ಶುಕ್ರವಾರ, ಆಗಸ್ಟ್ 15, 2008

ಅವಳ ಮನಸ್ಸು

ನನ್ನ ಅಕ್ಕ ಇಂಗ್ಲೀಷಿನಲ್ಲಿ ಬರೆದ ಪದ್ಯವನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಅವಳದ್ದೇ ಆರ್ಡರ್, ಅವಳೇ ಎಡಿಟರ್, ಡೈರೆಕ್ಟರ್ :).....


ಅವಳ ಮನದ ಬಾಗಿಲು ಹಾಕಿತ್ತು
ಬಹುದಿನಗಳಿಂದ
ಭದ್ರಪಡಿಸಿದ್ದಳು ಬಾಗಿಲನ್ನು
ಬಹುದೊಡ್ಡ ಬೀಗ ಹಾಕಿ


ಒಳಗಡೆ ಇಣುಕಲು ,
ಯಾರಿಗೂ ಸಾಧ್ಯವಾಗಿಲ್ಲ....
ಅದರಾಚೆಗೆ ಏನಿತ್ತು?
ಕತ್ತಲೆಯ ಮಡಿಲಲ್ಲಿ....
ಕಾಣದ ಕಡಲಾಳದಲ್ಲಿ...
ಮನದ ಸಾಮ್ರಾಜ್ಯದಲ್ಲಿ....
ತೋರದ ಜಗತ್ತಿನಲ್ಲಿ....


ಬೀಗದ ಕೈ ಕಳೆದು ಹೋಗಿತ್ತು
ಒಂಟಿತನದ ತಳವಿರದ ಬಾವಿಯಲ್ಲಿ

ಬೆಳ್ಳಿ ಮೀನುಗಳು ಹರಿದಾಡುತ್ತಿದ್ದವು
ಅವಳ ಮನದ ಪುಟಗಳಲ್ಲಿ...
ಯೋಚನೆಯ ಜೇಡವೊಂದು...
ಬಲೆಗಳನು ಹೆಣೆದುಬಿಟ್ಟಿತ್ತು ಅವಳ ಎದೆಯ ನಾಕು ಕೋಣೆಯಲ್ಲಿ


ಧೂಳು ಹಿಡಿದಿತ್ತು...ಪದರ...ಪದರವಾಗಿ
ಮೃದು,ಮಧುರವಾದದ್ದೇನೂ ಒಳಗೆ ಬರಲಾಗದಂತೆ

...ಬೆಚ್ಚಗಿನ ಸೂರ್ಯಕಿರಣಗಳು
...ಮುತ್ತಿನ ಮಣಿಗಳ ಮಂಜು
...ತಂಪಿನ ತಂಗಾಳಿ
ಯಾವುದಕ್ಕೂ ಅಲ್ಲಿ ಪ್ರವೇಶವಿಲ್ಲ...

ಗೆಳೆಯರು ಬಂದರು...
ಬೀಗ ತೆಗೆದು ನೋಡಲು,ಮನಸು ಹಗುರ ಮಾಡಲು...
ಏನೂ ಸುಖವಿಲ್ಲ...

ಅಸೂಯೆ ಹುಟ್ಟಿ, ಅವಳ ದಾರಿ ತಪ್ಪಿಸಲು ಬಂದರು ಕೆಲವರು
ಬಂದ ದಾರಿಗೆ ಸುಂಕವಿಲ್ಲ...

ಆ ದಿನ , ಆಷಾಡದ ಶುಕ್ರವಾರ
ಮುಳುಗಿದ್ದಳು ಅವಳು ಕಚೇರಿಯ ಕಡತ-ಡ್ರಾಯಿಂಗುಗಳಲ್ಲಿ,

ಗಾಳಿಗೂ ತನ್ನ ಅದೃಷ್ಟದ ಪರೀಕ್ಷೆ ಮಾಡಬೇಕೆನಿಸಿರಬೇಕು
………………ನವಿರಾಗಿ ಅವಳ ತಲೆಯ ಮೇಲೆ ಹಾಯ್ತು
ತನ್ನ ತಲೆಗೆ ಸಿಕ್ಕ ಹೇರುಪಿನ್ನನ್ನು, ಮತ್ತೂ ಬಿಗಿಯಾಗಿಸಿದಳು
ಗಾಳಿಗೆ ಅಲ್ಲೇನೂ ಕೆಲಸವಿರಲಿಲ್ಲ...


ಅವನು ಅವಳನ್ನೇ ನೋಡುತ್ತಿದ್ದ……
………ಎದುರಿನ ಕಿಟಕಿಗೆ ಒರಗಿ.


