ಗುರುವಾರ, ಫೆಬ್ರವರಿ 12, 2009

ಸಾಗರ

ಪ್ರಪಂಚ ಇನ್ನು ಮುಂದಕ್ಕೆ ಹೋಗುವುದೇ ಇಲ್ಲವೇನೋ ಎನ್ನುವ ಹಾಗೆ, ದಿವಾನದ ಮೇಲೆ ಯೋಚಿಸುತ್ತಾ ಕುಳಿತಿದ್ದಳು ಸುಧಾ. ಅವಳ ಮಗನ ಭವಿಷ್ಯದ ಚಿಂತೆ ತಲೆಯ ತುಂಬಾ ತುಂಬಿಕೊಂಡುಬಿಟ್ಟಿತ್ತು. ಇವತ್ತು ಬೆಳಿಗ್ಗೆ ತಾನೆ ಮಗ ಸಾಗರನ ಶಾಲೆಯಲ್ಲಿ ಮಾರ್ಕ್ಸ್ ಕಾರ್ಡ್ ಕೊಟ್ಟು ಕಳಿಸಿದ್ದರು. ಗಣಿತ ವಿಜ್ಞಾನದಲ್ಲಿ ಫೇಲು. ಹತ್ತನೇ ತರಗತಿ ಪರೀಕ್ಷೆ ಹತ್ತಿರ ಹತ್ತಿರ ಬರುತ್ತಿದ್ದಂತೆ ಫೇಲಾಗುವುದು ಜಾಸ್ತಿ ಆಗ್ತಿದೆ! ಮಿಡ್ ಟರ್ಮ್ ತಾನೆ ಎಂದು ಸಮಾಧಾನ ಮಾಡಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳ ತಲೆಯಲ್ಲಿ ಹೊರಡುತ್ತಿದ್ದ ನೂರೆಂಟು ಯೋಚನೆಗಳ ನಡುವೆ ದಾರಿ ಮಾಡಿಕೊಂಡೋ ಅನ್ನುವ ಹಾಗೆ, ಕಣ್ಣ ಅಂಚಿನಿಂದ ಸಣ್ಣಗೆ ನೀರು ಸುರಿಯುತ್ತಿತ್ತು. ಆ ಕಣ್ಣ ಹನಿಯನ್ನು ತಡೆಯುತ್ತೇನೆ ಎನ್ನುವ ಹಾಗೆ ಇವಳು, ನಿಧಾನವಾಗಿ ರೆಪ್ಪೆಯನ್ನು ಮುಚ್ಚಿದಳು.

* * *

ಮೊನ್ನೆ ತಾನೆ ಪೇಪರಿನಲ್ಲಿ ನ್ಯೂಸ್ ಬಂದಿದೆ. ಕೆಲವೊಬ್ಬ ಮಕ್ಕಳಿಗೆ ಹುಟ್ಟಿನಿಂದಲೇ ಓದು ಬರಹ ತಲೆಗೆ ಹತ್ತುವುದಿಲ್ಲವಂತೆ. ಅವರು ಬೇರೆ ಮಕ್ಕಳ ಹಾಗೆ ಇರುವುದು ಸಾಧ್ಯವಿಲ್ಲವಂತೆ, ಕೆಲವರಿಗೆ ಅಕ್ಷರಗಳು ಸರಿಯಾಗಿ ಕಾಣಿಸದಿದ್ದರೆ, ಮತ್ತೆ ಕೆಲವರಿಗೆ ಚಿತ್ರಗಳನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಇವರ ಮೆದುಳಿನಲ್ಲಿ ತೊಂದರೆಯಿರುತ್ತದೆಯಂತೆ. ಡಿಸ್ಲೆಕ್ಸಿಯಾ, ಡಿಸ್ಗ್ರಾಫಿಯಾ ಹೀಗೆ ಏನೇನೋ...

