂದಕ್ಕೆ ಧಾರೆಯೆರೆಯಿತು. ಅವರ ಈ ಸರದಿ ಮೇಲಿನ ಸರದಿ ಆಟ, ಒಬ್ಬ ಶಾಸ್ತ್ರೀ ಆವಾಜ್ ಹಾಕುತ್ತಲೇ ನಿಂತು ಹೋಯಿತು.

ಈ ಕ್ಯಾಮರ ಚಳಕ ಇಲ್ಲಿಗೆ ನಿಲ್ಲಲಿಲ್ಲ. ಮೌನ ಗೌರಿಯ ಹಾಗೆ ಕೈ ಮುಗಿದು ಬರುತ್ತಿದ್ದ ಹೆಂಗಸೊಬ್ಬಳು, ಇದ್ದಕ್ಕಿಂದ ಹಾಗೆ ನೈವೇದ್ಯ ಮಾಡುವಂತೆ ಕೈ ಆಡಿಸುತ್ತಾ, ವೆಂಕಟರಮಣನನ್ನು ಹಾಡಿ ಹೊಗಳಲು ಶುರುಮಾಡಿಬಿಟ್ಟಳು. ಇನ್ನೊಬ್ಬಾತ, ಸಾಷ್ಟಾಂಗ ನಮಸ್ಕಾರ ಮಾಡಲು ಹೋಗಿ ಶಾಸ್ತ್ರಿಗಳ ಹತ್ತಿರ ಬೈಸಿಕೊಳ್ಳುವ ಹಾಗಾಯಿತು, ಪಾಪ!

ಹಾಗೂ ಹೀಗೂ ಎರಡೂ ಪಕ್ಕ ಕಟ್ಟಿದ್ದ ಮರದ ಕಟ್ಟಿಗೆಗಳಿಂದ ತಪ್ಪಿಸಿಕೊಂಡು ಹೊರಗಿನ ಆವರಣಕ್ಕೆ ಬಂದೆವು. ಇನ್ನೇನು ಹೋಗೋದು ತಾನೆ ಎಂದು ಯೋಚಿಸುತ್ತಿರುವಾಗಲೇ, ಪಕ್ಕದಲ್ಲಿದ್ದ ಅಜ್ಜಿ ಮೇಲೆ ಕೂತಿದ್ದ ವೆಂಕಟರಮಣನನ್ನು ತೋರಿಸುತ್ತಾ, ’ನಡೆಯಮ್ಮ ವೈಕುಂಠ ದ್ವಾರಕ್ಕೇ’ ಎಂದರು. ’ನನಗೆ ಅರ್ಜೆಂಟಿಲ್ಲಾ, ನೀವು ಹೋಗಿ’ ಎಂದು ಹೇಳಲು ಧೈರ್ಯ ಸಾಲದೇ ಸುಮ್ಮನೇ ಅವರ ಹಿಂದೆ ಹೊರಟೆ.

ಇಲ್ಲಿ ನೋಡಿದರೆ ಇನ್ನೊಂದು ಕ್ಯಾಮರಾ...

ಬಹುಶಃ ಜೊತೆಗೆ ಬಂದಿದ್ದ ಒಂದು ಜೋಡಿ ಬೇರೆ ಬೇರೆ ಆಗಿಬಿಟ್ಟಿತ್ತು ಎಂದು ಕಾಣುತ್ತದೆ. ನನ್ನ ಪಕ್ಕದಲ್ಲಿ ನಿಂತಿದ್ದ ಗಂಡಿಗೆ ತಕ್ಷಣವೇ ಒಂದು ಉಪಾಯ ಹೊಳೆಯಿತು. ಮೊಬೈಲ್ನಿಂದ ಕಾಲು ಮಾಡಿ ’ವೇರ್ ಆರ್ ಯೂ?’ ಎಂದು ಕೇಳಿದ. ಆ ಧ್ವನಿ ಏನು ಹೇಳೀತೋ ಏನೋ ’ವೇರ್?’ ವೇರ್?’ ಎನ್ನುತ್ತಾ ಸುತ್ತಲೂ ಕಣ್ಣಾಡಿಸಿದ. ಅವನ ಕಣ್ಣು ಅಲ್ಲಿಯೇ ನಿಂತಿದ್ದ ಟೀವಿ ಸ್ಕ್ರೀನನ್ನು ಸ್ಕ್ಯಾನ್ ಮಾಡಲು ತೊಡಗಿತು. ಕಡೆಗೇ ಆ ಹುಡುಗಿ, ಕ್ಯಾಮರ ಮುಂದೆ ಬಂದು ’ಐ ಯಾಮ್ ಹಿಯರ್’ ಎಂದಿತು. ಇವನು ಆ ಜಾಗವನ್ನು ಟ್ರೇಸ್ ಮಾಡಿಕೊಂಡು ಹೋದ. ಜೋಡಿ ಒಂದಾಯಿತು.

