ಶುಕ್ರವಾರ, ಮಾರ್ಚ್ 7, 2008

ಜೀವನ ಮತ್ತು ನಾನು

ಬೆಮನಸಾ ಬಸ್ಸಿನಲ್ಲಿ ಡ್ರೈವರ್ರನ ಹಿಂದುಗಡೆ ಸೀಟಿನಲ್ಲಿ, ಡ್ರೈವರ್ರಿಗೆ ಬೆನ್ನು ಮಾಡಿ, ನನ್ನ ಸಹಪ್ರಯಾಣಿಕರಿಗೆ ಮುಖ ಮಾಡಿಕೊಂಡು ಕೂತಿದ್ದೆ.
ಇದ್ದಕಿದ್ದ ಹಾಗೆ ಏನೋ ಹೊಳೆದಂತಾಯಿತು ............

ಎಷ್ಟೆಷ್ಟು ತರದ ಜನ... ಒಂದು ಕ್ಷಣ ನಮ್ಮನ್ನು ನೋಡಿ, ಏನೋ ನಗುವಂತೆ ಮಾಡಿ, ನೋಡಿಯೂ ನೋಡದಂತೆ ಪಕ್ಕಕ್ಕೆ ತಿರುಗಿ, ನನ್ನ ಮುಖದಲ್ಲಿ ಎಂಥದ್ದೋ ವಿಸ್ಮಯವೊಂದನ್ನು ಕಂಡು ಮುಸಿ ಮುಸಿ ನಕ್ಕು, ಸಮಾಧಾನವಾಗದಂಥಹ ಇನ್ನೇನೋ ಒಂದನ್ನು ಕಂಡು ಬೇಸರದ ನಿಟ್ಟುಸಿರು ಬಿಟ್ಟು, ಕಡೆಗೆ ಅಲ್ಲೊಬ್ಬಳು ಕುಳಿತಿದ್ದಳು, ತಮ್ಮ ದೃಷ್ಟಿ ಅವಳ ಮೇಲೆ ಬಿದ್ದಿತ್ತು ಎಂಬ ನೆನಪಿನ ಲವಲೇಶವನ್ನೂ ತಲೆಯಲ್ಲಿ ಉಳಿಸಿಕೊಳ್ಳುವ ಗೋಜಿಗೆ ಹೋಗದೆ ಸರಸರನೆ ಇಳಿದು ತಮ್ಮ ದಾರಿ ತಾವು ನೋಡಿಕೊಂಡು ಹೋಗುವ ಪ್ರಾಯಾಣಿಕರು. ನಾನು ಹಾಗೆ ಕೂತಿಲ್ಲದಿದ್ದರೆ ಇದೆಲ್ಲ ನನಗೆ ಗೊತ್ತಾಗುತ್ತಲೇ ಇರಲಿಲ್ಲ!

ಜೀವನದಲ್ಲಿಯೂ ಹಾಗೆ ತಾನೆ? ನಮ್ಮ ಅರವತ್ತೋ - ನೂರೋ ವರುಷದ ಆಯಸ್ಸಿನಲ್ಲಿ ಒಟ್ಟಿಗೆ ಇರುವುದು, ಮಾತಾಡುವುದು ಕಡೆಗೆ ಒಟ್ಟಿಗೆ ಕೂತು ಉಣ್ಣುವುದು ಕೇವಲ ಕೆಲವೇ ಘಂಟೆಗಳ ಹರವಿನಲ್ಲಿ. ಯಾರಾದರೂ ನಮ್ಮ ಮುಂದೆ ಇಲ್ಲದಿದ್ದಾಗ ಅವರ ವಿಷಯದಲ್ಲಿ ತೆಗೆದುಕೊಳ್ಳುವ ಸಲಿಗೆಯನ್ನು, ಅವರು ಇದ್ದಾಗ ತೆಗೆದುಕೊಳ್ಳುವುದಿಲ್ಲ.

