ಭಾನುವಾರ, ಜೂನ್ 1, 2008

ತರಗತಿಯಲ್ಲಿ......

ಆಸೆ ಬಿದ್ದು ಕರೆಸ್ಪಾಡೆಂನ್ಸಿನಲ್ಲಿ ಎಮ್.ಎ. ತಗೊಂಡು ಕಾಂಟ್ಯಾಕ್ಟ್ ಕ್ಲಾಸಿಗೆ ಹೋಗಿ ಕೂತರೆ ಅಲ್ಲಿ ಆದದ್ದೆ ಬೇರೆ.

* * *

ಪರೀಕ್ಷೆಯ ದಿನ ಒಂದೇ ಬಾರಿಗೆ ಬರೆಯಲು ಹೋದರೆ ಕೈ ನೋವು ಬರಬಹುದು. ಹೌದು, ಈಗಷ್ಟೇ ಕ್ಲಾಸು ಮುಗಿಸಿ ಹೋದ ಶಶಿಕಲಾ ಮೇಡಮ್ಮು ಇದನ್ನೇ ಹೇಳಿದರು. ಅದಕ್ಕೆ ಬರೆಯುವುದನ್ನು ಅಭ್ಯಾಸ ಮಾಡುತ್ತಿದ್ದೇನೆ. ಈ ಅಭ್ಯಾಸ ಮಾಡುವುದಕ್ಕೆ ಬಹುಶಃ ಇದಕಿಂತ ಪ್ರಶಸ್ತವಾದ ಸಮಯ ಸಿಗಲಾರದು.

ಮುಂದೆ ನಿಂತು ಮಾತನಾಡುತ್ತಿರುವ ಪ್ರಾಣಿಯ ಹೆಸರು ಸಣ್ಣಯ್ಯ. ’ಪಂಪ ಪೂರ್ವ ಯುಗದ ರೂಪು ರೇಷೆ’(ಕಾವ್ಯಗಳದ್ದು)- ಆಹಾ!ಎಂತಹ ವಿಷಯ ಪರೀಕ್ಷೆಗೆ. ನನಗೆ ಮೊದಲೇ ಹಳೆಯದ್ಯಾವುದನ್ನೋ ಹುಡುಕಿಕೊಂಡು ಹೋಗುವುದು ಬೇಜಾರಿನ ವಿಷಯ. ಲೈಬ್ರರಿಯಲ್ಲಿ ನಾನು ಹುಡುಕಿ ಓದುವುದು ಅಷ್ಟರಲ್ಲೇ ಇದೆ. ಇಲ್ಲಿ ಯಾರಾದರೂ ಪಾಠ ಮಾಡಿ ನನಗೂ ಏನಾದರೂ ಒಳ್ಳೆಯದಾಗಬಹುದೆಂದು ಆಶಿಸಿದ್ದೆ. ಊಹೂ... ಅಂಥದ್ದೇನೂ ಆಗುವ ಹಾಗೆ ಕಾಣುತ್ತಿಲ್ಲ. ಬರೆಯುತ್ತಿದ್ದಂತೆ ಕೈ ನೋವು ಬರುತ್ತಿದೆ.

