ಬುಧವಾರ, ಜುಲೈ 1, 2009

ರುಕ್ಮಿಣಿಯ ಅಜ್ಜಿ ಮನೆ - ೫

ವೆಂಕಟರಾಜುವನ್ನು ಬೀಳ್ಕೊಂಡ ಮೇಲೆ ಅಜ್ಜಿಗೆ ಮತ್ತಿರಿಗಿ ಗೌಡರ ಕಾಫಿಯ ನೆನಪಾಯಿತು. ’ಬಾ ರುಕ್ಕೂ’ ಎಂದು ಕರೆದು ಅಜ್ಜಿ ಒಳಗೆ ನಡೆದರು. ಪೇಟೆಗೆ ಹೋಗಿದ್ದ ತಾತ ಮನೆಗೆ ಬರುವುದಕ್ಕೂ, ಗೌಡರು ಕಾಫಿಗೆ ಬರುವುದಕ್ಕೂ ಸರಿಯಾಯಿತು. ಇಬ್ಬರೂ ಸೇರಿ ಮನೆಯಲ್ಲಿ ಹೊಸದಾಗಿ ಬಂದಿದ್ದ ಟೀವಿಯನ್ನು ನೋಡುತ್ತಾ ಕುಳಿತರು. ಜೊತೆಗೆ ಅಜ್ಜಿ ರುಕ್ಕೂ ಕೈಲಿ ಕಳಿಸಿಕೊಟ್ಟ ಕಾಫಿಯನ್ನೂ ಹೀರಿದರು. ಮಳೆ, ಬೆಳೆ, ರಾಜಕಾರಣ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಮುಂಬರುವ ಎಲೆಕ್ಷನ್ನು ಹೀಗೆ ಟೀವಿಯಲ್ಲಿ ಒಂದೊಂದು ದೃಶ್ಯ ಬಂದಾಗಲೂ ಇವರ ಮಾತು ಹತ್ತಾರು ಕಡೆಗೆ ಹೊರಳಿಬರುತ್ತಿದ್ದವು. ಹೊರಗೆ ಹೋಗಿದ್ದ ಮಕ್ಕಳು ಸೊಸೆಯರೆಲ್ಲಾ ಒಬ್ಬೊಬ್ಬರಾಗಿ ಮನೆಗೆ ಬರತೊಡಗಿದರು. ರುಕ್ಕೂ ಅಡುಗೆ ಮನೆಗೂ ನಡುಮನೆಗೂ ಇದ್ದ ಬಾಗಿಲ ಮುಂದೆ ಕೂತು ಟೀವಿ ನೋಡತೊಡಗಿದಳು. ಆ ಜಾಗದಲ್ಲಿ ಕೂರುವುದರಿಂದ ಅವಳಿಗೆ ಅನುಕೂಲ ಏನಪ್ಪಾ ಅಂದರೆ, ಬಾಗಿಲ ಪಕ್ಕದಲ್ಲೇ ಹಾಕಿದ್ದ ದೊಡ್ಡ ಸೋಫಾ ಹೊರಗೆ ಕೂತವರನ್ನು ಮರೆಮಾಚುವುದಕ್ಕೆ ಸಹಾಯಕವಾಗಿತ್ತು.

