ಶನಿವಾರ, ಡಿಸೆಂಬರ್ 19, 2009

ಇದನ್ನು ಸಣ್ಣ ಕಥೆ ಎನ್ನಬಹುದೋ, ’ಒಂದು ಪ್ರಸಂಗ’ ಎನ್ನಬಹುದೋ ನನಗೆ ತಿಳಿಯುತ್ತಿಲ್ಲ. ನಾನು ಮನಸ್ಸಿನಲ್ಲಿ ಅಂದುಕೊಂಡಂತೆ ಪೇಪರಿನ ಮೇಲೆ ಬರಲಿಲ್ಲವಾದ್ದರಿಂದ ಇದಕ್ಕೊಂದು ಟೈಟಲ್‌ ಕೊಡುವ ಗೋಜಿಗೂ ಹೋಗಲಿಲ್ಲ. ಏನೇ ಬರೆದರೂ, ಹಾಳು-ಮೂಳಾದರೂ ಬ್ಲಾಗಿನಲ್ಲಿ ಹಾಕಲೇಬೇಕಂದುಕೊಂಡಿದ್ದೇನೆ, ಏನಾದರೂ ಪ್ರತಿಕ್ರಿಯೆ ಸಿಗುತ್ತದೆಂಬ ಕಾರಣಕ್ಕೆ. ಹಾಗಾಗಿ ಇದನ್ನೂ ಹಾಕುತ್ತಿದ್ದೇನೆ .

-------

"ಹೌ ಟು ಇಂಪ್ರೆಸ್‌ ಯುವರ್ ಬಾಸ್?" (ನಿಮ್ಮ ಬಾಸ್‌ ಮನವೊಲಿಸುವುದು ಹೇಗೆ?) ಪುಸ್ತಕವನ್ನು ಓದುತ್ತಿದ್ದ ಭಾವನಾಗೆ ಇದ್ದಕ್ಕಿದ್ದ ಹಾಗೆ ಅತ್ತೆ ತನ್ನನ್ನು ಕರೆಯುತ್ತಿರುವುದು ಕೇಳಿಸಿ ಸಿಡಿಮಿಡಿಯಾಯಿತು. ಎದ್ದು ಹೋಗಿ ಅವರ ಮುಂದೆ ನಿಂತುಕೊಂಡಳು, ಮಾತಾಡದೆ. ಅವರ ಠೀವಿಯೇನು ಕಡಿಮೆಯೇ? ಅವಳು ಬಂದುದನ್ನು ಗಮನಿಸಿದರೂ, ಅವಳ ಕಡೆ ತಿರುಗದಂತೆ, ಅಲ್ಲಿದ್ದ ತುರೆಮಣೆಯನ್ನೂ, ಕೆಳಕ್ಕೊಂದು ತಟ್ಟೆಯನ್ನೂ ಅವಳ ಕಡೆಗೆ ಸರಿಸಿ "ಈ ಒಪ್ಪು ತುರಿದಿಡು" ಎಂದರು.
"ನನಗೆ ಈ ರೀತಿ ಕೊಬ್ಬರಿ ತುರಿಯೋಕೆ ಬರೋಲ್ಲ ಅತ್ತೆ!"
"ಇದನ್ನ ಮೂರು ತಿಂಗಳಿಂದ ಹೇಳ್ತಿದ್ದೀಯಲ್ಲಾ?" ಅತ್ತೆಯ ಸ್ವರ ಸ್ವಲ್ಪ ಜೋರಾಯಿತು. ಭಾವನಾ ಜಗ್ಗದೇ ನಿಂತಿದ್ದಳು. ಅತ್ತೆ ಅವಳ ಕಡೆ ನೋಡದೆ ಮಾತನಾಡುತ್ತಿದ್ದದ್ದು ಅವಳಿಗೆ ಅಡ್ವಾಂಟೇಜೇ ಆಗಿತ್ತು. "ಸರಿ, ಅದೇನು ಮಾಡ್ಕೋತಿದ್ಯೋ ಮಾಡ್ಕೋ ಹೋಗು" ಅಂದರು ಅತ್ತೆ. ಇವಳು ಅಷ್ಟೇ ಸಾಕೆಂದು, ಮತ್ತೆ ರೂಮಿಗೆ ಬಂದು ತನ್ನ ಪುಸ್ತಕದಲ್ಲಿ ಮುಳುಗಿದಳು. "ಕೊಬ್ಬರಿ ತುರಿಯೋಕೆ ಬರದಿದ್ಮೇಲೆ, ಈ ಮನೇಗೆ ಕಾಯಿ ಯಾಕೆ ತರ್ತೀರಿ? ಒಣಕಲು ಬ್ರೆಡ್ಡು, ಸುಡುಗಾಡು ಸಾಸನ್ನೇ ಮೂರು ಹೊತ್ತೂ ಮುಕ್ರಿ" ಎಂದು ಅತ್ತೆ ಇನ್ನೊಂದಿಷ್ಟು ಬಡಬಡಿಸಿದರು. ನಿಧನಿಧಾನವಾಗಿ ಅವರ ಬೈಗುಳ ಮನಸ್ಸಿನಲ್ಲೇ ನಡೆಯತೊಡಗಿತು.

