ಬೇಸಿಗೆ ಕಾಲದಲ್ಲಿ ಗೌಡರ ಮನೆಯ ದೊಡ್ಡ ಅಂಗಳದಲ್ಲಿ ಸಾಲುಸಾಲಾಗಿ ಆಳುಗಳು ಕೂತು ಹುಣಸೆಕಾಯಿ ಹೊಡೆಯುತ್ತಾರೆ. ಕೆಲವರು ಹುಣಸೆಕಾಯಿಯ ಸಿಪ್ಪೆ ಬಿಡಿಸಿ ಹಾಕುತ್ತಾರೆ, ಇನ್ನೂ ಕೆಲವರು ಸಿಪ್ಪೆ ತೆಗೆದ ಹುಣಸೆಹಣ್ಣುಗಳನ್ನು ಒಡೆದು ಬೀಜಗಳನ್ನು ಬೇರ್ಪಡಿಸುತ್ತಾರೆ. ಕಾಯನ್ನು ಒಂದು ಪಕ್ಕಕ್ಕೆ ಬಾಗಿರುವಂತೆ ನಿಲ್ಲಿಸಿ ಅದರ ಸೊಂಟದ ಮೇಲೆ ಸುತ್ತಿಗೆಯಿಂದ ಒಂದು ಏಟು ಕೊಡುವುದು. ಅದು ಎರಡು ಸೀಳಾಗುತ್ತಿದ್ದಂತೆಯೇ, ಬೀಜಗಳನ್ನು ಒಂದು ಪಕ್ಕಕ್ಕೆ ಹಣ್ಣನ್ನು ಇನ್ನೊಂದು ಪಕ್ಕಕ್ಕೆ ಹಾಕುವುದು. ಹೀಗೆ ಆ ಆಳುಗಳ ಬಲಗೈ ಮೇಲಕ್ಕೂ ಕೆಳಕ್ಕೂ, ಎಡಗೈ ಬಲಕ್ಕೂ ಎಡಕ್ಕೂ ಒಂದೇ ಸಮನೆ ಯಂತ್ರದ ರೀತಿ ಆಡುವುದನ್ನು ನೋಡುವುದೇ ರುಕ್ಕೂಗೆ ಒಂದು ರೀತಿಯ ಅನುಭವ.
ರುಕ್ಕೂ ಮೆಲ್ಲಗೆ ಹೋಗಿ ಅವರಲ್ಲೊಬ್ಬರ ಹತ್ತಿರ ’ಸೇಫ್ ಡಿಸ್ಟೆನ್ಸ್’ ಎನ್ನಿಸುವಷ್ಟು ದೂರದಲ್ಲಿ ಕುಳಿತುಕೊಂಡಳು. ಅವರ ಕಾರ್ಯವೈಖರಿಯದು ಒಂದು ರೀತಿಯಾದರೆ ಅವರ ವಾಕುವೈಖರಿ ಇನ್ನೊಂದು ಅಧ್ಬುತವೇ. ’ಅವನಿದ್ದಾನೇನೆ ಇನ್ನೂ ಊರಲ್ಲಿ?’ ಎಂದು ಈ ಮೂಲೆಯಿಂದ ಒಂದು ಧ್ವನಿ. ’ಅವನು’ ಯಾರು ಎಂದು ರುಕ್ಕೂ ಯೋಚಿಸುತ್ತಿರುವಷ್ಟರಲ್ಲೇ ’ಅತ್ತಕಡೆಯೋರು ಬಂದು ಕರಕೊಂಡು ಹೋದರಂತೆ’ ಎಂದು ಇನ್ನೊಂದು ಮೂಲೆಯಿಂದ ಧ್ವನಿ ಬಂದು ಹೋಗಿರುತ್ತದೆ. ’ಅತ್ತಕಡೆ’ ಯಾವುದು ಎಂದು ರುಕ್ಕೂ ಯೋಚಿಸುವಷ್ಟರಲ್ಲಿ ’ಈ ಯಮ್ಮಂದಾದರೂ ಸರಿ ಹೋದಿತೂ ಅಂತ ನಾವಿದ್ರೇ, ಇವರದ್ದು ದಿನಾ ದಿನಾ ರಗಳೆ ಜಾಸ್ತೀನೆ ಆಗ್ತಾ ಇದೆ’, ಅಷ್ಟರಲ್ಲಿ ಮತ್ತೊಂದು ಧ್ವನಿ. ರುಕ್ಕೂ, ಆ ವಿಷಯವನ್ನು ಅರ್ಥಮಾಡಿಕೊಳ್ಳುವ ಗೋಜೇ ಬೇಡ, ತಾನಾಯಿತು ತನ್ನ ಹುಣಿಸೆಬೀಜವಾಯಿತು ಎಂದು ಕುಳಿತುಕೊಂಡುಬಿಟ್ಟಳು.
