ಗುರುವಾರ, ಜುಲೈ 9, 2009

ರುಕ್ಮಿಣಿಯ ಅಜ್ಜಿ ಮನೆ - ೬

ರುಕ್ಕೂ ಎನ್ನಬಹುದೋ ಅಥವಾ ಮಿಸ್.ರುಕ್ಮಿಣಿ ಎನ್ನಬೇಕೋ? ಅವಳೀಗ ಬಿ.ಇ., ಎಂ.ಬಿ.ಎ., ಎಚ್.ಆರ್.ಎಕ್ಸಿಕ್ಯೂಟಿವ್. ಈಗ್ಗೆ ರುಕ್ಕೂ ಅಜ್ಜಿ ಮನೆಗೆ ಹೋಗಿ ಏಳೆಂಟು ವರ್ಷಗಳೇ ಆದುವೇನೋ? ಹೈಸ್ಕೂಲು, ಕಾಲೇಜು ಎಂದೆಲ್ಲಾ ಬೆಳೆಯುತ್ತಿದ್ದಂತೆ ಅವಳಿಗೆ ಅಲ್ಲಿಲ್ಲಿ ಹೋಗಿ ವಾರ-ತಿಂಗಳು ಇರುವುದು ಸಾಧ್ಯವಾಗದೇ ಹೋಯಿತು. ಕರೆದುಕೊಂಡು ಹೋಗಿ ಬಂದು ಮಾಡುತ್ತಿದ್ದ ತಾತನಿಗೂ ವಯಸ್ಸಾಗಿಬಿಟ್ಟಿದೆ. ಅಜ್ಜಿ ಆಕ್ಸಿಡೆಂಟ್ನಲ್ಲಿ ಕಾಲು ಮುರಿದುಕೊಂಡಿದ್ದಾರೆ.

