ಶನಿವಾರ, ಡಿಸೆಂಬರ್ 19, 2009

ಇದನ್ನು ಸಣ್ಣ ಕಥೆ ಎನ್ನಬಹುದೋ, ’ಒಂದು ಪ್ರಸಂಗ’ ಎನ್ನಬಹುದೋ ನನಗೆ ತಿಳಿಯುತ್ತಿಲ್ಲ. ನಾನು ಮನಸ್ಸಿನಲ್ಲಿ ಅಂದುಕೊಂಡಂತೆ ಪೇಪರಿನ ಮೇಲೆ ಬರಲಿಲ್ಲವಾದ್ದರಿಂದ ಇದಕ್ಕೊಂದು ಟೈಟಲ್‌ ಕೊಡುವ ಗೋಜಿಗೂ ಹೋಗಲಿಲ್ಲ. ಏನೇ ಬರೆದರೂ, ಹಾಳು-ಮೂಳಾದರೂ ಬ್ಲಾಗಿನಲ್ಲಿ ಹಾಕಲೇಬೇಕಂದುಕೊಂಡಿದ್ದೇನೆ, ಏನಾದರೂ ಪ್ರತಿಕ್ರಿಯೆ ಸಿಗುತ್ತದೆಂಬ ಕಾರಣಕ್ಕೆ. ಹಾಗಾಗಿ ಇದನ್ನೂ ಹಾಕುತ್ತಿದ್ದೇನೆ .

-------

"ಹೌ ಟು ಇಂಪ್ರೆಸ್‌ ಯುವರ್ ಬಾಸ್?" (ನಿಮ್ಮ ಬಾಸ್‌ ಮನವೊಲಿಸುವುದು ಹೇಗೆ?) ಪುಸ್ತಕವನ್ನು ಓದುತ್ತಿದ್ದ ಭಾವನಾಗೆ ಇದ್ದಕ್ಕಿದ್ದ ಹಾಗೆ ಅತ್ತೆ ತನ್ನನ್ನು ಕರೆಯುತ್ತಿರುವುದು ಕೇಳಿಸಿ ಸಿಡಿಮಿಡಿಯಾಯಿತು. ಎದ್ದು ಹೋಗಿ ಅವರ ಮುಂದೆ ನಿಂತುಕೊಂಡಳು, ಮಾತಾಡದೆ. ಅವರ ಠೀವಿಯೇನು ಕಡಿಮೆಯೇ? ಅವಳು ಬಂದುದನ್ನು ಗಮನಿಸಿದರೂ, ಅವಳ ಕಡೆ ತಿರುಗದಂತೆ, ಅಲ್ಲಿದ್ದ ತುರೆಮಣೆಯನ್ನೂ, ಕೆಳಕ್ಕೊಂದು ತಟ್ಟೆಯನ್ನೂ ಅವಳ ಕಡೆಗೆ ಸರಿಸಿ "ಈ ಒಪ್ಪು ತುರಿದಿಡು" ಎಂದರು.
"ನನಗೆ ಈ ರೀತಿ ಕೊಬ್ಬರಿ ತುರಿಯೋಕೆ ಬರೋಲ್ಲ ಅತ್ತೆ!"
"ಇದನ್ನ ಮೂರು ತಿಂಗಳಿಂದ ಹೇಳ್ತಿದ್ದೀಯಲ್ಲಾ?" ಅತ್ತೆಯ ಸ್ವರ ಸ್ವಲ್ಪ ಜೋರಾಯಿತು. ಭಾವನಾ ಜಗ್ಗದೇ ನಿಂತಿದ್ದಳು. ಅತ್ತೆ ಅವಳ ಕಡೆ ನೋಡದೆ ಮಾತನಾಡುತ್ತಿದ್ದದ್ದು ಅವಳಿಗೆ ಅಡ್ವಾಂಟೇಜೇ ಆಗಿತ್ತು. "ಸರಿ, ಅದೇನು ಮಾಡ್ಕೋತಿದ್ಯೋ ಮಾಡ್ಕೋ ಹೋಗು" ಅಂದರು ಅತ್ತೆ. ಇವಳು ಅಷ್ಟೇ ಸಾಕೆಂದು, ಮತ್ತೆ ರೂಮಿಗೆ ಬಂದು ತನ್ನ ಪುಸ್ತಕದಲ್ಲಿ ಮುಳುಗಿದಳು. "ಕೊಬ್ಬರಿ ತುರಿಯೋಕೆ ಬರದಿದ್ಮೇಲೆ, ಈ ಮನೇಗೆ ಕಾಯಿ ಯಾಕೆ ತರ್ತೀರಿ? ಒಣಕಲು ಬ್ರೆಡ್ಡು, ಸುಡುಗಾಡು ಸಾಸನ್ನೇ ಮೂರು ಹೊತ್ತೂ ಮುಕ್ರಿ" ಎಂದು ಅತ್ತೆ ಇನ್ನೊಂದಿಷ್ಟು ಬಡಬಡಿಸಿದರು. ನಿಧನಿಧಾನವಾಗಿ ಅವರ ಬೈಗುಳ ಮನಸ್ಸಿನಲ್ಲೇ ನಡೆಯತೊಡಗಿತು.