ಅದಾಗಲೇ, ಮೇಲೆ ಹೋಗಿ ತನ್ನ ರೂಮಿನಲ್ಲಿ ಕೂತ ಭಾವನಾಗೇ ಇದ್ಯಾವುದೂ ಕೇಳಿಸಲಿಲ್ಲ. ಅವಳ ಮನಸಿನಲ್ಲಿ ತರಾವರಿ ಬೈಗುಳಗಳು ಮೇಲೇಳುತ್ತಿದ್ದವು. "ಇವರಿಗೆ ನಾನು ಆರಾಮಾಗಿದ್ದರೆ ಸಂಕಟ", "ವಾರಾಪೂರ್ತಿ ದುಡಿತೇನೆಂಬುದು ಮನಸ್ಸಿಗೆ ನಾಟುವುದೇ ಇಲ್ಲ"... ಸುಮಾರು ಹೊತ್ತು ಬುಸುಬುಸು ಎನ್ನುತ್ತಿದ್ದ ಮನಸ್ಸು ಕ್ರಮೇಣ ನಿರಾಳವಾಯಿತು. ಪುಸ್ತಕದಲ್ಲಿ ನಾಲ್ಕನೇ ಅಧ್ಯಾಯ ಮುಗಿಯಿತಾದ್ದರಿಂದ, ಐದನೇ ಅಧ್ಯಾಯವನ್ನು ಶುರುಮಾಡಿ ಅರ್ಧ ಮಾಡುವುದು ಬೇಡವೆಂದು ಅಷ್ಟಕ್ಕೇ ಮುಚ್ಚಿಟ್ಟು ಸ್ನಾನಕ್ಕೆ ನಡೆದಳು.

