ಭಾನುವಾರ, ಮೇ 10, 2009

ರುಕ್ಮಿಣಿಯ ಅಜ್ಜಿ ಮನೆ - ೧

"ರುಕ್ಕೂ... ರುಕ್ಕಮ್ಮ ಮಣಿ ಪಾಯಸ ರೆಡಿ ಆಯ್ತು, ತಿನ್ನು ಬಾ", ಮನೆಯ ಮುಂದಿದ್ದ ಸುಂಕತ್ತಿ ಮರದ ಎಲೆಗಳು, ಕಡ್ಡಿಗಳಿಂದ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದ ರುಕ್ಮಿಣಿ ಒಂದೇ ಸಾರಿಗೆ ದೇವರನ್ನು ಮರೆತು ಅಡುಗೆ ಮನೆಗೆ ಓಡಿದಳು. ತನ್ನ ಮೆಚ್ಚಿನ ಸಬ್ಬಕ್ಕಿ ಪಾಯಸಕ್ಕೆ ಈ ಪುಟ್ಟುಹುಡುಗಿ ಇಟ್ಟಿದ್ದ ಹೆಸರು ’ಮಣಿ ಪಾಯಸ’. ಅಲ್ಲೇ ಹಜಾರದಲ್ಲಿ ಕೂತಿದ್ದ ತಾತ ಇವಳ ಓಟದ ಭರವನ್ನು ತಡೆಯಲಾರದೆ ಗುಡುಗಿದರು. "ಆಆಆಆಶಿಶೀ... ಹುಡುಗ್ರಿಗೇನು ಅಡಿಗೆ ಮನೇಲಿ ಕೆಲ್ಸ, ಬಾಮ್ಮ ಈಚೆಗೆ!". "ರೇಏಏಏ, ಸುಮ್ಮನಿರ್ತೀರ, ಪಾಯಸ ಕುಡಿಯಕ್ಕೆ ನಾನೇ ಕರ್ದಿದ್ದು". ತಾತನಿಂದ ಮರುಮಾತು ಬರದೇ ಇದ್ದ ಕಾರಣ, ರುಕ್ಮಿಣಿ ಧೈರ್ಯವಾಗಿ ಅಡುಗೆ ಮನೆಯಲ್ಲಿ ಹೋಗಿ ಕುಳಿತಳು. ಪಾಯಸದಿಂದ ಒಂದೊಂದೆ ಮಣಿಯನ್ನು ಸ್ಪೂನಿನಲ್ಲಿ ಆರಿಸಿ ಆರಿಸಿ ಒಂದು ಗಂಟೆ ಕಾಲ ತಿನ್ನುವುದು ಅವಳ ವಾಡಿಕೆ.

ಬೆಳಿಗ್ಗೆಯೇ ಎದ್ದು ಮನೆ ಬಾಗಿಲು, ಹಿತ್ತಲು - ಮುಸುರೆ ಮುಗಿಸಿ, ಮಾರು ದೂರದ ಬೋರ್ವೆಲ್ನಿಂದ ಮಡಿನೀರು ತಂದಿದ್ದ ಅಜ್ಜಿ ಈಗ ಬೆಂಗಳೂರಿನಿಂದ ಬಂದಿದ್ದ ಮೊಮ್ಮಗಳ ಬೇಡಿಕೆಯನ್ನು ಈಡೇರಿಸಿದ್ದರು. ಒಂದು ಗಂಟೆ ಪಾಯಸವನ್ನು ತಿಂದು ಮುಗಿಸಿ, ಅಡುಗೆ ಮನೆಯಿಂದ ಹೊರಕ್ಕೆ ಬಂದಳು, ರುಕ್ಕು. ತಾತ ಅಂಗಳದಲ್ಲಿ ಸೌದೆ ಹೊಡೆಯುತ್ತಿದ್ದರು. ಅಜ್ಜಿ ಮನೆಯಲ್ಲಿಲ್ಲದೇ ಇರುವುದು ತಕ್ಷಣ ಅರಿವಾಯಿತು. ಒಂದೇ ಓಟಕ್ಕೆ ಊರ ಗೌಡರಾದ ಮುನಿಶ್ಯಾಮಪ್ಪನ ಮನೆಗೆ ಓಡಿದಳು. "ನಮ್ಮಜ್ಜಿ ಬಂದಿದ್ದಾರ?", ಸೀದಾ ಅಡಿಗೆ ಮನೆಗೇ ನುಗ್ಗುತ್ತಾ ಕೇಳಿದಳು. ’ಇತ್ತಾಗ್ ಬಂದಿಲ್ಲಮ್ಮೋ, ತಡಿ, ತಡಿ, ಎಳನೀರು ಕೊಚ್ಚುತವರೆ ಕುಡ್ಕೊಂಡು ಹೋಗು". ಊರಿನಲ್ಲಿ ಇಂಥ ಸೇವೆಗೇನು ಕಡಿಮೆಯಿಲ್ಲ. ಗೌಡರ ಮಗನ ಕೈಯಲ್ಲಿ ಎರಡು ಎಳನೀರು ಒಡೆಸಿಕೊಂಡು ಕುಡಿದು, ಗಂಜಿಯನ್ನು ಕೈಯಲ್ಲಿಟ್ಟುಕೊಂಡು ಮೆಲ್ಲುತ್ತಾ ನಡೆದಳು.