ಆಫೀಸಿನಲ್ಲಿ ಕುಳಿತು ಯೋಚಿಸುತ್ತಿರುವಾಗ, ಪಕ್ಕದ ಸ್ಕ್ವಾಯರ್ನಲ್ಲಿ ಕೂತ ಪಂಕಜ ಸಲಹೆಕೊಡುತ್ತಾಳೆ "ಇದಕ್ಕೆಲ್ಲ, ಈಗ ಯೋಚಿಸುವ ಅಗತ್ಯವಿಲ್ಲ. ಸೈಕಾಲಜಿಸ್ಟರು ಪರಿಹಾರ ಕೊಡ್ತಾರೆ. ಮಗುವನ್ನು ಕರೆದುಕೊಂಡು ಅವರ ಹತ್ರ ಹೋದರೆ ಡಯ್ಗ್ನೋಸ್ ಮಾಡಿ ಟ್ರೀಟ್ಮೆಂಟ್ ಮಾಡ್ತಾರೆ" ಅವಳು ಅಷ್ಟೇ ಹೇಳಿದ್ದರೆ ಸುಧಾಗೆ ಸ್ವಲ್ಪ ಸಮಾಧಾನವಾಗುತ್ತಿತ್ತೋ ಏನೋ? ಅವಳು ಮುಂದುವರಿದು, "ನೀನು ಹೀಗೆ ಯೋಚಿಸುವುದರ ಬದಲು ಮಗುವನ್ನು ಆದಷ್ಟು ಬೇಗ ಡಾಕ್ಟರರ ಬಳಿಗೆ ಕರೆದುಕೊಂಡು ಹೋಗುವುದು ಒಳ್ಳೇದು" ಎನ್ನುತ್ತಾಳೆ. ಈ ಮಾತುಗಳಂತೂ ಅವಳ ಮನಸ್ಸಿನ ದುಗುಡವನ್ನು ಮತ್ತೂ ಹೆಚ್ಚಿಸುತ್ತದೆ.

ಸಾಗರನನ್ನು ಡಾಕ್ಟರ್ ಶಾಪಿಗೆ ಹೋಗುವ ಬಾ ಎಂದಾಗ ಅಮ್ಮನಿಗೆ ಹುಷಾರಿಲ್ಲವೇನೋ ಎಂದೇ ತಿಳಿಯುತ್ತಾನೆ. ಡಾಕ್ಟರು ಇವನನ್ನೇ ಪ್ರಶ್ನೆ ಕೇಳಲು ಶುರುಮಾಡುತ್ತಾರೆ. ಇಂಗ್ಲೀಷ್ ಅಕ್ಷರಗಳನ್ನು ಓದಲು ಹೇಳುತ್ತಾರೆ. ಚಿತ್ರಗಳನ್ನು ಬರೆದು ಹಾಗೆಯೇ ಬರೆಯಲು ಹೇಳುತ್ತಾರೆ. ಮತ್ತೆ, ಒಬ್ಬನನ್ನೇ ಬೇರೊಂದು ರೂಮಿಗೆ ಕರೆದುಕೊಂಡು ಹೋಗಿ ಮಾತನಾಡುತ್ತಾರೆ. ತನ್ನ ಮಾರ್ಕ್ಸ್ ಕಾರ್ಡಿಗಾಗಿಯೇ ಇವೆಲ್ಲಾ ತಾಲೀಮು ಎಂದು ತಿಳಿದುಕೊಳ್ಳಲು ಅವನಿಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಅಮ್ಮ ಈ ರೀತಿ ಮಾಡಿದ್ದು ಅವನಿಗೆ ಕೋಪ ಬರಿಸುತ್ತದೆ, ಸ್ವಲ್ಪ ಬೇಸರವೂ ಆಗುತ್ತದೆ. ಆದರೆ, ಅದನ್ನು ಅಮ್ಮನ ಮುಂದೆ ತೋರಿಸಿಕೊಳ್ಳಲಿಲ್ಲ. ತನ್ನ ಮನಸನ್ನು ಬಚ್ಚಿಟ್ಟುಕೊಳ್ಳುವಷ್ಟು ದೊಡ್ಡವನಾಗಿ ಬೆಳೆದುಬಿಟ್ಟಿದ್ದಾನೆ?