ಬಹುಶಃ, ಈ ಮನುಷ್ಯನ ಕ್ಲಾಸಿನಲ್ಲಿ ಕೂರುವ ಬದಲು ಆತ ತಂದಿರುವ ಫೈಲಿನಲ್ಲಿರುವ ಪೇಪರುಗಳನ್ನು ಜೆರಾಕ್ಸು ತಗೊಂಡು ಓದಿಕೊಳ್ಳುವುದು ಉಪಯೋಗಕ್ಕೆ ಬರಬಹುದು. ಓಹೋ! ಮರೆತು ಹೋಯ್ತು ಅನಿಸುತ್ತದೆ.ಪೇಪರು ಹುಡುಕುತ್ತಿದ್ದಾರೆ. ಸರಿ, ಸರಿ, ಈಗ ಗೊತ್ತಾಯ್ತು, ಬಂದ ಕೂದಲೇ, ಫ್ಯಾನು ಆರಿಸಿ, ಕಡಿಮೆ ಮಾಡಿ ಎಂದು ಗೋಳಿಟ್ಟಿದ್ದು ಯಾಕೆ ಅಂತ.. ಪೇಪರು ಫೈಲಿನಿಂದ ಆರಿಹೋಗುತ್ತಿದೆ. ಪಾಪ! ಮೊಣಕೈಯಿಂದ - ಅಂಗೈವರೆಗೂ ಎರಡೂ ಕೈಗಳನ್ನು ಪೋಡಿಯಮ್ಮಿನ ಮೇಲೆ ಭದ್ರವಾಗಿ ಊರಿ ಪೇಪರುಗಳನ್ನು ಹಿಡಿತಲ್ಲಿಟ್ಟುಕೊಳ್ಳಲು ಪ್ರಯತ್ನ ಪಡುತ್ತಿರುವುದನ್ನು ನೋಡಿದರೆ ನಗು ಬರುತ್ತದೆ.

ಯಾವುದಾದಾರೂ ರಕ್ಷಣಾ ಪಡೆಯದ್ದೋ, ಕನ್ನಡ ವೇದಿಕೆಯದ್ದೋ ಮೆಂಬರಾಗಿರಬೇಕು ಈ ಮನುಷ್ಯ. ಮಾತುಮಾತಿಗೂ ಕನ್ನಡಾ ಮಾತೆ, ಕನ್ನಡ ಜನರ ಸಂವೇದನಾಶೀಲತೆ, ದೇಶಪ್ರೇಮ ಇವೇ ಮಾತುಗಳು. ’....ಗೋದಾವರಿ ನದಿ ಆಂಧ್ರ ಪ್ರದೇಶದಲ್ಲಿದ್ದರೂ... ಶ್ರೀ ವಿಜಯ ಕನ್ನಡದವನೇ.... ಸಾಮಾಜಿಕ ಒತ್ತಡಕ್ಕೆ ಬಲಿಯಾಗಿ ನಮ್ಮ ಜಾಗವನ್ನು ಬೇರೆಯವರಿಗೆ ನೀಡಿದ್ದೇವೆ’ ಎಂತಹ ವ್ಯಾಖ್ಯಾನ! ಭಾಷೆಯ ಬೆಳವಣಿಗೆಯ ಬಗ್ಗೆ ಬೇರೆ ಮಾತನಾಡುತ್ತಿದ್ದಾರೆ. ಇಂಗ್ಲೀಷಿಗೂ - ಸಂಸ್ಕೃತಕ್ಕೂ ನಂಟು ಬೇರೆ. ಹೋಓಓಓಓಓಓ...., ಕರೆಂಟು ಹೋಯ್ತು. ಇನ್ನು ಫೈಲಿನಲ್ಲಿರುವ ಪೇಪರುಗಳು ಕಾಣುತ್ತವೋ? ಇಲ್ಲವೋ? ಗಂಟೆ ಆರಾಯಿತು. ಅಯ್ಯೋ ಪಾಪ! ಇಂತಹ ಗತಿ ಬರಬಾರದಾಗಿತ್ತು.

....ಒಬ್ಬನು ಗುಣನಂದಿ, ಇಬ್ಬರು ಗುಣವರ್ಮ, ಒಬ್ಬ ಅದನ್ನು ಬರೆದವನು, ಇನ್ನೊಬ್ಬ ಇದನ್ನು ಬರೆದವನು... ಇಲ್ಲಿಗೆ ಪಂಪಪೂರ್ವ ಯುಗದ ರೂಪುರೇಷೆ ಮುಕ್ತಾಯವಾಯಿತು. ಮುಂದೆ ನಾವು ಯೋಚನೆ ಮಾಡಬೇಕಾಗಿರುವುದು..... ಪರೀಕ್ಷೆ ಪಾಸು ಮಾಡುವುದು ಹೇಗೆ ಎಂದು?@#$!$$
..... ೧ರಿಂದ ೯ನೇ ಶತಮಾನದವರೆಗೂ ಮುಗಿಸಿ ಈಗ ೧೦ನೇ ಶತಮಾನಕ್ಕೆ. ಅಂದರೆ, ೧-೪ನೇ ಪೇಜುಗಳನ್ನು ಓದಿ ಮುಗಿಸಿ ೫ನೇ ಪೇಜಿಗೆ ಬಂದಿದ್ದಾರೆ. ಹೋಗಿ ಬಾಗಿಲು ತೆಗೆಯುತ್ತಿದ್ದಾರೆ. ಆರೂವರೆ ಆಗುತಾ ಬಂತು. ಪಾಪ.. ಬೆಳಕು ಸಾಲದು, ಕರೆಂಟು ಬೇರೆ ಹೋಗಿದೆ..