***

ಗೌರಿ, ನೆನ್ನೆ ತಾನೆ ನಾನು ಕಾಯಿ ತಂದಿದ್ದು? ಗೌರಿ... ಗೌರಿ... ಅಡುಗೆಮನೆಯಿಂದ ಯಾವ ಉತ್ತರವೂ ಬರದಿದ್ದರಿಂದ ಕೃಷ್ಣಪ್ಪನವರು ಕೊಂಚ ಹೊತ್ತು ಸುಮ್ಮನಿದ್ದರು. ’ಬೆಳಗ್ಗೇನೆ ಅಲ್ಲವೇ ಕಾಯಿ ಒಡೆದ ಶಬ್ದ ಕೇಳಿಸಿದ್ದು ನನಗೆ?’ ಎಂದು ನೆನೆಪಿಸಿಕೊಂಡು ಮತ್ತೆ ಕೂಗಿದರು. ಗೌರೀ... ಅಡುಗೆಮನೆಯಿಂದ ಉತ್ತರ ಬರಲಿಲ್ಲ. ಅಷ್ಟರಲ್ಲಿ ಕೆಳಗೆ ಬಂದ ಭಾವನಾಳನ್ನು ಕೇಳಿದರು ,"ಇವತ್ತು ಬೆಳಗ್ಗೆ ಕಾಯಿ ಒಡೆದ್ರೀ ಅಲ್ಲವೇ?", "ಹೌದು ಮಾವ, ಒಡೆದ ಹಾಗೆ ಶಬ್ದ ಕೇಳಿಸ್ತು" ಎಂದಷ್ಟೇ ಹೇಳಿ ಹೊರಕ್ಕೆ ನಡೆದಳು ಭಾವನಾ. ಅಡುಗೆಮನೆಯಿಂದ ಬಿರುಗಾಳಿಯಂತೆ ನುಗ್ಗಿ ಅತ್ತೆ, "ಹೌದು, ಕಾಯಿ ಒಡೆದೆ. ಇವತ್ತು ಹಾಕಲಿಲ್ಲ. ಒಂದಿನಕ್ಕೇನು ಪರವಾಗಿಲ್ಲ, ತಿನ್ನಿ" ಎಂದು ಹೋದರು. ಕೊಬ್ಬರಿತುರಿಯಿಲ್ಲದೇ ತಟ್ಟೆಯಲ್ಲಿದ್ದ ಉಪ್ಪಿಟ್ಟು ಹರಳು-ಹರಳಾಗಿ ಹೋಗಿತ್ತು. ಸವೆದುಹೋದ ಹಲ್ಲನ್ನಿಟ್ಟುಕೊಂಡು, ಅದನ್ನು ಖಾಲಿಮಾಡುವುದು ಹೇಗೆಂಬುದೇ ಈಗ ದೊಡ್ಡ ಸಮಸ್ಯೆಯಾಯಿತು.

ಮತ್ತೆರಡು ಕ್ಷಣಕ್ಕೇ ಅತ್ತೆಗೆ ತನ್ನ ಪತಿದೇವರ ಕಷ್ಟ ನೆನಪಾಯಿತು. "ಮಜ್ಜಿಗೆ ಇವತ್ತು ಚೆನ್ನಾಗಿ ಹೆಪ್ಪುಕೊಂಡಿದೆ, ಇದನ್ನೇ ಹಾಕ್ತೀನಿ" ಎಂದುಕೊಡು ಬಂದ ಅತ್ತೆ ತಲೆಯೆತ್ತದೆ ಒಂದೆರಡು ಸೌಟು ಗಟ್ಟಿ ಮೊಸರನ್ನು ಬಡಿಸಿದರು. ನೀರು ತುಂಬಿದ ಕಣ್ಣುಗಳನ್ನು ಮೇಲೆತ್ತಲಾರದೆ ಪುನಃ ಅಡುಗೆಮನೆಯೊಳಕ್ಕೆ ಸೇರಿಕೊಂಡರು.

18 ಕಾಮೆಂಟ್‌ಗಳು:

  1. ಏನೋ ವಿಚಿತ್ರವಾಗಿ ಇತ್ತು.... ಬರೆಯೋ ಆಸೆ ಅ೦ತ ಬಲವ೦ತವಾಗಿ ಬರೆಯೋಕೆ ಹೋಗಿದ್ರಾ? :)

    ಪ್ರತ್ಯುತ್ತರಅಳಿಸಿ
  2. ಒಂಥರ ಮನೆಕತೆ ಚೆನ್ನಾಗಿದೆ ಅನ್ನಿಸುತ್ತೆ...

    ಇನ್ನೂ ಮುಂದುವರಿಯುತ್ತಾ?

    ಪ್ರತ್ಯುತ್ತರಅಳಿಸಿ
  3. @ ಸುಧೇಶ್,

    ಅಯ್ಯೋ ಇಲ್ಲಪ್ಪ, ಇದೇ ವಿಚಿತ್ರವಾಗಿ ಇದೆ ಅಂತೀರಿ, ಮೇಲೆ ಹೇಳಿದ್ದೆನಲ್ಲಾ ಮುಂದುವರೆಸೋಕೆ ಆಗಲಿಲ್ಲ. ಸದ್ಯ ಬಲವಂತವಾಗಿ ಕಥೆಯನ್ನ ಇನ್ನೇನೋ ಮಾಡಲಿಕ್ಕೆ ಹೋಗಲಿಲ್ಲವಲ್ಲ ನಾನು!