ಮನೆಗೆ ಬಂದವನೇ ತನ್ನಷ್ಟಕ್ಕೆ ತಾನು ರೂಮಿನಲ್ಲಿ ಕೂರುತ್ತಾನೆ. ಅವನಾಯಿತು ಅವನ ಪುಸ್ತಕಗಳಾಯಿತು. ಸಂಜೆ ಅಪ್ಪ ರಾಜೀವ ಎಂದಿನಂತೆ ಮನೆಗೆ ಬರುತ್ತಾನೆ. ಮನೆಯಲ್ಲಿ ಏನೋ ಒಂದು ಬಿಗಿಯಾದ ವಾತಾವರಣವಿದೆ. ಸಾಗರ ತನ್ನಷ್ಟಕ್ಕೆ ತಾನು ಕೂತಿದ್ದಾನೆ. ಸಾಗರನ ಈ ರೀತಿ ನೋಡಿ, ಸುಧಾಗೆ ತಾನು ಮಾಡಿದ್ದು ಸರಿಯೋ ತಪ್ಪೋ ಎಂಬ ಆಲೋಚನೆಯೂ ಬಂದು ಹೋಗುತ್ತದೆ. ರಾಜೀವನಿಗೋ ಏನೂ ಅರ್ಥವಾಗದ ಸ್ಥಿತಿ. ವಿಷಯ ತಿಳಿದ ಮೇಲೆ ಮಗನನ್ನು ಪ್ರೀತಿಯಿಂದ ಮಾತನಾಡಿಸಿ ಅವನ ಕೋಪವನ್ನು ಕಡಿಮೆ ಮಾಡಿದರಾಯಿತು ಎಂದು ಯೋಚಿಸುತ್ತಾನೆ. "ಏನ್ಮಾಡ್ತಿದ್ದೀ ಸಾಗರ?", ಅವರು ಅವನನ್ನು ಆ ರೀತಿ ಎಂದೂ ಮಾತನಾಡಿಸಿದ್ದೇ ಇಲ್ಲವೇನೋ? ಸಾಗರನ ಉತ್ತರ ಇನ್ನೂ ಬೆಚ್ಚಿಬೀಳಿಸುವ ಹಾಗಿರುತ್ತದೆ - "ಏನಿಲ್ಲಪ್ಪ, ನನ್ನ ಕೆಲಸ ನಾನು ಮಾಡ್ತಿದ್ದೀನಿ, ನಿಮ್ಮ ಕೆಲಸ ಹೇಗೆ ನಡೀತಿದೆಯಪ್ಪಾ?". ಮಗ ಇಷ್ಟು ದೊಡ್ಡವನು ಯಾವಾಗ ಆದ ಎಂದು ರಾಜೀವನಿಗೆ ತಿಳಿಯದೆ ಹೋಗುತ್ತದೆ. ಮಾತು ಮುಂದುವರಿಸಲಾಗದೆ, ಅಲ್ಲಿಂದ ಎದ್ದು ಹೊರಡುತ್ತಾನೆ.

ಸುಧಾಳ ದ್ವಂದ್ವ ಕೇಳಿ ರಾಜೀವನಿಗೆ ಒಂದು ರೀತಿ ನಗೆಯೇ ಬಂದುಬಿಡುತ್ತದೆ. "ಅವನು ಎಷ್ಟು ದೊಡ್ಡವನಾಗಿದ್ದಾನೆ ಎಂದು ನಿನಗೆ ಗೊತ್ತಿಲ್ಲ. ಹೀಗೇ ಅವನನ್ನು ಆಗ್ಗಾಗ್ಗೆ ಡಾಕ್ಟರ ಬಳಿ ಕರೆದುಕೊಂಡು ಹೋಗುತ್ತಿರು".

