ಭಾನುವಾರ, ಸೆಪ್ಟೆಂಬರ್ 28, 2008

ಸವಿತಾ

ಗಂಡಸರಿಗೆ ನಿಮ್ಮ ಸಂದೇಶವೇನು?...

ಸುಂದರಾಂಗನಾದ ಸುಬ್ಬಯ್ಯನನ್ನು ಬಿಡುಗಣ್ಣಿನಿಂದ ನೋಡುತ್ತಾ ತಾಳಿ ಕಟ್ಟಿಸಿಕೊಂಡಾಗ, ತಾನು ಈ ರೀತಿ ಪ್ರಶ್ನೆಯನ್ನು ಎದುರಿಸಬೇಕಾಗಬಹುದೆಂದು ಸವಿತಾಗೆ ಅನ್ನಿಸಿರಲಿಲ್ಲ. ಮೈಕನ್ನು ಹಿಡಿದ ನವೀನ ಇನ್ನೊಂದು ಸಾರಿ ಕೇಳಿದನು, ’ಭಯವಿಲ್ಲ ಹೇಳಿ’. ಸವಿತಾ ಉತ್ತರ ಕೊಡುವುದಕ್ಕೆ ಇನ್ನೂ ಒಂದು ಕ್ಷಣ ತಡೆಯಬೇಕಾಯಿತು.

ಸುಬ್ಬಯ್ಯ ಯಾವ ರೀತಿಯಿಂದಲೂ ಯಾರೂ ದೂಷಿಸುವುದಕ್ಕೆ ಕಾರಣನಾದ ವ್ಯಕ್ತಿಯೇ ಅಲ್ಲ. ಅವನ ಮನೆಯಲ್ಲೂ ಅಷ್ಟೆ, ಹಾದಿ - ಬೀದಿಯಲ್ಲೂ ಅಷ್ಟೆ. ತಾನಾಯಿತು ತನ್ನ ಕೆಲಸವಾಯಿತು. ಉಳಿದ ಅಣ್ಣ - ತಮ್ಮಂದಿರು ಸಣ್ಣ ಸಣ್ಣ ವಿಷಯಗಳಿಂದ ಹಿಡಿದು, ಆಸ್ತಿ ಮನೆ ಮಠಗಳವರೆಗೆ ಏನು ಕಿತ್ತಾಡಿದರೂ ಇವನು ಚಕಾರ ಎತ್ತಿದವನಲ್ಲ. ಅದನ್ನು ಸರಿಪಡಿಸಲು ತನ್ನಿಂದ ಆಗಬಹುದೇ ಎಂದು ಯೋಚಿಸಲೂ ಹೋಗಿರಲಿಲ್ಲ. ಮದುವೆಯಾಗುವಷ್ಟರಲ್ಲಿ ಮೂವತ್ತು ಕಳೆದಿದ್ದಿರಬಹುದು. ಆದರೆ, ಅವನೇನು ಹಾಗೆ ಕಾಣುತ್ತಿರಲಿಲ್ಲ.

ಸವಿತಾ ಮನೆಗೆ ’ನೋಡಲು’ ಬಂದ ಮೊದಲ ಗಂಡು ಇವನೇ. ಹತ್ತೊಂಭತ್ತು ತುಂಬಿದರೂ ಇನ್ನೂ ಯಾವ ಜಾತಕವೂ ಹೊಂದಿಕೆಯಾಗದಿದ್ದದ್ದು ಮನೆಯಲ್ಲಿ ಭಾರಿ ಗೊಂದಲ ಉಂಟುಮಾಡಿತ್ತು. ಅವಳ ಅಜ್ಜಿಯಂತೂ, ’ಹತ್ತೊಂಭತ್ತು ಅಂದರೆ ಸರ್ಕಾರ ಕೊಟ್ಟಿರೋದಕ್ಕಿಂತ ಒಂದು ವರ್ಷ ಹೆಚ್ಚಂತೆ’ ಎಂದು ದಿನಕ್ಕೆ ನೂರು ಬಾರಿ ಹೇಳಿ, ಸರ್ಕಾರದ ರೂಲನ್ನೆ ತಲೆಕೆಳಗು ಮಾಡುತ್ತಿದ್ದಳು. ಅಷ್ಟಾದರೂ, ಹೀಗೆ ದಿಢೀರಂತ ಒಂದು ಗಂಡಿನ ಜಾತಕ ಹೊಂದಿಕೊಂಡು, ’ಮುಂದಿನ ಒಂದೆರಡು ತಿಂಗಳಲ್ಲಿ ಮದುವೆ ಮುಗಿದು ಹೋಗಲಿ, ಆಮೇಲೆ ಆಷಾಢ’ ಎಂದು ಗಂಡಿನ ಕಡೆಯವರು ದುಂಬಾಲು ಬಿದ್ದಾಗ, ಅಜ್ಜಿಯನ್ನೂ ಸೇರಿಸಿ ಎಲ್ಲರಿಗೂ ನಾವು ಅಷ್ಟು ಅವಸರ ಮಾಡಬಾರದಿತ್ತು ಅನಿಸದೆ ಇರಲಿಲ್ಲ.