ಅವಳು ಈಗ ಅಟ್ಯಾಕ್ ಮಾಡಲು ಹೋಗಿದ್ದು ಸಂಕಮ್ಮನ ಮನೆಯನ್ನು. ಅವಳಿಗೆ ಗೊತ್ತು ಅಜ್ಜಿ ಇಲ್ಲಾ ಗೌಡರ ಮನೆಗೆ ಹೋಗಿ ಹರಟೆ ಹೊಡೆಯುತ್ತಾರೆ, ಇಲ್ಲಾ ಸಂಕಮ್ಮನ ಮನೆಯಲ್ಲಿ ಕೂರುತ್ತಾರೆ, ಇಲ್ಲದಿದ್ದರೆ ಸೊಣ್ಣಮ್ಮ, ಅದೂ ಹೋದ್ರೆ ಲಿಂಗಾಯಿತರ ಮನೆ.

ಅಜ್ಜಿಗೆ ದಿನಾ ಮಧ್ಯಾಹ್ನ ಮಾಮೂಲಿ ಬಿಡುವು. ಆ ಸಮಯದಲ್ಲಿ ತನ್ನ ಸ್ನೇಹಿತೆಯರ ಮನೆಗೆ ಹೋಗಿ ಕೂರುತ್ತಿದ್ದರು. ಇಲ್ಲವೇ ಹಸುವನ್ನು ಮೇವಿಗೆ ಕರೆದುಕೊಂಡು ಹೋಗಿ ಕಟ್ಟುತ್ತಿದ್ದರು. ರುಕ್ಕು ಬೇಸಿಗೆ ರಜಕ್ಕೆ ಹೋದಾಗಲೆಲ್ಲಾ ಅಜ್ಜಿಯ ಜೊತೆಯೇ ಕಾಲ ಕಳೆಯುವುದು. ಅವರು ಹೀಗೆ ಆಚೀಚೆ ಕುಳಿತಾಗಲೆಲ್ಲಾ ಅದೆಷ್ಟೋ ವಿಷಯಗಳನ್ನು ಹೇಳುತ್ತಿದ್ದರು. ೪೦ ರೂಪಾಯಿಗೆ ಒಂದೇ ರೂಮಿದ್ದ ಮನೆಯೊಂದನ್ನು ಕೊಂಡುಕೊಂಡದ್ದು, ನಂತರ ತಾವೇ ಅದಕ್ಕೆ ಇಟ್ಟಿಗೆ ಮಣ್ಣು ಜೋಡಿಸಿ ದೊಡ್ಡ ಮನೆ ಮಾಡಿದ್ದು, ತನ್ನ ಗಂಡನ ಕಡೆಯ ೩೦ - ೪೦ ಜನಕ್ಕೆ ತಾವೇ ಮುದ್ದೆಗಳನ್ನು ತೊಳಸಿ ಹಾಕುತ್ತಿದ್ದುದು, ಆರೇಳು ಜನ ಹೆಣ್ಣುಮಕ್ಕಳ ಮದುವೆ ಮಾಡಿದ್ದು, ಒಂದು ವರ್ಷ ಹಾಲು ಹಾಕಿದ ರಾಧಮ್ಮನಿಗೆ ಚಿನ್ನದ ಮೂಗುತಿ ಮಾಡಿಸಿಕೊಟ್ಟದ್ದು, ಕಾಸಿಗೆ ಕಾಸು ಸೇರಿಸಿ ಜಮೀನುಗಳನ್ನು ಮಾಡಿದ್ದು ಹೀಗೆ ಏನೇನೋ. ಆಮೇಲೆ, ಸರ್ಕಾರದ ರೂಲಿನ ಪ್ರಕಾರ ಹತ್ತರಲ್ಲಿ ಒಂದು ಭಾಗ ಭೂಮಿಯಷ್ಟೇ ಇವರ ಪಾಲಿಗೆ ಉಳಿದುಕೊಂಡಿತ್ತು. ಊರಿನಲ್ಲಿ ಸ್ಕೂಲಾಗಬೇಕೆಂಬ ವಿಷಯ ಮುಂದೆ ಬಂದಾಗ ತಾತನೇ ಉಳಿದಿದ್ದ ಜಾಗದಲ್ಲಿ ಒಂದಷ್ಟನ್ನು ಕೊಟ್ಟುಬಿಟ್ಟಿದ್ದರು. ಈ ಕಥೆಗಳನ್ನು ಹೇಳುವಾಗ ಅಜ್ಜಿಯ ಕೈಯಿಂದ ಕೆಲವರು ಬೈಸಿಕೊಂಡರೆ ಇನ್ನೂ ಕೆಲವರು ಹೊಗಳಿಸಿಕೊಳ್ಳುತ್ತಿದ್ದರು.