ಸಾಗರನ ಜೀವನ ದಿನೇ ದಿನೇ ಬದಲಾಗುತ್ತದೆ. ಅವನು ಹೆಚ್ಚು ಹೆಚ್ಚು ಗಂಭೀರವಾಗುತ್ತಾನೆ. ಚಿಕ್ಕ ಮಕ್ಕಳ ಹಾಗೆ ಆಟವಾಡುವುದೂ ಈಗ ಅವನಿಗೆ ರುಚಿಸುವುದಿಲ್ಲ. ಅಪ್ಪ ಅಮ್ಮನ ಬಳಿ ಒಂದು ರೀತಿಯ ಗೌರವದಿಂದ ಮಾತನಾಡುತ್ತಾನೆ. ಆದರೆ, ಇದು ಮನೆಯ ಹಿರಿಯರೊಡನೆ ಮಾತನಾಡುವ ರೀತಿಯಲ್ಲ, ಗೊತ್ತಿಲ್ಲದ ಅತಿಥಿಗಳು ಏನು ತಿಳಿದುಕೊಳ್ಳುತ್ತಾರೋ ಎನ್ನುವ ಭಯದಿಂದ ಕೂಡಿರುವ ಮಾತಿನ ಹಾಗೆ. ಅಷ್ಟೇ ಅಲ್ಲ, ಅವನ ಮಾರ್ಕ್ಸ್ ಕಾರ್ಡ್ ಕೂಡ ಹೆತ್ತವರಿಗೆ ಖುಷಿ ಕೊಡುವಷ್ಟು ಸುಧಾರಿಸಿಬಿಡುತ್ತದೆ. ರಾಜೀವನಿಗೆ ದಿನೇ ದಿನೇ ಸಂತೋಷವೇ ಆಗುತ್ತದೆ. ಮಗನ ಓದು, ಸೆಲ್ಫ್ ಡಿಸಿಪ್ಲೀನ್, ಎಕ್ಸ್ ಪೆಕ್ಟೇಷನ್ ರೀಚ್ ಮಾಡುವ ರೀತಿ ಎಲ್ಲಾ ಅವನಿಗೆ ಸಮಾಧಾನ ತರುತ್ತದೆ. ಅವನ ಭವಿಷ್ಯದ ಚಿಂತೆ ಈಗ ದೂರವಾಗಿದೆ. ಸುಧಾಳಿಗೆ ಒಬ್ಬಳೇ ಇದ್ದಾಗ ಗೊಂದಲವಾದರೆ, ರಾಜೀವ ಮನೆಗೆ ಬರುತ್ತಲೆ ಸಮಸ್ಯೆ ನಿವಾರಣೆಯಾದಂತೆ ಕಾಣುತ್ತದೆ.

ಈ ದಿನ ಸ್ಕೂಲಿನಲ್ಲಿ ಹೋಮ್ ವರ್ಕ್ ಏನೂ ಕೊಟ್ಟಿಲ್ಲ. ಸಾಗರನ ಸ್ನೇಹಿತರು ಅವನನ್ನು ಕರೆಯಲು ಬರುತ್ತಾರೆ. ಅವನು ನಯವಾಗಿ ಏನೋ ಕಾರಣ ಹೇಳುತ್ತಾನೆ. ಸುಧಾ ಮಧ್ಯೆ ಬಾಯಿ ಹಾಕುತ್ತಾಳೆ. ಅಮ್ಮನ ಬಲವಂತಕ್ಕೆ ಸಾಗರ ಆಚೆಗೆ ಹೊರಡುತ್ತಾನೆ. ಅವನು ಏನು ಮಾಡುತ್ತಾನೆಯೋ ಎಂಬ ಕೆಟ್ಟ ಕುತೂಹಲವೊಂದು ಸುಧಾಳನ್ನು ಕಾಡಲು ಶುರುಮಾಡುತ್ತದೆ. ಅವನ ಹಿಂದೆಯೇ ಹೊರಟು ಸ್ವಲ್ಪ ದೂರದಲ್ಲಿ ನಿಲ್ಲುತ್ತಾಳೆ. ಸಾಗರನೂ ತನ್ನ ಸ್ನೇಹಿತರನ್ನು ನಿಲ್ಲಿಸುತ್ತಾನೆ.