ಅದಾಗಲೇ, ಮೇಲೆ ಹೋಗಿ ತನ್ನ ರೂಮಿನಲ್ಲಿ ಕೂತ ಭಾವನಾಗೇ ಇದ್ಯಾವುದೂ ಕೇಳಿಸಲಿಲ್ಲ. ಅವಳ ಮನಸಿನಲ್ಲಿ ತರಾವರಿ ಬೈಗುಳಗಳು ಮೇಲೇಳುತ್ತಿದ್ದವು. "ಇವರಿಗೆ ನಾನು ಆರಾಮಾಗಿದ್ದರೆ ಸಂಕಟ", "ವಾರಾಪೂರ್ತಿ ದುಡಿತೇನೆಂಬುದು ಮನಸ್ಸಿಗೆ ನಾಟುವುದೇ ಇಲ್ಲ"... ಸುಮಾರು ಹೊತ್ತು ಬುಸುಬುಸು ಎನ್ನುತ್ತಿದ್ದ ಮನಸ್ಸು ಕ್ರಮೇಣ ನಿರಾಳವಾಯಿತು. ಪುಸ್ತಕದಲ್ಲಿ ನಾಲ್ಕನೇ ಅಧ್ಯಾಯ ಮುಗಿಯಿತಾದ್ದರಿಂದ, ಐದನೇ ಅಧ್ಯಾಯವನ್ನು ಶುರುಮಾಡಿ ಅರ್ಧ ಮಾಡುವುದು ಬೇಡವೆಂದು ಅಷ್ಟಕ್ಕೇ ಮುಚ್ಚಿಟ್ಟು ಸ್ನಾನಕ್ಕೆ ನಡೆದಳು.

***

ಗೌರಿ, ನೆನ್ನೆ ತಾನೆ ನಾನು ಕಾಯಿ ತಂದಿದ್ದು? ಗೌರಿ... ಗೌರಿ... ಅಡುಗೆಮನೆಯಿಂದ ಯಾವ ಉತ್ತರವೂ ಬರದಿದ್ದರಿಂದ ಕೃಷ್ಣಪ್ಪನವರು ಕೊಂಚ ಹೊತ್ತು ಸುಮ್ಮನಿದ್ದರು. ’ಬೆಳಗ್ಗೇನೆ ಅಲ್ಲವೇ ಕಾಯಿ ಒಡೆದ ಶಬ್ದ ಕೇಳಿಸಿದ್ದು ನನಗೆ?’ ಎಂದು ನೆನೆಪಿಸಿಕೊಂಡು ಮತ್ತೆ ಕೂಗಿದರು. ಗೌರೀ... ಅಡುಗೆಮನೆಯಿಂದ ಉತ್ತರ ಬರಲಿಲ್ಲ. ಅಷ್ಟರಲ್ಲಿ ಕೆಳಗೆ ಬಂದ ಭಾವನಾಳನ್ನು ಕೇಳಿದರು ,"ಇವತ್ತು ಬೆಳಗ್ಗೆ ಕಾಯಿ ಒಡೆದ್ರೀ ಅಲ್ಲವೇ?", "ಹೌದು ಮಾವ, ಒಡೆದ ಹಾಗೆ ಶಬ್ದ ಕೇಳಿಸ್ತು" ಎಂದಷ್ಟೇ ಹೇಳಿ ಹೊರಕ್ಕೆ ನಡೆದಳು ಭಾವನಾ. ಅಡುಗೆಮನೆಯಿಂದ ಬಿರುಗಾಳಿಯಂತೆ ನುಗ್ಗಿ ಅತ್ತೆ, "ಹೌದು, ಕಾಯಿ ಒಡೆದೆ. ಇವತ್ತು ಹಾಕಲಿಲ್ಲ. ಒಂದಿನಕ್ಕೇನು ಪರವಾಗಿಲ್ಲ, ತಿನ್ನಿ" ಎಂದು ಹೋದರು. ಕೊಬ್ಬರಿತುರಿಯಿಲ್ಲದೇ ತಟ್ಟೆಯಲ್ಲಿದ್ದ ಉಪ್ಪಿಟ್ಟು ಹರಳು-ಹರಳಾಗಿ ಹೋಗಿತ್ತು. ಸವೆದುಹೋದ ಹಲ್ಲನ್ನಿಟ್ಟುಕೊಂಡು, ಅದನ್ನು ಖಾಲಿಮಾಡುವುದು ಹೇಗೆಂಬುದೇ ಈಗ ದೊಡ್ಡ ಸಮಸ್ಯೆಯಾಯಿತು.

ಮತ್ತೆರಡು ಕ್ಷಣಕ್ಕೇ ಅತ್ತೆಗೆ ತನ್ನ ಪತಿದೇವರ ಕಷ್ಟ ನೆನಪಾಯಿತು. "ಮಜ್ಜಿಗೆ ಇವತ್ತು ಚೆನ್ನಾಗಿ ಹೆಪ್ಪುಕೊಂಡಿದೆ, ಇದನ್ನೇ ಹಾಕ್ತೀನಿ" ಎಂದುಕೊಡು ಬಂದ ಅತ್ತೆ ತಲೆಯೆತ್ತದೆ ಒಂದೆರಡು ಸೌಟು ಗಟ್ಟಿ ಮೊಸರನ್ನು ಬಡಿಸಿದರು. ನೀರು ತುಂಬಿದ ಕಣ್ಣುಗಳನ್ನು ಮೇಲೆತ್ತಲಾರದೆ ಪುನಃ ಅಡುಗೆಮನೆಯೊಳಕ್ಕೆ ಸೇರಿಕೊಂಡರು.