ಆದರೂ ಹೆಚ್ಚಿಗೆ ಹೊತ್ತು ಇವಳಿಗೆ ಸುಮ್ಮನಿರಲು ಸಾಧ್ಯವಿಲ್ಲ. ಆ ಹೆಂಗಸರಲ್ಲಿ ಎಷ್ಟೊಂದು ಜನ ಇವಳ ’ಫ್ರೆಂಡ್ಸ್’ ಬೇರೆ. ಮಾಮೂಲಾಗಿ ಇವಳ ಮಾತುಗಳು ಪ್ರಶ್ನೆಗಳಿಂದಲೇ ಆರಂಭವಾಗುತ್ತದೆ.
ನೀವ್ಯಾಕೆ ಇವರ ಮನೇಲಿ ಬಂದು ಕೆಲಸ ಮಾಡುವುದು?
ಹೊಟ್ಟೆಗೆ ಬೇಕಲ್ಲಮ್ಮ...
ನೀವೇ ಹುಣಿಸೆ ಮರ ಬೇಳೀಬೋದಲ್ಲ?
ನಮಗೆಲ್ಲಮ್ಮ ಆ ತಾಕತ್ತು...
ನಿಮ್ಮ ಹತ್ರ ತೋಟ ಇಲ್ಲವಾ?
ಇದೆ ಎಲ್ಲೋ ಒಂದಷ್ಟು, ಅಂಗೈ ಅಗಲ ಅದರಲ್ಲೇನು ಬೇಳೆಯೋದು...
ನೀವು ಏನು ಮಾಡಬೇಕು ಗೊತ್ತಾ? ಮೊದಲು ಒಂದು ಹುಣಿಸೆ ಮರ ನೆಡ್ರಿ, ಅದರಿಂದ ಬಂದ ಲಾಭದಲ್ಲಿ ಇನ್ನೊಂದು ಮರ ನೆಡ್ರಿ, ಹಾಗೇ ಮಾಡ್ತಾ ಇದ್ರೆ ನೀವು ದೊಡ್ಡ ಸಾಹುಕಾರರಾಗಬಹುದು...
ರುಕ್ಕೂಳ ಈ ಮಾತಿಗೆ ಅವರೆಲ್ಲರೂ ಒಂದೇ ಸಾರಿಗೆ ನಕ್ಕುಬಿಟ್ಟರು. ರುಕ್ಕೂ ಕಣ್ಣಲ್ಲಿ ಮಾತ್ರ ಅಲ್ಲಿ ಕೂತಿದ್ದ ಮಂಗಮ್ಮ ಇನ್ನೊಂದೈದಾರು ವರ್ಷಗಳಲ್ಲಿ ಗೌಡತಿಯ ಹಾಗೆ ಒಡವೆ ವಸ್ತ್ರ ಹಾಕಿಕೊಂಡು ಮೆರೆಯುವ ದೃಶ್ಯ ಕಣ್ಣ ಮುಂದೆ ಬಂದು ನಿಂತಿತು. ತಿರುಗೀ ಅವಳ ಮಾತು ಶುರುವಾಯಿತು,
ನಿಮ್ಮ ಮಕ್ಕಳನ್ನ ಯಾವ ಸ್ಕೂಲಿಗೆ ಸೇರಿಸ್ತೀರ?