"ಏ ನನ್ನ ಬಿಟ್ಟುಬಿಡಿ. ನೀವು ಬೇಕಾದ್ರೆ ಹೋಗಿ ಆಟ ಆಡಿಕೊಳ್ಳಿ".

"ಏ ನೀನು ಆಟ ಆಡಲು ಬಂದು ಎಷ್ಟೊಂದು ದಿನ ಆಯ್ತು. ಯಾಕೋ ನೀನು ಬರೋದಿಲ್ಲ?"

"ಏ ಈ ಆಟ ಆಡೋದೆಲ್ಲ ಸುಮ್ನೆ ವೇಷ್ಟು. ಇದೆಲ್ಲಾ ಅಪ್ಪ ಅಮ್ಮನಿಗೆ ಇಷ್ಟ ಇಲ್ಲ. ನಾವು ಜಾಸ್ತಿ ಮಾರ್ಕ್ಸು ತಗೊಳ್ಳದೆ ಇದ್ದರೆ, ಅವರು ನಮ್ಮನ್ನು ಆಸ್ಪತ್ರೆಗೆ ಕರಕೊಂಡು ಹೋಗ್ತಾರೆ. ಆ ಡಾಕ್ಟರು ಏನೇನೋ ಹೇಳ್ತಾರೆ ಗೊತ್ತಾ? ನನಗೆ ಭಯ ಆಗುತ್ತೆ. ಸಾಕು ಇನ್ನು ನನ್ನ ಬಿಟ್ಟಿಬಿಡಿ".

ಸಾಗರ ಮಾತುಮುಗಿಸುವ ಮುಂಚೆಯೇ ಸುಧಾ ಅಳು ತಡೆಯಲಾರದೆ, ಮನೆಗೆ ಓಡಿ ಬಂದು ಕುಸಿಯುತ್ತಾಳೆ.

ಸಾಗರ ಹಿಂದೆ ಬಂದವನು, ತನ್ನ ಪಾಡಿಗೆ ತಾನು ರೂಮಿನೊಳಕ್ಕೆ ಹೋಗುತ್ತಾನೆ. ಸುಧಾಳ ಎದೆ ಎಂದೂ ಇಲ್ಲದಂತೆ ಹೊಡೆದುಕೊಳ್ಳುತ್ತದೆ. ಈಗಲೇ ಈ ಕ್ಷಣವೇ ತನ್ನ ಪ್ರಾಣ ಹೊರಟು ಹೋಗಬಾರದೆ ಎನ್ನಿಸುತ್ತದೆ. ಅರೆ! ಹೊರಗೆ ಬಾಗಿಲು ಶಬ್ಧವಾಗುತ್ತದೆ. ತೆಗೆದೇ ಇದ್ದ ಬಾಗಿಲನ್ನು ಯಾರು ತಟ್ಟುವುದು? ಸುಧಾ ಒಮ್ಮೆಗೇ ತನ್ನ ಮನಸ್ಸನ್ನು ಸ್ಥಿಮಿತಕ್ಕೆ ತೆಗೆದುಕೊಂಡು ಹೊರಕ್ಕೆ ನಡೆಯುತ್ತಾಳೆ.

ರಾಜಾರಾಂ ಬಾಗಿಲ ಬಳಿಯಲ್ಲಿ ನಗುತ್ತಾ ನಿಂತಿದ್ದಾನೆ. ಅವನು ರಾಗಿಣಿಯ ಕಡೆಯ ತಮ್ಮ, ಸುಮಾರು ಎಂಟು ವರ್ಷ ವ್ಯತ್ಯಾಸ ಇಬ್ಬರಿಗೂ.
"ಏನೋ ಹೇಳದೇ ಕೇಳದೇ ಬಂದುಬಿಟ್ಟೆ?"