ಹಿಂದಿನ ಬೆಂಚಿನಿಂದ..."@#%&*()*&$@!$^&"
ಯಾರಪ್ಪ ಅದು ಪ್ರಶ್ನೆ ಕೇಳೋರು? ಈ ಮನುಷ್ಯನಿಗೆ ಕೋಪ ಬೇರೆ ಬರುತ್ತಿದೆ. ಕತ್ತಲಾಗುತ್ತಿದ್ದ ಹಾಗೆ ಕಣ್ಣೂ ಕಾಣುವುದಿಲ್ಲವಂತೆ. ಪಂಪನಲ್ಲಿರುವ ಸಿಟ್ಟಿನಬಗ್ಗೆ ಮಾತನಾಡುತ್ತಿದ್ದಾನೆ. ಓಹೋ! ಬಂತು ಬಂತು ಮೈ ಮೇಲೆ ದೇವರು ಬಂತು. ಧಡ್! ಪೋಡಿಯಮ್ಮಿನ ಮೇಲೆ ಕುಟ್ಟಿದ ಜೋರಿಗೆ ಮೊದಲನೇ ಬೆಂಚಿನಲ್ಲೇ ನಿದ್ದೆ ಮಾಡುತ್ತಿದ್ದ ಹುಡುಗಿ ಎದ್ದು ಕೂತಳು. ಉದ್ದೇಶವೂ ಅದೇ ಆಗಿತ್ತೋ ಏನೋ? ಹಿಹಿಹಿ... ಬೆಳಕು ಚೆನ್ನಾಗಿದ್ದಾಗ ನಡೆಯುತ್ತಿದ್ದಷ್ಟು ವೇಗವಾಗಿ ಪಾಠ ಈಗ ನಡೆಯುತ್ತಿಲ್ಲ. ಏನು ಹೇಳಬೇಕೆಂದು ಗೊತ್ತಾಗಿತ್ತಿಲ್ಲವೋ ಏನೋ, ೩ ಸೆಕೆಂಡಿಗೆ ಒಂದು ಪದ ಹೊರಕ್ಕೆ ಬರುತ್ತಿದೆ. ... ಈಗ ಪಂಪ ತನ್ನ ರಾಜನ ಮೇಲೆ ಯಾಕೆ ಬರೆಯಬೇಕಾಗಿತ್ತು ಎಂದು ಚರ್ಚೆ. ಈತ ಸಾಹಿತ್ಯವನ್ನು ಓದುವ ಬದಲು ಮಾರ್ಕ್ಸ್ ವಾದವನ್ನೋ,ಕಮ್ಯುನಿಸಮ್ಮನ್ನೋ ಓದಿಕೊಂಡಿದ್ದರೆ ಚೆನ್ನಾಗಿತ್ತು. ಪಂಪ ಕರ್ಣನ ಕಡೆಗಾದರೆ ರನ್ನ ಅರ್ಜುನನ ಕಡೆಗಂತೆ. ಇವರಿಬ್ಬರೂ ಸೇರಿ ತಮ್ಮ ಕಾವ್ಯಗಳಲ್ಲಿ ಪ್ರಭುತ್ವವನ್ನು ಮಣಿಸಲು ಪ್ರಯತ್ನಿಸಿದ್ದರಂತೆ.