ಹೇಳಿದ್ದು, ಮಾಡಿದ್ದು, ಕೊಟ್ಟದ್ದು, ತೆಗೆದುಕೊಂಡದ್ದು ಎಲ್ಲವನ್ನೂ ಮರೆತು, ಮುಂದೆ ಮಾತ್ರ ನೋಡಿಕೊಂಡು ಹೋಗುವುದು ಜೀವನದ ಜಾಯಮಾನ. ಆದರೆ, ನಾನು ಕೂತಿದ್ದ ಸ್ಥಾನ ಹಾಗೆ ಇರಲಿಲ್ಲ. ಡ್ರೈವರ್ ಸಾಹೇಬನು ಯಾವಾಗ ಎಲ್ಲಿ ತಿರುವುತ್ತಾನೆ, ಎಲ್ಲಿ ಬ್ರೇಕ್ ಹಾಕುತ್ತಾನೆ, ಎಲ್ಲಿ ಜೋರಾಗಿ ಓಡಿಸುತ್ತಾನೆ ಎಂಬುದೊಂದೂ ತಿಳಿಯುತ್ತಿರಲಿಲ್ಲ. ಕಂಡಕ್ಟರ್ ಸಾಹೇಬ ತನ್ನ ವಿಶಿಷ್ಟ ಚಿತ್ರಗುಪ್ತನ ಶೈಲಿಯಲ್ಲಿ ಬಂದವರ, ಹೋದವರ, ಹತ್ತಿದ್ದವರ, ಇಳಿದವರ ಲೆಕ್ಕವನ್ನು ಇಡುತ್ತಿದ್ದ.

ಅಂಗಡಿಗಳು, ಹರಿಯುತ್ತಿದ್ದ ಮೋರಿ ಕೆರೆಗಳು, ಡ್ರೈವರ್ ಹಾಕಿದ್ದ ಹಾಡು, ಹತ್ತಿ ಇಳಿದವರ ನೆನಪು, ದೊಡ್ಡ ಆಲದ ಮರ, ಫುಟ್ಪಾತಿನಲ್ಲಿ ಜಗಳಾಡುತ್ತಿದ್ದ ಗಂಡಹೆಂಡತಿ, ಜನಜಂಗುಳಿ ತುಂಬಿದ ಬಸ್ಟಾಪುಗಳು, ಇವುಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದೆ. ಅದರ ಬಗ್ಗೆಯೆಲ್ಲ ಆಲೋಚಿಸುತ್ತಿದ್ದೆ ಎನ್ನಬಹುದಾದರೂ ಅದರ ಮುಂದಕ್ಕೆ ಏನು ಹೇಳಬೇಕೆಂದು ನನಗೆ ತಿಳಿಯಲಾರದು.

ಹೀಗೆ, ನನ್ನ ಸ್ಟಾಪು ಬಂದೇ ಬಿಟ್ಟಿತ್ತು. ಎಲ್ಲರೂ ಇಳಿದ ಮೇಲೆ ಸಾವಕಾಶವಾಗಿ ಎದ್ದು,"ಸ್ಟಾಪು ಬರುವುದಕ್ಕೆ ಮುಂಚೆಯೇ ಏಳಬಾರದೇನ್ರೀ?" ಎಂದು ಡ್ರೈವರ್ರನ ಹತ್ತಿರ ಬೈಸಿಕೊಂಡು ಇಳಿದೆ.

ಏದುಸಿರು ಬಿಡುತ್ತಾ, ಮುಂದಾರಿಯನ್ನೇ ಎದುರು ನೋಡುತ್ತಾ, ಕಾದು ಕಾದು ತಲುಪಿದ್ದ, ಸುಸ್ತಾಗಿದ್ದ ಅವರೆಲ್ಲರಿಗಿಂತ ನಾನು ಸಂತುಷ್ಟಳಾಗಿದ್ದೆ.