    @ ಶಿವು,

    ನೀವು ಹೇಳಿದ ಹಾಗೆ ಇದು ಮನೆ ಕಥೇನೆ. ಆದರೆ ಮುಂದುವರೆಯೋಲ್ಲ ಅಷ್ಟೇ :) (ಮೇಲಿನ ಕಾಮೆಂಟ್ ನೋಡಿ!)

    ಪ್ರತ್ಯುತ್ತರಅಳಿಸಿ
  4. ಅಯ್ಯೋ... ಮು೦ದುವರಿಸ್ರಿ ಆ ಯೋಜನೆ ಇದ್ರೆ.... ಯಾರಿಗೆ ಗೊತ್ತು ವಿಚಿತ್ರವಾಗಿರೋದು ಸಚಿತ್ರವಾಗಿ ಮೂಡಿಬರಹುದು :)

    ಪ್ರತ್ಯುತ್ತರಅಳಿಸಿ
  5. ಇಲ್ಲಪ್ಪಾ! ನನಗೆ ಮುಂದುವರಿಸೋಕೆ ಆಗಲಿಲ್ಲ ಅಂತಲೇ ಅದನ್ನ ಹಾಗೇ ಹಾಕಿದ್ದು. ನಿಮ್ಮ ಕಾಮೆಂಟ್ ನೋಡಿ ನಿಲ್ಲಿಸಿದ್ದಲ್ಲ. ಹೌದು, ನಿಮಗೆ ಯಾಕೆ ವಿಚಿತ್ರ ಅನ್ನಿಸಿತು ಅಂತ ಕೇಳಬಹುದಾ?

    ಪ್ರತ್ಯುತ್ತರಅಳಿಸಿ
  6. ಹೇಳುತ್ತೇನೆ.....

    ಆದರೆ ನೀವು ಬೇಜಾರು ಮಾಡಿಕೊಳ್ಳಬಾರದು :)

    ಕಥೆಯ ರಚನೆ ಜಾಳುಜಾಳಾಗಿದೆ ಅ೦ತನಿಸಿತು... ಕಥೆ ಕಾಯಿಯ ಸುತ್ತ ತಿರುಗಿದರೂ ತೆ೦ಗಿನ ಕಾಯಿ ಕಥೆಯಲ್ಲಿ ಅ೦ಥಾ ಮಹತ್ವದ ಪಾತ್ರವನ್ನೇನೂ ವಹಿಸಿಲ್ಲ... ಅತ್ತೆ ಕೊನೆಯಲ್ಲಿ ಕಣ್ಣೊರೆಸಿಕೊ೦ಡದ್ದು ಯಾಕೆ ಅನ್ನುವುದು ನನಗೆ ಅರ್ಥ ಆಗಲಿಲ್ಲ...

    ನೀವು ಎ೦ದಿನ೦ತೆ ಚೆ೦ದವಾಗಿ ಬರೆಯುವ ಕಥೆಗೆ ಹೋಲಿಸಿದರೆ ಇದು ಏನೇನೂ ಅಲ್ಲ ಅನಿಸಿತು...

    ರುಕ್ಮಿಣಿಗೆ ಏನಾಯಿತು? :)

    ಪ್ರತ್ಯುತ್ತರಅಳಿಸಿ
  7. ನಿಜಕ್ಕೂ ನನ್ನ ಮನಸ್ಸನ್ನು ತಟ್ಟಿದ ಕತೆ/ಪ್ರಸಂಗ ಇದು. ಇದನ್ನು ಕತೆಯೆಂದು ಕರೆಯದೆ ಹಾಗೇ ಬಿಟ್ಟಿದ್ದು, ಶೀರ್ಷಿಕೆ ಕೊಡದೆ ಇದ್ದಿದ್ದು ಬಹಳ ಒಳ್ಳೆಯದಾಯಿತು.