ಮದುವೆಯಾದ ಮೇಲೂ ಸುಬ್ಬಯ್ಯನ ಜೀವನದಲ್ಲಿ ಅಂತಹ ಬದಲಾವಣೆಯೇನೂ ಕಾಣಲಿಲ್ಲ. ಅವನು ಹಾಗೆ ಬದಲಾಗಬೇಕಾದ ಅಗತ್ಯವೂ ಇರಲಿಲ್ಲ. ಸವಿತಾಳಿಗೂ ಅಷ್ಟೆ. ಲೋಕಾರೂಢಿಯಲ್ಲಿ ಹೇಳುವುದಾದರೆ ಅವನು ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ದುಡಿದು ತಂದು ಹಾಕುತ್ತಿದ್ದ. ಸೀರೆ - ಹೂವು ತಂದು ಕೊಡುತ್ತಿದ್ದ. ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದ. ಊರಿನವರಿಗೆ ಬೇಕಾದ ಸಣ್ಣ ಪುಟ್ಟ ಸಹಾಯಗಳನ್ನು ಮಾಡುತ್ತಿದ್ದ. ಯಾವ ದುಶ್ಚಟವೂ ಇರಲಿಲ್ಲ. ಕಾಲಕ್ರಮೇಣ ಅವನಿಗೆ ಇಬ್ಬರು ಮಕ್ಕಳೂ ಆದರು. ಲಿಂಗ ಯಾವುದು ಎಂಬುದು ಈಗ್ಗೆ ಮುಖ್ಯವಲ್ಲ. ಅವೂ ಶಾಲೆಗೆ ಹೋಗಲು ಶುರುವಿಟ್ಟುಕೊಂಡವು. ಒಟ್ಟಿನಲ್ಲಿ, ಯಾರೂ ಬಾಯಿಬಿಡದಿದ್ದರೂ ಅವನೊಬ್ಬ ದೇವರಂತ ಮನುಷ್ಯ ಎಂಬ ಭಾವನೆ ಊರಿನವರಲ್ಲೆಲ್ಲಾ ಬೇರೂರಿಬಿಟ್ಟಿತ್ತು. ಸವಿತಾಗೆ ಅದರ ಬಗ್ಗೆ ಯೋಚಿಸುವ ಅಗತ್ಯವೂ ಇರಲಿಲ್ಲ. ಅಷ್ಟೇ ಏಕೆ, ತನ್ನ ಒಳ್ಳೆಯತವನ್ನು ಕಂಡು ಸುಬ್ಬಯ್ಯನಿಗೇ ಒಮ್ಮೊಮ್ಮೆ ಹುಬ್ಬೇರಿಸುವಂತಾಗುತ್ತಿತ್ತು.

ಆದರೆ, ಜೀವನ ಅಷ್ಟರಿಂದಲೇ ತೃಪ್ತಿಪಟ್ಟುಕೊಳ್ಳುವಂತಹುದ್ದಾಗಿರಲಿಲ್ಲ. ಮಕ್ಕಳು ಏನೇ ಕಿತ್ತಾಡಿದರೂ ಗಟ್ಟಿಯಾಗಿ ನಿಂತು ನೆಲೆ - ಬೆಲೆಯನ್ನು ಹುಷಾರು ಮಾಡಿಕೊಂಡಿದ್ದ ತಂದೆಯೂ ಒಂದೊಮ್ಮೆ ಇಲ್ಲವಾಗಲೇಬೇಕಾಯಿತು. ಇಷ್ಟು ದಿನ ಕೋಳಿ ಜಗಳವಾಡಿ ಸುಮ್ಮನಾಗುತ್ತಿದ್ದ ಅಣ್ಣ - ತಮ್ಮಂದಿರು ನಾಯಿ ನರಿಗಳಾದರು. ತಾಯಿ ಮೂಲೆ ಪಾಲಾದಳು. ಇಷ್ಟು ದಿನ ಸುಮ್ಮನಿದ್ದದ್ದು ಸರಿಯೇ, ಇನ್ನು ಮುಂದೆ ಹೀಗಾದರೆ ಉಳಿಗಾಲವಿಲ್ಲ ಎಂದು ಸುಬ್ಬಯ್ಯನಿಗೆ ಕಿವಿಮಾತು ಬರಲಾರಂಭಿಸಿತು. ಆದರೆ, ಅವನು ಏನು ಮಾಡಲು ಹೋದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಜನ ಊರಿನಲ್ಲಿ ಇರಲಿಲ್ಲ. ಅಣ್ಣ - ತಮ್ಮಂದಿರಿಗಂತೂ ಈ ಗುಬ್ಬಚ್ಚಿಯ ಮಾತು ಕೇಳುವುದರಲ್ಲಿ ಯಾವ ಪ್ರಯೋಜನವೂ ಕಾಣಲಿಲ್ಲ. ಇವನನ್ನು ಹತ್ತಿಕ್ಕುವುದು ಅವರಿಗೇನು ಕಷ್ಟದ ಕೆಲಸವಾಗಲಿಲ್ಲ. ದಾಂಢಿಗರಾಗಿದ್ದ ತಾವೆಲ್ಲಾ ಸೇರಿ ಹೇಗಾದರೂ ಪರಿಹಾರ ಹುಡುಕುವುದು ಅವರ ಗುರಿಯಾಗಿತ್ತೇ ಹೊರತು, ನ್ಯಾಯ ನೀತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಯಾರಿಗೂ ಸಮಯವಿರಲಿಲ್ಲ. ಇದರಲ್ಲಿ, ತಮ್ಮ ಹೆಂಡತಿ ಮಕ್ಕಳ ಕ್ಷೇಮ - ಭವಿಷ್ಯಗಳು ಮುಖ್ಯವಾಗಿತ್ತೆ ಹೊರತು, ಸ್ವಾರ್ಥವೇನು ಇರಲಿಲ್ಲ.