ಇರೋದೊಂದು ಇಸ್ಕೂಲು...
ನೀವು ಇಲ್ಲಿ ಬಂದು ಕೆಲಸ ಮಾಡೋ ಥರ, ಗೌಡ್ರು ನಿಮ್ಮನೇಗೆ ಬಂದು ಕೆಲಸ ಮಾಡ್ತಾರ?
ಮೆಲ್ಲಿಗೆ ಮಾತಾಡಮ್ಮೋ, ನೀನೊಳ್ಳೇ, ಒಪ್ಪೊತ್ತಿನೂಟಕ್ಕೂ ಕಲ್ಲ್ ಹಾಕಿಬಿಡ್ತೀಯ...
ಅದ್ಯಾಕೆ, ನಾನು ಹೇಳ್ದಂಗೇ ನೀವು ಹುಣಿಸೆ ಮರ ಬೆಳಸ್ರೀ, ಆವಾಗ ನಾನೇಳ್ದಂಗ್ ಆಗ್ದೇ ಇದ್ರೆ ಕೇಳ್ರಿ...
ಸರಿಯೋಯ್ತು ...
ಮತ್ತೆ ಅವರೆಲ್ಲಾ ನಕ್ಕುಬಿಟ್ಟರು. ಮತ್ತೆ ಮಾತು ಶುರುವಾಯಿತು.
"ಇವರಜ್ಜಿ ನೋಡಮ್ಮಾ, ನಮಗೆ ಊಟ ಹಾಕ್ತಾ ಇದ್ದದ್ದು"
"ಮೊದಲು ತಿನ್ರೇ ಬಿಸಿಯಾಗಿರೋದ್ನಾ, ಆಮೇಲಿರಲೀ ನಿಮ್ಮ ಕೆಲಸ ಅನ್ನೋಳು ಮಹಾತಾಯಿ"
ಅಷ್ಟರಲ್ಲಿ ಎಲ್ಲರೂ ಊಟಕ್ಕೆ ಏಳಬೇಕೆಂದು ಗೌಡರ ಮೊಮ್ಮಗನು ಬಂದು ಕರೆದನು. ನೂರು ನೂರಿಪ್ಪತ್ತು ಜನಕ್ಕೆ ಹೇಗೆ ಅಡಿಗೆಗಳನ್ನು ಮಾಡಿಹಾಕುತ್ತಾರೋ ಎಂಬ ಆಲೋಚನೆ ಹೀಗೆ ಬಂದು ಹಾಗೆ ಹೋಯಿತು, ರುಕ್ಕೂಗೆ. ಇನ್ನು ನಾನೊಬ್ಬಳು ಇಲ್ಲಿ ಕೂತಿರುವುದು ದಂಡ, ಎಲ್ಲಿಗೆ ಹೋಗುವುದೆಂದು ಯೋಚನೆ ಹತ್ತಿಕೊಂಡಿತು. ಅಜ್ಜಿ ಅವಳು ಕೂತಿದ್ದ ಆವರಣದ ಕಲ್ಲು ಕಾಪೌಂಡಿನ ಆ ಕಡೆಯ ಸೊಂದಿಯಲ್ಲಿ ತೂರಿ ಹೋಗುತ್ತಿರುವುದು ಕಾಣಿಸಿತು. ಮತ್ತೆ ಇವಳ ಕಣ್ಣು ತಪ್ಪಿಸಿ ಎಲ್ಲೋ ಹೋಗುತ್ತಿದ್ದಾರೆ. ಇನ್ನೆಲ್ಲಿ? ಸೊಂದಿಯಲ್ಲಿ ತೂರಿದರೆ ಅಂಬುಜಮ್ಮನ ಮನೆಯೇ. ಈಗಲೇ ಬೇಡವೆಂದು ಬೇಟೆಗಾಗಿ ಕಾಯುವ ಹುಲಿಯಂತೆ ಕೂತೆ ಇದ್ದಳು. ಅಜ್ಜಿ ಮನೆಯ ಒಳಕ್ಕೆ ಹೋಗಿದ್ದು ಖಾತ್ರಿಯಾದ ಮೇಲೆ, ತನ್ನ ಮನೆಗೆ ಓಡಿಹೋಗಿ ಹುಣಸೆಬೀಜಕ್ಕೆ ಒಂದು ನೆಲೆ ಕಾಣಿಸಿ, ಅಲ್ಲಿಂದ ಅಂಬುಜಮ್ಮನ ಮನೆ ಕಡೆ ದಾಪುಗಾಲು ಹಾಕಿದಳು.