ಅಷ್ಟರಲ್ಲೇ, ಮನೆಯ ಮುಂದೆಯೇ ಇದ್ದ ಹಾಲಿನ ಡೈರಿಯವನು ಕೂಗು ಹಾಕಿದ, "ಅಜ್ಜಮ್ಮೋ, ಬೆಂಗಳೂರಿನಿಂದ ಫೋನ್ ಬಂದಿದೆ", ಬೆಂಗಳೂರಿನಿಂದ ಫೋನ್ ಬಂದಿದೆ ಎಂದ ಮೇಲೆ ಅದು ತನ್ನ ಮನೆಯಿಂದಲೇ ಇರಬೇಕು ಎಂದು ರುಕ್ಕೂಗೆ ಥಟ್ಟನೆ ಹೊಳೆಯಿತು. ಅಜ್ಜಿಯ ಹಿಂದೆ ಓಡಿಬಂದು ಫೋನ್ ಬೂತಿನಲ್ಲಿ ತಾನೂ ನಿಂತುಕೊಂಡಳು. ಮೊದಲು ಅಜ್ಜಿ ರುಕ್ಕೂವಿನ ಅಮ್ಮನೊಡನೆ ಮಾತನಾಡಿದರು. ತಾವು ಕಳಿಸಿದ್ದ ಹುಣಿಸೆಹಣ್ಣು, ಮಾವಿನಹಣ್ಣುಗಳ ಯೋಗಕ್ಷೇಮ ವಿಚಾರ ಆದಮೇಲೆ ಮಾತು ಹಪ್ಪಳ - ಸಂಡಿಗೆಗಳ ಕಡೆಗೆ ತಿರುಗಿತು. ಅಜ್ಜಿ ಕಳಿಸಿದ್ದ ಕುರುಕಲಿಗೆ ರುಕ್ಕೂ ಅಮ್ಮನ ನೆಂಟರ ಮನೆಯಿಂದ ಡಿಮ್ಯಾಂಡು ಬಂದಿದೆಯೆಂದು ಅವರಿಬ್ಬರ ಮಾತುಗಳಿಂದ ತಿಳಿಯಿತು. "ಆಗಲಿ ಬಿಡು, ಶುಕ್ರವಾರ ಕಳೀಲಿ, ಸೋಮವಾರಕ್ಕೆ ಕಳಿಸ್ತೀನಿ. ಅಷ್ಟೊತ್ತಿಗೆ ಸ್ವಲ್ಪ ರಾಗೀನು ಆಗಿರುತ್ತೆ" ಎಂದಾಗ, ಇದು ನನ್ನ ಬಗ್ಗೆಯೇ ಇರಬೇಕೆಂದು ರುಕ್ಕೂಗೆ ಸಣ್ಣಗೆ ಅನುಮಾನ ಶುರುವಾಯಿತು. ಅಷ್ಟರಲ್ಲಿ ಫೋನಿನಲ್ಲಿ ಮಾತನಾಡಬೇಕೆಂದೆನಿಸಿ, "ಅಜ್ಜೀ, ನಾನು" ಎಂದಳು. ಆಸೆಯಿಂದ ಫೋನ್ ತಗೊಂಡಿದೆಷ್ಟೋ ಅಷ್ಟೆ, ಏನೂ ಮಾತನಾಡಬೇಕೆಂದು ತೋಚಲಿಲ್ಲ. "ಹಲೋಓಓಓಓ, ಹ್ಞೂಊಊಊ" ಎಂದಳು. ಅಲ್ಲಿಂದ ಮುಂದಕ್ಕೆ ಬರೀ ಹ್ಞೂ, ಹ್ಞೂ, ಹ್ಞೂ ಎನ್ನುವುದೇ ಅವಳ ಕೆಲಸವಾಯಿತು. ಅಷ್ಟು ಹ್ಞೂಗುಟ್ಟಿದ್ದಕ್ಕೆ ಅವಳಿಗೆ ಗೊತ್ತಾದದ್ದಿಷ್ಟು. "೬ನೇ ಕ್ಲಾಸಿನ ರಿಸಲ್ಟ್ ಬಂದಿದೆ. ಏಳನೇ ಕ್ಲಾಸಿಗೆ ಸೇರಿಕೊಳ್ಳಬೇಕಾಗಿದೆ. ಬ್ಯಾಗು, ಬುಕ್ಕು, ಯೂನಿಫಾರಂಗಳನ್ನೆಲ್ಲಾ ಕೊಂಡುಕೊಳ್ಳಬೇಕಾಗಿದೆ. ಸೋಮವಾರ ತಾತನೊಡನೆ ಬೆಂಗಳೂರಿಗೆ ಬರಬೇಕಾಗಿದೆ". ರುಕ್ಕೂ ಫೋನಿಟ್ಟಳು. ಇಬ್ಬರೂ ಮನೆಗೆ ನಡೆದರು.

ಕಾಫೀ ಸಮಾರಾಧನೆಯೆಲ್ಲಾ ಮುಗಿದು ಮನೆಯವರೆಲ್ಲಾ ಟೀವಿ ಮುಂದೆ ಕೂತಿದ್ದರು. ಗೌಡರು ಮನೆಗೆ ಹೊರಟುಹೋಗಿದ್ದರು. ಅತ್ತೆ ಹೊಸದಾಗಿ ತಂದಿದ್ದ ಮಿಕ್ಸಿಯಲ್ಲಿ ಹಿಟ್ಟು ರುಬ್ಬುತ್ತಿದ್ದರು. ಅಜ್ಜಿ ರಾತ್ರಿ ಊಟಕ್ಕೆ ಹೊಂಚಲು ಅಡುಗೆ ಮನೆಗೆ ಹೋದರು. ರುಕ್ಕೂ ಅತ್ತೆ ಬಳಿಗೆ ಹೋಗಿ, "ಹೊಸಾದ ಅತ್ತೆ ಮಿಕ್ಸಿ?" ಎಂದಳು. "ಹ್ಞೂ, ನೋಡು ಇನ್ನು ಮೇಲೆ ನಾವೂ ನಿಮ್ಮಂಗೇನೆ!" ಎಂದಳು ಅತ್ತೆ. ರುಕ್ಕೂ ಕಕ್ಕಾಬಿಕ್ಕಿಯಾಗಿ ಅಡುಗೆ ಮನೆಗೆ ನುಸುಳಿಕೊಂಡಳು.