ಅವನು ಏನು ಹೇಳಬಹುದು? ಇವಳೇ ಊಹಿಸಿದಳು...
“ಆ ಬಿಗಿಯನ್ನು ತೆಗೆದುಬಿಡು...ಸುಂದರವಾಗಿ ಕಾಣುತ್ತೀಯೆ”

* * *

ಇದೇ ಮಾತು ಕೇಳಿ ಕೇಳಿ ಅವಳಿಗೂ ಬೇಸರವಾಗಿತ್ತು
ನೂರು ಸಲ, ಸಾವಿರ ಸಲ ಈ ಹಿಂದೆಯೂ ಕೇಳಿ ಆಗಿತ್ತು
ನೂರು ಜನ, ಸಾವಿರ ಜನ ಅದನ್ನೇ ಹೇಳಿದ್ದರು

ಇವಳು ಕುಂಟೇಬಿಲ್ಲೆಯಾಡುತ್ತಾ ಮನೆಯಿಂದ ಮನೆಗೆ ಎಗರುವಾಗ
…ಪಕ್ಕದಲ್ಲೇ ಗೋಲಿ ಆಡುತ್ತಿದ್ದ ಹುಡುಗರು
ಇವಳು ಮುಂದಿನ ಬೆಂಚಿನಲ್ಲಿ ಕೂತು ನೋಟ್ಸಿನೊಂದಿಗೆ ಒದ್ದಾಡುವಾಗ
…ಹಿಂದುಗಡೆ ಬೆಂಚಿನಲ್ಲಿ ಕೂತ ಹುಡುಗರು
ಇವಳು ಕೆಮಿಸ್ಟ್ರಿ ಲ್ಯಾಬಿನಲ್ಲಿ ಸಲ್ಯೂಷನ್ ತಯಾರಿಸುವಾಗ
…ಆಚೆಕಡೆಯ ಸಾಲಿನಲ್ಲಿ ನಿಂತ ಹುಡುಗರು

* * *
ಅವಳು ಫೈಲಿನೊಳಗೆ ಇನ್ನೂ ಮುಳುಗಲು ಪ್ರಯತ್ನಿಸಿದಳು
ಅವಳಿಗೂ ಗೊತ್ತು ಅದೇ ದಾರಿ ಎಂದು...
ಆದರೆ, ಅವನು ಅದನ್ನು ಹೇಳಲೇ ಇಲ್ಲ.....

"ಗಂಟು ತೆಗಿ ಒದ್ದೆ ಕೂದಲು , ತಲೆನೋವು ಬಂದೀತು...
ನನ್ನ ತಾಯಿ ಹೇಳುತ್ತಿದ್ದರು... ತಂಗಿಗೆ!
ಮುದ್ದು ತಂಗಿ ನನ್ನ ಹಿಂದೆ ಅಡಗುತ್ತಿದ್ದಳು...
ಅಮ್ಮ ಅವಳ ತಲೆಯನ್ನು ಬಲವಂತವಾಗಿ ಒರಸಲು ಬಂದಾಗ"

ಇದಿಷ್ಟೇ ಅವನು ಹೇಳಿದ್ದು...
ಅಷ್ಟು ಹೇಳಿ, ಅವನೂ ಕಳೆದುಹೋದ...
ತನ್ನ ಸವಿನೆನಪುಗಳಲ್ಲಿ......
ತನ್ನ ಆಲೋಚನೆಗಳಲ್ಲಿ......
ತನ್ನ ಮನೆಯ ಮೂಲೆಯಲ್ಲಿ..... ತುಂಬಾ ದೂರದಲ್ಲಿ...

ಅವಳ ಕೈಗೆ ಅದರದೇ ಮರ್ಜಿ ಬಂತೇನೋ.....
ಗಳಿಗೆಯಲ್ಲಿ ಅವಳ ಬಿಗಿ ಬೀಗದಿಂದ, ಕೂದಲು ಬಿಡಿಸಿಕೊಂಡಿತ್ತು.
.
.
.
.
.
.
ನವಿರಾದ ಮುಂಗುರೊಳೊಂದು ಕಚಗುಳಿಯಿಡುತ್ತಿದೆ...
ಗಾಳಿ ಅವಳ ರೇಷಿಮೆ ಕೂದಲೊಂದಿಗೆ ಆಟವಾಡುತ್ತಿದೆ...
ಅವಳು....
ಅವನೊಂದಿಗೆ, ಮುಸ್ಸಂಜೆಯಲ್ಲಿ, ಹೂದೋಟದಲ್ಲಿ...
ಸುಮ್ಮನೆ ನಕ್ಕುಬಿಡುತ್ತಾಳೆ,
ಅಂದಿನಿಂದ ಇಂದಿನವೆರೆಗೂ...
ಯಾರಿಗೂ ಅಗಿರಲಿಲ್ಲ...
ಅವನು ಬೀಗ ತೆಗೆದಿದ್ದಾದರೂ ಹೇಗೆ?!
ಅವಳ ಮನಸ್ಸಿನ ಬೀಗ ...
ಯಾವ ಕೈಯೂ, ಬುದ್ಧಿವಂತಿಕೆಯೂ ತೆಗೆಯಲಾಗದ ಬೀಗ

* * * * * *

ಮೂಲ ಪದ್ಯವನ್ನು ಓದಿ - http://geethascribbling.blogspot.com/2008/08/key.html. ಇದು ನನ್ನ ಮೊದಲ ಪ್ರಯತ್ನವಾದ್ದರಿಂದ ನಿಮ್ಮ ಕ್ರಿಟಿಕ್ಸ್ಗಾಗಿ ಕಾದಿದ್ದೇನೆ.