ಶುಕ್ರವಾರ, ಏಪ್ರಿಲ್ 3, 2009

ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ...

ಮಕ್ಕಳ ಕ್ಷೇಯೋಭಿವೃದ್ಧಿಯ ಬಗೆಗೆ ಹಿಂದೆಂದಿಗಿಂತಲೂ ಈಗ ಚರ್ಚೆ ಹೆಚ್ಚು. ನಾನು ಕೆಲವು ದಿನಗಳು ಈ ಚರ್ಚೆಗಳಲ್ಲಿ ಭಾಗವಹಿಸಬೇಕಾಗಿ ಬಂದದ್ದರಿಂದ ಮತ್ತು ಆ ವಿಷಯಗಳು ಇನ್ನೂ ನನ್ನ ಮನಸ್ಸಿನಲ್ಲಿ ಗುಂಗುಡುತ್ತಿದೆಯಾದ್ದರಿಂದ, ನನ್ನ ಈ ಪೋಸ್ಟಿನ ವಿಷಯವೂ ಮಕ್ಕಳೇ ಆಗಿದ್ದಾರೆ.

* * *

ಪಕ್ಕದ ಮನೆಯ ಪುಟ್ಟ ಎರಡು ವರ್ಷದ ಹೆಣ್ಣುಮಗುವಿಗೆ ದಿನಕ್ಕೆ ಎರಡು ಬಾರಿ ಸ್ನಾನ, ಮತ್ತೆ ಎರಡು ಸಾರಿಯೂ ನಾಲ್ಕೈದು ಕ್ರೀಮು. ಮಗು ಕಪ್ಪಗಿದೆಯಂತೆ, ದೊಡ್ಡವಳಾದ ಮೇಲೆ ಹುಡುಗರು ಮೆಚ್ಚುವುದಿಲ್ಲವೆಂದು ಈಗಿನಿಂದಲೇ ತಾಲೀಮು!

ಮಗಳು ನಾಲ್ಕನೇ ಕ್ಲಾಸು. ಅವಳಿಗೆ ಹಾಡು ಕಲಿಯಲು ಇಷ್ಟ, ಆದರೆ ತಾಯಿ ಕಳಿಸುವುದಿಲ್ಲ. ಅದರಿಂದ ಏನು ಲಾಭ ಎಂಬ ಅಸಡ್ಡೆ ಅವರಿಗೆ. ತಾವು ಕೆಲಸ ಮಾಡುವ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರಿಗೆ ಸರ್ಕಾರೀ ಕೆಲಸ ಸಿಕ್ಕಿದೆ. ಈಗ ಮಗಳನ್ನು ಅವರ ಬಳಿ ಟ್ಯೂಷನ್ನಿಗೆ ಕಳುಹಿಸುತ್ತಿದ್ದಾರೆ. ಎಕ್ಸಾಮ್ ಪಾಸು ಮಾಡುವ ಬಗ್ಗೆ ಟ್ರೇನಿಂಗ್ ತೆಗೆದುಕೊಳ್ಳಲು, ಮುಂದಕ್ಕೆ ಉಪಯೋಗವಾಗಲಿ ಎಂದು!

ದೀಪಾವಳಿ ಹಬ್ಬದ ದಿನ ತಾಯಿ ತನ್ನ ಒಂಭತ್ತು ತಿಂಗಳ ಮಗುವನ್ನು ಎತ್ತಿಕೊಂಡು ಹೊರಗೆ ಬೀದಿಯಲ್ಲಿ ನಿಂತಿದ್ದಾಳೆ. ಉಳಿದ ಮಕ್ಕಳು ಒಂದೇ ಸಮ ಆಟಂ ಬಾಂಬ್ ಹೊಡೆಯುತ್ತಿದ್ದಾರೆ. ಏಕೆ ಇಲ್ಲಿ ನಿಂತಿರುವುದೆಂದು ಅವರನ್ನೇ ಕೇಳಬೇಕು. ’ಮಗುವಿಗೆ ಧೈರ್ಯ ಬರಲಿ ಎಂದು!’

* * *

ಇಂತಹವು ಈಗ ಸರ್ವೇಸಾಮಾನ್ಯ ಎನಿಸುತ್ತಿದೆ. ನಮ್ಮ ಮಕ್ಕಳು ಹೀಗೇ, ಇಂತಹವರೇ ಆಗಬೇಕೆಂದು ಡಿಸೈನ್ ಮಾಡಿ ಬೆಳೆಸುವುದು ಹಿಂದೆಂದೂ ಇರಲಿಲ್ಲವೆನಿಸುತ್ತದೆ. ತನ್ನ ಮಗನನ್ನು ಬದಲಾಯಿಸಲು ಪ್ರಯತ್ನಿಸಿದ ಹಿರಣ್ಯ ಕಶಿಪು ಇದಕ್ಕೊಂದು ಅಪವಾದ ಎಂದು ಬೇಕಾದರೆ ಹೇಳಬಹುದೇನೋ? ಆದರೆ, ಅವನೂ ಸೋತಿದ್ದು ನಿಜ ತಾನೆ? ನಮ್ಮ ಮಕ್ಕಳು ಬೇರೆ ಮಕ್ಕಳಿಗಿಂತ ಹಿಂದೆ ಉಳಿದುಬಿಡುತ್ತಾರೆ ಎಂದು ಭಯ ಕೆಲವರಿಗೆ. ಆದರೆ, ಹಿಂದುಳಿಯುವುದು ಎಂದರೇನು? ಅದೇ ಸ್ಪಷ್ಟವಾಗಿ ನಮಗೆ ತಿಳಿದಿಲ್ಲ.

ನಮ್ಮ ಪೋಷಕರ ಮನೋಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾದರೆ ಒಂದು ಜಾಹಿರಾತನ್ನು ನೆನಪಿಸಿಕೊಳ್ಳಬೇಕು. ಮಗನಿಗೆ ಅಬ್ದುಲ್ ಕಲಾಮರ ಹಾಗೆ ಆಗಬೇಕೆಂಬ ಮಹದಾಸೆ. ಅದಕ್ಕೆ ತಾಯಿ ಏನು ಮಾಡಬೇಕು? ಅದೆಂತದೆಂತದೋ ಹಾಕಿ ಮಾಡಿರುವ ’ಬ್ರೇನ್ ಫುಡ್’ ತಿನ್ನಿಸಬೇಕು! ಕಲಾಮ್ ಸರ್ ನಿಜವಾಗಲೂ ’ಅಮೇಜ್ ಬ್ರೇನ್ ಫುಡ್’ ತಿಂದೇ ಹಾಗಾಗಿದ್ದ? ಇದರ ಬದಲು ನಮ್ಮ ಮಕ್ಕಳಿಗೆ ಅವರು ಸಾಗಿ ಬಂದ ದಾರಿಯನ್ನು ಹೇಳಿ ಉತ್ತೇಜಿಸುವುದು ಹೆಚ್ಚು ಉಪಯುಕ್ತವಲ್ಲವೇ?

ಮುಸ್ಲಿಮ್ ಸಂತ ಕವಿ ಖಲೀಲ್ ಗಿಬ್ರನ್(ಮೂಲ ಉರ್ದು)ಬರೆದಿರುವ ಎರಡು ಪದ್ಯಗಳು ಈ ಆಲೋಚನೆಗಳಿಗೆಲ್ಲ ಉತ್ತರವೇನೋ ಎನ್ನುವಂತಿದೆ, ನೀವೂ ಓದಿ ನೋಡಿ:

ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ
ಜೀವನದ ಸ್ವಪ್ರೇಮದ ಪುತ್ರಪುತ್ರಿಯರು ಅವರು
ಅವರು ನಿಮ್ಮ ಜತೆಗೆ ಇರುವುದಾದರೂ
ಅವರು ನಿಮಗೆ ಸೇರಿದವರಲ್ಲ.

ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು
ಆದರೆ ಆಲೋಚನೆಗಳನಲ್ಲ, ಅವರಂತಿರಲು
ನೀವು ಪ್ರಯತ್ನಿಸಬಹುದು: ಆದರೆ,
ಅವರನ್ನು ನಿಮ್ಮಂತೆ ನೋಡದಿರಿ,
ಜೀವನ ಹಿಮ್ಮುಖವಾಗಿ ಹರಿಯದಿರಲಿ.

(ಪದ್ಯಗಳನ್ನು ಒದಗಿಸಿದ ಚಂದ್ರಕಾಂತ ಮೇಡಮ್ ಗೆ ಧನ್ಯವಾದಗಳು)