ಪೇಟೆಯಲ್ಲಿ ಬಸ್ಸು ಹತ್ತಲು ಹೋಗಿದ್ದಾರೆ. ಇವರು ಹತ್ತುವಷ್ಟರಲ್ಲಿ ಬಸ್ಸು ಮುಂದಕ್ಕೆ ಹೋಗಿಬಿಟ್ಟಿದೆ. ಕೆಳಕ್ಕೆ ಬಿದ್ದು ಸೊಂಟದ ಮೂಳೆ ಮುರಿದು ಹೋಗಿದೆ. ಈಗ ಅಜ್ಜಿ ಮೊದಲಿನ ಚಟುವಟಿಕೆಯ ಅಜ್ಜಿಯಾಗಿ ಉಳಿದಿಲ್ಲ. ಕೋಲು ಹಿಡಿದುಕೊಂಡು ಓಡಾಡುತ್ತಾರೆ. ಆಗ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಅಜ್ಜಿಯನ್ನು ನೋಡಲು ಊರಿಗೆ ಹೋಗಿದ್ದಳು ರುಕ್ಕೂ. ಆಮೇಲೆ, ಎಷ್ಟೊಂದು ಸುದ್ದಿಗಳು ಊರ ಬಗ್ಗೆ? ಮೊದಲಿನ ಮಣ್ಣಿನ ಮನೆಯ ’ಹಸುಗಳ ಮನೆ’ ಗೋಡೆ ಬಿದ್ದು ಹೋಯಿತಂತೆ. ಗೋಡೆ ರಿಪೇರಿ ಮಾಡಿಸುವ ಗೋಜು ಏಕೆಂದು ಹಿರೀಮಗ ತೋಟಕ್ಕೆ ಹತ್ತಿರವಾಗಿದ್ದ ಜಾಗದಲ್ಲಿ ಹೊಸಮನೆಯನ್ನೇ ಕಟ್ಟುತ್ತೇನೆಂದು ಪ್ಲಾನು ಹಾಕಿದ. ಇವನು ದುಡ್ಡುಹಾಕಿ ಮನೆ ಕಟ್ಟಿದರೆ ನಮಗೇನು ಲಾಭವೆಂದು, ಉಳಿದವರು ಮೊದಲು ಆಸ್ತಿ ಪಾಲಾಗಲಿ ಎಂದರು. ಸರಿ, ಊರುದ್ದ ಇದ್ದ ಆಸ್ತಿ ಮೂರು ಪಾಲಾಯಿತು. ಒಬ್ಬೊಬ್ಬರೂ ಒಂದೊಂದು ಮನೆ ಕಟ್ಟುವ ತೀರ್ಮಾನ ಮಾಡಿದರು. ತಾನೇ ಬಹಳ ಬುದ್ಧಿವಂತೆ ಎಂದುಕೊಂಡಿದ್ದ ಹಿರೀಸೊಸೆಗೆ ಆಶ್ಚರ್ಯವೋ ಆಶ್ಚರ್ಯ; ಸಿಮೆಂಟು ಮರಳಿಗೆ ದುಡ್ಡು ಸಾಲದೆ ತನ್ನ ಗಂಡ ಅತ್ತಿತ್ತ ಅಲೆದಾಡುತ್ತಿದ್ದರೆ, ಚಿಕ್ಕವರಿಬ್ಬರೂ ಆರಾಮಾಗಿ ತಾರಸಿ ಹಾಕಿಸಿ ಗೃಹಪ್ರವೇಶವನ್ನು ಮಾಡಿಸಿಬಿಟ್ಟರು. ಇನ್ನು ಅವರ ಮುಂದೆ ಮನೆಕಟ್ಟಿಸದೇ ಇರುವುದಕ್ಕಿಂತ ಮೇಲೆಂದು ಆಸ್ತಿ ಮಾರಿ, ಸಾಲ ಸೋಲ ಮಾಡಿ ಮನೆ ಕಟ್ಟಿಸಿದರಂತೆ, ಕಡೆಗೆ ಇವರಿಗೆ ಉಳಿದದ್ದು ಹತ್ತು ಗುಂಟೆ ನೆಲ, ಆ ಮನೆಯಿದ್ದ ಜಾಗವಷ್ಟೆ.

ಆಗಾಗ, ಅಮ್ಮ ಫೋನಿನಲ್ಲಿ ಅಜ್ಜಿಯೊಡನೆ ಮಾತಾಡುತ್ತಿದ್ದರು, "ವಾಮೆಯನ್ನು ಮಾರಿಬಿಟ್ಟನೇ? ಹಳೇ ಮನೇನೂ ಹೋಯ್ತೆ? ಹೋಗಲೀ ಸಾಲವಾದರೂ ತೀರಿತಾ? ಐದು ತೆಂಗಿನ ಮರ ಇತ್ತೇ ಅಲ್ಲಿ?" ಇನ್ನೂ ಮುಂತಾದ ಮಾತುಗಳನ್ನು ಕೇಳಿಯೇ ರುಕ್ಕೂ ತನ್ನ ಅಜ್ಜಿ ಮನೆಯ ಪರಿಸ್ಥಿತಿ ಏನಾಗಬಹುದೆಂದು ಊಹಿಸುತ್ತಿದ್ದಳು. ತನ್ನ ಕನಸಿನ ಅರಮನೆ ಬಿರುಗಾಳಿಗೆ ಸಿಲುಕಿ ಹುಚ್ಚೆದ್ದು ಹಾಳಾಗುತ್ತಿರುವಂತೆ ಅವಳಿಗೆ ಭಾಸವಾಗುತ್ತಿತ್ತು.