ಇವಳು ಹೋಗುವಷ್ಟರಲ್ಲಿ ಅಜ್ಜಿ ತನ್ನ ಮುಂದಿನ ಕೆಲಸಕ್ಕೆ ಅಣಿಮಾಡಿಕೊಳ್ಳುತ್ತಿದ್ದರು. ಕೆಳಗಿನ ಕಲ್ಲನ್ನು - ಮೇಲಿನ ಕಲ್ಲನ್ನು ಸರಿಯಾಗಿ ಜೋಡಿಸಿ, ತೂತಿಗೆ ಒಂದು ಮರದ ಹಿಡಿಯನ್ನು ಜೋಡಿಸಿ, ಗುಂಡುಕಲ್ಲಿನಿಂದ ಅದರ ತಲೆ ಮೇಲೆ ಕುಟ್ಟಿ ಭದ್ರ ಮಾಡಿದರು. ಇವಳು ಇಲ್ಲಿಗೂ ಬಂದದ್ದು ನೋಡಿ ಅಜ್ಜಿಗೆ ಬಾಯಿಂದ ಮಾತೇ ಹೊರಡಲಿಲ್ಲ. "ನೋಡಮ್ಮೋ" ಎಂದಷ್ಟೇ ಹೇಳಿ ಅಂಬುಜಮ್ಮನ ಕಡೆಗೊಂದು ಸಾರಿ, ರುಕ್ಮಿಣಿಯ ಕಡೆಗೊಂದು ಸಾರಿ ನೋಡಿದರು. ಅಂಬುಜಮ್ಮನಿಗೆ ಈಗಷ್ಟೇ ಅಜ್ಜಿ ಅವಳ ಬಗ್ಗೆ ಹೇಳಿದ್ದ ಮಾತುಗಳು ನೆನಪಿಗೆ ಬಂದು ನಗು ತರಿಸಿಬಿಟ್ಟವು. ಈಗ ಅಜ್ಜಿಗೂ ಅಂಬುಜಮ್ಮನಿಗೂ ಮಾತುಕಥೆ ಶುರುವಾದವು.
"ಎಷ್ಟು ಸೇರು ತಾಯಿ ನೀನು ಹೊಂಚುಹಾಕಿಟ್ಟಿರೋದು?"
"ಇನ್ನೂರೈವತ್ತು ಸೇರದೆ, ಗಟ್ಟಿಗಾತಿ ನೀನು, ಆಗಲ್ಲೇನು?"
"ಹೌದೇಳಮ್ಮೋ, ಸತಿ ಸಕ್ಕೂಬಾಯಿ ನಾನು, ರಾತ್ರಿಯೆಲ್ಲಾ ನಿನ್ನ ಮನೇಲಿ ಕೂತು ಹಿಟ್ಟು ಬೀಸ್ತೀನಿ" ಅಜ್ಜಿ ಸ್ವಲ್ಪ ಹುಸಿ ಕೋಪವನ್ನು ತೋರಿದರು.