ಸೊಳ್ಳೆ ಕಚ್ಚುತ್ತಿದೆ. ಹೇಳಿ-ಕೇಳಿ ಬೆಂಗಳೂರಿನ ಜ್ನಾನಭಾರತಿಯಲ್ಲಿ ಕ್ಲಾಸು. ಕುಂಟುಮಿಡತೆ ಕುಟುರ್ ಗುಟ್ಟುತ್ತಿದೆ.

ಏನೇನು ಆತನಿಗೆ ಗೊತ್ತಾಗುವುದಿಲ್ಲವೋ ಅದನ್ನು ನಾವು ಗಮನಿಸಿಕೊಳ್ಳಬೇಕು. ರನ್ನ, ದುರ್ಯೋಧನರಿಬ್ಬರೂ ಯುದ್ಧಕ್ಕೆ ಹೋದರಂತೆ. ರಾಮ - ಲಕ್ಷ್ಮಣರಿಬ್ಬರೂ ಕಾಡಿನಲ್ಲಿ ಒಬ್ಬ ಹೆಣ್ಣಿನ ಮೇಲೆ ಹಲ್ಲೆ ಮಾಡಿದರಂತೆ. ರಾವಣ ಏಕಪತ್ನೀವ್ರತಸ್ಥನಂತೆ. ಆದ್ದರಿಂದ, ಅವನು ಸೀತೆಯನ್ನು ಕರೆದುಕೊಂಡು ಹೋಗಿ ಮಂಡೋದರಿಗೆ ಒಪ್ಪಿಸಿದನಂತೆ. ಈ ಎಲ್ಲದರಿಂದ ೧೦ನೇ ಶತಮಾನದ ಕವಿಗಳು ಜನರನ್ನು ಹೊಸ ಆಲೋಚನೆಯ ಕಡೆ ಎಳೆದುಕೊಂಡು ಹೋದರಂತೆ. ಇದೆಲ್ಲವೂ ಯಾವ ಯುಗದ ರೂಪುರೇಷೆಯೋ ಕಾಣೆ?

...ನಮಗೆ ೧೦ನೇ ಶತಮಾನ ಹೊಸ ಪಾಠವನ್ನು ಕಲಿಸಿಕೊಟ್ಟಿದ್ದನ್ನು ಮರೆಯಬಾರ್ದು! ಇನ್ನೇನೋ ಒಂದಷ್ಟು ವಡ.. ವಡ.. ವಡ.. ಇದ್ಯಾವುದನ್ನೂ ನಾವು ಮಾರೀಬಾರ್ದು. ೧ ಗಂಟೆಕಾಲದಿಂದ ಬರೆಯಿತ್ತಿದ್ದೇನೆ. ಆದರೆ, ಬರೆಯುವುದಕ್ಕಾಗಿದ್ದು ನಾಲ್ಕೇ ಪೇಜು. ಇದೇ ನನ್ನ ಎಕ್ಸಾಮಿನ ಸ್ಪೀಡಾದರೆ ಏನಪ್ಪಾ ಎಂದು ಭಯ ಆಗ್ತಿದೆ. ವಡ್ಡಾರಾಧನೆಯ ರೂಪುರೇಷೆಯ ಬಗ್ಗೆ ಈಗ ಡಿಸ್ಕಷನ್. ನಾಯಂಡಹಳ್ಳಿಯಲ್ಲೇ ಪ್ರಿಂಟಾಗಿದ್ದರೂ ಮೇಡಿನ್ ಚೈನಾ ಅಂತ ಲೇಬಲ್ ಅಂಟಿಸಿದ್ದರೆ ನಾವು ಅದನ್ನು ಕೊಳ್ಳುತ್ತೇವೆ. ಹಾಗೆಯೇ, ಸಣ್ಣಕಥೆಗಳು ನಮ್ಮಲ್ಲಿಯೇ ಇದ್ದರೂ, ಅವು ಇಂಗ್ಲೀಷಿನಿಂದ್ ಎಂದು ಹೇಳುವ ಹುಚ್ಚು ನಮಗೆ! ಇದು ವಡ್ಡಾರಾಧನೆಯ ರೂಪುರೇಷೆ. ಅತ್ತಿಮಬ್ಬೆ ಪ್ರಿಂಟೇ ಇಲ್ಲದ ಕಾಲದಲ್ಲಿ ಸಾವಿರ ಪ್ರತಿಗಳನ್ನು ಮಾಡಿ ಹಂಚಿದಳಂತೆ.