    ತೆಂಗಿನಕಾಯಿ ಇಲ್ಲಿ ಕಳೆದು ಹೋಗುತ್ತಿರುವ ಮೌಲ್ಯಗಳಿಗೆ ಸಂಕೇತವಾಗಿ ಬಂದಿದೆ. ಎರಡು ತಲೆಮಾರುಗಳ ಸಂಘರ್ಷ - ಸೊಸೆಯಲ್ಲದೆ ಮಗಳಿದ್ದಿದ್ದರೂ ಹೀಗೇ ವರ್ತಿಸುತ್ತಿದ್ದಳೇನೋ? - ಬಹಳ ಚೆನ್ನಾಗಿ ಮೂಡಿಬಂದಿದೆ.

    ಬಾಸ್ ನನ್ನು ಇಂಪ್ರೆಸ್ ಮಾಡುವುದು ಹೇಗೆಂಬುದನ್ನು ಪುಸ್ತಕ ಓದಿ ಕಲಿಯುತ್ತಿದ್ದ ಸೊಸೆ ಮನೆಯ ಹಿರಿಜೀವದ ಬಗ್ಗೆ ತಳೆದ ನಿಲುವು ಅವಳ ಢೋಂಗಿ ವ್ಯಕ್ತಿತ್ವನ್ನು ವಿಡಂಬಿಸುತ್ತದೆ. ಅವಳಿಗಿಟ್ಟ ಭಾವನಾ ಹೆಸರೂ ಸಹ ಅವಳನ್ನು ಅಣಕಿಸುವಂತಿದೆ.

    ಅತ್ತೆಯ ಪಾತ್ರ ಮನಮುಟ್ಟಿತು. ಅಷ್ಟು ಒರಟಾಗಿ ಮಾತನಾಡಿದ ಆಕೆ ಕಡೆಗೆ ಗಂಡನಿಗೆ ಮೊಸರು ಬಡಿಸುತ್ತಾ ಕಣ್ಣೀರು ತುಂಬಿಕೊಂಡದ್ದು - ಹೊರಗೆ ತೆಂಗಿನ ಕರಟದಂತೆ ಒರಟಾದ ವ್ಯಕ್ತಿತ್ವವಿದ್ದರೂ ಅಂತರಂಗದಲ್ಲಿ ತೆಂಗಿನ ತಿಳಿನೀರಿನಂತಹ ಮನಸ್ಸಿರುವುದರ ಸೂಚನೆಯಾಗಿದೆ.

    ಪ್ರತಿಕ್ರಿಯಿಸಿದವರನ್ನು ನೋಡಿದರೆ ಎಲ್ಲಾ ಭಾವನಾ ವಯಸ್ಸಿನವರೇ ಅನಿಸುತ್ತದೆ!

    ಇಂತಹ ಬಿಡಿಬರಹಗಳು ಹೆಚ್ಚಾಗಿ ಬರಲಿ!

    ಪ್ರತ್ಯುತ್ತರಅಳಿಸಿ
  8. @ ಸುಧೇಶ್‌ ಮತ್ತು ಚಂದ್ರಕಾಂತ ಮ್ಯಾಮ್,

    ಈ ರೀತಿಯ ಕ್ರಿಟಿಕ್ಸ್‌ ಬರಬೇಕೆಂದುಕೊಳ್ಳುತ್ತಿದ್ದೆ. ಇವತ್ತು ನನ್ನ ಪಾಲಿಗೆ ಬಂದಿದೆ. ಇದರಿಂದ ಒಂದು ಒಳ್ಳೆಯ ಸಾಹಿತ್ಯದ ಪಾಠ ಕಲಿತಿದ್ದೇನೆ, ಥ್ಯಾಂಕ್ಸ್!