ತನ್ನ ಗಂಡನ ಮೌನ ಇತ್ತೀಚೆಗೆ ಸವಿತಾಳಿಗೆ ಕೋಪ ಬರಿಸಲು ಶುರು ಮಾಡಿತ್ತು. ಅವಳು ಈಗೇನು ಸುಂದರವಾದ,ಮುಗ್ಧ ,ಹೆಂಗಳೆಯಾಗಿ ಉಳಿದಿರಲಿಲ್ಲ. ಊರಿನವರಿಗೂ ಅವನ ಈ ರೀತಿ ಸರಿ ಬರಲಿಲ್ಲ. ಸುಬ್ಬಯ್ಯ ಇಷ್ಟು ಹೆಣ್ಣು ಹೆಂಗಸಾಗಬಾರದಿತ್ತು ಎಂದು ಅವರ ಅನಿಸಿಕೆ! ಸುಬ್ಬಯ್ಯ ತನ್ನ ಕಷ್ಟವನ್ನು ತನ್ನ ತಾಯಿಯ ಬಳಿ ತೋಡಿಕೊಂಡ, ಪರಿಚಯದವರ ಬಳಿ ಹೇಳಿಕೊಂಡ, ತನ್ನ ಸೋದರರೆದುರು ನಿಂತು ತಾನು ಎಷ್ಟು ಒಳ್ಳೆಯತನದಿಂದ ಜೀವನ ನಡೆಸಿದ್ದೇನೆಂಬುದನ್ನು ಹೇಳಿದ್ದ. ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಅವನಿಗೆ ದೇವರ ಮೇಲೂ ಅನುಮಾನ ಶುರುವಾಗಲು ತೊಡಗಿತು. ಕಡೆಕಡೆಗೇ ಯಾರೂ ನನಗೆ ಅಯ್ಯೋ ಪಾಪ ಕೂಡ ಅನ್ನಲಿಲ್ಲವೇ ಎಂದು ಊರವರ ಮೇಲೆಯೆ ಸಿಟ್ಟು ಬರತೊಡಗಿತ್ತು. ಹೆಂಡತಿ ಕೋಪ ತಡೆಯಲಾರದೆ ಒಂದೆರಡು ಸಾರಿ ಮೂದಲಿಸಿದಳು. ಅವನಿಗೆ ಇದನ್ನಂತೂ ತಡೆಯಲು ಸಾಧ್ಯವೇ ಆಗಲಿಲ್ಲ. ತಾನು ಇಷ್ಟು ದಿನ ಮಾಡಿದ್ದೆಲ್ಲಾ ವ್ಯರ್ಥವೆನಿಸತೊಡಗಿತು.

ಕಡೇ ಪ್ರಯತ್ನವೆಂದು, ಕೋರ್ಟಿನಲ್ಲಿ ಹಾಕಿದ್ದ ಕೇಸು ಇವನಿಗೇ ಉಲ್ಟಾ ಹೊಡೆಯಿತು. ಅಣ್ಣ - ತಮ್ಮಂದಿರ ಆಸ್ತಿಯೆಲ್ಲ ಅವರ ಸ್ವಯಾರ್ಜಿತವೆಂದೂ, ಅದರಲ್ಲಿ ಇವನಿಗೆ ಹಕ್ಕು ದೊರೆಯುವುದು ಸಾಧ್ಯವಿಲ್ಲವೆಂದೂ ಕೋರ್ಟು ತೀರ್ಪು ಕೊಟ್ಟಿತು. ಸುಬ್ಬಯ್ಯ ತನ್ನೊಳಗೇ ಒಂದು ನಿರ್ಧಾರಕ್ಕೆ ಬಂದ. ಇನ್ನು ರೀತಿಯ ಬಾಳು ಬಾಳಿ ಏನೂ ಸುಖವಿಲ್ಲ.