ಹಿಂದಿನ ಬೆಂಚಿನಿಂದ ರಿಕ್ವೆಸ್ಟು! "ಸಾರ್, ಕತ್ತಲಾಗುತ್ತಿದೆ ಬರೆದುಕೊಳ್ಳುವುದಕ್ಕೆ ಆಗಿತ್ತಿಲ್ಲ. ನಾಳೆ ಕಂಟಿನ್ಯೂ ಮಾಡಿ." ಹೊರಗಡೆ ಕತ್ತಲು ಕವಿಯುತ್ತಿದೆ. ತನ್ನ ಕಣ್ಣುಗುಡ್ಡೆಗಳವರೆಗೂ ಗಡಿಯಾರ ತಂದುಕೊಂಡು ನೋಡಿದ ಮಹಾಶಯ "ಇನ್ನೂ ಐದೂವರೇಏಏಏಏಏ...." "ಇಲ್ಲಾ ಸಾರ್... ಆರೂವರೇಏಏಏಏಏ", ಯಾವುದೋ ಹೆಣ್ಣು ಧ್ವನಿ "ಲೇಟಾಯ್ತು ಬಿಡಿ ಸಾರ್...", "...ನನಗೇನೂ ತೊಂದರೆ ಇಲ್ಲಪ್ಪ, ಆದರೆ ಇವತ್ತು ಹೇಳಿಬೇಕಾಗಿದ್ದನ್ನ ಇನ್ಯಾವತ್ತೂ ಹೇಳೋದಿಲ್ಲಪ್ಪ....". ಇನ್ಯಾವುದೋ ಧ್ವನಿ " ಇಲ್ಲ್ಲ, ಇಲ್ಲ, ನೀವು ಹೇಳಿ ಸಾರ್, ..." ಮೆತ್ತಗೆ.. "ಹೋಗ್ಲಿ ಬಿಡ್ರಪ್ಪ ಕ್ಲಾಸಾದ್ರೂ ಮುಗಿಲೀ...." ಆ ಮಹಾಶಯ "ಆಗ್ಲೀ ಇರ್ರವ್ವ .... ನನಗೆ ಕಣ್ಣೇ ಕಾಣುತ್ತಿಲ್ಲ ಆದರೂ ಪೇಪರೂ ಹುಡುಕುತ್ತಿಲ್ಲವಾ....?

ಓಹೋ! ಅಂತೂ ಇಂತೂ ಪೇಪರು ಸಿಕ್ಕಿತು. ಆದರೇನು ಫಲ ಪೂರ್ತಿ ಕತ್ತಲು. ಕಣ್ಣೇ ಕಾಣುತ್ತಿಲ್ಲ ಕಿಟಕಿಯ ಪಕ್ಕ ನಿಂತುಕೊಂಡರೂ.. ಬರೇ ಕತ್ತಲೆ ಬಂದು ಪೇಪರಿಗೆ ರಾಚುತಿತ್ತು. ಆ ಮನುಷ್ಯನಿಗೆ ಭಾರಿ ಖುಶಿಯಾಗಿರಬೇಕು. ಯಾರು ಏನು ಮಾಡುತ್ತಿದಾರೋ ಯಾರಿಗೂ ಕಾಣುತ್ತಿಲ್ಲ. ಕರೆಂಟು ಹೋದರೆ ಅದಕ್ಕೆ ಬದಲಿ ವ್ಯವಸ್ಥೆ ಮಾಡಬೇಕೆಂದು ಕೂಡ ತಿಳಿಯಲಿಲ್ಲವೇ?