ಡಿಸೆಂಬರ್ ೨೫ರ ಕ್ರಿಸ್ಮಸ್ ಹಬ್ಬ ಈ ಸಾರಿ ಶುಕ್ರವಾರ ಬಿದ್ದು, ಒಟ್ಟಿಗೇ ಮೂರುದಿನಗಳ ರಜೆಯ ಯೋಗದಿಂದ ರುಕ್ಮಿಣಿಯ ತಪಸ್ಸು ಫಲಿಸಿತ್ತು. ಅವಳು ಮತ್ತೆ ಊರಿಗೆ ಹೋಗುವ ಆಸೆ ಸಿದ್ಧಿಸಿತ್ತು. ಅವಳ ಹಿರೀ ಅತ್ತೆ ಬೇರೆ ಫೋನಿನಲ್ಲಿ, "ರುಕ್ಕೂ, ನೀನು ಊರಿಗೆ ಬಂದು ಎಷ್ಟು ದಿನ ಆಯ್ತು? ನೀನು ಸಬ್ಬಕ್ಕಿ ಪಾಯಸವನ್ನು ’ಮಣಿಪಾಯಸ’ ಅನ್ನುತ್ತಿದ್ದುದನ್ನು ಈಗಲೂ ನೆನೆಸಿಕೊಳ್ಳುತ್ತೇನೆ. ಎರಡು ದಿನ ಇದ್ದು ಹೋಗುವಂತೆ, ಬಾ" ಎಂದಿದ್ದಳು! ಇದ್ದಕ್ಕಿದಂತೆ ತನ್ನ ಅತ್ತೆ ಇಷ್ಟೊಂದು ಬದಲಾಗಿರುವುದನ್ನು ಅವಳಿಗೆ ನಂಬಲಿಕ್ಕೇ ಆಗಲಿಲ್ಲ. ಹೋಗಲೀ, ಈಗಲಾದರೂ ಸರಿಹೋಯಿತಲ್ಲಾ ಎಂದು ಖುಷಿಪಟ್ಟಳು. ಇಂತಹವು ಎಷ್ಟೋ ಚಿದಂಬರ ರಹಸ್ಯಗಳು ಅವಳ ಮನಸ್ಸಿನಲ್ಲಿತ್ತು. ಹಿಂದೆ ಅತ್ತೆಯೇ ಆಗಲೀ,ಬೇರೆ ಯಾರೆ ಆಗಲೀ ಹೀಗೆ ಇದ್ದರು, ಹೀಗೀಗೆ ಅಂದರು ಎಂದು ಅವಳು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಹಾಗಾಗಿ, ಈಗ ಏನಾಗಿದೆಯೆಂಬುದನ್ನು ಹೇಳುವ ಪ್ರಮೇಯವೂ ಅವಳಿಗೆ ಬರಲಿಲ್ಲ.

ಬಸ್ಸು ಕಮ್ಮನಳ್ಳಿಗೆ ಬಂದು ತಲುಪಿತು. ಮತ್ತೆ ತನ್ನ ನೀರಿಗೆ ಬಿಟ್ಟ ಹಾಗೆ ಖುಷಿಯಿಂದ ಹೆಜ್ಜೆ ಹಾಕಿದ ಅವಳನ್ನು ಟಾರು ರೋಡು ಎದುರುಗೊಂಡಿತು. ಪಿಚ್ಚೆನಿಸಿತು. ಹಾಗೇ ರಸ್ತೆಯ ಒಂದು ಪಕ್ಕಕ್ಕೆ ಗಮನಿಸುತ್ತಾ ನಡೆದಳು. ಕಾಲುದಾರಿಯ ಆಚೀಚೆ ಬೆಳೆಯುತ್ತಿದ್ದ ’ತಲೆ ತೆಗೆಯುವ’ ಗಿಡಗಳು, ಮುಟ್ಟಿದರೆಮುನಿ ಸೊಪ್ಪು ಟಾರಿಗೂ ಗೆನಿಮೆಗೂ ಮಧ್ಯೆ ಸ್ವಲ್ಪ ಉಸಿರಾಡುತ್ತಿತ್ತು. ಇವಳೂ ಸಮಾಧಾನದ ನಿಟ್ಟುಸಿರುಬಿಟ್ಟಳು. ಊರಿಗೆ ಕಾಲಿಡುತ್ತಿದ್ದಂತೆಯೇ ಕಾಣಬಾಕಾಗಿದ್ದದ್ದು ಸರ್ವೇ ತೋಪು. "ಅಲ್ಲವೇ?" ಎಂದು ನೆನಪಿಸಿಕೊಂಡು ಥಟ್ಟನೆ ಹಿಂದಕ್ಕೆ ತಿರುಗಿ ನೋಡಿದಳು. ಎಲ್ಲಿದೆ ಸರ್ವೇ ತೋಪು? ಬಟಾಬಯಲು ಕಾಣಿಸಿತು ಬೆನ್ನ ಹಿಂದೆ. ಮುಂದಕ್ಕೆ ಮುಖ ಹಾಕಿ ಸುಮ್ಮನೆ ಅತ್ತಿತ್ತ ನೋಡುತ್ತಾ ಮನೆ ಕಡೆ ಕಾಲು ಹಾಕಿದಳು.