    ಸುಧೇಶ್, ನೀವು ಹೇಳುವ ಹಾಗೆ ಕಥೆ ಜಾಳುಜಾಳಾಗಿದೆ ಎಂದು ನನಗೂ ಅನ್ನಿಸುತ್ತಿತ್ತು, ಯಾಕೋ ನವ್ಯದ ದಾರಿ ಹಿಡಿಯುತ್ತಿದೆ ಎಂತಲೂ ಅನ್ನಿಸುತ್ತಿತ್ತು. ಅದಕ್ಕೇ ಇದು ’ಚೆಂದ’ವಾಗಿ ಇಲ್ಲ. ಈ ಪ್ರಸಂಗವು ನನ್ನ ಅನುಭವವಾಗಿರದೆ, ಕೇವಲ ನೋಡಿ-ಕೇಳಿ ಬರೆಯಲು ಪ್ರಯತ್ನಿಸಿದ್ದರಿಂದ ಹಾಗಾಗಿರಬಹುದೇನೋ? ನಾನು ಇಲ್ಲಿ ಯಾವುದಕ್ಕೂ ಪ್ರಾಶಸ್ತ್ಯ ಕೊಡಲು ಯೋಚಿಸಿರಲಿಲ್ಲ. ಆದರೂ ನೀವು ಹೇಳಿದಂತೆ ಕಥೆ ತೆಂಗಿನಕಾಯಿ ಸುತ್ತ ಸುತ್ತಿದ್ದಂತೂ ನಿಜ :). ನನ್ನ ಪ್ರಕಾರ ಮಕ್ಕಳು - ಸೊಸೆ - ಅಳಿಯಂದಿರು ಹಿರಿಯರ ಮುಂದೆ ತೋರುವ ದರ್ಪ ಅವರಿಗೆ ನೋವುಂಟುಮಾಡುತ್ತದೆ. ಇಲ್ಲಿ, ಇವರಿಬ್ಬರ ಜಗಳ ಗಂಡ-ಹೆಂಡಿರ ಜಗಳಕ್ಕೂ ಕಾರಣವಾಯಿತು, ಅಷ್ಟಲ್ಲದೆ ಹಿಂದೆ ಎಂದೂ ಆಕೆ ’ಹಾಗೆ ತಿನ್ನಿ ಪರವಾಗಿಲ್ಲ’ ಎಂದು ಹೇಳಿರಲಾರಳು. ಕೇವಲ ಒಂದು ವೈಮನಸ್ಯಕ್ಕಾಗಿ ತನ್ನ ಪತಿಯೊಡನೆ ಕ್ರೂರವಾಗಿ ನಡೆದುಕೊಂಡ ರೀತಿಗೆ, ತಾನೆಂದೂ ನೆನೆಸಿರದ ಇಂತಹ ದಿನಗಳನ್ನು ನೋಡಬೇಕಾಗಿ ಬಂದುದಕ್ಕೆ ಆಕೆಗೆ ಅಳು ಬರುತ್ತದೆಯೆಂದು ನಾನು ನಂಬಿದ್ದೇನೆ. (ತುಂಬಾ ಗ್ಯಾಪ್ ಆದ್ದರಿಂದ ರುಕ್ಮಿಣಿ ಕೂತುಬಿಟ್ಟಿದ್ದಾಳೆ, ಇಷ್ಟರಲ್ಲೇ ಎಬ್ಬಿಸಿ ಓಡಿಸುತ್ತೇನೆ!)

    ಮ್ಯಾಮ್,

    ನಾನು ’ನವ್ಯ’ ಎಂದುದಕ್ಕೆ ಇನ್ನೂ ಒಂದು ಕಾರಣವಿದೆ. ನೀವು ಹೇಳಿದಷ್ಟು ಅರ್ಥಗಳನ್ನು ಇದರಲ್ಲಿ ಹುಡುಕಬಹುದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ. ನವ್ಯದ ರೀತಿ ಹಾಗೆ ತಾನೆ? ಒಬ್ಬರಿಗೆ ಸೊನ್ನೆ ಎನಿಸಿದರೆ ಮತ್ತೊಬ್ಬರಿಗೆ ಅದ್ಭುತ ಎನಿಸುವುದು. (ಅಥವಾ ನವ್ಯದ ಬಗ್ಗೆ ನನ್ನ ಗ್ರಹಿಕೆ ತಪ್ಪೊ?) ನೀವು ಹೇಳುವುದು ಸರಿಯಾಗಿದೆ, ಮಕ್ಕಳೂ ಒಮ್ಮೊಮ್ಮೆ ಹೀಗೆ ವರ್ತಿಸುತ್ತಾರೆ.
    ಇನ್ನೊಂದು ವಿಷಯವನ್ನು ಸರಿಯಾಗಿ ಗ್ರಹಿಸಿದ್ದೀರಿ - ಅವಳು ಓದುವ ಪುಸ್ತಕ. ಆಕ್ಚುವಲಿ ಅದೇ ಈ ಕಥೆಯ ಮೇನ್ ಪಾಯಿಂಟ್!

    ಈ ಬಿಡಿಬರಹವನ್ನು ಬರೆಯಲು ಪ್ರೇರೇಪಿಸಿದ ವಿಷಯವನ್ನು ಹೇಳುತ್ತೇನೆ -

    ಇದ್ದಕ್ಕಿದಂತೆ ಎಲ್ಲಿಂದಲೋ ಬಂದ ಈ ’ಕೆರಿಯರ್’ ಎನ್ನುವುದು, ನಮಗೆ ಹೇಗೆ ಹುಚ್ಚುಹಿಡಿಸಿಬಿಟ್ಟಿದೆಯಲ್ಲವೇ? ಅದರಲ್ಲಿ ’ಒಂದು ಸ್ಥಾನದಿಂದ ಆರಂಭಿಸಿ ಬಡ್ತಿ ಪಡೆದೂ ಪಡೆದೂ ಮೇಲಕ್ಕೆ ಹೋಗುವುದ’ನ್ನು ಬಿಟ್ಟರೆ ಬೇರೆ ಯಾವುದಕ್ಕೂ ಮಹತ್ತ್ವ ಇಲ್ಲ. ಆದರೂ, ಜೀವನದಲ್ಲಿ ಅದೇ ಮುಖ್ಯ ಎಂದು ನಾವು ನಂಬಿಯಾಗಿದೆ. ನಮ್ಮ ಸಂಸ್ಕೃತಿಯ ಪ್ರಕಾರ ಸಮಾಜದ ಮೂಲ ಘಟಕವಾದ ’ಕುಟುಂಬ’ಕ್ಕೆ ಯಾವ ಬೆಲೆಯೂ ಇಲ್ಲ! ಅತ್ತೆ ಸೊಸೆಯ ಜಗಳ ಇದರಿಂದ ಆಗುತ್ತಿದೆ ಎಂದು ನಾನು ಹೇಳುವುದಿಲ್ಲ. ಆದರೆ, ’ನಿಮ್ಮ ಬಾಸ್‍ ಮುಂದೆ ತಗ್ಗಿ ಬಗ್ಗಿ ನಡೆಯಿರಿ’, ’ಅವರನ್ನು ಮೆಚ್ಚಿಸಿ’, ’ಅವರಿಗೆ ಎದುರಾಡಬೇಡಿ’, ಮುಂತಾದುವನ್ನು ಪ್ರಶ್ನಿಸದೇ ಒಪ್ಪುತ್ತೇವೆ. ಅದೇ ಅತ್ತೆ ಬೈದರೆ ಸಹಿಸಿಕೋ, ದೊಡ್ಡವರನ್ನು ಮೆಚ್ಚಿಸಲು ಪ್ರಯತ್ನಪಡು, ತಾಯಿಯ ಮೇಲೆ ರೇಗಾಡಬೇಡ, ಎಂದು ಹೇಳಿದರೆ ಉರಿದು ಬೀಳುತ್ತೇವೆ. ಜಾಹಿರಾತಿಗೆ ನಾವು ಮರುಳಾಗುವುದು ಹೀಗೆ ತಾನೆ?

    ಪ್ರತ್ಯುತ್ತರಅಳಿಸಿ
  9. ’ನಮ್ಮ ಸಂಸ್ಕೃತಿ ಹೇಳುವ ಹಾಗೆ’ ಎಂದು ಓದಿಕೊಳ್ಳಿ.