ಈಗ ಗೊತ್ತಾಗುತ್ತಿದೆ ಯಾಕೆ ವಿನಯಾ ನಮ್ಮದು ಕಾಡು ಕ್ಯಾಂಪಸ್ ಅಂತ ಹೀಗಳೆಯುತ್ತಿದ್ದಳು ಅಂತ.

ಕರೆಂಟು ಬಂತು. ಅಯ್ಯೋ ಇನ್ನೂ ಅರ್ಧ ಘಂಟೆ ಬಿಡುವ ಹಾಗೆ ಕಾಣುವುದಿಲ್ಲ, ಈ ಮನುಷ್ಯ. ಹೋ... ಈಗ ನನಗೆ ಡೇಂಜರು ಕಾಣುತ್ತಿದೆ. ನಾನು ಬಹಳ ಬರಕೋತಾ ಇದ್ದಿನಿ ಅಂತ ಈಯಪ್ಪ ನನ್ನನ್ನೇ ನೋಡುತ್ತಿದ್ದಾನೆ. ನಾಳೆಯಿಂದ ಈಯಪ್ಪನ ಕ್ಲಾಸನ್ನು ನಾನು ಅಟೆಂಡು ಮಾಡುವುದಿಲ್ಲ.

.... ಎಲ್ಲಾ ರಗಳೆಗಳಲ್ಲೂ ಶಿವನೇ ಕೆಳಗೆ ಬಂದು ಭಕ್ತರನ್ನು ಪುಷ್ಪಕವಿಮಾನದಲ್ಲಿ ಕರೆದುಕೊಂಡು ಹೋಗುತ್ತಾನಂತೆ. ದ್ರಾಕ್ಷಿ ಹುಳಿ ಎಂದ ನರಿಗಿಂತ ಬಾಹುಬಲಿ ದೊಡ್ಡವನಂತೆ. ಎಂಥಾ ಹೋಲಿಕೆ. ಯಾವುದನ್ನೋ ಮುಂದಿನ ತರಗತಿಯಲಿ ಹೇಳಬೇಕಾಗಿರುವುದರಿಂದ ಇದನ್ನು ಇಲ್ಲಿಗೆ ಮೊಟಕುಗೊಳಿಸುತ್ತಿದ್ದಾರಂತೆ. ಏಳು ಗಂಟೆ... ಇನ್ನೂ ಬಿಡುವ ಸಮಯವಾಯಿತು .... "ಇನ್ನು ೨೫ ನಿಮಿಷದಲ್ಲಿ ಮುಗಿಸಿಕೊಟ್ಟುಬಿಡುತ್ತೇನೆ ನಿಮಗೆ".. ಹಾಆಆಆಆಆಆಆಆಆ! ಲೇಟಾಯ್ತು ಸಾರ್........!" "ಲೇಟು ಆಗೋ ಹಾಗಿದ್ರೆ ಹೊರಡ್ರಪ್ಪ." ಅರ್ಧ ಕ್ಲಾಸು ಎದ್ದು ಹೊರಟಿತು. ನಾನು ಬೇರೆ ಈಯಪ್ಪನಿಗೆ ನೇರ ನೇರ ಕೂತಿದ್ದೇನೆ. ಭಾರಿ ಬರಕೋತಾ ಇದ್ದೀನಿ ಅಂತ ನನ್ನನ್ನೇ ಣೊಡುತ್ತಿದ್ದಾರೆ.

ಅಬ್ಬಾ! ಮುಗಿಯಿತು. ಕಿಟಕಿಯಿಂದ ನೇರ ಹುಡುಗಿಯರ ಮುಖಕ್ಕೆ ದಾಳಿ ಮಾಡಿದ ಸೊಳ್ಳೆ, ತಿಗಣೆಗಳ ದೆಸೆಯಿಂದ ಬಿಟ್ಟುಬಿಟ್ಟರು.

ಆದರೆ, ನನ್ನ ಕೈ ತೋರುಬೆರಳ ತುದಿಯಿಂದ ಮೊಣಕೈವರೆಗೆ ನೋಯುತ್ತಿತ್ತು.