ಅಂಬುಜಮ್ಮನಿಗೆ ನಗುವೇ ಬಂದುಬಿಟ್ಟಿತು. "ನನಗೊತ್ತಿಲ್ಲೇನು ನಿನ್ನ ಡ್ಯೂಟಿ, ನಾಲ್ಕು ಗಂಟೇಗೆ ಹೋಗಿ ಗೌಡ್ರಿಗೆ ಕಾಫಿ ಮಾಡ್ಕೊಡೋದು. ಒಂದು ಮೂವತೈದು ಸೇರದೆ ಹೇಗೋ ಮಾಡಿ ಇವ್ವತ್ತು ಬೀಸಿಟ್ಟುಕೊಂಡುಬಿಟ್ರೆ, ಇನ್ನೊಂದು ತಿಂಗಳು ಯೋಚನೆ ಇಲ್ಲ".
ಅಂಬುಜಮ್ಮ ಮುಕ್ಕಾಲು ತುಂಬಿದ್ದ ರಾಗಿ ಮೂಟೆಯೊಂದನ್ನು ತಂದು ಬೀಸೋಕಲ್ಲಿನ ಮುಂದೆ ಸುರಿದರು. ಇಬ್ಬರೂ ಸೇರಿ ಅದ್ಯಾವುದ್ಯಾದೋ ಪದ ಹೇಳುತ್ತಾ ರಾಗಿ ಬೀಸತೊಡಗಿದರು. ರುಕ್ಕೂಗೆ ಇಂಥವುದರ ಮುಂದೆ ಸುಮ್ಮನೆ ಕೂತಿರಲು ಸಾಧ್ಯವಿಲ್ಲ, ’ನಾನು’ ’ನಾನು’ ಎಂದುಕೊಳ್ಳುತ್ತಾ, ಮೇಲಿಂದ ಕಾಳು ಸುರಿಯುವುದು, ಬೀಸಿದ ಹಿಟ್ಟನ್ನು ಜರಡಿ ಹಿಡಿಯುವುದು ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕೈ ಹಾಕುತ್ತಿದ್ದಳು. ಆದರೆ, ಬೇರೆ ಮಕ್ಕಳಿಂದ ಆಗುವ ಹಾಗೆ ಇವಳಿಂದ ಒಂದಕ್ಕೆರಡು ಕೆಲಸವಾಗುವುದಿಲ್ಲ. ಅಲ್ಪ ಸ್ವಲ್ಪ ಮಾಡಿದರೂ ಸರಿಯಾಗೆ ಮಾಡುತ್ತಾಳೆ. ಹಾಗಾಗಿ, ಅವರಿಬ್ಬರೂ ಇವಳನ್ನು ತಡೆಯಲಿಲ್ಲ. ತಡೆಯಲಾಗದೇ ಅಂಬುಜಮ್ಮ ಹೇಳೇಬಿಟ್ಟರು. "ನಿನಗ್ಯಾಕಮ್ಮ ಬೆಂಗಳೂರು, ಇಲ್ಲೆ ಇದ್ಬುಡು ಎಮ್ಮೆಗಳ ಮೇಸ್ಕೊಂಡು, ಬೆಂಗಳೂರ್ನಲ್ಲಿ ನೀನ್ ದಂಡ’. ಎಲ್ಲಾ ಸರಿಯಾದರೂ ರುಕ್ಕೂ ಸ್ವಲ್ಪ ಮಂದ, ಚಾಲಾಕಿತನವಿಲ್ಲ. ಆದ್ದರಿಂದಲೇ, ಅಂಬುಜಮ್ಮ ’ಬೆಂಗಳೂರಿನಲ್ಲಿ ದಂಡ’ ಎಂದದ್ದು. ಅಂಬುಜಮ್ಮನ ಮಾತು ಕೇಳಿ ರುಕ್ಕೂಗೆ ಗಲಿಬಿಲಿ ಆಗಿಹೋಯ್ತು. ಇದೇನು ಹೊಗಳಿಕೆಯೋ ತೆಗಳಿಕೆಯೋ? ಎಲ್ಲಾ ಸರಿ, ಆದರೆ ’ದಂಡ’ ಅಂದದ್ದು ಏಕೆ? ಆದರೂ ಸೋಲೊಪ್ಪದೇ ’ಹ್ಞೂ, ಏಳನೇ ಕ್ಲಾಸಿಗೆ ಇಲ್ಲೇ ಸೇರ್ಕೋತಿನಿ. ಎರಡು ಎಮ್ಮೆ ಸಾಕ್ತೀನಿ.’ ಎಂದಳು. ತಕ್ಷಣವೇ ಅಮ್ಮನ ಕಿವಿಗೆ ಈ ಮಾತು ಬಿದ್ದರೆ ಏನು ಗತಿಯಪ್ಪಾ ಎಂದು ಚಿಂತೆಗಿಟ್ಟುಕೊಂಡಿತು.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
6 ತಿಂಗಳುಗಳ ಹಿಂದೆ
ಬರವಣಿಗೆ ಚೆನ್ನಾಗಿ ಮೂಡಿ ಬರುತ್ತಿದೆ. ಗ್ರಾಮೀಣ ಪರಿಸರ, ಅಲ್ಲಿಯ ಜನರು, ಭಾಷೆ ಎಲ್ಲವೂ ನಿರಾಳವಾಗಿ ಯಾವುದೇ ಧಾವಂತವಿಲ್ಲದೆ ಬರುತ್ತಿರುವ ಪರಿ ಸೊಗಸಾಗಿದೆ. ರುಕ್ಮಿಣಿಯ ಪಾತ್ರವಂತೂ ಈಗ ನಿಧಾನವಾಗಿ ಆದರು ಭದ್ರವಾಗಿ ಬೇರು ಬಿಡುತ್ತಿದೆ.ಇದೇ ಸಂಯಮವನ್ನು ಬರವಣಿಗೆಯಲ್ಲಿ ಕಾಪಾಡಿಕೊಂಡರೆ ಉತ್ತಮ ಕಾದಂಬರಿ ಆಗಬಹುದು.
ಪ್ರತ್ಯುತ್ತರಅಳಿಸಿಅದೇ ನನಗೂ ಭಯವಾಗುತ್ತಿರುವುದು! ಎಲ್ಲಿ ಕಾದಂಬರಿಯಾಗುತ್ತದೋ ಎಂದು :)
ಪ್ರತ್ಯುತ್ತರಅಳಿಸಿ(ನಾನು ಮೊನ್ನೆ ನಿಮಗೊಂದು ಈಮೇಲ್ ಕಳಿಸಿದ್ದೆ ಸಿಗಲಿಲ್ಲವೇ? ಅಂಥಾದ್ದೇನು ಇಲ್ಲ, ಉತ್ತರ ಬರದಿದ್ದ ಕಾರಣಕ್ಕೆ ಕೇಳಿದೆ)
ಕಾದಂಬರಿಯಾದರೆ ಭಯವೇಕೆ? ಇಂದಿನ ದಿನಗಳಲ್ಲಿ ಕಾದಂಬರಿ ಬರೆಯುವವರೇ ಕಡಿಮೆಯಾಗಿದ್ದಾರೆ. ನಿಜಕ್ಕೂ ನೀನು ಕಾದಂಬರಿಯಾಗಿಯೇ ಅದನ್ನು ಬೆಳೆಯಲು ಬಿಡು.
ಪ್ರತ್ಯುತ್ತರಅಳಿಸಿನಿನ್ನ ಈಮೇಲ್ ಯಾವುದೂ ಬಂದಿಲ್ಲ
ಮೇಲ್ ಬರಲಿಲ್ಲವೇ? ನನಗೆ ಆಶ್ಚರ್ಯವಾಗುತ್ತಿದೆ!
ಪ್ರತ್ಯುತ್ತರಅಳಿಸಿಈ ಬರಹ ಎಲ್ಲಿ ಹೋಗಿ ಮುಟ್ಟುತ್ತದೆ ಎಂದು ನನಗೇ ಕುತೂಹಲವಾಗ್ತಿದೆ. ಕಾದು ನೋಡಬೇಕು.