ಸವಿತಾ ಬಾಗಿಲು ತೆಗೆದಾಗ, ತಾನು ಕನಸು ಮನಸಿನಲ್ಲೂ ನೆನಸದ್ದನ್ನು ನೋಡಬೇಕಾಯಿತು. ಸುಬ್ಬಯ್ಯ ಕುಡಿದು ಬಂದಿದ್ದ. ಹೇಗೆ? ಇದಕ್ಕೆ ಊರವರೆಲ್ಲ ಕುಳಿತು ಯೋಚಿಸಿದರೂ ಉತ್ತರ ಸಿಗುವುದು ಸಾಧ್ಯವಿರಲಿಲ್ಲ. ಅಂತೂ ಸುಬ್ಬಯ್ಯ ಆವತ್ತು ಕುಡಿದು ಬಂದಿದ್ದ. ಅದನ್ನು ಹೇಗೆ ಸಂಭಾಳಿಸಬೇಕೆಂಬುದು ಅವನಿಗೇ ತಿಳಿದಿರಲಿಲ್ಲ, ದಢಕ್ಕನೆ ನೆಲಕ್ಕೆ ಉರುಳಿದ. ಸವಿತಾಗೂ ಒಂದು ಕ್ಷಣ ಕರುಳು ಚುರುಕ್ಕೆನಿಸಿತು. ಇನ್ನೊಂದು ದಿನ ಊರ ಗೌಡರಿಂದ ಕಂಪ್ಲೇಂಟು ಬಂತು. ಸುಬ್ಬಯ್ಯ ಕೆಲಸಕ್ಕೆ ಸರಿಯಾಗಿ ಹೋಗುತ್ತಿಲ್ಲವಂತೆ! ನಾಲ್ಕನೇ ದಿನ, ಸವಿತಾಳ ವಾರಗಿತ್ತಿಯೇ ಎದುರು ಬಂದಳು. ’ಏನು ತಾಯಿ, ಕುಡಿದು ಬಂದು ಗಲಾಟೆ ಮಾಡ್ತಾನಲ್ಲ? ಆಳುಗಳ ಕೈಲಿ ಕತ್ತಿನ ಪಟ್ಟಿ ಹಿಡಿದು ಆಚೆ ತಳ್ತಿದ್ದ್ರೆ ನನಗೂ ಒಂಥರಾ ಅನ್ಸಲ್ವಾ?’ ಇದಕ್ಕೆ, ಏನು ಉತ್ತರ ಕೊಡಬೇಕೆಂದು ಸವಿತಾಳಿಗೇ ತಿಳಿಯದೆ ಹೋಯಿತು. ಅಂತೂ ಮನೆಗೆ ಬರುವಷ್ಟರಲ್ಲಿ ಅವನನ್ನು ಬಾಗಿಲ ಬಳಿ ನೂಕಿ ಹೋಗಿದ್ದರು! ಸವಿತಾ ಅವನನ್ನು ಎಳೆದು ತಂದು ಒಳಗೆ ಮಲಗಿಸಬೇಕಾಯಿತು.

ಇವತ್ತು, ನಾಳೆ, ಈಗ ಎಂದು ತನ್ನ ಗಂಡ ಕುಡಿತವನ್ನು ಬಿಡುವ ದಾರಿಯನ್ನೇ ನೋಡುತ್ತಿದ್ದಳು ಸವಿತಾ. ವಾರಕ್ಕೆ ಮೂರುದಿನವಾದರೂ ಕೆಲಸಕ್ಕೆ ಹೋಗುತ್ತಿದ್ದವ, ಈಗ ಅದನ್ನೂ ನಿಲ್ಲಿಸಿದ್ದ. ಎಷ್ಟು ದಿನ ಕುಡಿತಾನೆ ಎಂಬ ಧೈರ್ಯದ ಮೇಲೆ ಮಾಡಿದ ಸಣ್ಣ ಪುಟ್ಟ ಸಾಲಗಳನ್ನೂ ತೀರಿಸಲಾಗದ ಪರಿಸ್ಥಿತಿ ಬಂದು ಬಿಟ್ಟಿತು. ಎರಡು ದಿನ ಗಂಜಿ, ಒಂದು ದಿನ ಬರಿಯ ನೀರೇ ಗತಿಯಾಯಿತು. ಸವಿತಾಳ ಈ ಕಷ್ಟವನ್ನು ನೋಡಿ ಹಲವರು ಮರುಗಿದರು. ಊರಿನ ಹಿರಿಯರು ಅನ್ನಿಸಿಕೊಂಡವರಿಗಂತೂ ಹೇಳತೀರದ ಹಿಂಸೆ. ಹೆಂಗಸರಿಗೆ ಬರುವ ಇಂತಹ ಕಷ್ಟವನ್ನು ಸರಿಪಡಿಸುವುದಕ್ಕೆ ಅವರ ಬಳಿ ಯಾವ ಉಪಾಯವೂ ಇರಲಿಲ್ಲ.

ಶಾಲೆಗೆ ಹೋಗುವ ತನ್ನ ಮಕ್ಕಳ ಮತ್ತು ತನ್ನ ಹೊಟ್ಟೆ - ಬಟ್ಟೆಗಾಗಿ ಸವಿತಾಳೇ ದಿನಗೂಲಿ ಮಾಡುವ ನಿರ್ಧಾರ ಮಾಡಿದಳು. ಊರಿಂದೂರಿಗೆ ಹೋಗಿ ಬರುತ್ತಿದ್ದಳು. ಏತನ್ಮಧ್ಯೆ, ಲಾರಿಯಲ್ಲಿ ಹೇಗೋ ಇಟ್ಟಿದ್ದ ಕಬ್ಬಿಣದ ಸರಳೊಂದು, ಬ್ರೇಕು ಹಾಕಿದಾಗ ಜಾರಿ ಬಿದ್ದು ಎಡದ ಅಂಗೈಯನ್ನು ಮುರಿದು ಹಾಕಿತು. ವಿಧಿಯಿಲ್ಲದೇ ಒಂದೇ ಕೈಯಲ್ಲಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿದಳು. ಜೀವನ ಮತ್ತೆ ಮುಂದುವರಿಯತೊಡಗಿತು. ಸುಬ್ಬಯ್ಯನನ್ನು ಹೇಗಾದರೂ ದಾರಿಗೆ ತರುವ ಪ್ರಯತ್ನ ಮಾಡತೊಡಗಿದಳು. ಯಾವುದಕ್ಕೂ ಅವನು ಬಗ್ಗುವ ಹಾಗೆ ಕಾಣಲಿಲ್ಲ.