ಸರ್ವೇತೋಪು ಆದ ಕೂಡಲೇ ಚಿನ್ನಮ್ಮನ ತೋಟ, ಅದಾದ ಮೇಲೆ ಸೊಣ್ಣಮ್ಮನದ್ದು. ಅಷ್ಟು ದೂರದಲ್ಲಿ ಚಿನ್ನಮ್ಮ ಕಾಣಿಸಿದಳು. ಈಯಮ್ಮನಿಗೆ ಆಗಲೇ ವಯಸ್ಸಾಗಿ ಹೋಗಿರಬೇಕಿತ್ತಲ್ಲ ಎಂದುಕೊಂಡಳು. ’ಯಾರಮ್ಮೋ?’, ಚಿನ್ನಮ್ಮನ ಕಂಚಿನ ಕಂಠ ಇನ್ನೂ ಹಾಗೆ ಇದೆ! "ನಾನಮ್ಮೋ! ರುಕ್ಕೂ ರಾಮಪ್ಪನೋರ ಮನೆಗೆ", ರುಕ್ಕೂ ಬಾಯಿಂದ ಅನಾಯಾಸವಾಗಿ ಮಾತು ಹೊರಟಿತ್ತು. ತನ್ನ ಹಳೆಯ ಗಂಧ ಇನ್ನು ತನ್ನೊಳಗೆ ಉಳಿದುಕೊಂಡಿರುವುದು ಅವಳ ಗಮನಕ್ಕೂ ಬಂತು. "ರುಕ್ಕೂನಾ? ಓಹೋಹೋ, ಏನು ನಿನ್ನ ಎಮ್ಮೆಗಳು ಈಗ ನೆನಪಾದುವಾ?" ಎಂದುಕೊಂಡು ಚಿನ್ನಮ್ಮ ಮುಂದಕ್ಕೆ ಬಂದಳು. ರುಕ್ಕೂಗೂ ಉತ್ಸಾಹ ಬಂದು ತೋಟದೊಳಕ್ಕೆ ಧುಮುಕಿ ಚಿನ್ನಮ್ಮನ ಕಡೆಗೆ ನಡೆದಳು. ರುಕ್ಕೂ ಅಮ್ಮನ ಕ್ಷೇಮಸಮಾಚಾರ, ಅದೂ ಇದೂ ಎಲ್ಲಾ ಮಾತಾಡಿ ಆದ ಮೇಲೆ, "ಆಯ್ತು, ಊರಿಗೆ ಹೋಗಾಕ್ ಮುಂಚೆ ಮನೇಗ್ ಒಂದ್ ಸಾರಿ ಬಾ" ಎಂದು ಚಿನ್ನಮ್ಮ ಹೇಳುವಲ್ಲಿಗೆ ಅವರ ಮಾತುಕಥೆ ಮುಗಿಯಿತು. ತನ್ನ ಪಕ್ಕದಲ್ಲಿ ನಿಂತಿದ್ದ ಜೋಳದ ಗಿಡಗಳು ಆಗಲೇ ಅವಳ ಗಮನಕ್ಕೆ ಬಂದಿದ್ದು.
"ಎಳೇ ಕಾಯಿ ಇದೆಯಾ?"
"ಅಯ್ಯೋ, ಎಳೇದೇನು, ಬಲ್ತಿತೋರೋದೇ ತಗೊಂಡೋಗು, ಬೇಯಿಸ್ಬೋದು"
"ಬೇಡಪ್ಪಾ, ಬಲ್ತಿರೋದು ಊರಿಗೋಗೋವಾಗ ತಂಗೊಂಡು ಹೋಗ್ತೀನಿ. ಈಗ ಎಳೇದು ಒಂದೇ ಒಂದು ಸಾಕು" ಎಂದು ರುಕ್ಕೂ ಗಿಡದಲ್ಲಿ ಹುಡುಕತೊಡಗಿದಳು. ಅಷ್ಟರಲ್ಲಿ ಚಿನ್ನಮ್ಮ ನಾಲ್ಕು ಎಳೇ ಕಾಯಿ ಕಿತ್ತು ಅವಳ ಕೈಗಿತ್ತಳು. "ಬರ್ತೀನಮ್ಮೋ" ಎಂದು ರುಕ್ಕೂ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದಳು.