ಮುತ್ತುಮಣಿ ಮೇಡಮ್,
ಪ್ರತ್ಯುತ್ತರಅಳಿಸಿತಡವಾಗಿ ಬಂದೆನಾದ್ದರಿಂದ ಹಿಂದಿನ ಭಾಗಗಳು ಮರೆತುಹೋಗಿತ್ತು. ಅದಕ್ಕೆ ಮತ್ತೊಮ್ಮೆ ಅವನ್ನು ಓದಿ ಈ ಭಾಗವನ್ನು ಓದಿದೆ. ಗ್ರಾಮೀಣ ಸೊಗಡಿನಲ್ಲಿ ಸಾಗುತ್ತಿರುವ ಕತೆ ಅಲ್ಲಿನ ಮಾತುಗಳು, ಪರಿಸರ, ಕಾಯಕದ ಚಿತ್ರಗಳನ್ನು ಕೊಡುತ್ತಾ ಸಣ್ಣದೊಂದು ಕುತೂಹಲವನ್ನು ಹುಟ್ಟಿಸುತ್ತಾ ಸಾಗುತ್ತಿದೆ. ನೋಡೋಣ ಬರೆಯಿರಿ...ಸೊಗಸಾಗಿ ಮೂಡಬಹುದು ಅನ್ನಿಸುತ್ತಿದೆ.
Hema avare...
ಪ್ರತ್ಯುತ್ತರಅಳಿಸಿE bhaaga neevu hindeye barediddu thada aagi post maadidra? yaakendare mundina bhaaga yaavaga baruthe antha nimma blogige eda thaakuthidde... eega post na date nodidre May 15, 2009 ide!
Idannu kaadambariyaagalu bidi... kathe prashaanthavaada nadiyanthe EriLitha illadanthe hariyuthide.... mundhe yenu barutho antha kuthoohali aagidene:)
office nalli odiddarinda english font nalli comment bareyabekaaythu....
ಪರ್ವಾಗಿಲ್ಲ ಬಿಡಿ ಇಂಗ್ಲೀಷ್ ಆದ್ರೇನು...
ಪ್ರತ್ಯುತ್ತರಅಳಿಸಿನಿಮ್ಮ ಹತ್ತಿರ ತಪ್ಪಿಸಿಕೊಳ್ಳೋಹಾಗೆ ಇಲ್ಲ ಬಿಡಿ. ನೀವು ಸ್ವಲ್ಪ ಸ್ವಲ್ಪಾನೇ ಬರಿ ಅಂದ್ರಲ್ಲಾ ಅದಕ್ಕೆ ಬರೆದಿಟ್ಟುಬಿಟ್ಟು ಚೂರು ಚೂರೆ ಪೋಸ್ಟ್ ಮಾಡಣ ಅಂದುಕೊಂಡೆ, ನೀವು ಅದನ್ನು ಕಂಡುಹಿಡಿದು ಬಿಟ್ರಿ.... :)
ಚೆನ್ನಾಗಿದೆ ಕಣೆ....ಸಾಗಲಿ ಕಾದಂಬರಿ ...
ಪ್ರತ್ಯುತ್ತರಅಳಿಸಿಎಲ್ಲಾರು ಸೇರಿ ಇದನ್ನ ಕಾದಂಬರಿನೇ ಮಾಡಿಟ್ಟುಬಿಟ್ಟಿರಿ...
ಪ್ರತ್ಯುತ್ತರಅಳಿಸಿನಿಜ , ಎಲ್ಲರೂ ಕಾದಂಬರಿ ಎಂದು ಹೇಳಿ ನೀನೀಗ ಕಾದಂಬರಿ ಬರೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ ಅನಿಸುತ್ತದೆ.:)
ಪ್ರತ್ಯುತ್ತರಅಳಿಸಿನಿನ್ನ ಬರೆಯೋ ಆಸೆ ಬ್ಲಾಗ್ ಪರಿಚಯ ಇತ್ತೀಚೆಗೆ ಕೆಂಡಸಂಪಿಗೆಯಲ್ಲಿ ನೋಡಿ ಖುಷಿಯಾಯಿತು
ಹೌದು, ನೀವು ಹೇಳುವುದು ಸರಿ.
ಪ್ರತ್ಯುತ್ತರಅಳಿಸಿ