ಇನ್ನು ಕ್ಯಾಮರದಲ್ಲಿ ಬರಲು ’ವೆಂಕಟರಮಣ’ನ ಸರದಿ. ’ಇಲ್ಲಿ ಚೆನ್ನಾಗಿ ಕಾಣ್ತಿದೆ. ನಿಂತ್ಕೊಂಡು ಸ್ವಲ್ಪೊತ್ತು ನೋಡಿ’ ಆ ಅಜ್ಜಿಯ ಇನ್ನೊಂಡು ಸಲಹೆ. ಎಲ್ಲರಿಗೂ ಸೂಚನೆ ಸರಿಯೆನಿಸಿತು. ಆವಾಗಲೇ ನನಗೂ ಹೊಳೆದಿದ್ದು, ಕ್ಯಾಮರ ಬೆಳಕಿಗೆ ಕಣ್ಣು ಮುಚ್ಚಿದ್ದ ನಾನು ದೇವರ ದರ್ಶನವನ್ನೇ ಮಾಡಿಲ್ಲ. ನಮ್ಮ ’ಶ್ರೀ ವೆಂಕಟರಮಣ ’ ಡೆಕೊರೆಟಿವ್ ಹೂಗಳನ್ನು ಏರಿಸಿಕೊಂಡು ಟಿಪ್ ಟಾಪ್ ಆಗಿಬಿಟ್ಟಿದ್ದ. ತನ್ನ ಮುಂಬಾಗಿಲು ಎಲ್ಲವನ್ನೂ ಆ ಹೂಗಳಿಂದಲೇ ಅಲಂಕರಿಸಿಕೊಂಡಿದ್ದ. ಕನಕಾಂಬರ, ಸೇವಂತಿಗೆ ಎಲ್ಲಾ ಬೇಜಾರಾಗಿತ್ತೋ ಏನೋ? ಅಂತೂ ಕ್ಯಾಮರದಲ್ಲಿ ದರ್ಶನ ಮುಗಿಸಿಕೊಂಡು ಮನೆಗೆ ಬಂದೆ.

ನಾನು ಬರುತ್ತಿದ್ದಂತೆಯೇ, ಮನೆಯಲ್ಲಿ ಲೋಕಲ್ ಚ್ಯಾನಲ್ ನೋಡುತ್ತಿದ್ದ ಎಲ್ಲರಿಗೂ ಮುಸಿಮುಸಿ ನಗು, ’ಏನು ಒಂದು ಕ್ಯಾಮರ ಬೆಳಕು ತಡೆಯೋದಕ್ಕೆ ಆಗಲಿಲ್ಲವಾ? ಅದಕ್ಕೆ ಹೇಳೋದು ನಿನಗೆ ಗೂಬೆ ಕಣ್ಣು...’ ಎಂದು ಜೋರಾಗಿ ನಗು. ನನಗೂ ಯಾಕೋ ಕೋಪ ತಡೆಯಲಾಗಲಿಲ್ಲ. ’ತಿರುಗಿ ನನ್ನನ್ನು ದೇವಸ್ಥಾನಕ್ಕೆ ಹೋಗು ಎನ್ನಬೇಡ ಅಮ್ಮಾ...’ ಎಂದು ಕಿರುಚಿ ರೂಮಿನ ಬಾಗಿಲು ದಢಾರನೆ ಹಾಕಿದೆ. ಬಿಸಿ ಬಿಸಿ ಪುಳಿಯೋಗರೆ ಪೂರ್ತಿ ನನ್ನ ಪಾಲಿಗೇ ಉಳಿದಿದ್ದಕ್ಕೆ ಒಂದು ಥರ ಖುಷಿ ಆಗ ತೊಡಗಿತು.