ಊರವರೆಲ್ಲ ಸಲಹೆ ಕೊಟ್ಟರೂ ತನ್ನ ತವರು ಮನೆಗೆ ಹೋಗುವ ಯೋಚನೆ ಮಾಡಲಿಲ್ಲ. ಪರಿಸ್ಥಿತಿ ದಿನದಿನಕ್ಕೆ ಇನ್ನೂ ಹದಗೆಡತೊಡಗಿತ್ತು.ತಾನಾಯಿತು ತನ್ನ ಕುಡಿತವಾಯಿತು ಎಂದು ಇರುತ್ತಿದ್ದವ ಈಗ ದುಡ್ಡಿಗಾಗಿ ಸವಿತಾಳನ್ನು ಪೀಡಿಸತೊಡಗಿದ್ದ. ಅಷ್ಟಿಷ್ಟು ರಂಪವಾಗಿ ನಿಲ್ಲುತ್ತಿದ್ದ ಜಗಳ ಒಂದು ದಿನ ತಾರಕಕ್ಕೇರಿತು. ಸುಬ್ಬಯ್ಯ ಮಚ್ಚು ಹಿಡಿದು ತೂರಾಡುತ್ತಿದ್ದ. ನಿನಗೆ ವರ್ಷಾನುಗಟ್ಟಲೇ ತಂದು ಹಾಕಿದ್ದೆಲ್ಲಾ ಮರೆತುಹೋಯಿತಾ? ಈಗ ತೀರಿಸು ಋಣಾನ... ಸವಿತಾ ಮತ್ತೆ ಅವನ ಕುಡಿತದ ವಿಷಯಕ್ಕೆ ತಲೆ ಹಾಕಲಿಲ್ಲ. ನಿತ್ಯ ಅವನಿಗೆ ಕುಡಿತಕ್ಕೆ ದುಡ್ಡು ಕೊಡಬೇಕಾದ್ದು ಅನಿವಾರ್ಯವಾಯಿತು.

ಸವಿತಾಳ ಬದುಕು ಇನ್ನೂ ಮುಂದಕ್ಕೆ ಹೋಗುತ್ತಲೇ ಇತ್ತು. ಮಕ್ಕಳು ಯಾರ ಮನೆಯ ನೆನ್ನೆಯ ಸಾರು, ಉಳಿದ ಅನ್ನಕ್ಕೂ ಕೈ ಚಾಚುವಂತಿರಲಿಲ್ಲ. ಅಮ್ಮನಿಂದ ಬೀಳುತ್ತಿದ್ದ ಒದೆಯೆ ಅದಕ್ಕೆ ಕಾರಣವಾಗಿತ್ತು. ಪ್ರೈಮರಿ ಪಾಸು ಮಾಡಿ ಮಿಡ್ಲಿ ಸ್ಕೂಲಿಗೆ ಬಂದರು. ಪಕ್ಕದೂರಿನ ಪ್ರೈವೇಟು ಶಾಲೆಗೇ ಹೋದರು. ಸರ್ಕಾರದ ಸಾಲದಲ್ಲಿ ಒಂದು ಜಮೀನು ಖರೀದಿ ಮಾಡಿದ್ದಾಳೆ ಎಂಬ ಬಿಸಿ ಬಿಸಿ ಸುದ್ದಿ ಊರೆಲ್ಲಾ ಹಬ್ಬಿತು. ಇದ್ಯಾಕೋ, ಮತ್ತೆ ಊರವರಿಗೆ ಸರಿಬೀಳಲಿಲ್ಲ. ಈ ಬಾರಿ ಅವರ ಯೋಚನೆ ಹೀಗಿತ್ತು - ಏನಾದರೂ ಹೆಣ್ಣಿಗೆ ಇಷ್ಟು ಗಂಡುಬೀರಿತನ ಇರಬಾರದು.

ಇನ್ನು ಗಂಡೇ ಆಗಿದ್ದರೇ ಇನ್ನೇನೋ ಎಂದು ಕೆಲವರಿಗೆ ಚಿಂತೆಗಿಟ್ಟುಕೊಂಡಿತು. ಗಂಡಾಗಿದ್ದರೆ ನಮ್ಮ ಮನೆಯಲ್ಲೇ ಉಳಿಸಿಕೊಳ್ಳಬಹುದಿತ್ತಲ್ಲ ಎಂದು ತವರುಮನೆಯವರಿಗೂ ಅನಿಸಿತು.

