ಗುರುವಾರ, ಡಿಸೆಂಬರ್ 25, 2008

’ಕ್ಯಾಮರಾ ದರ್ಶನ!’

ನಾನು ಚಿಕ್ಕವಳಿದ್ದಾಗ ಲೈನೆಂಬೋ ಕ್ಯೂನಲ್ಲಿ ನಿಂತು,ನೂಕು ನುಗ್ಗಲಿನಲ್ಲಿ ಸಿಕ್ಕಿ, ಬೆವರಿ ಸುಸ್ತಾಗಿ ಬಿದ್ದು, ಕಾಲುಳುಕಿ ಅವಸ್ಥೆ ಪಟ್ಟಾಗಿನಿಂದ ನಮ್ಮಮ್ಮ ನನ್ನನ್ನು ’ದೇವಸ್ಥಾನಕ್ಕೆ ಹೋಗು’ ಅಂತ ಬಲವಂತ ಮಾಡುವುದನ್ನು ಬಿಟ್ಟುಬಿಟ್ಟಿದ್ದರು. ಬಾಯಿತಪ್ಪಿ ಕನಸಿನಲ್ಲಿ ವೆಂಕಟರಮಣ ಬಂದಿದ್ದ ಎಂದು ಹೇಳಿದಾಗಿನಿಂದ, ಮುಂದಿನ ತಿಂಗಳು ಬರುತ್ತಿದ್ದ ವೈಕುಂಠ ಏಕಾದಶಿಯನ್ನೇ ಎದುರು ನೋಡಲು ಶುರು ಮಾಡಿದರು.

ಆ ದಿನ ಬಂದದ್ದೇ ತಡ, ಬೆಳಿಗ್ಗೆಯೇ ’ದರ್ಶನ ಮಾಡ್ಕೊಂಡು ಬಾ’ ಎಂದು ಅಡುಗೆ ಮನೆಯಿಂದ ಆಜ್ಞೆ ಹೊರಡಿತು. ಹಾಲ್ ಟಿಕೆಟನ್ನು ಗಣೇಶನ ಹತ್ತಿರ, ಪೆನ್ ಬಾಕ್ಸನ್ನು ಸರಸ್ವತಿ ಹತ್ತಿರ ಇಟ್ಟು ಪೂಜೆ ಮಾಡಿಸಿಕೊಂಡು, ಅರಿಶಿನ ಕುಂಕುಮ ಮೆತ್ತಿಸಿಕೊಂಡ ಅವುಗಳನ್ನೂ, ಪ್ರಸಾದವನ್ನೂ, ತರುತ್ತಿದ್ದ ನನ್ನ ಸ್ನೇಹಿತೆಯರು ಇದ್ದಕ್ಕಿದ್ದ ಹಾಗೆ ನೆನಪಾಗಿಬಿಟ್ಟರು. ನಾನೂ ಹಾಗೆ ಮಾಡಬೇಕೆಂಬ ಆಸೆಯನ್ನು ತಾಳಲಾರದೆ, ಹಳೆಯದೊಂದು ಚಪ್ಪಲಿ ಏರಿಸಿ, ಒಂದೆರೆಡು ಕಾಯಿನ್ನುಗಳನ್ನು ದಕ್ಷಿಣೆಗೆ ಹಿಡಿದು, ದರಬರ ದೇವಸ್ಥಾನದ ಕಡೆಗೆ ನಡೆದೆ. ಇಂಥ ಮಹತ್ತರ ಕಾರ್ಯ ಕೈಗೊಳ್ಳಲು ಇನ್ನೂ ಒಂದು ಮುಖ್ಯ ಕಾರಣ ಇತ್ತು. ದೇವಸ್ಥಾನದಲ್ಲಿ ಈ ವರ್ಷ ಕ್ಯಾಮರ ಇಟ್ಟಿದ್ದಾರೆ, ಲೋಕಲ್ ಕೇಬಲ್ಲಿನಲ್ಲಿ ಲೈವ್ ಟೆಲಿಕಾಸ್ಟ್! ಅಂತೂ ವೈಕುಂಠ ಏಕಾದಶಿದಿನ ವೈಕುಂಠ ದ್ವಾರವನ್ನು ಹೊಕ್ಕಲು ವೆಂಕಠರಮಣ ನನ್ನನ್ನೂ ಪ್ರೇರೆಪಿಸಿದ್ದ!