ಮಕ್ಕಳು ಹೊರಗೆ ಕೆಲಸ ಮಾಡುತ್ತಿದ್ದರು, ಸೊಸೆಯಂದಿರು ತೋಟ ನೋಡಿಕೊಳ್ಳುತ್ತಿದ್ದರು, ಮನೆಯ ಕೆಲಸಗಳನ್ನೆಲ್ಲಾ ಇವರೇ ಮಾಡುತ್ತಿದ್ದುದು. ಅವರಿಗೆ ಅಂತಾ ವಯಸ್ಸೇನೂ ಆಗಿರಲಿಕ್ಕಿಲ್ಲ. ಬೇಗನೇ ಮದುವೆಯಾಗಿಬಿಟ್ಟಿರಬೇಕು, ಅದಕ್ಕೇ ಐವತ್ತು ವರ್ಷದಷ್ಟೊತ್ತಿಗೇ ಮೊಮ್ಮಗಳ ಮದುವೆಯನ್ನೂ ನೋಡಿಬಿಟ್ಟಿದ್ದರು.

ರುಕ್ಮಿಣಿಯ ಊಹೆ ಸರಿಯಾಯಿತು, ಅಜ್ಜಿ ಸಂಕಮ್ಮನ ಮನೆಯಲ್ಲಿ ಕೂತಿದ್ದರು. ಎಲೆ ಅಡಿಕೆ ಹಾಕುತ್ತಾ. ಸಂಕಮ್ಮ ಮನೆಯಲ್ಲಿ ಇವಳಿಗೆ ಏನೋ ಒಂದು ರೀತಿ ಅನುಭವವಾಗುತ್ತಿತ್ತು. ಸಂಕಮ್ಮ ಬೇರೆಯವರ ಹಾಗೆ ಜೋರಾಗಿ ಮಾತನಾಡುತ್ತಿರಲಿಲ್ಲ. ಸದಾ ಹಸನ್ಮುಖಿ. ಅವರ ಮನೆಯೂ ಕೂಡ ಸ್ವಲ್ಪ ಮಬ್ಬಾಗಿಯೇ ಇರುತ್ತಿತ್ತು. ಇನ್ನೂ ಒಂದು ವಿಷಯವಿತ್ತು, ಇವಳು ಹೋದಾಗಲೆಲ್ಲ ಸಂಕಮ್ಮ ಬೀರೂವಿನ ಡ್ರಾಯರಿನಲ್ಲಿಂದ ಎರಡು ಸಣ್ಣ ಸಣ್ಣ ಮಿಠಾಯಿ ತೆಗೆದು ಕೊಡುತ್ತಿದ್ದರು. ಅವು ತಿನ್ನಲು ಬಹಳ ರುಚಿ. ಆ ಬೀರೂವನ್ನು ಯಾವಾಗಲೂ ಬೀಗ ಹಾಕಿ ಇಟ್ಟಿರುತ್ತಿದ್ದರು. "ನೋಡು, ಬಿಸಿಲು ಮನೇಲಿರ್ಲಿ ಅಂತ ನಾನಿದ್ರೇ" ಅಜ್ಜಿ ರಾಗ ತೆಗೆಯುತ್ತಿದ್ದಂತೆಯೇ, ಸಂಕಮ್ಮ "ಬರ್ಲೇಳು, ಮನೇಲ್ ಕೂತು ಕೂತು ಅದಕ್ಕೆ ಬೇಜಾರಾಗಲ್ಲೇನು" ಎಂದರು. ರುಕ್ಕು ಅಜ್ಜಿಯ ತೊಡೆ ಮೇಲೆ ಕೈ ಹಾಕಿ ಕೂತಳು.