ಸವಿತಾಳಿಗೆ ಇದಕ್ಕೆ ಏನು ಹೇಳಬೇಕೆಂದು ನಿಜವಾಗಿಯೂ ತಿಳಿಯಲಿಲ್ಲ. ಉತ್ತರ ಕೊಡುವ ಚಪಲವೂ ಅವಳಿಗಿರಲಿಲ್ಲ. ಪಕ್ಕದೂರಿಗೆ ಹೋಗುತ್ತಿದ್ದ ಮಕ್ಕಳು ತಮ್ಮ ಮನೆಯ ವಿಶೇಷ ವಿಷಯಗಳನ್ನು ಚಾಚೂ ತಪ್ಪದೆ ತಮ್ಮ ಗೆಳೆಯರ ಬಳಿ ಹೇಳುತ್ತಿದ್ದರು. ಆ ಊರಿನ ಕೆಟ್ಟು ಹೋದ ಪಂಪು ಸೆಟ್ಟುಗಳ ಬಗ್ಗೆ ವರದಿ ಮಾಡಲು ಬಂದಿದ್ದ ಟೀವಿಯವರಿಗೆ ಈ ಸುದ್ದಿ ಕೇಳಿದ್ದೇ ಎಲ್ಲಿಲ್ಲದ ಖುಷಿಯಾಯಿತು. ’ಗಂಡನ ಕುಡಿತಕ್ಕೆ ಹೆಂಡತಿಯೇ ಸ್ಪಾನ್ಸರರ್’ ವಿಶೇಷ ವರದಿ ಮುಂದಿನ ಸೋಮವಾರ ಹತ್ತು ಘಂಟೆಗೆ ಕ್ರೈಮ್ ಸ್ಟೋರಿಯಲ್ಲಿ ಪ್ರಸಾರವಾಗುವುದಿತ್ತು.

ಅದಕ್ಕೆ, ನವೀನ ಟೀವಿ ಚಾನ್ನಲ್ಲಿನವರೊಂದಿಗೆ ಊರಿಗೆ ಬಂದಿದ್ದನು. ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡಾಗಿತ್ತು ಸವಿತಾ. ಇಂತಹ ಕೆಟ್ಟ ಸಮಾಜವನ್ನೂ, ಕೆಟ್ಟ ಗಂಡನನ್ನೂ, ಅವಳನ್ನು ಮದುವೆ ಮಾಡಿಕೊಟ್ಟ ತವರುಮನೆಯವರನ್ನೂ ನವೀನ ಸಾರಾಸಗಟಾಗಿ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದನು.ಅವನು ಮಾತನಾಡುತ್ತಿದ್ದ ರೀತಿಗೆ ಅಲ್ಲಿ ನಿಂತ ಜನರೇ ಅಸಹ್ಯಪಡುವಂತಾಯಿತು. ಇಂತಹ ಅನ್ಯಾಯದ ವಿರುದ್ಧ ಹೋರಾಡಿ, ಜಮೀನು ಸಂಪಾದಿಸಿರುವ ಸವಿತಾಳನ್ನು ಹಾಡಿ ಹೊಗಳಿದನು. ಆದಷ್ಟು ಬೇಗ ಅವಳಿಗೆ ಸುಬ್ಬಯ್ಯನಿಂದ ಬಿಡುಗಡೆ ಕೊಡಿಸಿ, ಸ್ವತಂತ್ರಳನ್ನಾಗಿ ಮಾಡಬೇಕಾದ ಅಗತ್ಯವನ್ನು ಸಾರಿದನು.

ಕಡೆಯದಾಗಿ ಒಂದು ಪ್ರಶ್ನೆ - ಗಂಡಸರಿಗೆ ನಿಮ್ಮ ಸಂದೇಶವೇನು? ಕೇಳಿದನು ನವೀನ. ’ಭಯವಿಲ್ಲ ಹೇಳಿ’ ಮತ್ತೆ ಕೇಳಿದ. ಕ್ಷಣ ತಡೆದು ಸವಿತಾ ಹೇಳಿದಳು, "ಗಂಡಸರಿಗೊಂದು, ಹೆಂಗಸರಿಗೊಂದು ಹೇಳವುದಕ್ಕೆ ನನಗೇನು ಗೊತ್ತಿಲ್ಲ. ನನಗೆ ಸುಖ ಹೇಗೆ ಸಿಕ್ಕಿತೋ ಹಾಗೆ ಕಷ್ಟವೂ ಸಿಕ್ಕಿದೆ. ಎರಡನ್ನೂ ಅನುಭವಿಸುತ್ತಿದ್ದೇನೆ. ಕಷ್ಟ ಬಂದರೆ ಎದುರಿಸಿ. ನಾನು ನನ್ನ ಮಕ್ಕಳ ಕ್ಷೇಮಕ್ಕಾಗಿ ಓಡಿಹೋದರೆ, ಜೊತೆಯಲ್ಲಿ ಇರ್ತೇನೆ ಎಂದು ಅವರಿಗೆ ಕೊಟ್ಟ ಮಾತಿಗೆಲ್ಲಿ ಬೆಲೆ? ನಮಗೆ ಕ್ಷೇಮವಾಗಿರುವ ಕಡೆಗೆಲ್ಲಾ ಹೋಗುತ್ತಿದ್ದರೆ ಜೀವನವನ್ನು ಎದುರಿಸಿದ್ದು ಯಾವಾಗ?..."