"ಮತ್ತೆ ನಿನ್ನ ಪರ್ಮಿಷನ್ ಯಾರು ಕೇಳುತ್ತಾರೆ?"

"ಬಾ ಒಳಗೆ"

"ಮತ್ತೆ?"

ರಾಜಾರಾಂ ಸ್ವಲ್ಪ ಬಿರುಸಿನಿಂದಲೇ ಒಳಕ್ಕೆ ನಡೆದ. ತುಂಬಾ ಖುಷಿಯಲ್ಲಿ ಇದ್ದ ಹಾಗೆ ಕಾಣುತ್ತಾನೆ ರಾಜಾರಾಂ.
"ಏನು ಸಮಾಚಾರ?"

"ಏನಿಲ್ಲ ಇಂಟರ್ವ್ಯೂ ಇತ್ತು"

"ನಿನ್ನನ್ಯಾರೋ ಸೆಲೆಕ್ಟ್ ಮಾಡ್ದೋರು"

"ಮತ್ತೆ, ತಗೋ ಸ್ವೀಟು"

"ಕಂಗ್ರಾಟ್ಸ್"

"ಸಾಗರ ಇದ್ದಾನ?"

"ಇದ್ದಾನೆ"

ಸುಧಾ ಸಾಗರನನ್ನು ತನ್ನ ಮಾವನನ್ನು ಮಾತನಾಡಿಸಲು ಕರೆಯುತ್ತಾಳೆ. ಸಾಗರ ಮತ್ತೆ ಅದೇ ಗಾಂಭೀರ್ಯದಿಂದ ಹೊರಗೆ ಬರುತ್ತಾನೆ. ಮಾವನ ಜೊತೆ ಮತ್ತೆ ಅದೇ ಸಲಿಗೆಯಿಲ್ಲದ, ಮರ್ಯಾದೆಯ ಮಾತು. ಮಾವನಿಗೂ ಸ್ವಲ್ಪ ಬದಲಾವಣೆ ಎನಿಸಿದರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಅದು ಅವನ ಜಾಯಮಾನದಲ್ಲೇ ಇಲ್ಲ.

"ಅಕ್ಕ ಒಂದು ಇಂಟರೆಸ್ಟಿಂಗ್ ವಿಷಯ ಹೇಳ್ತೀನಿ ಕೇಳು. ಇವತ್ತು ಅಮ್ಮ ಯಾಕೋ ತುಂಬಾ ನೆನಪಿಗೆ ಬಂದುಬಿಟ್ಟಳು."

"ಏನಾಯ್ತು?"

"ಏನಿಲ್ಲ ಆ ಇಂಟರ್ವ್ಯೂ ಮಾಡ್ತಿದ್ದವ ಒಳ್ಳೆ ತಲೆಕೆಟ್ಟ ಹುಲಿ ಹಾಗೆ ಆಡ್ತಿದ್ದ. ನನಗೆ ಏನನ್ನಿಸಿತು ಗೊತ್ತಾ? ಇವನು ಏನಾದರು ಅಂದುಕೊಳ್ಳಲಿ ನನಗೆ ಸರಿ ಅನ್ನಿಸಿದ್ದನ್ನು ನಾನು ಮಾಡುತ್ತೇನೆ."

"ಅದಕ್ಕೆ ಅಮ್ಮ ನೆನಪಾದ್ರೆ?"