ಎಳೇ ಜೋಳ ಕಡೆಯುತ್ತಾ ನಡೆಯುತ್ತಿದ್ದ ಹಾಗೇ, ಮೆಲ್ಲಮೆಲ್ಲಗೆ ಶುರುವಾಗಿ ಜೋರಾಗತೊಡಗಿತು ಯಾವುದೋ ಧ್ವನಿ, "ಯಾರ್ದೇನು ಅಕ್ಕಿ ತಂದು ನಾವು ತಿಂತಿಲ್ಲ....ಲಾಯ್ರಿನ ಕರೆಸಿ ಪಾಲು ಮಾಡ್ಲಿಲ್ವ? ನನ್ನ ಮನೆ ಮುಂದೆ ಬರಲಿ ನೋಡ್ಕೋತೀನಿ..." ಇನ್ನೂ ಏನೇನೋ. ಅರೇ, ಅವಳು ಸೊಣ್ಣಮ್ಮನ ಹಿರೀಸೊಸೆ! ಅಲ್ಲಿಗೆ ಸೊಣ್ಣಮ್ಮನ ಮನೆಯೂ ಪಾಲಾಗಿದೆಯೆಂಬುದು ಖಚಿತವಾಯಿತು. ಅದು ಪಾಲಾಗಿದ್ದೇಕೆಂಬುದಕ್ಕೆ ಸಾಕ್ಷಿಯೂ ರುಕ್ಕೂ ಕಣ್ಣಮುಂದೆಯೇ ನಿಂತಿತ್ತು. ಥಳ ಥಳ ಹೊಳೆಯುವ ಕಡಪಾಕಲ್ಲಿನಲ್ಲಿ ಚೌಕಟ್ಟು ಕಟ್ಟಿದ್ದರು. "ಶ್ರೀಮತಿ ಸೊಣ್ಣಮ್ಮನವರು, ಜನನ - ೧೯೨೫, ಮರಣ - ೨೦೦೭" ಎಂದು ಅದರ ಮೇಲೆ ನಮೂದಿಸಿತ್ತು. ಅದರ ಪಕ್ಕದಲ್ಲೇ ಕಲ್ಲಿನಲ್ಲಿ ಕಟ್ಟಿದ್ದ ಸೊಣ್ಣಮ್ಮನ ಗಂಡ ಯಳಚಪ್ಪನ ಸಮಾಧಿ ಅದಾಗಲೇ ಹಳೆಯದಾಗಿ ಹೋಗಿತ್ತು. "ಎಂಥ ಗಟ್ಟಿಗಾತಿ ಸೊಣ್ಣಮ್ಮ! ಅವಳೊಂದು ಗದರು ಹಾಕಿದಳೆಂದರೆ ಮಕ್ಕಳೆಲ್ಲ ಮೂಲೆ ಸೇರಿಕೊಂಡುಬಿಡುತ್ತಿದ್ದರು. ರುಕ್ಕೂ ಇನ್ನೂ ಮುಂದಕ್ಕೆ ಹೆಜ್ಜೆ ಹಾಕಿದಳು.

ರಸ್ತೆಯಲ್ಲಿ ನಡೆದು ನಡೆದು ಸಾಕಾಗಿ, ಎಡಕ್ಕೆ ತಿರುಗುವ ಬದಲು ಎದುರಿಗಿದ್ದ ತೆಂಗಿನ ತೋಟದೊಳಕ್ಕೆ ನುಗ್ಗಿದಳು. ಮತ್ತೆ ’ಯಾರಮ್ಮೋ?’ ಎಂಬುದು ಕೇಳಿ ಬಂತು. ರುಕ್ಕೂ ತನ್ನ ಹಳೆಯ ಪ್ರವರವನ್ನೆಲ್ಲಾ ತಿರುಗೀ ಹೇಳಿಕೊಂಡಳು. "ಅಯ್ಯೋ, ರೋಡು ಮಾಡ್ಯವ್ರೇ. ಇತ್ತಾಗ್ಯಾಕ್ ಬಂದ್ರಿ? ರಮೇಶ ದಾರಿ ತೋರ್ಸು ಹೋಗೋ" ಎಂದು ಅವಳ ಸಹಾಯಕ್ಕೆ ನಿಂತರು. "ಅಯ್ಯೋ, ಬೇಡ ಬೇಡ, ರೋಡಲ್ಲಿ ಓಡಾಡಿ ಓಡಾಡಿ ಸಾಕಾಗಿದೆ, ಇಲ್ಲೇ ಗೆನಿಮೆ ಮೇಲೇ ನಡಕೊಂಡು ಹೋಗ್ತೀನಿ" ಎಂದು ಮುಂದುವರೆದಳು. "ಈ ಬೆಂಗಳೂರಿನವರು ಹುಡ್ಕೊಂಡು ಹುಡ್ಕೊಂಡು ಕಷ್ಟ ಪಡ್ತಾರೆ" ಎಂದು ಅವರು ಮಾತಾಡಿಕೊಂಡರು. ಅಲ್ಲಿಂದ ಒಂದೊಂದು ಗೆನಿಮೆ ದಾಟಿದಾಗಲೂ ಬೇರೆ ಬೇರೆಯವರು ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ರುಕ್ಕೂ ಅದೇ ಉತ್ತರಗಳನ್ನು ಕೊಟ್ಟುಕೊಂಡು ಮುಂದುವರೆಯುತ್ತಿದ್ದಳು.

11 ಕಾಮೆಂಟ್‌ಗಳು:

  1. ಹೇ... ನಾನು ಊಹಿಸಿದ ಹಾಗೆ ತಿರುವು ಬ೦ದೇ ಬಿಡ್ತಲ್ಲ....!

    ರುಕ್ಕು ಈಗ ರುಕ್ಮಿಣಿಯಾಗಿದ್ದಾಳೆ... ಮು೦ದೆ ಏನೇನು ಆಗುವುದು ಎ೦ದು ಕಾದು ನೋಡುತ್ತೇನೆ...

    ಹಳ್ಳಿಯ ಚಿತ್ರಣವನ್ನು ಕೊಡುವುದು ನಿಮಗೆ ಹೇಗೆ ಸಾಧ್ಯವಾಗಿದೆ? ನೀವು ಹಳ್ಳಿಗೆ ಹೋಗಿದ್ದಿರೇನು ಮೊದಲು?

    ನಿಮ್ಮ ಶೈಲಿ ಇಷ್ಟವಾಗುತ್ತದೆ....

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. @ ಗೀತಾ,

    ಥ್ಯಾಂಕ್ಸ್ ಫಾರ್ ದಿ ಕಾಂಪ್ಲಿಮೆಂಟ್ಸ್,:) ಕಥೆ ಮನಮುಟ್ಟಿತು ಎಂಬುದಕ್ಕೆ ಒಂದು ರೀತಿ ಸಮಾಧಾನವಾಗುತ್ತಿದೆ.

    @ ಸುಧೇಶ್,

    ನಿಮಗೂ ತುಂಬಾ ಥ್ಯಾಂಕ್ಸ್, ಟ್ರೇಡ್ ಸೀಕ್ರೆಟನ್ನು ಹಾಗೆ ಬಿಟ್ಟುಕೊಡುವುದುಂಟೇ? ಇನ್ಯಾವಗಲಾದ್ರೂ ಹೇಳ್ತೀನಿ ಹೇಗೆ ಸಾಧ್ಯವಾಯಿತು ಅಂತ... ನಿಮಗೆ ಸಹಜವಾಗಿದೆ ಅನ್ನಿಸ್ತದೆಯೇ? ನಿಮ್ಮ ಊರ ಕಡೆ ಹೇಗೆ? ನಿಮ್ಮ ಬರಹಗಳನ್ನು ಓದಿದರೆ ಮಂಗಳೂರೇನೋ ಅನ್ನಿಸ್ತದೆ...

    ಪ್ರತ್ಯುತ್ತರಅಳಿಸಿ
  4. ಹೇಮಾ ಅವರೇ...

    ಹಳ್ಳಿಯ ಚಿತ್ರಣ ಸಹಜವಾಗಿಯೇ ಬಂದಿದೆ... ಅದಕ್ಕೆ ಆಶ್ಚರ್ಯ ಆಯಿತು ನಿಮಗೆ ಸಹಜವಾಗಿ ಬರೆಯಲು ಹೇಗೆ ಸಾಧ್ಯವಾಯಿತು ಎ೦ದು? ನೀವು ಹಳ್ಳಿಯಲ್ಲಿ ಬೆಳೆದವರು ಅಲ್ಲವೆ೦ಬುದು ನನ್ನ ಊಹೆ. ಹಿಟ್ಟು ಬೀಸುವ ಘಟನೆ, ಗೆನಿಮೆ ಮು೦ತಾದ ಪದಗಳ ಬಳಕೆ ಸಹಜತೆ ಹೆಚ್ಚಲು ಸಹಾಯ ಮಾಡಿವೆ.

    ನಿಮ್ಮ ಊಹೆ ಸರಿ.... ನಂದು ಮಂಗಳೂರಿಗೆ ಹತ್ತಿರವೇ... ಉಡುಪಿ ಬಳಿಯ ಒಂದು ಹಳ್ಳಿ... :)

    ಪ್ರತ್ಯುತ್ತರಅಳಿಸಿ
  5. ಥ್ಯಾಂಕ್ಸ್ ಸಜಹವಾಗಿದೆ ಅಂದದ್ದಕ್ಕೆ, ನಾ ನನ್ನ ಸೀಕ್ರೆಟನ್ನು ಇನ್ಯಾವಾಗಲಾದ್ರೂ ಹೇಳ್ತೀನಿ...

    ಓದಿದೆ ಎರಡನೆ ಭಾಗವನ್ನು, ಅಲ್ಲೂ ಕೂಯ್ದಿದ್ದೇನೆ!

    ಪ್ರತ್ಯುತ್ತರಅಳಿಸಿ