ನಾನು ದೇವಸ್ಥಾನದ ರೋಡಿಗೆ ನಡೆಯಲೇ ಬೇಕಾಗಲಿಲ್ಲ, ಕ್ಯೂ ಮೂರನೇ ರೋಡಿಗೆ ಬಂದು ಬಿಟ್ಟಿತ್ತು. ನಾನು ನಿಂತು ನಿಂತು ಮುಂದಕ್ಕೆ ಹೋಗಲು ಶುರುಮಾಡಿದೆ. ಇನ್ನೇನು ದೇವಸ್ಥಾನದ ರಾಜಗೋಪುರ ಕಾಣಿಸುತ್ತಿದೆ ಅಂದುಕೊಳ್ಳುವಷ್ಟರಲ್ಲಿ, ’ಮೈಸೂರು ಸಿಲ್ಕ್ಸ್ ಅಂಡ್ ಸ್ಯಾರೀಸ್’ ’ಕೋಲ್ಗೇಟ್ ನಿಮ್ಮ ಹಲ್ಲುಗಳಿಗೆ’ ಅಂದುಕೊಂಡು ಫಲಕಗಳು ರಾಜಗೋಪುರದ ಮೇಲೆ ರಾರಾಜಿಸುವುದನ್ನು ಕಂಡು ಒಂದು ನಿಮಿಷ ದಿಗ್ಭ್ರಮೆಗೊಂಡೆ. ಹಾ! ದಿಗ್ಭ್ರಮೆ ಪಟ್ಟುಕೊಳ್ಳುವುದಕ್ಕೆ ಸಮಯವೆಲ್ಲಿ? ನನ್ನ ಹಿಂದೆ ನಿಂತಿದ್ದ ದಢೂತಿ ಹೆಂಗಸೊಬ್ಬಳು ’ಜಾಗ ಆಗ್ಲಿಲ್ವಾ? ನಡಿಯಮ್ಮ ಮುಂದಕ್ಕೆ’ ಎಂದು ತಳ್ಳುತ್ತಲೇ ಎಚ್ಚರವಾಯಿತು.

ಒಳಗೇ ಹೋಗುತ್ತಲೇ ಆಯಮ್ಮನಿಗೆ ತುಂಬಾ ಬೇಜಾರಾಗಿರಬೇಕು... ಕ್ಯಾಮರಾವನ್ನು ನೋಡಿದ ಕೂಡಲೇ ಹಿಂದಕ್ಕೆ ತಿರುಗಿ ಹುಳ್ಳಗೆ ನಕ್ಕು, ’ಹೆ... ಹೆ... ನೀವು ನಡೀರಿ ಮುಂದೆ’ ಎಂದು ತನ್ನ ಹಿಂದೆ ನಿಂತಿದ್ದವರಿಗೆ ಕೈ ತೋರಿಸಿದಳು. ಹಾಗೂ ಹೀಗೂ ಸಣ್ಣಗಿದ್ದ ಇಬ್ಬರು ಮೂವರು, ಹಗ್ಗಕ್ಕೂ ಆಯಮ್ಮನ ದೇಹಕ್ಕೂ ಇದ್ದ ಸಣ್ಣ ಗ್ಯಾಪಿನಲ್ಲಿ ತೂರಿಕೊಂಡು ಮುಂದಕ್ಕೆ ಹೋದರು. ಆಯಮ್ಮನ ಮೇಕಪ್ಪಿಗೆ ಟೈಮ್ ಸಿಕ್ಕಿತು.

ಅಷ್ಟರಲ್ಲೇ ಅಲ್ಲಿದ್ದ ಚಿಲ್ಟಾರಿಯೊಂದು, ’ಏ ಏನ್ಗೊತ್ತಾ, ಅಲ್ನೋಡು ಕ್ಯಾಮರ ಇಟ್ಟುಕೊಂಡಿದ್ದಾರೆ, ಇಲ್ಲಿ ಟೀವಿ ಇಟ್ಟಿರ್ತಾರೆ, ನೀನು ಹೋಗಿ ಟೀವಿ ನೋಡು, ನಾನು ಕಾಣಿಸ್ತೀನಿ, ಆಮೇಲೇ ನಾನು ನೋಡ್ತೀನಿ ನೀನು ನಿಂತ್ಕೋ’ ಅಂತ ತನ್ನ ವಿದ್ಯೇನೆಲ್ಲ ಇನ್ನೊಂದಕ್ಕೆ ಧಾರೆಯೆರೆಯಿತು. ಅವರ ಈ ಸರದಿ ಮೇಲಿನ ಸರದಿ ಆಟ, ಒಬ್ಬ ಶಾಸ್ತ್ರೀ ಆವಾಜ್ ಹಾಕುತ್ತಲೇ ನಿಂತು ಹೋಯಿತು.