    ಪ್ರತ್ಯುತ್ತರಅಳಿಸಿ
  10. ಕಥೆಯನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ಕಥೆ ಮುಂದುವರಿಯೋ ಹಾಗೆ ನನಗಂತೂ ಕಾಣ್ತಿಲ್ಲ, ನೋಡುವ. :)

    ಪ್ರತ್ಯುತ್ತರಅಳಿಸಿ
  11. ರುಕ್ಮಿಣಿಗಾಗಿ ಕಾದು ಕಾದು....
    ಪರಿತಪಿಸಿ ನೊ೦ದೆ ನಾನು :)

    ಬೇಗ ಬೇಗ ಬರಲಿ.... ಆದರೂ ನೀವು ತು೦ಬಾ ಬ್ಯುಸಿ ಆಗಿದ್ದೀರೆ೦ದು ಅ೦ದುಕೊ೦ಡಿದ್ದೇನೆ...

    ಪ್ರತ್ಯುತ್ತರಅಳಿಸಿ
  12. ತುಂಬಾ ಧನ್ಯವಾದಗಳು ’ಮನಸು’ ಅವರೇ. ಇಂತಹ ಅನುಭವಗಳು ಕಮ್ಮಿ ಆದಷ್ಟೂ ಒಳ್ಳೇದಲ್ವೇ? :)

    ಪ್ರತ್ಯುತ್ತರಅಳಿಸಿ
  13. ಯಾಕೋ ಒಂಥರದ ಸಂಕಟ ನನ್ನೊಳಗೂ ಆಯಿತು. ಆ ಅತ್ತೆಯ ಇಬ್ಬಗೆ, ನೋವು ನನ್ನನ್ನೂ ತಟ್ಟಿತು. ಚುರುಕಾಗಿದೆ ಕಥೆ. ಆದರೆ ಇನ್ನೂ ಬೆಳೆಸಿದ್ದರೆ ಬಲು ಚೆನ್ನಾಗಿರುತ್ತಿತ್ತು. ಬರಯುವುದನ್ನು ನಿಲ್ಲಿಸದಿರಿ.

    ಸೊಸೆಯಮೇಲಿನ ಜಿದ್ದಿನಿಂದ ವಯಸಾದ ಪತಿಗೆ ಉಂಟಾದ ತೊಂದರೆ ಆಕೆಯ ಕಣ್ಣೀರಿಗೆ ಕಾರಣವಾಗಿದ್ದು ಅಲ್ಲವೇ?

    ವಾಸ್ತವದಲ್ಲೂ ಇದೇ ರೀತಿ ನಡೆಯುತ್ತದೆ. ಯಾರದೋ ಮೇಲಿನ ಜಿದ್ದಿಗೆ ನಾವು ನಮ್ಮನ್ನು ಹಾಗೂ ನಮ್ಮವರನ್ನು ನೋಯಿಸುತ್ತಿರುತ್ತೇವೆ.

    ಪ್ರತ್ಯುತ್ತರಅಳಿಸಿ
  14. ತೇಜಸ್ವಿನಿಯವರೆ, ತಡವಾಗಿ ಧನ್ಯವಾದ ಹೇಳುತ್ತಿದ್ದೇನೆ, ಸಾರಿ!
    ಕಥೆಯನ್ನು ಸರಿಯಾಗಿ ಗ್ರಹಿಸಿದ್ದೀರಿ. ತಿರುಗಿ ಥ್ಯಾಂಕ್ಸ್ :)

    ಪ್ರತ್ಯುತ್ತರಅಳಿಸಿ
  15. tumba chennagide.dina nitya aaguva anubhavavannu naviragi barediddeeri. Atte emba padadalli mamataamayi taayiyoo adagiruvudu sullalla.
    Vijaya karnatakadalli swalpa odida mele nimma blog open madi poorthi odide.

    ಪ್ರತ್ಯುತ್ತರಅಳಿಸಿ