* * *

ಕಿಟಕಿಯಿಂದಾಚೆ ನೋಡುತ್ತಾ ಬಸ್ಸಿನಲ್ಲಿ ಹೋಗುತ್ತಿದ್ದ ರುಕ್ಕೂಗೆ ಒಮ್ಮೆಗೇ ನಗು ಉಕ್ಕಿ ಬಂದು, ಕಿಸಕ್ಕನೆ ನಕ್ಕಳು. ಈಗವಳು ನೆನಪಿಸಿಕೊಂಡದ್ದು ತನ್ನ ’ಎಮ್ಮೆ ಸಾಕುವ’ ಯೋಜನೆಯನ್ನು. ಅದರ ಹಿಂದೆಯೇ ಅಂಬುಜಮ್ಮನ ಮಾತು ನೆನೆಪಾಗಿ ಏನೋ ಒಂದು ಬೇಸರ ಮನಸ್ಸಿಗೆ ಬಂತು. ಬಸ್ಸು ಮುಂದಮುಂದಕ್ಕೆ ಕಮ್ಮನಳ್ಳಿಯ ಕಡೆ ಚಲಿಸುತ್ತಿತ್ತು.

5 ಕಾಮೆಂಟ್‌ಗಳು:

  1. ಕಥೆಯಲ್ಲಿ ಏನೋ ತಿರುವು ಬರುತ್ತಿರೋ ಸುಳಿವು ಸಿಕ್ತಾ ಇದೆ:) ನಿಜಾನ?

    ಸ್ವಲ್ಪ ತು೦ಬಾ ಬರೀರಿ ಮೇಡಮ್....

    ಮು೦ದಿನ ಕ೦ತಿಗೆ ಕಾಯ್ತ ಇದೀನಿ....

    ಪ್ರತ್ಯುತ್ತರಅಳಿಸಿ
  2. ಈ ಬರಹ ಓದಿದ ಮೇಲೆ ರುಕ್ಮಿಣಿಯ ಅಜ್ಜಿಮನೆ ಕಥೆಯನ್ನು ಮುಗಿಸಿಬಿಟ್ಟೆಯಾ? ಎಂಬ ಅನುಮಾನ ಮೂಡುತ್ತಿದೆ.ಈ ಬಾರಿಯ ಬರಹವೂ ಚೆನ್ನಾಗಿದೆ. ಆದರೆ ಸಮಯದ ಅಂತರದಿಂದ ಹಿಂದಿನ ಭಾಗಗಳು ವಿವರವಾಗಿ ನೆನಪಿರದೆ ಕೊಂಡಿ ಕಳಚಿದಂತೆನಿಸುತ್ತಿದೆ.

    ಪ್ರತ್ಯುತ್ತರಅಳಿಸಿ
  3. ಕತೆ ಸರಳವಾಗಿ ಓದಿಸಿಕೊಂಡು ಹೋಗುತ್ತಿದೆ..ಇನ್ನಷ್ಟು ಇದ್ದಿದ್ದರೇ...ಕತೆಗೆ ಲಿಂಕ್ ಸಿಗುತ್ತಿತ್ತೇನೋ...ಮುಂದಿನ ಕಂತು ಯಾವಾಗ...

    ಪ್ರತ್ಯುತ್ತರಅಳಿಸಿ
  4. ಎಲ್ಲರಿಗೂ ತುಂಬಾ ಥಾಂಕ್ಸ್, ನನ್ನ ಕಥೆಯನ್ನ ಬಿಡದೆ ಓದುತ್ತಿರುವುದಕ್ಕೆ.

    ಈ ಸಾರಿ ಸ್ವಲ್ಪ ಬೇಗಾನೂ, ಸ್ವಲ್ಪ ಜಾಸ್ತೀನೂ ಪೋಸ್ಟ್ ಮಾಡಲು ಪ್ರಯತ್ನಿಸುತ್ತೇನೆ.... :)

    ಪ್ರತ್ಯುತ್ತರಅಳಿಸಿ