ಈ ಕ್ಯಾಮರ ಚಳಕ ಇಲ್ಲಿಗೆ ನಿಲ್ಲಲಿಲ್ಲ. ಮೌನ ಗೌರಿಯ ಹಾಗೆ ಕೈ ಮುಗಿದು ಬರುತ್ತಿದ್ದ ಹೆಂಗಸೊಬ್ಬಳು, ಇದ್ದಕ್ಕಿಂದ ಹಾಗೆ ನೈವೇದ್ಯ ಮಾಡುವಂತೆ ಕೈ ಆಡಿಸುತ್ತಾ, ವೆಂಕಟರಮಣನನ್ನು ಹಾಡಿ ಹೊಗಳಲು ಶುರುಮಾಡಿಬಿಟ್ಟಳು. ಇನ್ನೊಬ್ಬಾತ, ಸಾಷ್ಟಾಂಗ ನಮಸ್ಕಾರ ಮಾಡಲು ಹೋಗಿ ಶಾಸ್ತ್ರಿಗಳ ಹತ್ತಿರ ಬೈಸಿಕೊಳ್ಳುವ ಹಾಗಾಯಿತು, ಪಾಪ!

ಹಾಗೂ ಹೀಗೂ ಎರಡೂ ಪಕ್ಕ ಕಟ್ಟಿದ್ದ ಮರದ ಕಟ್ಟಿಗೆಗಳಿಂದ ತಪ್ಪಿಸಿಕೊಂಡು ಹೊರಗಿನ ಆವರಣಕ್ಕೆ ಬಂದೆವು. ಇನ್ನೇನು ಹೋಗೋದು ತಾನೆ ಎಂದು ಯೋಚಿಸುತ್ತಿರುವಾಗಲೇ, ಪಕ್ಕದಲ್ಲಿದ್ದ ಅಜ್ಜಿ ಮೇಲೆ ಕೂತಿದ್ದ ವೆಂಕಟರಮಣನನ್ನು ತೋರಿಸುತ್ತಾ, ’ನಡೆಯಮ್ಮ ವೈಕುಂಠ ದ್ವಾರಕ್ಕೇ’ ಎಂದರು. ’ನನಗೆ ಅರ್ಜೆಂಟಿಲ್ಲಾ, ನೀವು ಹೋಗಿ’ ಎಂದು ಹೇಳಲು ಧೈರ್ಯ ಸಾಲದೇ ಸುಮ್ಮನೇ ಅವರ ಹಿಂದೆ ಹೊರಟೆ.

ಇಲ್ಲಿ ನೋಡಿದರೆ ಇನ್ನೊಂದು ಕ್ಯಾಮರಾ...

ಬಹುಶಃ ಜೊತೆಗೆ ಬಂದಿದ್ದ ಒಂದು ಜೋಡಿ ಬೇರೆ ಬೇರೆ ಆಗಿಬಿಟ್ಟಿತ್ತು ಎಂದು ಕಾಣುತ್ತದೆ. ನನ್ನ ಪಕ್ಕದಲ್ಲಿ ನಿಂತಿದ್ದ ಗಂಡಿಗೆ ತಕ್ಷಣವೇ ಒಂದು ಉಪಾಯ ಹೊಳೆಯಿತು. ಮೊಬೈಲ್ನಿಂದ ಕಾಲು ಮಾಡಿ ’ವೇರ್ ಆರ್ ಯೂ?’ ಎಂದು ಕೇಳಿದ. ಆ ಧ್ವನಿ ಏನು ಹೇಳೀತೋ ಏನೋ ’ವೇರ್?’ ವೇರ್?’ ಎನ್ನುತ್ತಾ ಸುತ್ತಲೂ ಕಣ್ಣಾಡಿಸಿದ. ಅವನ ಕಣ್ಣು ಅಲ್ಲಿಯೇ ನಿಂತಿದ್ದ ಟೀವಿ ಸ್ಕ್ರೀನನ್ನು ಸ್ಕ್ಯಾನ್ ಮಾಡಲು ತೊಡಗಿತು. ಕಡೆಗೇ ಆ ಹುಡುಗಿ, ಕ್ಯಾಮರ ಮುಂದೆ ಬಂದು ’ಐ ಯಾಮ್ ಹಿಯರ್’ ಎಂದಿತು. ಇವನು ಆ ಜಾಗವನ್ನು ಟ್ರೇಸ್ ಮಾಡಿಕೊಂಡು ಹೋದ. ಜೋಡಿ ಒಂದಾಯಿತು.

ಇನ್ನು ಕ್ಯಾಮರದಲ್ಲಿ ಬರಲು ’ವೆಂಕಟರಮಣ’ನ ಸರದಿ. ’ಇಲ್ಲಿ ಚೆನ್ನಾಗಿ ಕಾಣ್ತಿದೆ. ನಿಂತ್ಕೊಂಡು ಸ್ವಲ್ಪೊತ್ತು ನೋಡಿ’ ಆ ಅಜ್ಜಿಯ ಇನ್ನೊಂಡು ಸಲಹೆ. ಎಲ್ಲರಿಗೂ ಸೂಚನೆ ಸರಿಯೆನಿಸಿತು. ಆವಾಗಲೇ ನನಗೂ ಹೊಳೆದಿದ್ದು, ಕ್ಯಾಮರ ಬೆಳಕಿಗೆ ಕಣ್ಣು ಮುಚ್ಚಿದ್ದ ನಾನು ದೇವರ ದರ್ಶನವನ್ನೇ ಮಾಡಿಲ್ಲ. ನಮ್ಮ ’ಶ್ರೀ ವೆಂಕಟರಮಣ ’ ಡೆಕೊರೆಟಿವ್ ಹೂಗಳನ್ನು ಏರಿಸಿಕೊಂಡು ಟಿಪ್ ಟಾಪ್ ಆಗಿಬಿಟ್ಟಿದ್ದ. ತನ್ನ ಮುಂಬಾಗಿಲು ಎಲ್ಲವನ್ನೂ ಆ ಹೂಗಳಿಂದಲೇ ಅಲಂಕರಿಸಿಕೊಂಡಿದ್ದ. ಕನಕಾಂಬರ, ಸೇವಂತಿಗೆ ಎಲ್ಲಾ ಬೇಜಾರಾಗಿತ್ತೋ ಏನೋ? ಅಂತೂ ಕ್ಯಾಮರದಲ್ಲಿ ದರ್ಶನ ಮುಗಿಸಿಕೊಂಡು ಮನೆಗೆ ಬಂದೆ.

ನಾನು ಬರುತ್ತಿದ್ದಂತೆಯೇ, ಮನೆಯಲ್ಲಿ ಲೋಕಲ್ ಚ್ಯಾನಲ್ ನೋಡುತ್ತಿದ್ದ ಎಲ್ಲರಿಗೂ ಮುಸಿಮುಸಿ ನಗು, ’ಏನು ಒಂದು ಕ್ಯಾಮರ ಬೆಳಕು ತಡೆಯೋದಕ್ಕೆ ಆಗಲಿಲ್ಲವಾ? ಅದಕ್ಕೆ ಹೇಳೋದು ನಿನಗೆ ಗೂಬೆ ಕಣ್ಣು...’ ಎಂದು ಜೋರಾಗಿ ನಗು. ನನಗೂ ಯಾಕೋ ಕೋಪ ತಡೆಯಲಾಗಲಿಲ್ಲ. ’ತಿರುಗಿ ನನ್ನನ್ನು ದೇವಸ್ಥಾನಕ್ಕೆ ಹೋಗು ಎನ್ನಬೇಡ ಅಮ್ಮಾ...’ ಎಂದು ಕಿರುಚಿ ರೂಮಿನ ಬಾಗಿಲು ದಢಾರನೆ ಹಾಕಿದೆ. ಬಿಸಿ ಬಿಸಿ ಪುಳಿಯೋಗರೆ ಪೂರ್ತಿ ನನ್ನ ಪಾಲಿಗೇ ಉಳಿದಿದ್ದಕ್ಕೆ ಒಂದು ಥರ ಖುಷಿ ಆಗ ತೊಡಗಿತು.

24 ಕಾಮೆಂಟ್‌ಗಳು:

  1. ಮುತ್ತು ಮಣಿಯವರೆ....

    ವಿಡಂಬನೆ ತುಂಬಾ ಚೆನ್ನಾಗಿದೆ...
    ಜನರಿಗೆ ಟಿವಿಯಲ್ಲಿ ಮುಖಾ ತೋರಿಸೊ ಹುಚ್ಚನ್ನು ವಿನೋದ ಪೂರ್ಣವಾಗಿ ವಿವರಿಸಿದ್ದೀರಿ...
    ನಾನು ಫೋಟೊ ಗ್ರಾಫರ್ ಕೂಡ..
    ಕೆಲವೊಮ್ಮೆ ಫೋಟೊ ತೆಗೆಯಲು ಹೋದಾಗ ಬೇಡದಿರುವವರು ಮುಖ ತೂರಿಸುವದೇ ಜಾಸ್ತಿ...
    ಸ್ವಲ್ಪ ಆಚೆಗೆ ಹೋಗಿ ಎಂದು ಬಲವಂತವಾಗಿ ಹೇಳ ಬೇಕಾಗುತ್ತದೆ..!

    ನಿಮ್ಮನ್ನು ಕೇಳದೆ ನಿಮ್ಮ ಬ್ಲೋಗನ್ನು ಅನುಸರಿಸುತ್ತಿದ್ದೇನೆ...
    ಬಲವಂತವಾಗಿ ಮುಖ ತೂರಿಸಿ ಬಿಟ್ಟಿದ್ದೀನಾ..? ಗೊತ್ತಿಲ್ಲ...
    ಕ್ಷಮಿಸಿ...
    ಚಂದವಾದ ಬರಹಕ್ಕೆ ....
    ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  2. ಥ್ಯಾಂಕ್ಸ್ ಪ್ರಕಾಶ್,

    ನಿಮ್ಮ ಅನುಭವ ನನ್ನದಕ್ಕಿಂತ ಬಹಳ ಭಿನ್ನ ಮತ್ತು ಮೋಜಿನದ್ದಾಗಿರುತ್ತದೆನಿಸುತ್ತದೆ ಅಲ್ಲವೇ?

    ನನ್ನ ಬ್ಲಾಗನ್ನು ಧಾರಾಳವಾಗಿ ಫಾಲೋ ಮಾಡಿ.

    ಪ್ರತ್ಯುತ್ತರಅಳಿಸಿ
  3. ಮುತ್ತು ಮಣಿಯವರೆ...

    ನಿಮ್ಮ ಅನುಭವ ಕಡಿಮೆ ಏನಿಲ್ಲ...
    ದೇವರ ಸ್ಥಳದಲ್ಲಾಗುವ ಮೋಜಿನ ಕ್ಷಣಗಳ ಅನುಭವ.. ಮಜವಾಗಿ ವರ್ಣನೆ ಮಾಡಿದ್ದೀರಿ...
    ಕೊನೆಯಲ್ಲಿ ಬಿಸಿಬೇಳೆ ಬಾತ್ ಅಂತ ಬರೆದಿದ್ದರೆ..ಇನ್ನೂ ಮಜಾ ಬರುತಿತ್ತು..!
    ನನ್ನ ಬ್ಲೋಗಿನಲ್ಲಿ "ನಾಗುವಿನ ಹಾಡು" ಇಷ್ಟವಾಗಬಹುದು.. ಒಮ್ಮೆ ಧರ್ಯ ಮಾಡಿ..

    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  4. ಅನೇಕ ದಿನಗಳ ಅಂತರದಲ್ಲಿ ನ್ನ್ನ ಪೋಸ್ಟ್ ನೋಡಿ ಖುಷಿಯಾಯಿತು. ಅನೇಕ ಮಜಲುಗಳಿಂದ - ಕ್ಯಾಮರಾ- ದೇವಸ್ಥಾನ-ಡಾಂಬಿಕ ಭಕ್ತಿ-ಹೆಣ್ಣುಮಕ್ಕಳು- ವಿವರಿಸಿರುವೆ. ನನಗೆ ಕರ್ವಾಲೋದ ಮಂದಣ್ಣನ ಮದುವೆ ನೆನಪಾಯಿತು.!!

    ಪ್ರತ್ಯುತ್ತರಅಳಿಸಿ
  5. ಮುತ್ತುಮಣಿಯವರೆ,
    ಚೆನ್ನಾಗೆ ಬರೆದಿದ್ದೀರಿ...ಕ್ಯಾಮೆರಾ ಅಂದ ಕೂಡಲೇ ನಾನೋಡಿಬಂದೆ ಇಲ್ಲಿಗೆ ಇಲ್ಲಿ ನೋಡಿದರೆ ನಿಮ್ಮ ಪಜೀತಿ ಕಂಡು ನಗುಬಂತು. [ಎಲ್ಲರ ಪಜೀತಿಯೂ ಹೌದು] ನಿಮ್ಮ ಲಿಂಕಿಸಿಕೊಂಡಿದ್ದರೂ ನಾನು ಬಂದಿರಲಿಲ್ಲ. ಇನ್ನು ಮುಂದೆ ದಿನಾ ಬರುತ್ತೇನೆ. ನನ್ನ 'ಕ್ಯಾಮೆರಾ ಹಿಂದೆ " ಬ್ಲಾಗಿನಲ್ಲಿ ಹೊಸ ಲೇಖನ ಹಾಕಿದ್ದೇನೆ. ಬನ್ನಿ ನೀವು ಕರೆಂಟ್ ಷಾಕ್ ಹೊಡೆಸಿಕೊಳ್ಳಿ.

    ಪ್ರತ್ಯುತ್ತರಅಳಿಸಿ
  6. Ha ha ha...
    Smile on my face didn't fade till the end of the article. This was really very good. It was very nice reading your article after a long time :)

    Sorry for writing in English. Font problem:)

    ಪ್ರತ್ಯುತ್ತರಅಳಿಸಿ
  7. @ ಪ್ರಹಾಶ್,

    ಪ್ರಸಾದಕ್ಕೆ ಪುಳಿಯೋಗರೆ ಕಾಮನ್ ಅಲ್ವೇ, ಅದಕ್ಕೇ ಹಾಗೆ ಬರೆದೆ. ’ನಾಗುವಿನಹಾಡು’ ಸಿಗಲಿಲ್ಲ.

    @ ಚಂದ್ರಕಾಂತ
    ಮಂದಣ್ಣನ ಮದುವೆ ಹ್ಹಹ್ಹಹ್ಹ.. ಇನ್ನೊಂದು ಸಾರಿ ಓದಬೇಕು.

    @ ಶಿವು
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಖಂಡಿತ ಬ್ಲಾಗಿಗೆ ಬನ್ನಿ. ’ಕರೆಂಟ್ ಷಾಕ್’ ನಿಜಕ್ಕೂ ಷಾಕ್ ಹೊಡೆಸಿತು.

    @ ಸುಧೇಶ್,

    ನಿಮ್ಮ ಚೆಂದದ ಕಾಮೆಂಟಿಗೆ ಧನ್ಯವಾದಗಳು.
    ಹೊಸ ಪೋಸ್ಟ್ ಬಂದಿದೆಯೇ? ನೋಡುತ್ತೇನೆ.

    ಪ್ರತ್ಯುತ್ತರಅಳಿಸಿ
  8. ತುಂಬ ಚೆನ್ನಾಗಿದೆ ಮುತ್ತಕ್ಕ ಹಾಸ್ಯ - ತಿಳಿ ನೀರಿನ೦ತಿದೆ ಅಥವ ತುಳಸೀ ತೀರ್ಥ ಅನ್ಬೊಹುದೇನೊ....ಹ ಹ
    ಮೊದಲನೆ ಸಾಲಲ್ಲಿ "ಲೈನೆಂಬೋ" ಪದ ನೋಡಿ ಎಲ್ಲೋ ಸಿದ್ದಲಿಂಗಯ್ಯ ಸ್ಟ್ಯೆಲ್ ಸೀರಿಯಸ್ ಕಥೆ ಅನ್ಕೊಂಡೆ....
    ಯು ಪ್ರೂವ್ಡ್ ಮಿ ರಾಂಗ್ [ಹೆಂಗಿದ್ಯೆ ಇದು? ಯುರ್ ವಿಶ್ ಫುಲ್ ಫಿಲ್ಡ್...ಹಹಹ]

    ಹಾ...ಆದ್ರೆ ಅವತ್ತು ಗೂಬೆ...ಅಂದಿದ್ದು ನಾನಲ್ಲಮ್ಮ ....

    ಪ್ರತ್ಯುತ್ತರಅಳಿಸಿ
  9. ಯಾಕೋ ಸ್ವಲ್ಪ ಹೊಟ್ಟೆ ಕಿಚ್ಚಾಗ್ತ ಇದೆ ‌‌‌ಕಣೇ....॑॑॑॑

    ಇಷ್ಟು ಚೆನ್ನಾಗಿ ಬರ್ದಿದ್ಯಲ್ಲಾ ಅಂತ.... :)

    ಪ್ರತ್ಯುತ್ತರಅಳಿಸಿ
  10. ಮುತ್ತುಮಣಿಯವರೆ...

    ನನ್ನ ಬ್ಲೋಗಿನಲ್ಲಿ..

    ಈಗ ಹೊಸತಾಗಿ "ಮಿಲತೀ..ಹೆ ಜಿಂದಗೀ ಮೆ.." ಇದೆ
    ಇದರ ಹೀಂದಿನದು.."ನಾಗುವಿನ ..ಹಾಡು ಮತ್ತು..ಚಪಾತಿ.."

    ಬಂದು ನೋಡಿ ಸಿಗುತ್ತದೆ...

    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  11. @ ಗೀತಾ,

    ಹ್ಞೂ , ಪಡು ಪಡು ಅದಕ್ಕೇನಂತೆ!

    @ ಪ್ರಕಾಶ್,

    ಬರುತ್ತೇನೆ...

    ಪ್ರತ್ಯುತ್ತರಅಳಿಸಿ
  12. ಹೊಸವರುಷದ
    ಶುಭಕಾಮನೆಗಳು...

    ನಿಮ್ಮೆಲ್ಲ...

    ಆಸೆ,, ಆಕಾಂಕ್ಷೆಗಳು...
    ಈಡೇರಲಿ...

    ಶುಭ ಹಾರೈಕೆಗಳು...

    ಪ್ರತ್ಯುತ್ತರಅಳಿಸಿ
  13. ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  14. ಹೊಸ ವರುಷದಲ್ಲಿ ತು೦ಬಾ ಬ್ಯುಸಿ ಆಗಿದ್ದೀರಿ ಅ೦ತ ಕಾಣಿಸುತ್ತದೆ:)

    ಪ್ರತ್ಯುತ್ತರಅಳಿಸಿ
  15. ಬ್ಯುಸಿ ಆಗಿರೋದು ಹೊಸ ವರ್ಷದಲ್ಲಲ್ಲ... ಹೊಸ ಪ್ರಾಜೆಕ್ಟಲ್ಲಿ !

    ಪ್ರತ್ಯುತ್ತರಅಳಿಸಿ
  16. ಹಾ... ಬರಹ ಏನೋ ಇದೆ... ಆದ್ರೆ ಪೈಪಲ್ಲೇ ನಿದ್ದೆ ಮಾಡ್ಬಿಟ್ಟಿದೆ. ಎಬ್ಬಿಸಿ ಕಳಿಸಬೇಕು.

    ಎನಿ ಸಜೆಷನ್ಸ್?

    ಪ್ರತ್ಯುತ್ತರಅಳಿಸಿ
  17. ಜನ ಮರಳೋ ಜಾತ್ರೆ ಮರುಳೋ ಎಂದಿರುವುದು ಇಂತಹವರಿಗೇ ಇರಬಹುದು. ದೇವರನ್ನೂ ಬಿಡರು ಈ ಮರಳುರು!!! ಲೇಖನದೊಳಗೆ ವಿಡಂಬನೆ, ವ್ಯಂಗ್ಯ ತುಂಬಾ ಚೆನ್ನಾಗಿ ಮೂಡಿದೆ. ಹೀಗೇ ಬರೆಯುತ್ತಿರಿ.

    ಪ್ರತ್ಯುತ್ತರಅಳಿಸಿ
  18. ತುಂಬಾ ದಿನಗಳ ಮೇಲೆ ನನ್ನ ಬ್ಲಾಗಿಗೆ ಬಂದಿದ್ದೀರಿ ಅನ್ನಿಸುತ್ತದೆ... ಮತ್ತೊಮ್ಮೆ ಸ್ವಾಗತ. :)

    ನೀವು ಉದಾಹರಿಸಿದ ಗಾದೆ ನನ್ನ ಲೇಖನಕ್ಕೆ ತಕ್ಕುದಾಗಿದೆ, ಇದನ್ನೇ ಬಹುಶಃ ಲೇಖನದ ಶೀರ್ಷಿಕೆ ಮಾಡಬಹುದೇನೋ?

    ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  19. ಮುತ್ತುಮಣಿ ಮೇಡಮ್,

    ನೀವು ಏನಾದರೂ ಹೊಸದನ್ನು ಬರೆದಿದ್ದೀರಾ ಅಂತ ನೋಡಲು ಬಂದೆ....ಮತ್ತೊಮ್ಮೆ ಇದೇ ಲೇಖನವನ್ನು ಮೆಲುಕುಹಾಕಿದೆ....ಖುಷಿಯಾಗುತ್ತದೆ.....

    ಆಹಾಂ ! ನನ್ನ ಹೊಸ ಭಾವುಕ ಲೇಖನ "ಇದೋ...ತಂಗಿ ನಿನಗೊಂದು ಪತ್ರ, ನಗೆ ತರಿಸುವ "ಬೀಟ್ ಬಾಯ್ ರಿಂಗ್ ಟೋನ್" ಹಾಗೂ " ಚಿಂದಿ ಆಯುವವರು" ನೋಡಲು ಛಾಯಕನ್ನಡಿಗೆ ಬ್ಲಾಗಿಗೆ ಭೇಟಿಕೊಡಿ....ಸಾಧ್ಯವಾದರೆ ನನ್ನ ಮತ್ತೊಂದು ಬ್ಲಾಗ್ ಕ್ಯಾಮೆರಾ ಹಿಂದೆ ಬ್ಲಾಗಿನ "ಚುಮುಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ ಓದಿ..ಅಭಿಪ್ರಾಯ ತಿಳಿಸಿ.....ಥ್ಯಾಂಕ್ಸ್....

    ಪ್ರತ್ಯುತ್ತರಅಳಿಸಿ
  20. ಮುತ್ತುಮಣಿ ಮೇಡಮ್,

    ಮನಃಪೂರ್ವಕವಾಗಿ ನಗಬೇಕಾ.. ......!! ನಡೆದಾಡುವ ಭೂಪಟಗಳನ್ನು....ನೋಡಲು ಬನ್ನಿ....

    http://chaayakannadi.blogspot.com/

    ಪ್ರೀತಿಯಿರಲಿ...

    ಶಿವು.....

    ಪ್ರತ್ಯುತ್ತರಅಳಿಸಿ
  21. ಬಹಳ ದಿನಗಳ ನಂತರ ಒಂದು ಒಳ್ಳೆಯ ಲಘುಪ್ರಬಂಧವನ್ನು ಓದಿದೆ, ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  22. @ ಡಾ ಸತ್ಯನಾರಾಯಣ,

    ನನ್ನ ಲೇಖನವು ಸಾಹಿತ್ಯದ ಒಂದು ಪ್ರಕಾರವೆನಿಸಿಕೊಳ್ಳಲು ಅರ್ಹವೆನಿಸಿದ್ದು, ಒಂದು ರೀತಿಯ ಸಮಾಧಾನ ಕೊಡುತ್ತದೆ.
    ಥ್ಯಾಂಕ್ಸ್...

    ಹೀಗೆ ಬರುತ್ತಿರಿ.

    ಪ್ರತ್ಯುತ್ತರಅಳಿಸಿ
  23. @ ಶಿವು,

    ಉತ್ತರಿಸುವುದು ತಡವಾಯ್ತು. ನೀವು ಹೇಳಿದ ಎಲ್ಲ ಲೇಖನಗಳನ್ನು ನೋಡಿದೆ. ತಲೆಯ ಮೇಲಿನ ಭೂಪಟವಂತು ಬಹಳ ಮಸ್ತ್!

    ನಿಮ್ಮ ಬ್ಲಾಗಿನಲ್ಲಿ ಹೇಳಬೇಕ್ಕಾದ್ದನ್ನು ಇಲ್ಲಿ ಹೇಳಿಬಿಟ್ಟೆ, ಕ್ಷಮೆಯಿರಲಿ.

    ಪ್ರತ್ಯುತ್ತರಅಳಿಸಿ