ಸವಿತಾಳ ಮಾತು ನಿಂತ ಮೇಲೆ ನವೀನನ ಅಬ್ಬರ ಏಕೋ ಕಡಿಮೆಯಾದ ಹಾಗೆ ಕಾಣುತಿತ್ತು.

15 ಕಾಮೆಂಟ್‌ಗಳು:

  1. ಕತೆ ಚೆನ್ನಾಗಿದೆ.ಬರವಣಿಗೆಯ ಎಲ್ಲ ಮಗ್ಗುಲುಗಳಲ್ಲೂ ಪ್ರಯತ್ನ ನಡೆಸುತ್ತಿರುವೆ. ಈ ಬರವಣಿಗೆ ನೋಡಿದ ಮೇಲೆ ನಿನ್ನ ಬ್ಲಾಗ್ ನ ಹೆಸರು ಸಮರ್ಥವಾಗಿದೆ ಅನಿಸುತ್ತದೆ.

    ಇಲ್ಲಿಯ ಭಾಷೆ , ವಿವರಗಳು ತುಂಬಾ ಸಂಯಮದಿಂದ ಮೂಡಿಬಂದಿದೆ. ಕತೆಯ ಅಂತ್ಯ ಇನ್ನೊಂದುಚೂರು! ವಿವರವಾಗಿದ್ದರೆ ಚೆಂದ ಇತ್ತೇನೋ.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು.
    ಕತೆಯ ಅಂತ್ಯ..... ಏನೂ ಗೊತ್ತಾಗುತ್ತಿಲ್ಲ.

    ಪ್ರತ್ಯುತ್ತರಅಳಿಸಿ
  3. hm...........
    I just came to know that my little sister has grown up!!!

    bahala serious vishaya baredu bittiddiya.......chennagide,
    neenu heegella bareyabahudu antha nanage anisirallilla.

    keep writing :)

    ಪ್ರತ್ಯುತ್ತರಅಳಿಸಿ
  4. hm innond vishya muthu, ee ajji dialogue "19 varsha andre govt rules gintha ondu varsha jaasthine aythu" majavagide..hahaha

    ಪ್ರತ್ಯುತ್ತರಅಳಿಸಿ
  5. ಗೀತಾಳ ಪ್ರತಿಕ್ರಿಯೆ ಚೆನ್ನಾಗಿದೆ.

    ಕತೆಯ ಅಂತ್ಯ ಎಂದಾಗ ನನ್ನ ಮನಸ್ಸಿನಲ್ಲಿ ಇದ್ದಿದ್ದು ಶೀರ್ಷಿಕೆಗೂ, ಸವಿತಾ ಕೊಟ್ಟ ಉತ್ತರಕ್ಕೂ ಇದ್ದ ಸಂಬಂಧ.

    ಒಟ್ಟಿನಲ್ಲಿ ಕತೆ ಸಾಹಿತ್ಯದ ದೃಷ್ಟಿಯಿಂದಲೂ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  6. ಅನುಭೂತಿಯಲ್ಲಿ ನೀವಿಟ್ಟ ಕಾಮೆಂಟ್ "!" ಅನ್ನು ನೋಡಿ ಇಲ್ಲಿಗೆ ಬಂದೆ :)

    ಕಥೆಯ ವಸ್ತು, ನಿರೂಪಣೆ ತುಂಬಾ ಹಿಡಿಸಿತು. ಮೊದಲಿನಿಂದ ಕೊನೆಯವರೆಗೂ ಒಂದು ರೀತಿಯ ಕುತೂಹಲವನ್ನು ಕಾಯ್ದುಕೊಳ್ಳುವಲ್ಲಿ ಕಥೆ ಯಶಸ್ವಿಯಾಗಿದೆ. ಆದರೆ ಕಥೆಯ ಕೊನೆ ಮಾತ್ರ ಯಾಕೋ ಅಸಮಂಜಸವಾಗಿ ಕಾಣಿಸಿತು.... ಶಾಂತವಾಗಿ ಹರಿಯುತ್ತಿದ್ದ ನದಿಯೊಂದು ಧಿಢೀರನೆ ಗುಂಡಿಗೆ ಧುಮುಕಿ ಮಾಯವಾಗುವಂತಹ ಅನುಭವವಾಯಿತು.

    ಬರೆಯುವ ಆಸೆ ತುಂಬಾ ಒಳ್ಳೆಯ ಆಶಯ. ಯಾವತ್ತೂ ಈ ಆಸೆಯ ಸೆಲೆ ಬತ್ತಿಹೋಗದಿರಲಿ.

    ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  7. ನಿಮ್ಮ ಬ್ಲಾಗ್ ಕನ್ನಡಪ್ರಭದಲ್ಲಿ ನೋಡಿದೆ. ಉತ್ತಮವಾಗಿದೆ ಕಥೆ.ಅಂತ್ಯ ಓದುಗರಿಗೆ ಬಿಟ್ಟದ್ದು ತುಂಬಾ ಹಿಡಿಸಿತು.
    ಆರ್.ಶರ್ಮಾ.ತಲವಾಟ
    http://shreeshum.blogspot.com

    ಪ್ರತ್ಯುತ್ತರಅಳಿಸಿ
  8. @ತೇಜಸ್ವಿನಿ,
    ನಿಮ್ಮ ಬ್ಲಾಗ್ ನೋಡಿದ್ದೇನೆ. ಬಹುಶಃ ಕಮೆಂಟಿಸಿರಲಿಲ್ಲ ಅನ್ಸತ್ತೆ. ಇನ್ನು ಮುಂದೆ ಮಾತುಕಥೆಯಾಡಬಹುದಲ್ವೆ? :)
    ನಿಮ್ಮ ಕಮೆಂಟಿಗೆ ನಾನು ಚಿರಋಣಿ. ಹೀಗೆ ಕ್ರಿಟಿಕ್ಕಿಸುತ್ತಿರಿ. :)

    @ ಶ್ರೀಶಮ್,
    ಕನ್ನಡಪ್ರಭದಲ್ಲಿ ನೋಡಿದೆ! ಏನೂ ಅರ್ಥವಾಗಲಿಲ್ಲ. ನಿಮ್ಮ ಕಮೆಂಟಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  9. @ ಶ್ರೀಶಮ್, ಈಗಷ್ಟೆ ಕನ್ನಡಪ್ರಭ ನೋಡಿದೆ. ಆದರೆ ನನ್ನ ಬ್ಲಾಗ್ ಅಲ್ಲಿಗೆ ಹೇಗೆ ಹೋಯಿತು ಅಂತ ಅರ್ಥ ಆಗ್ತಿಲ್ಲ.
    ಇದು ಹೇಗೆ ಕೆಲಸ ಮಾಡುತ್ತದೆ ಅಂತ ನಿಮಗೆ ಏನಾದ್ರೂ ಗೊತ್ತಿದೆಯ?

    ಪ್ರತ್ಯುತ್ತರಅಳಿಸಿ
  10. ಹೋ... ಎಲ್ರೂ ಕಥೆ ಬಗ್ಗೆ ಆಗ್ಲೇ ಬರೆದು ಬಿಟ್ಟಿದ್ದಾರೆ.ನಾನೇ ಲೇಟು.
    ಹೇಮಾ... ಎಷ್ಟು ಚೆನ್ನಾಗಿ ಬರ್ದಿದ್ದೀರ. ನಿರೂಪಣೆ ಮತ್ತು ಪದಗಳನ್ನು ಜತನದಿ೦ದ ಉಪಯೋಗಿಸಿರುವ ರೀತಿ ತು೦ಬಾ ಹಿಡಿಸಿತು. ಕತೆಯ ಅ೦ತ್ಯ ಕೂಡ. ಏನು ಪ್ರೇರಣೆ ಕಥೆಗೆ?
    ಇನ್ನೂ ಬೇರೆ ಬೇರೆ ವಿಷಯಗಳನ್ನು ಆರಿಸಿಕೊ೦ಡು ಇದೇ ರೀತಿ ತು೦ಬಾ ಕತೆಗಳನ್ನು ನಮಗೆ ಕೊಡಿ.

    ಪ್ರತ್ಯುತ್ತರಅಳಿಸಿ
  11. ನೀವು ತುಂಬಾ ಲೇಟ್ ಸುಧೇಶ್! ಆದರೂ ಪರವಾಗಿಲ್ಲ, ನೀವು ಇಷ್ಟುದ್ದ ಕಥೆ ಓದೋದಕ್ಕೆ ಟೈಮ್ ಮಾಡಿಕೊಂಡ್ರಲ್ಲ :)

    ಈ ಕಥೆಗೆ ಸ್ಫೂರ್ತಿ ಅ ಸವಿತಾನೇ, ಅಂದರೆ, ಆ ರೀತಿ ಗಂಡನ ಕುಡಿತಕ್ಕೆ ದುಡ್ಡು ಕೊಟ್ಟೂ, ಒಂದೇ ಕೈಯಲ್ಲಿ ಜೀವನ ನಿರ್ವಹಿಸುತ್ತಿದ್ದ ಆ ಹೆಂಗಸು. ಅವಳ ಹೆಸರು ನನಗೆ ನೆನಪಿಲ್ಲ.
    ಆದರೆ ಆಕೆಯ ಸದಾ ನಗುವ ಮುಖ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗೆ, ಅವಳ ಗಂಡನನ್ನು ನಾನು ನೋಡಿಯೇ ಇಲ್ಲ.

    ಪ್ರತ್ಯುತ್ತರಅಳಿಸಿ
  12. ಸಖತ್...! ಕೊನೆ ಇನ್ನಷ್ಟು ಪರಿಣಾಮಕಾರಿಯಾಗಬಹುದಿತ್ತೇನೋ... ಸವಿತಾಳ ಚಿತ್ರಣ ಇಷ್ಟವಾಯ್ತು.

    ಪ್ರತ್ಯುತ್ತರಅಳಿಸಿ
  13. ಹಾಯ್ ಶ್ರೀ,

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ.

    ಪ್ರತ್ಯುತ್ತರಅಳಿಸಿ