ಅವರಿಬ್ಬರ ಮಾತು ಎಲ್ಲಿಂದ ಎಲ್ಲೆಲ್ಲಿಗೋ ಸಾಗುತ್ತಿತ್ತು. ಸಂಕಮ್ಮನ ಚಿಕ್ಕ ಮಗಳು ಬಾಣಂತನಕ್ಕೆ ಬಂದಿದ್ದಾಳೆ. ಅವಳ ಆರೈಕೆ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳುತ್ತಿದ್ದಾಳೆ ಸಂಕಮ್ಮ. ಮೊದಲ ಮಗಳ ಬಾಣಂತನವನ್ನು ಈಗಾಗಲೇ ಅವರು ಮಾಡಿದ್ದಾರೆ. ಆದರೂ ಅಜ್ಜಿಯ ಹತ್ತಿರ ಕೇಳುವುದು, ಆಗ ಹಾಗಾಯ್ತಲ್ಲ, ಅದಕ್ಕೇನು? ಇದಕ್ಕೇನು? ಈ ಮಗು ದೊಡ್ಡಮಗಳ ಮಗುವಿನಷ್ಟು ಗಟ್ಟಿ ಬಂದಿಲ್ಲವೇ? ಹೀಗೇ ಏನೇನೋ ಕೇಳುತ್ತಿದ್ದಾರೆ. ರುಕ್ಮಿಣಿಗೆ ಇದೊಂದು ಅರ್ಥವಾಗದು. ಅವಳು ಅವರ ಮನೆಯಲ್ಲಿ ನೇತು ಹಾಕಿರುವ ಬೇರೆ ಬೇರೆ ದೇವರ ಫೋಟೋಗಳನ್ನು ನೋಡುತ್ತಲಿದ್ದಾಳೆ. ಅವಳು ಹುಟ್ಟಿದಾಗಿನಿಂದ ಇವುಗಳನ್ನು ನೋಡುತ್ತಿದ್ದರೂ ಇನ್ನೂ ಮನದಣಿದಿಲ್ಲ. ಅದರಲ್ಲಿ ಒಂದು ಹಸುವಿನ ಫೋಟೋ ಇತ್ತು. ಅದಕ್ಕೆ ತಲೆಯಿಂದ ಹೊಟ್ಟೆಯವರೆಗೆ ಮಾನವ ಹೆಣ್ಣಿನ ದೇಹ, ಅಲ್ಲಿಂದ ಹಿಂದಕ್ಕೆ ಹಸುವಿನ ದೇಹ. ವಿಚಿತ್ರ ಕಲ್ಪನೆಯಾದರೂ ನೋಡಲು ಸುಂದರವಾಗಿತ್ತು. ನಂದಿನಿಯೋ ಇನ್ಯಾವುದೋ ಹಸು ಅದಾಗಿರಬೇಕು. ಇವಳು ಅದನ್ನೇನು ಕೇಳಲು ಹೋಗುತ್ತಿರಲಿಲ್ಲ. ಅಲ್ಲಿದ್ದ ಒರಳುಕಲ್ಲು, ಎತ್ತರವಾದ ರಾಗಿ ಕಣಜ ಇವುಗಳನ್ನು ಕುತೂಹಲದಿಂದ ನೋಡುತ್ತಾ ಕೂತಿದ್ದಳು. ಸಂಕಮ್ಮನ ಯಜಮಾನಪ್ಪನು ಮನೆಗೆ ಬಂದೊಡನೆಯೆ ಸಂಕಮ್ಮ ’ನೀರು ಕೊಡಲೆ?’ ಎಂದು ಕೇಳಿದರು. "ಅದೇ ನೋಡು, ಆಚೆಯಿಂದ ಬಂದೋರಿಗೆ ಕೇಳೋದೇನು? ನೀರು ತಂದು ಕೊಡಬಾರ್ದೇನು?" ಎಂದು ಅಜ್ಜಿ ಗುಟುರು ಹಾಕಿದರು. ಸಂಕಮ್ಮ - ಯಜಮಾನಪ್ಪ ಇಬ್ಬರೂ ಮೆಲ್ಲಗೆ ನಕ್ಕರೆ ಹೊರತು ಮರುಮಾತಾಡಲಿಲ್ಲ. ಸಂಕಮ್ಮ ತಂದುಕೊಟ್ಟ ನೀರನ್ನು ಯಜಮಾನಪ್ಪ ಕುಡಿದನು. ಇದ್ದಕ್ಕಿದ್ದ ಹಾಗೆ ಎಮ್ಮೆ ಕೂಗಿದ್ದು ಕೇಳಿಸಿ, ’ನಾನು ಹಾಕಲಾ ಹುಲ್ಲು’ ಎಂದು ಪರ್ಮಿಷನ್ ಕೇಳಿಕೊಂಡು ರುಕ್ಕು ಆಚೆಗೆ ಬಂದಳು. "ನಿನಗ್ಯಾಕಮ್ಮ ಈ ಪಾಡೆಲ್ಲ" ಎಂದು ಸಂಕಮ್ಮ ಹೇಳಿದ್ದು ಅವಳ ಕಿವಿಗೆ ಬೀಳಲೇ ಇಲ್ಲ. ಎಮ್ಮೆಗಳನ್ನು ಮಾತನಾಡಿಸುವುದು, ಗದರಿಸುವುದು, ಮೇವು ಹಾಕುವುದು, ತೊಳೆಯುವುದು, ಸಗಣಿ ಸಾರಿಸುವುದು ಇವೆಲ್ಲಾ ಅವಳಿಗೆ ಕರಗತ. ಮೊದಮೊದಲು ಬೆಂಗಳೂರಿನವಳೆಂದು ಅಣಕಿಸಿದವರೂ ಈಗ ಸುಮ್ಮನಾಗಿದ್ದರು.

(ಮುಂದುವರೆಯುತ್ತದೆ)

4 ಕಾಮೆಂಟ್‌ಗಳು:

  1. ಹೇ ಮುತ್ತು!!!........ಮುಂದುವರೆಸು.....ಆಮೇಲ್ ಕಮೆಂಟ್ ಬರಿತೀನಿ ;)

    ಪ್ರತ್ಯುತ್ತರಅಳಿಸಿ
  2. ಮುತ್ತುಮಣಿ ಮೇಡಮ್,

    ಕತೆ ಆಸಕ್ತಿಕರವಾಗಿದೆ...ರುಕ್ಮಿಣಿಯ ಪಾಯಸ, ಅವಿಭಕ್ತಕುಟುಂಬ...ಎಲ್ಲಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ...ಮುಂದಿನ ಭಾಗಕ್ಕೆ ಕುತೂಹಲವಿದೆ...

    ಪ್ರತ್ಯುತ್ತರಅಳಿಸಿ
  3. @ all,

    ಕಥೆ ಇನ್ನೂ ಮುಂದುವರೆಯುತ್ತದೆ. ಓದುತ್ತಿರಿ...

    ಪ್ರತ್ಯುತ್ತರಅಳಿಸಿ