"ಮತ್ತೆ, ನಾನು ಸಣ್ಣವನಾಗಿದ್ದಾಗ ಮಾಡುತ್ತಿದ್ದ ತರಲೆಗೆ, ತರುತ್ತಿದ್ದ ಮಾರ್ಕ್ಸಿಗೆ, ಅಥವಾ ತರದೇ ಇದ್ದ ಮಾರ್ಕ್ಸಿಗೆ ಎಷ್ಟು ಬೈತಿದ್ರೂ ಅಪ್ಪ. ಒಂಥರಾ ಇನ್ಫೀರಿಯಾರಿಟಿ ಅನ್ನಿಸ್ತಿತ್ತು."

"ನೀನು ಸರಿಯಾಗಿ ಯಾವತ್ತಪ್ಪ ಓದಿದ್ದೀಯಾ?"

" ಹಯ್ಯೋ, ಓದೋಕೆ ಆದ್ರೆ ತಾನೆ? ಪುಸ್ತಕ ನೋಡ್ತಾ ಇದ್ರೆ ಅಕ್ಷರಗಳೆಲ್ಲ ತಲೆಕೆಳಗಾದ ಹಾಗೆ ಕಾಣ್ತಿತ್ತು ಹ ಹ... ಆದರೆ, ಅಮ್ಮ ನನಗೆ ಕೇರ್ ಮಾಡೋದು ನೋಡಿದ್ರೆ, ಒಂಥರಾ ಸ್ವಾಭಿಮಾನ ಬರ್ತಿತ್ತು. ಅಮ್ಮ ಹಾಗೆ ಮಾಡದೇ ಹೋಗಿದ್ದಿದ್ದರೆ ನಾನು ಇವತ್ತು ಇಲ್ಲಿರ್ತಿರಲಿಲ್ಲ ಬಿಡು. ಎಲ್ಲಾದರೂ ಸ್ಯಾಡಿಸ್ಟ್ ಆಗೋಗ್ತಿದ್ದೆ. ಹ ಹ ಹ . . . " ತನ್ನ ಮನಸ್ಸಿನ ಭಾವವನ್ನು ತಾನೇ ಮರೆಮಾಡಿಕೊಳ್ಳಲೇನೋ ಎಂಬಂತೆ ಬರುತ್ತದೆ ಆ ನಗು.

"... ಕಡೆಯಲ್ಲಿ ಅವನು ಏನು ಹೇಳಿದ ಗೊತ್ತಾ?"

"ಏನು ಹೇಳಿದ?"

"ಯೂ ಆರ್ ಕ್ವಯ್ಟ್ ಕಾನ್ಫಿಂಡೆಟ್ ಅಂಡ್ ಕಲೆಕ್ಟಿವ್ ಅಂಡ್ ಯೂ ಟೇಕ್ ಇಂಡಿಪೆಂಡೆಂಟ್ ಡಿಸಿಷನ್ಸ್. ನಾನು ಹ ಹ ಹ"

* * *

ಯಾವುದೋ ಪಾತಾಳದಿಂದ ದಢಕ್ಕನೆ ಎದ್ದು ಆಚೆಗೆ ಬಂದಂತೆ ಭಾಸವಾಯಿತು ಸುಧಾಳಿಗೆ. ಕಣ್ಣು ಬಿಡುತ್ತಿದ್ದಂತೆಯೇ, ತನಗೇ ಅರಿಯದಂತೆ ಮುಖದ ಮೇಲೊಂದು ಸಣ್ಣನೆ ನಗೆ ಮೂಡಿತು. ಮನಸ್ಸು ಹಗುರವಾಯಿತು. ದಿವಾನದಿಂದ ಎದ್ದು ಹೊರಗೆ ನಡೆದಳು. ಆಟವಾಡುತ್ತಿದ್ದ ಸಾಗರನನ್ನು ಕರೆದು, ಒಳಗೆ ಹಾಲು ಬಿಸಿ ಮಾಡಲು ಹೊರಟಳು. ಅವನು ದೊಡ್ಡವನಾದ ಮೇಲೆ ಏನಾಗುತ್ತಾನೋ ಅವನನ್ನೇ ಕೇಳಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕಿದಳು.